ಕಾವೇರಿ ಕಿಚ್ಚು: ತಡವಾಗಿ ನೀರು ಬಿಟ್ಟ ಸರ್ಕಾರದ ನಿರ್ಧಾರಕ್ಕೆ ಆಕ್ರೋಶ, ಕಿಡಿ ಕಾರಿದ ಹೆಚ್ಡಿಕೆ, ಮೂರನೇ ದಿನದ ಹೋರಾಟಕ್ಕೆ ನಟರ ಸಾಥ್, ನಾಳಿನ ಬಂದ್ ಗೆ ವ್ಯಾಪಕ ಬೆಂಬಲ

ಡಿಜಿಟಲ್ ಕನ್ನಡ ಟೀಮ್:

ಒಂದೆಡೆ ತಮಿಳುನಾಡಿಗೆ ನೀರು ಬಿಡಿ ಎಂಬ ಸುಪ್ರೀಂ ಕೋರ್ಟ್ ತೀರ್ಪು, ಮತ್ತೊಂದೆಡೆ ರಾಜ್ಯದ ಜನರ ತೀವ್ರ ವಿರೋಧ.. ಈ ಎರಡು ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂದು ಗೊತ್ತಾಗದೇ ರಾಜ್ಯ ಸರ್ಕಾರ ಕಂಗೆಟ್ಟ ಪರಿಸ್ಥಿತಿಗೆ ಸಿಲುಕಿದೆ. ರೈತರ ಈ ಕೋಪ ತಣಿಸಲು ಏಕಾಏಕಿ ನಾಲೆಗೆ ನೀರು ಬಿಟ್ಟಿದ್ದು, ಇದರಿಂದ ಮತ್ತೆ ಟೀಕೆಗೆ ಗುರಿಯಾಗಿದೆ ಸರ್ಕಾರ. ಇದರೊಂದಿಗೆ ಮೂರನೇ ದಿನವೂ ರೈತರ ಪ್ರತಿಭಟನೆ ತೀವ್ರವಾಗಿದೆ.

ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಪ್ರತಿಭಟನೆ ಮುಂದುವರಿದಿದೆ. ರಸ್ತೆ ತಡೆ ಸೇರಿದಂತೆ ವ್ಯಾಪಕವಾಗಿ ಪ್ರತಿಭಟನಾ ಮೆರವಣಿಗೆಗಳು ನಡೆಯುತ್ತಿದೆ. ಈ ವೇಳೆ ಬುಗಿಲೆದ್ದ ರೈತರ ಆಕ್ರೋಶ ತಣಿಸುವ ಉದ್ದೇಶದಿಂದ ರಾಜ್ಯದ ನಾಲೆಗಳಿಗೆ ನೀರು ಹರಿಸುವ ಸರ್ಕಾರದ ನಿರ್ಧಾರ, ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಇದು ಕೇವಲ ಮೂಗಿಗೆ ತುಪ್ಪ ಸವರುವ ಕೆಲಸ ಎಂದು ಟೀಕೆಗಳು ವ್ಯಕ್ತವಾಗ್ತಿವೆ. ಈ ಬಗ್ಗೆ ಮಂಡ್ಯದ ರೈತರು ಮಾತು ಹಿಗಿತ್ತು…

