ಏಸಿಯಾನ್ ಸಭೆಯಲ್ಲಿ ಮೋದಿ, ಉಗ್ರವಾದದ ಸಂಬಂಧ ಪಾಕಿಸ್ತಾನ – ಸಾಗರ ಭದ್ರತೆ ವಿಷಯದಲ್ಲಿ  ಚೀನಾ ಆತಂಕಗಳ ಬಗ್ಗೆ ಪರೋಕ್ಷ ನುಡಿ

ಡಿಜಿಟಲ್ ಕನ್ನಡ ಟೀಮ್:

ಲಾವೋದಲ್ಲಿ ಏಸಿಯಾನ್- ಇಂಡಿಯಾ ಶೃಂಗಸಭೆ ಗುರುವಾರ ಪ್ರಾರಂಭವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಮುಖ್ಯ ಭಾಷಣ ಮಾಡಿದ್ದಾರೆ.

ಭಯೋತ್ಪಾದನೆ ಹತ್ತಿಕ್ಕುವುದು ಹಾಗೂ ಭದ್ರತೆಯ ಕಾರ್ಯಸೂಚಿಯನ್ನು ಪ್ರಧಾನಿ ಭಾಷಣ ಮುಖ್ಯವಾಗಿ ಪ್ರತಿಪಾದಿಸಿದೆ. ‘ಉಗ್ರವಾದ ರಫ್ತಾಗುತ್ತಿರುವುದನ್ನು ತಡೆಯಬೇಕಿದೆ’ ಎಂದಿರುವ ಪ್ರಧಾನಿ, ಮೊನ್ನೆಯ ಜಿ20 ಸೇರಿದಂತೆ ಎಲ್ಲ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪರೋಕ್ಷವಾಗಿ ಪಾಕಿಸ್ತಾನವನ್ನು ಪ್ರಸ್ತಾಪಿಸಿ ಅದನ್ನು ಏಕಾಂಗಿಯಾಗಿಸುವ ಪ್ರಯತ್ನ ಮಾಡುತ್ತಿ ಬಂದಿರುವುದನ್ನು ಇಲ್ಲೂ ಮುಂದುವರಿಸಿದ್ದಾರೆ. ಇದು ಆಗ್ನೇಯ ಏಷ್ಯ ರಾಷ್ಟ್ರಗಳ ಸಮಾಗಮವಾಗಿರುವುದರಿಂದ ಜತೆಯಲ್ಲೇ ಪರೋಕ್ಷವಾಗಿ ಚೀನಾದ ಆಕ್ರಮಕ ಧೋರಣೆ ಎದುರಿಸುವ ಬದ್ಧತೆ ತೋರಿದ್ದು, ನಿರೀಕ್ಷಿತವಾದರೂ, ಬಹಳ ಮುಖ್ಯ ನಡೆ. ‘ಸಮುದ್ರ ಮಾರ್ಗವು ಜಾಗತಿಕ ವ್ಯಾಪಾರದ ಜೀವನಾಡಿಯಾಗಿದೆ. ವಿಶ್ವಸಂಸ್ಥೆ ನಿರ್ಣಯಿಸಿರುವ ಸಾಗರ ಕಾಯ್ದೆ ಪ್ರತಿಪಾದಿಸುತ್ತಿರುವ ಮುಕ್ತ ಸಂಚಾರವನ್ನು ಭಾರತ ಬೆಂಬಲಿಸುತ್ತದೆ’ ಎಂದಿದ್ದಾರೆ. ಇದು ಸೌತ್ ಚೀನಾ ಸಮುದ್ರದ ಪಾರುಪತ್ಯ ತನ್ನದೇ ಎನ್ನುತ್ತಿರುವ ಚೀನಾಕ್ಕೆ ಪ್ರತಿಯಾಗಿ ತೆಗೆದುಕೊಂಡಿರುವ ಮುಖ್ಯ ನಿಲುವು. ದಕ್ಷಿಣ ಚೀನಾ ಸಮುದ್ರದ ಕುರಿತಾದ ಚೀನಾದ ಆಕ್ರಮಕಾರಿ ನಿಲುವನ್ನು ವಿರೋಧಿಸುತ್ತಿರುವ ಹಲವು ರಾಷ್ಟ್ರಗಳು ಏಸಿಯಾನ್ ಬಳಗದಲ್ಲಿರುವುದರಿಂದ ಇದು ಪ್ರಾಮುಖ್ಯ ಪಡೆಯುತ್ತದೆ.

ಏಸಿಯಾನ್ ಭಾರತದ ‘ಪೂರ್ವ ಕಾರ್ಯಸೂಚಿ ನೀತಿ’ಯ ಅತಿಮುಖ್ಯ ಭಾಗ ಎಂದ್ದಿದ್ದಾರೆ ಪ್ರಧಾನಿ ಮೋದಿ. ಏಸಿಯಾನ್ ರಾಷ್ಟ್ರಗಳ ನಡುವೆ ಭೌತಿಕ, ಆರ್ಥಿಕ, ಡಿಜಿಟಲ್, ಸಾಂಸ್ಥಿಕ ಮತ್ತು ಸಾಂಸ್ಕೃತಿಕ ವಿಭಾಗಗಳಲ್ಲಿ ಕಾರ್ಯತಂತ್ರ ಸಹಯೋಗವನ್ನು ಹೆಚ್ಚಿಸುವುದಕ್ಕೆ ಭಾರತ ಉತ್ಸುಕವಾಗಿರುವ ಸಂಗತಿಯನ್ನೂ ಪ್ರಧಾನಿ ಅಭಿವ್ಯಕ್ತಿಸಿದ್ದಾರೆ.

