‘ಮುಂಬೈ ದಾಳಿಗೆ ಹೊಣೆ ಹೊತ್ತು ನ್ಯಾಯ ದೊರಕಿಸಿ…’ ಪಾಕಿಸ್ತಾನಕ್ಕೆ ಅಮೆರಿಕ ಸ್ಪಷ್ಟ ಸೂಚನೆ!

ಡಿಜಿಟಲ್ ಕನ್ನಡ ಟೀಮ್:

‘ಮುಂಬೈ ದಾಳಿಗೆ ಹೊಣೆಗಾರಿಕೆ ಹೊತ್ತು ಪ್ರಕರಣಕ್ಕೆ ನ್ಯಾಯ ಒದಗಿಸಲೇ ಬೇಕು… ನಿಮ್ಮ ಆಶ್ರಯ ಪಡೆದು ನೆರೆ ರಾಷ್ಟ್ರಗಳ ಮೇಲೆ ದಾಳಿ ನಡೆಸುತ್ತಿರುವ ಉಗ್ರ ಸಂಘಟನೆಗಳನ್ನು ಹತ್ತಿಕ್ಕಲೇ ಬೇಕು… ಇಲ್ಲವಾದಲ್ಲಿ ನಮ್ಮಿಂದ ಯಾವುದೇ ರೀತಿಯ ಸಹಾಯ ನಿರೀಕ್ಷಿಸಬೇಡಿ…’ ಅಮೆರಿಕದ ಉಪ ವಕ್ತಾರ ಮಾರ್ಕ್ ಟೋನರ್ ಪಾಕಿಸ್ತಾನಕ್ಕೆ ನೀಡಿರುವ ಸ್ಪಷ್ಟ ಸೂಚನೆ ಇದು.

ಪಾಕಿಸ್ತಾನಕ್ಕೆ ನೀಡುವ ಸವಲತ್ತುಗಳನ್ನು ತಡೆಹಿಡಿದಿರುವ ನಿರ್ಧಾರದ ಬಗ್ಗೆ ಅಮೆರಿಕ ಪುನರ್ ಪರಿಶೀಲನೆ ನಡೆಸಬೇಕು ಎಂಬ ವಿಶ್ವಸಂಸ್ಥೆಯ ಪಾಕಿಸ್ತಾನದ ಮಾಜಿ ರಾಯಭಾರಿ ಜಲ್ಮಯ್ ಖಲೀಲ್ಜಾದ್ ಅವರ ಸಲಹೆಗೆ ಅಮೆರಿಕ ಈ ರೀತಿಯಾದ ಉತ್ತರ ಕೊಟ್ಟಿದೆ. ಈ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಟೊನರ್ ಕೊಟ್ಟ ಪ್ರತಿಕ್ರಿಯೆ ಹೀಗಿತ್ತು…

‘ನಮ್ಮ ನಿರ್ಧಾರವನ್ನು ಮರುಪರಿಶೀಲಿಸುವ ಪ್ರಶ್ನೆಯೇ ಇಲ್ಲ. ಮುಂಬೈ ಉಗ್ರರ ದಾಳಿಗೆ ಹೊಣೆಗಾರಿಕೆ ಹೊರಬೇಕು. ಅಷ್ಟೇ ಅಲ್ಲದೆ ಆ ಪ್ರಕರಣಕ್ಕೆ ನ್ಯಾಯ ದೊರೆಯಬೇಕು. ಕೇವಲ ಈ ಪ್ರಕರಣವಷ್ಟೇ ಅಲ್ಲ, ತನ್ನ ನೆಲದಲ್ಲಿರುವ ಉಗ್ರರು ನೆರೆ ರಾಷ್ಟ್ರಗಳ ಮೇಲೆ ಮಾಡಿರುವ ದಾಳಿಗೆ ಪಾಕಿಸ್ತಾನ ಉತ್ತರಿಸಬೇಕು. ಆ ಸಂಘಟನೆಗಳ ವಿರುದ್ಧ ಹೋರಾಡಿದರಷ್ಟೇ ನಮ್ಮಿಂದ ಸಹಾಯ ನಿರೀಕ್ಷಿಸಬಹುದು.

