
ಡಿಜಿಟಲ್ ಕನ್ನಡ ಟೀಮ್:
ಗೋರಕ್ಷಣೆ ಹೆಸರಲ್ಲಿ ಸುಲಿಗೆಗೆ ಕ್ರಮ ತೆಗೆದುಕೊಳ್ಳುವಂತೆ ಪರಮೇಶ್ವರರಿಗೆ ಸೂಚಿಸಿದ್ದೇನೆ: ದಿಗ್ವಿಜಯ್ ಸಿಂಗ್
‘ಕಳೆದ ರಾತ್ರಿ ಕೆಲವು ಮುಸ್ಲಿಂ ಸಂಘಟನೆ ಮುಖಂಡರು ನನ್ನನ್ನು ಭೇಟಿಯಾಗಿದ್ದರು. ಗೋರಕ್ಷಣೆ ಹೆಸರಲ್ಲಿ ಬಿಜೆಪಿ ಪರ ಸಂಘಟನೆಗಳು ದೌರ್ಜನ್ಯ ನಡೆಸುತ್ತಿದ್ದು, ಹಣ ಕೀಳುತ್ತಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ. ಈ ರೀತಿ ಸುಲಿಗೆ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಗೃಹ ಸಚಿವ ಪರಮೇಶ್ವರ್ ಅವರಿಗೆ ಸೂಚಿಸಿದ್ದೇನೆ..’ ಗುರುವಾರ ಬೆಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಹೇಳಿದ ಮಾತಿದು.
ಸಮನ್ವಯ ಸಮಿತಿ ಸಭೆಗಾಗಿ ಬೆಂಗಳೂರಿಗೆ ಆಗಮಿಸಿರುವ ದಿಗ್ವಿಜಯ್ ಸಿಂಗ್ ಅವರು ಈ ಬಗ್ಗೆ ಹೇಳಿದಿಷ್ಟು.. ‘ಈ ಕುರಿತಾದ ಮೂರು ಪ್ರಕರಣಗಳನ್ನು ನನ್ನೊಂದಿಗೆ ಮುಸ್ಲಿಂ ಸಂಘಟನೆ ನಾಯಕರು ಹಂಚಿಕೊಂಡಿದ್ದಾರೆ. ಯಾವುದೇ ಹಿಂದುಪರ ಸಂಘಟನೆಗಳು ಕಾನೂನು ಕೈಗೆತ್ತಿಕೊಳ್ಳಲು ಬಿಡುವುದಿಲ್ಲ. ರಾಜ್ಯದಲ್ಲಿ ಕೋಮು ಸೌಹಾರ್ದ ಹಾಳಾಗಲು ಅವಕಾಶ ನೀಡುವುದಿಲ್ಲ.’
ಇನ್ನು ಪಕ್ಷದ ವಿರುದ್ಧ ಮಾತನಾಡುವವರಿಗೂ ಕಠಿಣ ಕ್ರಮ ಎಂದು ಎಚ್ಚರಿಕೆ ನೀಡಿದ ದಿಗ್ವಿಜಯ್ ಸಿಂಗ್, ‘ಪಕ್ಷದ ಬಗ್ಗೆಯಾಗಲಿ ಅಥವಾ ರಾಜ್ಯ ಸರ್ಕಾರದ ಬಗ್ಗೆಯಾಗಲಿ ಕಾಂಗ್ರೆಸ್ ನ ಯಾವುದೇ ಮುಖಂಡರು ವಿರುದ್ಧವಾಗಿ ಮಾತನಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಜನಾರ್ದನ ಪೂಜಾರಿ, ಜಾಫರ್ ಷರೀಫ್ ಅಥವಾ ಇತರೆ ಯಾವುದೇ ನಾಯಕರಾಗಲಿ ಪಕ್ಷದ ವಿರುದ್ಧವಾಗಿ ಮಾತನಾಡಿದ್ರೆ, ಎ.ಕೆ ಆಂಟನಿ ಅವರ ನೇತೃತ್ವದ ಶಿಸ್ತು ಸಮಿತಿ ಅವರ ವಿರುದ್ಧ ಕ್ರಮ ಜರುಗಿಸಲಿದೆ.’
