ಬೇಡಿಕೆಗನುಗುಣವಾಗಿ ರೈಲ್ವೆ ದರ ಏರಿಕೆ ನಿರ್ಧಾರ ಸಾಮಾನ್ಯರ ಮೇಲಿನ ಪ್ರಹಾರ ಎಂಬ ಬೊಬ್ಬೆಯಲ್ಲಿ ನಿಜವೆಷ್ಟು?

ಡಿಜಿಟಲ್ ಕನ್ನಡ ಟೀಮ್:

ಸರ್ಕಾರದ ಎಲ್ಲ ನಿರ್ಧಾರಗಳನ್ನೂ ಆಮ್ ಆದ್ಮಿ ಮೇಲಿನ ಬರೆ ಎಂದು ವ್ಯಾಖ್ಯಾನಿಸುವುದರಲ್ಲಿ ವಿಚಿತ್ರ ಥ್ರಿಲ್ ಒಂದು ಸಿಗಬಹುದು. ಅದನ್ನೇ ಈಗ ರೈಲ್ವೆ ದರ ಏರಿಕೆ ವಿಷಯದಲ್ಲೂ ಪ್ರದರ್ಶಿಸಲಾಗುತ್ತಿದೆ. ಕೇಂದ್ರ ಸರ್ಕಾರವನ್ನು ವಿರೋಧಿಸುವವರ ಗುಂಪು ಸಾಮಾಜಿಕ ಮಾಧ್ಯಮದಲ್ಲಿ ಮಾಡುತ್ತಿರುವ ಚರ್ಚೆ ಹೇಗಿದೆ ಎಂದರೆ- ಭಾರತದಾದ್ಯಂತ ಜನಸಾಮಾನ್ಯ ರೈಲು ಹತ್ತುವುದಕ್ಕೇ ಯೋಚಿಸುವಂತೆ ದರ ಏರಿಕೆ ಆಗಿಬಿಟ್ಟಿದೆಯೇನೋ ಎಂಬಂತೆ.

ಗಮನಿಸಬೇಕಾದ್ದು- ಪ್ರೀಮಿಯರ್ ರಾಜಧಾನಿ, ಶತಾಬ್ದಿ ಮತ್ತು ತುರಂತ್ ಶ್ರೇಣಿಯ ರೈಲುಗಳಲ್ಲಿ ಪ್ರಯಾಣಿಕರ ದರ ಹೆಚ್ಚಳವಾಗಿದೆ. ಅದೂ ಹೆಚ್ಚಾಗಿರುವುದು ಯಾವ ವಿಭಾಗದಲ್ಲಿ? ಎರಡನೇ ಮತ್ತು ಮೂರನೇ ಹಂತದ ವಾತಾನುಕೂಲಿ ಬೋಗಿಗಳಲ್ಲಿ. ಫಸ್ಟ್ ಎಸಿ ವಿಭಾಗವನ್ನೂ ಈ ದರ ಏರಿಕೆ ಓಟದಿಂದ ಹೊರಗಿಡಲಾಗಿದೆ.

ಸರ್ಜ್ ಪ್ರೈಸಿಂಗ್ ಅರ್ಥಾತ್ ಬೇಡಿಕೆಗನುಗುಣವಾಗಿ ಬೆಲೆ ಏರಿಕೆ ಸೂತ್ರದ ಪ್ರಕಾರ ಈ ಎರಡು ವಿಭಾಗಗಳಲ್ಲಿ ಪ್ರತಿ ಶೇ. 10 ಬರ್ತ್ ಗಳಿಗೆ ಶೇ. 10ರಂತೆ ಬೆಲೆ ಏರುತ್ತ ಹೋಗುತ್ತದೆ. ಇದು ಟಿಕೆಟ್ಟಿನ ಮೂಲದರದ ಶೇ. 50ನ್ನು ಮೀರುವಂತಿಲ್ಲ. ಹೀಗಾಗಿ ಶುಕ್ರವಾರ ಹಾಗೂ ನಂತರ ತಡವಾಗಿ ರೈಲು ಬುಕ್ ಮಾಡಿದಷ್ಟೂ ಹೆಚ್ಚು ಬೆಲೆ ತೆರಬೇಕಾಗುತ್ತದೆ.