‘ಈ ಮುನ್ನವೇ ಸರ್ಕಾರ ನೀರು ಬಿಡುವುದಿಲ್ಲ ಎಂದು ಹೇಳಿತ್ತು. ಈಗ ಏಕೆ ನೀರು ಬಿಟ್ಟಿದೆ. ನೀರು ಬಿಡುವುದಿಲ್ಲ ಎಂದು ಕೃಷಿ ಚಟುವಟಿಕೆಗಳನ್ನು ನಾವು ಕೈಬಿಟ್ಟಿದ್ದೆವು. ಆದರೆ, ಪ್ರತಿಭಟನೆ ನಡೆದ ತಕ್ಷಣ ಸರ್ಕಾರ ಏಕಾಏಕಿ ನೀರು ಬಿಟ್ಟಿದೆ. ಹೀಗೆ ಹೇಳದೇ ಕೇಳದೆ ತಕ್ಷಣವೇ ನೀರು ಬಿಟ್ಟರೆ ವ್ಯವಸಾಯ ಮಾಡೋದು ಹೇಗೆ? ಈ ನಿರ್ಧಾರ ತೆಗೆದುಕೊಳ್ಳುವಾಗಲೂ ರಾಜ್ಯ ರೈತರ ಬಳಿ ಒಂದು ಮಾತು ಕೇಳಿಲ್ಲ. ತಮಗೆ ಬೇಕಾದ ಹಾಗೆ ನೀರು ಬಿಟ್ಟಿದೆ. ಜನರ ಆಕ್ರೋಶ ತಡೆಯಲಷ್ಟೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ನಾಳೆ ಮತ್ತೆ ಏಕಾಏಕಿ ನೀರು ನಿಲ್ಲಿಸಿದರೆ ಏನು ಮಾಡುವುದು?’

ಮಂಡ್ಯದಲ್ಲಿ ನಡೆಯುತ್ತಿರುವ ಮೂರನೇ ದಿನದ ಪ್ರತಿಭಟನೆಗೆ ಕನ್ನಡ ಚಿತ್ರರಂಗದ ನಟರಾದ ದರ್ಶನ, ಜೋಗಿ ಪ್ರೇಮ್ ಕಾಣಿಸಿಕೊಂಡರು. ಈ ವೇಳೆ ಮಾತನಾಡಿದ ದರ್ಶನ್, ‘ನಾನು ಇಲ್ಲಿಗೆ ನಟನಾಗಿ ಆಗಮಿಸಿಲ್ಲ. ಸಾಮಾನ್ಯ ಪ್ರಜೆಯಾಗಿ ಬಂದಿದ್ದೇನೆ. ನಾನು ಇಲ್ಲಿನ ನೀರು ಕುಡಿದು ಉಪ್ಪು ತಿಂದಿದ್ದೇನೆ. ಆ ಋಣ ತೀರಿಸಲು ಬಂದಿದ್ದೇನೆ. ಇದು ನನ್ನ ಮೊದಲ ಭೇಟಿಯಲ್ಲ ಮುಂದೆಯೂ ಬರುತ್ತೇನೆ. ಇಲ್ಲಿಗೆ ಬರಲು ನನಗೆ ಯಾವುದೆ ಭದ್ರತೆ ಬೇಡ. ರೈತರ ಪವರ್ ಇನ್ನು ಇಳಿದಿಲ್ಲ. ಅವರು ಸಿಡಿದರೆ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.’ ಎಂದರು. ಆ ಮೂಲಕ ಮಂಡ್ಯಕ್ಕೆ ಬರಲು ಭದ್ರತಾ ವ್ಯವಸ್ಥೆ ಬೇಕು ಎಂದಿದ್ದ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರನ್ನು ಪರೋಕ್ಷವಾಗಿ ಟೀಕಿಸಿದರು.

ಮಂಡ್ಯದ ತಮಿಳು ಕಾಲೋನಿಯಲ್ಲಿರುವ ತಮಿಳಿಗರು ಸಂಜಯ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಜಯಲಲಿತಾ ಹಾಗೂ ತಮಿಳುನಾಡು ಸರ್ಕಾರ ವಿರುದ್ಧ ಕೂಗಿದರು. ಇನ್ನು ತಮಿಳುನಾಡು ಹಾಗೂ ಕರ್ನಾಟಕ ನಡುವಿನ ಸಾರಿಗೆ ಸಂಚಾರ ಸ್ಥಗಿತವಾಗಿದೆ.