ಏಸಿಯಾನ್ (ಅಸೋಸಿಯೇಷನ್ ಆಫ್ ಸೌತ್ ಈಸ್ಟ್ ಏಷಿಯನ್ ನೇಷನ್ಸ್) ಗುಂಪಿನಲ್ಲಿ ಭಾರತ ಸೇರಿದಂತೆ 11 ರಾಷ್ಟ್ರಗಳಿವೆ. ಇಂಡೊನೇಷ್ಯ, ಸಿಂಗಾಪುರ ಪಿಲಿಪ್ಪೀನ್ಸ್, ಮಲೇಷ್ಯ, ಬ್ರುನೆ, ತೈಲ್ಯಾಂಡ್, ಕಾಂಬೊಡಿಯ, ಲಾವೊ, ಮ್ಯಾನ್ಮಾರ್, ವಿಯೆಟ್ನಾಮ್. ಈ ಒಕ್ಕೂಟವು ಭಾರತಕ್ಕೆ ನಾಲ್ಕನೇ ದೊಡ್ಡ ವ್ಯಾಪಾರ ಸಹವರ್ತಿ. 2015-16ರಲ್ಲಿ ಭಾರತ ಮತ್ತು ಏಸಿಯಾನ್ ನಡುವೆ 65.04 ಬಿಲಿಯನ್ ಡಾಲರುಗಳ ವಹಿವಾಟು ನಡೆದಿದ್ದು, ಜಗತ್ತಿನೊಡನೆ ಭಾರತದ ವಹಿವಾಟು ಪ್ರಮಾಣದ ಶೇ. 10.12 ಭಾಗ ಇದಾಗಿದೆ.

ಅಂದಹಾಗೆ, ಲಾವೋದಲ್ಲಿ ಕೇವಲ ಏಸಿಯಾನ್ ಸಭೆ ಮಾತ್ರವೇ ಅಲ್ಲದೇ ಪೂರ್ವ ಏಷ್ಯ ಶೃಂಗವೂ ನಡೆಯುತ್ತಿದೆ. ಇಲ್ಲಿ ಏಸಿಯಾನ್ ಸದಸ್ಯ ದೇಶಗಳ ಜತೆ, ಏಷ್ಯ- ಫೆಸಿಫಿಕ್ ಪ್ರಾಂತ್ಯದ ಚೀನಾ, ಜಪಾನ್, ಕೊರಿಯಾ ರಿಪಬ್ಲಿಕ್, ಆಸ್ಟ್ರೇಲಿಯ, ನ್ಯೂಜಿಲೆಂಡ್, ಅಮೆರಿಕ ಮತ್ತು ರಷ್ಯಗಳಿವೆ. 2005ರಲ್ಲಿ ಪ್ರಾರಂಭವಾದ ಈ ಗುಂಪಿನಲ್ಲಿ ಭಾರತವೂ ಸ್ಥಾಪಕ ಸದಸ್ಯರಲ್ಲೊಂದು.

ಹಾಗೆಂದೇ ಲಾವೋದಲ್ಲಿ ಪ್ರಧಾನಿ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ನಡುವೆ ನಡೆಯಲಿರುವ ದ್ವಿಪಕ್ಷೀಯ ಮಾತುಕತೆಯೂ ಗಮನ ಸೆಳೆದಿದೆ.

ಈವರೆಗಿನ ವಿದ್ಯಮಾನದಲ್ಲಿ ಹೊರಬಿದ್ದಿರುವ ಪ್ರಕಟಣೆಗಳ ಪೈಕಿ ಚೀನಾದ ಸೌತ್ ಚೀನಾ ಸಿ ಪರಾಕ್ರಮದ ವಿರುದ್ಧ ತೀರ ಗಡಸು ಧ್ವನಿಯೇನೂ ಮೊಳಗಿಲ್ಲ. ದಕ್ಷಿಣ ಚೀನಾ ಸಮುದ್ರ ವಿಷಯದಲ್ಲಿ  ‘ಕೆಲವು ರಾಷ್ಟ್ರಗಳ’ ನೀತಿ ಕಳವಳಕ್ಕೆ ಕಾರಣವಾಗಿದೆ ಎಂದು ಬಿಡುಗಡೆಗೊಳಿಸಿರುವ ಹೇಳಿಕೆಗಳಲ್ಲಿ ಉಲ್ಲೇಖಿಸಲಾಗಿದೆ. ಇದಕ್ಕೆ ಕಾರಣವೂ ಇದೆ. ಏಸಿಯಾನ್ ದೇಶಗಳ ಪೈಕಿ ಕಾಂಬೊಡಿಯ, ಲಾವೋಗಳೆಲ್ಲ ಚೀನಾ ಪರವಾಗಿವೆ.

Leave a Reply