ಮುಂಬೈ ಮೇಲೆ ನಡೆದ ವಿದ್ರಾವಕ ದಾಳಿಯಲ್ಲಿ ಅಮೆರಿಕ ಪ್ರಜೆಗಳು ಮೃತಪಟ್ಟಿದ್ದರು. ಉಗ್ರರ ವಿರುದ್ಧ ಹೋರಾಡಿ ಅಂತಾ ನಾವು ನಿಮಗೆ ಸುದೀರ್ಘ ನೆರವನ್ನು ನೀಡುತ್ತಲೇ ಬಂದಿದ್ದೆವು. ಅದರ ಭಾಗವಾಗಿ ಭಾರತ ಮತ್ತು ಪಾಕಿಸ್ತಾನ ನಡುವಣ ಗುಪ್ತಚರ ಮಾಹಿತಿಯನ್ನು ಹಂಚಿಕೊಂಡಿದ್ದೆವು. ಆದರೆ ಉಗ್ರರ ನಿಗ್ರಹಕ್ಕೆ ಪಾಕಿಸ್ತಾನದ ಪ್ರಯತ್ನ ನೀರಸವಾಗಿದೆ. ತನ್ನ ನೆಲದಿಂದ ಉಗ್ರರ ಕಾರ್ಯಾಚರಣೆ ಮಾಡುವುದನ್ನು ಸಂಪೂರ್ಣವಾಗಿ ಕಿತ್ತುಹಾಕುವವರೆಗೂ ಪಾಕಿಸ್ತಾನ ನಮ್ಮಿಂದ ಸಹಾಯವನ್ನು ನಿರೀಕ್ಷಿಸಲಾಗುವುದಿಲ್ಲ. ಉಗ್ರರ ನಿಗ್ರಹಕ್ಕೆ ಹೆಚ್ಚು ಪ್ರಯತ್ನಗಳಾಗಬೇಕು. ಇದು ನಮ್ಮ ಅಂತಿಮ ನಿರ್ಧಾರ.

ಪಾಕಿಸ್ತಾನದ ಸರ್ಕಾರದೊಂದಿಗೆ ಉನ್ನತಮಟ್ಟದ ಮಾತುಕತೆ ನಡೆಸಲು ನಾವು ಸಿದ್ಧರಿದ್ದೇವೆ. ಅದು ಸಾಧ್ಯವಾಗಬೇಕಾದರೆ ಉಗ್ರರ ವಿರುದ್ಧ ಹೋರಾಡುವುದೊಂದೆ ಪಾಕಿಸ್ತಾನದ ಮುಂದಿರುವ ದಾರಿ. ಪಾಕಿಸ್ತಾನದಿಂದ ಉಗ್ರರ ವಿರುದ್ಧ ಹೋರಾಡುವ ಬಗ್ಗೆ ಭರವಸೆಗಳು ಬರುತ್ತಿವೆ. ಅದಕ್ಕೆ ಪೂರಕವಾಗಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಗಡಿ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು, ಇಂತಹ ಪ್ರಯತ್ನಗಳಿಗೆ ನಮ್ಮ ಸಹಾಯವಿರುತ್ತದೆ.’

ಇದರೊಂದಿಗೆ, ಕೇವಲ ಬಾಯಿ ಮಾತಿನಲ್ಲಿ ಉಗ್ರರ ವಿರುದ್ಧ ಹೋರಾಡ್ತೀವಿ ಅಂತಾ ಪಾಕಿಸ್ತಾನ ಹೇಳಿದ್ರೆ ಕೇಳಲು ಯಾರು ಸಿದ್ಧವಿಲ್ಲ ಎಂಬುದು ಸ್ಪಷ್ಟವಾಗಿದೆ. ಸದ್ಯಕ್ಕೆ ಪಾಕಿಸ್ತಾನದ ಮೇಲೆ ಒತ್ತಡ ಹೆಚ್ಚುತ್ತಿದ್ದು, ಇನ್ನಾದರೂ ಪಾಕ್ ತನ್ನ ಮೊಂಡುತನ ಬಿಟ್ಟು ಉಗ್ರರ ನಿಗ್ರಹಕ್ಕೆ ಮುಂದಾಗುತ್ತದೆಯೇ ಕಾದುನೋಡಬೇಕು.

Leave a Reply