ಕಾಶ್ಮೀರಕ್ಕೆ ಹೋದ ಸರ್ವಪಕ್ಷ ನಿಯೋಗದೆದುರು ಬಂದಿದ್ದು ಬರೀ ಪ್ರತ್ಯೇಕತಾವಾದಿಗಳ ಚಿಂತೆಯಲ್ಲ, ಎಸ್ಸಿ-ಎಸ್ಟಿ ಸ್ಥಿತಿ- ಲಡಾಕಿಗಳ ಬೇಡಿಕೆ ಇವೆಲ್ಲವೂ ಇತ್ತು

ಡಿಜಿಟಲ್ ಕನ್ನಡ ಟೀಮ್:

ಕಾಶ್ಮೀರದಲ್ಲಿನ ಪರಿಸ್ಥಿತಿ ಸುಧಾರಿಸಿ ಮತ್ತೆ ಶಾಂತಿ ಮರುಸ್ಥಾಪಿಸುವ ಸಲುವಾಗಿ ಸರ್ವಪಕ್ಷಗಳ ನಿಯೋಗ ಕಣಿವೆ ರಾಜ್ಯದಲ್ಲಿ ಎರಡು ದಿನಗಳ ಕಾಲ ಪ್ರವಾಸ ಮಾಡಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ವೇಳೆ ಪ್ರತ್ಯೇಕತಾವಾದಿಗಳ ಜತೆ ಮಾತುಕತೆ ನಡೆಸುವ ವಿಚಾರ ಹೆಚ್ಚು ಸುದ್ದಿಯಾಯ್ತು. ಆದರೆ, ಇದಕ್ಕೆ ಹೊರತಾಗಿಯೂ ಹಲವಾರು ಪ್ರಮುಖ ಅಂಶಗಳು ಕಂಡು ಬಂದಿರುವುದು ಗಮನಾರ್ಹ.

ಪ್ರತ್ಯೇಕತಾವಾದಿಗಳ ಜತೆ ಮಾತನಾಡಲೆಂದೇ ಈ ಸರ್ವಪಕ್ಷ ಸಮಿತಿ ಕಾಶ್ಮೀರಕ್ಕೆ ಭೇಟಿ ನೀಡಿದೆ ಎಂದು ಬಿಂಬಿತವಾದರೂ ನಿಯೋಗದ ಜತೆ ಮಾತನಾಡಲು ಒಪ್ಪದ ಪ್ರತ್ಯೇಕತಾವಾದಿಗಳು ಬಾಗಿಲು ಹಾಕಿಕೊಂಡಿದ್ದರು. ಆದರೆ, ಜಮ್ಮು ಕಾಶ್ಮೀರದ ವಿವಿಧ ಸ್ಥರದ ಜನ ಪ್ರತಿನಿಧಿಗಳು ಆಗಮಿಸಿ, ಸರ್ವಪಕ್ಷ ನಿಯೋಗದ ನಾಯಕರ ಜತೆ ಮಾತುಕತೆ ನಡೆಸಿದ್ರು. ಇಲ್ಲಿ ಕೇವಲ ಕಾಶ್ಮೀರದ ಸಮಸ್ಯೆಯಷ್ಟೇ ಅಲ್ಲ ಇತರೆ ವಿಷಯಗಳು ಪ್ರತಿಫಲನಗೊಂಡವು. ಆ ಪೈಕಿ ಲಡಾಕಿಗರ ಬೇಡಿಕೆ ಸ್ವಲ್ಪ ಗಂಭೀರವಾಗಿಯೇ ಗಮನ ಸೆಳೆದಿದೆ. ಕಾರಣ, ‘ನಮಗೆ ಕೇಂದ್ರಾಡಳಿತ ಸ್ಥಾನಮಾನ ಕೊಟ್ಟುಬಿಡಿ. ಕೇಂದ್ರ ನಾಯಕರು ಕೇವಲ ಕಾಶ್ಮೀರಿಗರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿದ್ದಾರೆಯೇ ವಿನಃ ನಮ್ಮ ಸ್ಥಿತಿ ಕೇಳೋರೆ ಗತಿ ಇಲ್ಲದಂತಾಗಿದೆ. ಇವರಿಂದ ನಮಗೆ ಯಾವುದೇ ಉಪಯೋಗ ಆಗುತ್ತಿಲ್ಲ’ ಎಂಬುದು ಲಡಾಕಿಗರ ಬೇಡಿಕೆ.

