ಹವಾಮಾನ ಉಪಗ್ರಹದ ಯಶಸ್ವಿ ಉಡ್ಡಯನ, ಇಸ್ರೊದ ದೇಸಿ ಕ್ರಯೊಜನಿಕ್ ಎಂಜಿನ್ ನಿರ್ಣಾಯಕ ಯಶಸ್ಸು

 

ಡಿಜಿಟಲ್ ಕನ್ನಡ ಟೀಮ್:

ದೇಶದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೊದಿಂದ ಇನ್ನೊಂದು ವಿಕ್ರಮ. ಇನ್ಸಾಟ್ 3ಡಿಆರ್ ಎಂಬ ಹವಾಮಾನ ಉಪಗ್ರಹ ಆಂಧ್ರಪ್ರದೇಶದ ಶ್ರೀಹರಿಕೋಟಾ ಕೇಂದ್ರದಿಂದ ಯಶಸ್ವಿಯಾಗಿ ಗುರುವಾರ ಸಂಜೆ ಉಡಾವಣೆ ಆಗಿದೆ.

ಇಲ್ಲಿನ ಮುಖ್ಯ ಸಾಧನೆ ಎಂದರೆ ಜಿಎಸ್ಎಲ್ವಿ ರಾಕೆಟ್ ನಲ್ಲಿ ಉಪಗ್ರಹ ಉಡಾವಣೆಗೆ ದೇಸಿ ಕ್ರಯೊಜನಿಕ್ ಎಂಜಿನ್ ಅನ್ನು ಬಳಸಲಾಗಿದೆ. ಈ ಹಿಂದೆ 2014 ಮತ್ತು 2015ರಲ್ಲಿ ಯಶಸ್ವಿಯಾಗಿ ನಡೆಸಲಾಗಿತ್ತಾದರೂ ಈಗಿನ ದೇಶಿ ಅವತರಣಿಕೆ ಅಭಿವೃದ್ಧಿ ಹೊಂದಿದ್ದಾಗಿದೆ.  2010ರಲ್ಲಿ ಮೊದಲ ಬಾರಿಗೆ ದೇಸಿ ಕ್ರಯೊಜನಿಕ್ ಎಂಜಿನ್ ಮೇಲೆ ಉಪಗ್ರಹ ಉಡಾವಣೆಗೆ ಯತ್ನಿಸಿದಾಗ ಅದು ವಿಫಲಗೊಂಡು ಬಂಗಾಳಕೊಲ್ಲಿಯಲ್ಲಿ ಬಿದ್ದಿತ್ತು. ಗುರುವಾರದ ಯಶಸ್ಸು ದೇಸಿ ಕ್ರಯೊಜನಿಕ್ ಎಂಜಿನ್ ನ ಸಾಫಲ್ಯವನ್ನು ಸಾರಿರುವುದರಿಂದ ಇನ್ನು ಮುಂದೆ ವೆಚ್ಚವು ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗಲಿದೆ. ಅಲ್ಲದೇ ವಿದೇಶಿ ಉಪಗ್ರಹಗಳಿಗೂ ಈ ಸೇವೆ ನೀಡುವ ಮೂಲಕ ವಾಣಿಜ್ಯ ಬಳಕೆ ಮಾಡಿಕೊಳ್ಳಬಹುದಾಗಿದೆ.

ಕ್ರಯೊಜನಿಕ್ ಎಂಜಿನ್ ಅಭಿವೃದ್ಧಿ ಎರಡು ದಶಕಗಳನ್ನೇ ತೆಗೆದುಕೊಂಡಿತ್ತು. ಗುರುವಾರ ಸಹ ಸಂಜೆ 4.10ಕ್ಕೆ ಆಗಬೇಕಿದ್ದ ಉಡ್ಡಯನ ತಾಂತ್ರಿಕ ಕಾರಣಗಳಿಂದ 40 ನಿಮಿಷ ಮೂಂದೂಡಲ್ಪಟ್ಟಾಗ ಯಶಸ್ಸಿನ ಬಗ್ಗೆ ಸಂಶಯಗಳೆದ್ದಿದ್ದವು. ಆದರೆ, ಜಿಎಸ್ಎಲ್ವಿ ರಾಕೆಟ್ಟಿನಲ್ಲಿ ದೇಸಿ ಕ್ರಯೋಜನಿಕ್ ಎಂಜಿನ್ ಆಧಾರದಲ್ಲಿ ಕಕ್ಷೆಗೇರಿದ ಎರಡನೇ ಅತಿ ತೂಕದ ಉಪಗ್ರಹ ಎಂಬ ಹಿರಿಮೆಗೆ ಇನ್ಸಾಟ್-3ಡಿಆರ್ (2211ಕೆಜಿ) ಪಾತ್ರವಾಗಿದೆ.

ಇನ್ಸಾಟ್ ಶ್ರೇಣಿಯ ಈ ಹಿಂದಿನ ಉಪಗ್ರಹಗಳಂತೆಯೇ ಹವಾಮಾನ ಮಾಹಿತಿಗಳನ್ನು ಇದು ಕೊಡಲಿದೆ. ಚಿತ್ರ ತೆಗೆಯುವ ಗುಣಮಟ್ಟವೂ ಸೇರಿದಂತೆ ಮಾಹಿತಿ ಕಲೆ ಹಾಕುವ ಬಗೆ ಅಭಿವೃದ್ಧಿ ಹೊಂದಿದೆ. ಜತೆಗೆ ರಕ್ಷಣಾ ಕಾರ್ಯಾಚರಣೆಗಳಿಗೆ ಇದು ವಿಶೇಷವಾಗಿ ಸಹಕರಿಸಲಿದೆ. ತೀರ ಇತ್ತೀಚೆಗೆ ಹಿಂದು ಮಹಾಸಾಗರದಲ್ಲಿ ಸೇನೆಯ ವಿಮಾನವೊಂದು ಗುರುತಿಲ್ಲದಂತೆ ಕಳೆದುಹೋಯಿತು. ಇಂಥ ಸಂದರ್ಭಗಳಲ್ಲಿ ಪತ್ತೆ ಕಾರ್ಯಕ್ಕೆ ಇನ್ಸಾಟ್-3ಡಿಆರ್ ಮತ್ತಷ್ಟು ಕ್ಷಮತೆಯಿಂದ ಕಾರ್ಯನಿರ್ವಹಿಸಲಿದೆ.

(ಚಿತ್ರಕೃಪೆ- ಇಸ್ರೊ)

Leave a Reply