ಇತ್ತ ಈ ಬೆಳವಣಿಗೆಗಳ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಇಂಧನ ಸಚಿವ ಡಿ.ಕೆ ಶಿವಕುಮಾರ್ ರೈತರಲ್ಲಿ ಮನವಿ ಮಾಡಿಕೊಂಡಿದ್ದು ಹೀಗೆ…

‘ರಾಜ್ಯ ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು. ನಮ್ಮ ರೈತರನ್ನು ಕಾಪಾಡುವ ಜವಾಬ್ದಾರಿ ನಮ್ಮ ಮೇಲಿದೆ. ರೈತರ ಹಿತ ಕಾಪಾಡಲು ಇಂದಿನಿಂದ ನೀರು ಹರಿಸಲಾಗಿದೆ. ಮಂಡ್ಯ ಹಾಗೂ ಇತರೆ ಜಿಲ್ಲೆಗಳಲ್ಲಿ ಮತ್ತೆ ಶಾಲಾ ಕಾಲೇಜುಗಳು ಈ ಪರಿಸ್ಥಿತಿಯಲ್ಲಿ ಸಂಘ ಸಂಸ್ಥೆಗಳು ತಮ್ಮ ಪ್ರತಿಭಟನೆಗಳನ್ನು ವಾಪಸ್ ಪಡೆಯಬೇಕು. ಏನೇ ಇದ್ದರು ಶಾಂತಿಯುತವಾಗಿ ಪ್ರತಿಭಟನೆ ನಡೆಸಲಿ. ಎಲ್ಲ ಪಕ್ಷಗಳು ರಾಜಕೀಯ ಮಾಡದೆ ಒಟ್ಟಾಗಿ ಕೈಜೋಡಿಸಬೇಕು.’

ಉಳಿದಂತೆ ಬೆಂಗಳೂರಿನಲ್ಲೂ ಪ್ರತಿಭಟನೆಗಳು ಮುಂದುವರೆದಿದ್ದು, ಮೈಸೂರು ಬ್ಯಾಂಕ್ ವೃತ್ತದಲ್ಲಿ ವಾಟಾಳ್ ನಾಗರಾಜ್ ಉರುಳು ಸೇವೆ ನಡೆಸಿ ಪ್ರತಿಭಟನೆ ನಡೆಸಿದರು. ಇನ್ನು ರಾಜ್ಯ ಒಕ್ಕಲಿಗರ ಸಂಘ ಸಹ ಕಿಮ್ಸ್ ಆಸ್ಪತ್ರೆಯ ಬಳಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರದ ವಿರುದ್ಧ ಹೆಚ್ಡಿಕೆ ಕಿಡಿ…

ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜೆಡಿಎಸ್ ಮುಖಂಡ ಹೆಚ್.ಡಿ ಕುಮಾರಸ್ವಾಮಿ, ಸರ್ಕಾರದ ವಿರುದ್ಧ ಕಿಡಿ ಕಾರಿದರು. ಅವರು ಸರ್ಕಾರದ ವಿರುದ್ಧ ಮಾಡಿದ ಆರೋಪಗಳು ಹೀಗಿದ್ದವು…