ಪೊಲೀಸ್ ನೇಮಕಾತಿ ನಿಯಮ ಬದಲಾವಣೆಗೆ ಸಂಪುಟ ಒಪ್ಪಿಗೆ
ರಾಜ್ಯ ಪೊಲೀಸ್ ಇಲಾಖೆಯ ನೇಮಕಾತಿಯ ನಿಯಮಗಳನ್ನು ಬದಲಿಸಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇತರೆ ರಾಜ್ಯಗಳಂತೆ ನಮ್ಮಲ್ಲಿಯೂ ಸಾಮಾನ್ಯ ಮತ್ತು ಹಿಂದುಳಿದ ವರ್ಗದವರಿಗೆ ಅರ್ಜಿ ಸಲ್ಲಿಸುವ ಗರಿಷ್ಠ ವಯೋಮಾನವನ್ನು 26ರಿಂದ 28 ಕ್ಕೆ ಹೆಚ್ಚಿಸಲಾಗಿದೆ. ಇನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ 28 ರಿಂದ 30 ರವರೆಗೆ ಹೆಚ್ಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ ಜಯಚಂದ್ರ.
ಉಳಿದಂತೆ ಸಚಿವ ಸಂಪುಟ ತೆಗೆದುಕೊಂಡ ತೀರ್ಮಾನಗಳು ಹೀಗಿವೆ…
- ಸಂಪುಟ ರಾಜ್ಯ ಕೃಷಿ ಇಲಾಖೆಯಲ್ಲಿ ಖಾಲಿ ಇರುವ 600ಕ್ಕೂ ಹೆಚ್ಚು ಸಹಾಯಕ ನಿರ್ದೇಶಕರು, ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗೆ ನೇರ ನೇಮಕಾತಿ ಮಾಡಿಕೊಳ್ಳಲು ಸಂಪುಟ ಒಪ್ಪಿಗೆ ನೀಡಿದೆ.
- ಬೀದರ್, ಗದಗ ಜಿಲ್ಲೆಗಳಲ್ಲಿ ಹೆಸರು ಬೆಳೆಯುವ ಪ್ರದೇಶದಲ್ಲಿ ಬಂಪರ್ ಬೆಳೆ ಬಂದಿದ್ದು, ಮಾರುಕಟ್ಟೆ ದರ ಕುಸಿದಿದೆ. ಇದರಿಂದ ನ್ಯಾಪೇಡ್ ಮೂಲಕ ಪ್ರತಿ ಕ್ವಿಂಟಾಲ್ ಗೆ ₹ 5225 ರಂತೆ ಖರೀದಿಸಲು ಸರ್ಕಾರ ನಿರ್ಧರಿಸಿದೆ.
- ನೀರಾವರಿ ಯೋಜನೆಗಳಿಗೆ ಅನುಕೂಲವಾಗಲೆಂದು ₹ 1100 ಕೋಟಿ ಸಾಲ ಎತ್ತಲು ಒಪ್ಪಿಗೆ.
- ಇದೇ ತಿಂಗಳು 14ರಂದು ಒಂದು ದಿನದ ವಿಧಾನ ಮಂಡಲದ ಅಧಿವೇಶನ ಕರೆದು ಸಂಸತ್ತಿನಲ್ಲಿ ಅಂಗೀಕರಿಸಿರುವ ಸರಕು ಮತ್ತು ಸೇವಾ ತೆರಿಗೆ ಮಸೂದೆ (ಜಿಎಸ್ಟಿ) ಗೆ ಚರ್ಚೆ ಇಲ್ಲದೆ ಅಂಗೀಕರಿಸಲು ತೀರ್ಮಾನ.