ಪ್ರಮುಖ ನಗರಗಳ ನಡುವೆ 25 ತುರಂತ್, 25 ರಾಜಧಾನಿ ಹಾಗೂ 38 ಶತಾಬ್ದಿ ರೈಲುಗಳು ಓಡಾಡುತ್ತವೆ. ಇವುಗಳ ಐಷಾರಾಮಿ ಸೇವೆಗೆ ಮಾತ್ರ ಈ ಬಗೆಯ ಬೆಲೆ ಏರಿಕೆ. ಹೀಗಿರುವಾಗ, ಈ ಬಗ್ಗೆ ಅಸಂತೃಪ್ತಿ ವ್ಯಕ್ತಪಡಿಸುವ ಸ್ವಾತಂತ್ರ್ಯ ಎಲ್ಲರಿಗೂ ಇದೆಯಾದರೂ ಇದನ್ನು ಆಮ್ ಆದ್ಮಿ ಅರ್ಥಾತ್ ಸಾಮಾನ್ಯ ಜನರ ವಿಷಯವನ್ನಾಗಿ ಬಿಂಬಿಸುವುದರ ಹಿಂದೆ ರಾಜಕೀಯ ಹಿತಾಸಕ್ತಿ ಮಾತ್ರವೇ ಕೆಲಸ ಮಾಡುತ್ತಿದೆ.

‘ವಿಶ್ವದರ್ಜೆಯ ಪ್ರಯಾಣ ಬೇಕು ಆದರೆ ಅದಕ್ಕೆ ವೆಚ್ಚ ಭರಿಸಲಾರೆವು ಅಂದರೆ ಹೇಗೆ’ ಅಂತ ಪತ್ರಕರ್ತರೊಬ್ಬರು ಮಾಡಿದ ಟ್ವೀಟಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ‘ನೋಡಿ, ಮೋದಿಜಿಯ ವಕ್ತಾರರು ಮಾತಾಡುತ್ತಿದ್ದಾರೆ’ ಅಂತ ಪ್ರತಿಕ್ರಿಯಿಸಿದ್ದಾರೆ. ಇನ್ನು ಕೆಲ ಬುದ್ಧಿಜೀವಿಗಳು ‘ಉದ್ಯಮ ವಲಯದವರಿಗೆ ಸರ್ಕಾರ ವಿನಾಯತಿಗಳನ್ನು ಕೊಡುತ್ತದೆ ಆದರೆ ಬಡವರ ಮೇಲೆ ತೆರಿಗೆ ಹಾಕುತ್ತದೆ’ ಅಂತೆಲ್ಲ ಅಲವತ್ತುಕೊಳ್ಳುತ್ತಿದ್ದಾರೆ. ಇವರೆಲ್ಲ ಮೊದಲಿಗೆ ಆಮ್ ಆದ್ಮಿ ವ್ಯಾಖ್ಯೆಯನ್ನು ಸ್ಪಷ್ಟಪಡಿಸಿಬಿಡಬೇಕು. ಏಕೆಂದರೆ, ಎಸಿ ರೂಮಿನಲ್ಲಿ ಕುಳಿತವರಿಗೇನು ಗೊತ್ತು ಸಾಮಾನ್ಯರ ಸಂಕಟ ಅಂತ ಇವರೇ ಬೇರೆ ಸಂದರ್ಭದಲ್ಲಿ ಭಾಷಣ ಕುಟ್ಟುತ್ತಾರೆ. ಇದೀಗ 2 ಮತ್ತು 3ನೇ ಶ್ರೇಣಿಯ ಎಸಿ ಪ್ರಯಾಣಿಕರಿಂದ ಹೆಚ್ಚು ದರ ತೆಗೆದುಕೊಂಡರೆ, ಸರ್ಕಾರವನ್ನು ವಿರೋಧಿಸಬೇಕೆಂಬ ಒಂದೇ ಕಾರಣಕ್ಕೆ ಆ ಪ್ರಯಾಣಿಕ ವರ್ಗವನ್ನು ಆಮ್ ಆದ್ಮಿಗಳನ್ನಾಗಿಸಿಬಿಡುತ್ತಾರೆ.

ಇಷ್ಟಕ್ಕೂ ಎಸಿ-1 ಮತ್ತು ಎಕ್ಸಿಕ್ಯುಟಿವ್ ಬೋಗಿಗಳನ್ನು ಈ ನೀತಿಯಿಂದ ಹೊರಗಿರಿಸಲಾಗಿದೆ. ಅಲ್ಲದೇ ಪ್ರಯಾಣಿಕರ ವಿಭಾಗದಲ್ಲಿ ವಾರ್ಷಿಕ 30 ಸಾವಿರ ಕೋಟಿ ರುಪಾಯಿ ನಷ್ಟ ಅನುಭವಿಸುತ್ತಿರುವ ರೈಲ್ವೆಯಲ್ಲಿ ವಾತಾನುಕೂಲ ವಿಭಾಗದ ದರವನ್ನೂ ಹೆಚ್ಚಿಸದೇ ತೆರಿಗೆದಾರರ ಹಣ ಸುರಿಯುತ್ತಿರಬೇಕು ಎಂದು ಬಯಸುವುದೇ ನಿಜವಾದ ಅರ್ಥದಲ್ಲಿ ಜನ ಸಾಮಾನ್ಯ ವಿರೋಧಿ ಚಿಂತನೆ.

(ವಿಕಿಪೀಡಿಯಾ ಚಿತ್ರ)

Leave a Reply