‘ಸುಪ್ರೀಂ ಕೋರ್ಟ್ ನಲ್ಲಿ ತಾಂತ್ರಿಕವಾಗಿ ವಾದ ಮಂಡಿಸಲು ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಕಾವೇರಿ ಮೇಲುಸ್ತುವಾರಿ ಸಮಿತಿಯಲ್ಲಿ ತಮಿಳಿಗರೇ ಇದ್ದಾರೆ. ರಾಜ್ಯ ಸರ್ಕಾರ ಈ ವಿಷಯದಲ್ಲಿ ಎಡವುತ್ತಿದೆ ಎಂದು ಈ ಹಿಂದೆಯೇ ಎಚ್ಚರಿಸಿದ್ದೆ. ಮುಖ್ಯಮಂತ್ರಿಗಳು ನಾರಿಮನ್ ಅವರನ್ನು ಭೇಟಿ ಮಾಡಲು ದೆಹಲಿಗೆ ತೆರಳಿದ್ದೆ ಎಂದು ಸುಳ್ಳು ಹೇಳಿದ್ದಾರೆ. ನಿಗಮ ಮಂಡಳಿ ಅಧ್ಯಕ್ಷರ ನೇಮಕಕ್ಕೆ ಹೈಕಮಾಂಡ್ ಬಳಿ ಒಪ್ಪಿಗೆ ಪಡೆಯಲು ಅವರು ದೆಹಲಿಗೆ ಹೋಗಿದ್ದರೇ ಹೊರತು. ಕಾವೇರಿ ಸಮಸ್ಯೆ ಬಗೆಹರಿಸಲು ಅಲ್ಲ. ನ್ಯಾಯಾಲಯದಲ್ಲಿ ನಾರಿಮನ್ ಅವರು 10 ಸಾವಿರ ನೀರು ಬಿಡುವುದಾಗಿ ವಾದ ಮಾಡಿದ್ದರು. ಹಾಗೆ ವಾದ ಮಾಡಲು ಹಾಗೂ ನೀರು ಬಿಡಲು ಸಿದ್ಧ ಎಂದು ನಾರಿಮನ್ ಅವರಿಗೆ ಹೇಳಿದವರಾರು? ಇನ್ನು ರೈತರು ಪ್ರತಿಭಟನೆ ನಡೆಸಬಾರ್ದು ಅಂತಾ ಸರ್ಕಾರ ಕೇಳುತ್ತಿದೆ. ರಾಜ್ಯದ ರೈತರು ಇಷ್ಟೂ ಪ್ರತಿಭಟನೆ ಮಾಡದಿದ್ದರೆ ಹೇಗೆ? ಅವರ ಕೂಗು ಕೇಂದ್ರಕ್ಕೆ ಮುಟ್ಟುವುದಾದರೂ ಹೇಗೆ? ಇಲ್ಲಿ ಪ್ರತಿಭಟನೆ ನಡೆಸುತ್ತಿರುವವರ ವಿರುದ್ಧ ಕೇಸ್ ಹಾಕಿದರೆ ಸರ್ಕಾರ ಅದರ ಪರಿಣಾಮ ಎದುರಿಸಬೇಕಾಗುತ್ತದೆ.’

ನಾಳೆ ರಾಜ್ಯ ಬಂದ್…

ಕಾವೇರಿ ನೀರು ಬಿಡುಗಡೆಗೆ ವಿರೋಧಿಸಿ ನಾಳೆ ರಾಜ್ಯ ಬಂದ್ ಗೆ ಕರೆ ನೀಡಲಾಗಿದೆ. ಕನ್ನಡ ಪರ ಸಂಘಟನೆಗಳ ಬಂದ್ ಕರೆಗೆ, ರೈತ ಸಂಘ, ಸರ್ಕಾರಿ ನೌಕರರ ಸಂಘ, ಕನ್ನಡ ಚಿತ್ರರಂಗ ಸಂಪೂರ್ಣವಾಗಿ ಬೆಂಬಲ ವ್ಯಕ್ತಪಡಿವೆ. ಬೆಂಗಳೂರು ಸೇರಿದಂತೆ ಇತರ ಕಡೆಗಳಲ್ಲೂ ಪೆಟ್ರೋಲ್ ಬಂಕ್ ಗಳ ಬಂದ್ ಆಗಲಿವೆ. ಇನ್ನು ಕೆಎಸ್ ಆರ್ ಟಿಸಿ, ಬಿಎಂಟಿಸಿ ಬಸ್ ಸಂಚಾರವಿರುವುದಿಲ್ಲ. ಆಟೋ, ಟ್ಯಾಕ್ಸಿ ಮತ್ತು ಖಾಸಗಿ ವಾಹನಗಳ ಸಂಚಾರವೂ ಬಹುತೇಕ ಬಂದ್ ಆಗಲಿದ್ದು, ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ.

Leave a Reply