10ರಿಂದ 2 ಗಂಟೆವರೆಗೆ ಕಲಾಪ ನಡೆಯಲೇಬೇಕು, ಧರಣಿ- ಅಡ್ಡಿಗಳಿಗೆ ಮುಂದಾದರೆ ಮುಲಾಜಿಲ್ಲದೇ ಹೊರಕ್ಕೆ…

ಡಿಜಿಟಲ್ ಕನ್ನಡ ಟೀಮ್:

ಈ ಹಿಂದಿನ ವಿಧಾನಸಭೆ ಅಧಿವೇಶನದಲ್ಲಿ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಇಡೀ ಕಲಾಪ ಬಲಿಯಾಗಿದ್ದು ವಿಧಾನಸಭಾಧ್ಯಕ್ಷ ಕೆ. ಬಿ. ಕೋಳಿವಾಡರಿಗೆ ಬೇಸರ ತರಿಸಿದೆ. ಅದು ಇಂದು ಸುದ್ದಿಗಾರರೊಂದಿಗೆ ಮಾತನಾಡುವಾಗ ವ್ಯಕ್ತವಾಯಿತು.

ಪ್ರಚಾರದ ಗೀಳಿಗೆ ಬಿದ್ದು ಟಿವಿ,ಪೇಪರುಗಳಲ್ಲಿ ಬಂದ ವಿಷಯವನ್ನೇ ಕೈಗೆತ್ತಿಕೊಂಡು ಚರ್ಚಿಸುವ ಕೆಲಸ ನಡೆಯುತ್ತಿದೆ, ಇದಕ್ಕೆ ತಡೆ ಬೀಳಲೇಬೇಕು ಎಂದರು ಸಭಾಧ್ಯಕ್ಷರು. ಅಲ್ಲದೇ ರಾಜ್ಯ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ವಿಧಾನಮಂಡಲ ಅಧಿವೇಶನದಲ್ಲಿ ಶಾಸಕರು ಪ್ರಸ್ತಾಪಿಸದಿದ್ದರೆ, ಸ್ವಯಂಪ್ರೇರಿತವಾಗಿ ಅಂತಹ ಸಮಸ್ಯೆಗಳ ಕುರಿತು ಚರ್ಚೆಯನ್ನು ಕೈಗೆತ್ತಿಕೊಳ್ಳುವುದಾಗಿ ಹೇಳಿದ್ದಾರೆ.

‘ವಿಧಾನಮಂಡಲ ತಡೆರಹಿತವಾಗಿ ನಡೆಯಬೇಕು ಎಂಬ ಕಾರಣಕ್ಕಾಗಿ ಕಲಾಪ ನಿಯಮಾವಳಿ ಸಮಿತಿ ರಚನೆಯಾಗಿದ್ದು ಇನ್ನು ಮುಂದೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯ ತನಕ ಕಲಾಪ ನಡೆಯಲೇಬೇಕು.

ಒಂದು ವೇಳೆ ಧರಣಿ ಸೇರಿದಂತೆ ಯಾವುದೇ ಬಗೆಯಲ್ಲಿ ಕಲಾಪಕ್ಕೆ ಅಡ್ಡಿ ಮಾಡಲು ಯತ್ನಿಸಿದರೆ ಅಂತಹ ಶಾಸಕರನ್ನು ನಿರ್ದಾಕ್ಷಿಣ್ಯವಾಗಿ ಸದನದಿಂದ ಹೊರಹಾಕಲಾಗುವುದು. ಇನ್ನು ಮುಂದೆ ನಿಲುವಳಿ ಸೂಚನೆ ಮಂಡಿಸಲು ಮಧ್ಯಾಹ್ನ 3 ಗಂಟೆಯ ನಂತರವೇ ಅವಕಾಶ ನೀಡಲಾಗುವುದು. ಆಮೇಲೆ ಬೇಕಾದರೆ ಅದರ ಬಗ್ಗೆ  ನಡು ರಾತ್ರಿ 12 ಗಂಟೆಯವರೆಗೆ ಚರ್ಚೆ ನಡೆಯಲಿ. ಆದರೆ ದಿನಕ್ಕೆ ಕನಿಷ್ಟ ನಾಲ್ಕು ಗಂಟೆಗಳ ಕಾಲ ಕಲಾಪ ನಡೆಯಲೇಬೇಕು’ ಎಂದರು.

ಇನ್ನು ಕೆರೆ ಒತ್ತುವರಿಗೆ ಸಂಬಂಧಿಸಿದ ವಿವರ ವರದಿಯನ್ನು ಡಿಸೆಂಬರ್ ಅಂತ್ಯದ ವೇಳೆಗೆ ಸಲ್ಲಿಸುವುದಾಗಿ ಹೇಳಿದ್ದಾರೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಭಾಗಗಳಲ್ಲಿ ಎಷ್ಟು ಕೆರೆಗಳಿದ್ದವು ಎಂಬುದರ ನಿಖರ ಚಿತ್ರಣವನ್ನು ಕಲೆಹಾಕಿರುವುದಲ್ಲದೇ, ಒತ್ತುವರಿ ಮಾಡಿಕೊಂಡಿರುವ ಭೂಮಾಫಿಯಾ ಹಾಗೂ ಬಿಲ್ಡರುಗಳ ವಿರುದ್ಧ ಕಠಿಣ ಕ್ರಮಕ್ಕೂ ಶಿಫಾರಸು ಮಾಡಲಾಗುತ್ತದೆ ಎಂದಿದ್ದಾರೆ ಕೆರೆ ಒತ್ತುವರಿ ಕುರಿತ ತನಿಖಾ ಸಮಿತಿ ಅಧ್ಯಕ್ಷರೂ ಆಗಿರುವ ಕೋಳಿವಾಡರು.

Leave a Reply