ಕಂದು ರೋಗಕ್ಕೆ ಆತಂಕಪಡುವಂತಿಲ್ಲ
ರಾಜ್ಯದಲ್ಲಿ ಹಸುಗಳಿಗೆ ಕಾಣಿಸಿಕೊಂಡಿರುವ ಕಂದು ರೋಗ ಅಥವಾ ಬಂಜೆ ರೋಗದ ಬಗ್ಗೆ ಪಶು ಪಾಲಕರು ಯಾವುದೇ ರೀತಿಯ ಆತಂಕ ಪಡುವಂತಿಲ್ಲ. ಆ ಹಸುಗಳ ಹಾಲನ್ನು ಕಾಯಿಸಿ ಕುಡಿಯುವುದರಿಂದ ಯಾವುದೇ ತೊಂದರೆ ಇಲ್ಲ ಎಂದಿದ್ದಾರೆ ಪಶುಸಂಗೋಪನೆ ಸಚಿವ ಎ.ಮಂಜು.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಚಿವರು ಹೇಳಿದಿಷ್ಟು… ‘ಈ ರೋಗಕ್ಕೆ ಒಳಗಾಗಿರುವ ಹಸುಗಳನ್ನು ದಯಾ ಮರಣಕ್ಕೆ ಒಪ್ಪಿಸಬೇಡಿ. ವಧಾಗಾರಕ್ಕೂ ಕಳುಹಿಸಬೇಡಿ. ಆ ಹಸುವನ್ನು ಪ್ರತ್ಯೇಕವಾಗಿಟ್ಟು ಆರೈಕೆ ಮಾಡಿ. ಈ ರೋಗ ಹೆಚ್ಚು ಹರಡಬಾರದೆಂದು ಹೊರ ರಾಜ್ಯಗಳಿಂದ ಬರುವ ಹಸುಗಳನ್ನು ತಪಾಸಣೆ ಮಾಡಿದ ನಂತರವಷ್ಟೇ ಒಳಗೆ ಬಿಡಲಾಗುವುದು. ಇನ್ನು ಏಳು ತಿಂಗಳ ಒಳಗಿರುವ ಕರುಗಳಿಗೆ ಲಸಿಕೆ ಹಾಕಿಸಲು ತೀರ್ಮಾನಿಸಲಾಗಿದೆ. ಇನ್ನು ರಾಜ್ಯದಲ್ಲಿನ 1.30 ಹಸುಗಳಿಗೆ ಕಾಲು ಬಾಯಿ ರೋಗದ 11ನೇಸುತ್ತಿನ ಲಸಿಕೆಯನ್ನು ಸೆಪ್ಟೆಂಬರ್ ನಲ್ಲಿ ನೀಡಲು ಸೂಚಿಸಲಾಗಿದೆ.’
ಬೆಂಗ್ಳೂರಲ್ಲಿ ಕಾವೇರಿ ಹೋರಾಟ… ಗುರುವಾರದ ಚಿತ್ರಪಟಗಳು
ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರವಾಗಿ ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ವ್ಯಾಪಕ ಪ್ರತಿಭಟನೆಗಳಾಗುತ್ತಿವೆ. ರಾಜಧಾನಿ ಬೆಂಗಳೂರಿನಲ್ಲೂ ಪ್ರತಿಭಟನೆಗಳು ಹೆಚ್ಚಾಗಿವೆ. ಶುಕ್ರವಾರ ರಾಜ್ಯ ಬಂದ್ ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ. ಬಂದ್ ಗೆ ಎಲ್ಲ ವರ್ಗ ಹಾಗೂ ಕ್ಷೇತ್ರದಿಂದಲೂ ಬೆಂಬಲ ಸಿಕ್ಕಿರುವುದರಿಂದ ಮಾಲ್, ಚಿತ್ರಮಂದಿರಗಳು ಸ್ಥಗಿತಗೊಳ್ಳಲಿದ್ದು, ಕೆಎಸ್ ಆರ್ ಟಿಸಿ, ಬಿಎಂಟಿಸಿ ಬಸ್ ಗಳು, ಆಟೋ, ಟ್ಯಾಕ್ಸಿ ಸಂಚಾರ ಇರುವುದಿಲ್ಲ. ಇನ್ನು ಮೆಟ್ರೊ ಸಂಚಾರವೂ ನಡೆಯುವುದು ಅನುಮಾನವಾಗಿದೆ. ಉಳಿದಂತೆ ತರಕಾರಿ, ಹಾಲು, ಆಸ್ಪತ್ರೆ, ಔಷಧ ಸೇವೆಗಳು ಲಭ್ಯವಿರಲಿವೆ.
ಗುರುವಾರ ನಡೆದ ಪ್ರತಿಭಟನೆಗಳು ಚಿತ್ರಗಳು ಹೀಗಿವೆ…
ಬೆಂಗಳೂರು ನಗರ ಕನ್ನಡ ಸಾಹಿತ್ಯ ಪರಿಷತ್ ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳು ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಟೌನ್ ಹಾಲ್ ಬಳಿ ಪ್ರತಿಭಟನೆ ನಡೆಸಿದರು…
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಚೇರಿ ಬಳಿ ಬಿಜೆಪಿ ಪಕ್ಷ ನಡೆಸಿದ ಪ್ರತಿಭಟನೆಯಲ್ಲಿ ಮಾಜಿ ಉಪ ಮುಖ್ಯಮಂತ್ರಿ ಆರ್ ಅಶೋಕ್ ಭಾಗಿಯಾಗಿದ್ದು, ಇವರಿಗೆ ಪಾಲಿಕೆ ಸದಸ್ಯರು ಸಾಥ್ ನೀಡಿದರು.
ಕನ್ನಡ ಪರ ಸಂಘಟನೆಗಳು ಬೈಕ್ ರಾಲಿ ನಡೆಸಿ ಕೆ.ಆರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದು ಹೀಗೆ…