ಬುಧವಾರ ನಡೆದ ಸರ್ವ ಪಕ್ಷ ನಿಯೋಗದ ಸಭೆಯಲ್ಲೂ ಲಡಾಕಿಗರ ಬೇಡಿಕೆ ಹಾಗೂ ಅಲ್ಲಿನ ಪರಿಸ್ಥಿತಿ ಬಗ್ಗೆ ಚರ್ಚಿಸಲಾಯಿತು. ಉಳಿದಂತೆ ಜಮ್ಮು ಕಾಶ್ಮೀರ ರಾಜ್ಯಕ್ಕೆ ಸಂಬಂಧಿಸಿದಂತೆ ಈ ಸಭೆಯಲ್ಲಿ ಚರ್ಚೆಯಾದ ಸಮಸ್ಯೆಗಳು ಅವುಗಳ ಪರಿಹಾರಕ್ಕೆ ನೀಡಿದ ಶಿಫಾರಸ್ಸುಗಳು ಹೀಗಿದ್ದವು…

 • ರಾಜ್ಯ ಸರ್ಕಾರ ನೀಡಿದ್ದ ಭರವಸೆಗಳು ಕಾರ್ಯರೂಪಕ್ಕೆ ಬಂದಿಲ್ಲ. ಹೀಗಾಗಿ ಬಿಜೆಪಿ ಮತ್ತು ಪಿಡಿಪಿ ತಮ್ಮ ಅಜೆಂಡಾ ಪಕ್ಕಕ್ಕಿಟ್ಟು ರಾಜ್ಯದ ಅಭಿವೃದ್ಧಿಯತ್ತ ಗಮನ ಹರಿಸಬೇಕು.
 • ಸ್ಥಳೀಯ ಚುನಾವಣೆ ನಡೆಸಿ, ಪೂರ್ವ ಪಾಕಿಸ್ತಾನದ ನಿರಾಶ್ರಿತರು ಭಾಗವಹಿಸಲು ಅವಕಾಶ ನೀಡಬೇಕು.
 • ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಸಮಿತಿಗಳ ನೇಮಕವಾಗಬೇಕು.
 • ಅಲ್ಪಸಂಖ್ಯಾತರ ನಾಯಕರನ್ನು ಎಂಎಲ್ಸಿ ಮತ್ತು ರಾಜ್ಯಸಭೆ ಸಂಸದರಾಗಿ ಆಯ್ಕೆ ಮಾಡಬೇಕು.
 • ಕಾಶ್ಮೀರ ಪಂಡಿತರ ವಿಚಾರದಲ್ಲಿ 1990 ರಿಂದ ಮುಸಲ್ಮಾನರ ಹತ್ಯೆಯಾಗಿದ್ದು, ಅವರಿಗೆ ವಿಶೇಷ ಪ್ಯಾಕೇಜ್ ನೀಡಬೇಕು.
 • ಎಎಫ್ಎಸ್ ಪಿಎ ಪುನರ್ ಪರಿಶೀಲಿಸಿ ನಾಗರೀಕ ಸಮಾಜದಲ್ಲಿ ಮಿಲಿಟರಿ ಮತ್ತು ಪ್ಯಾರಾ ಮಿಲಿಟರಿ ಪಡೆಯ ಉಪಸ್ಥಿತಿ ಕಡಿಮೆ ಮಾಡಬೇಕು.
 • ರಾಜ್ಯ ಸರ್ಕಾರದ ಜಾಹೀರಾತುಗಳಿಂದ ಸ್ಥಳೀಯ ಮಾಧ್ಯಮಗಳಿಗೆ ಪ್ರೋತ್ಸಾಹ ನೀಡಬೇಕು.
 • ಮದ್ರಾಸ ಮತ್ತು ಮಸೀದಿಗಳ ಬಗ್ಗೆ ಆಮೂಲಾಗ್ರ ಪರಿಶೀಲನೆ ನಡೆಯಬೇಕು.
 • ಹೊಸದಾಗಿ ನಿರ್ಮಾಣಗೊಂಡ ಮಸೀದಿಗಳು ಮತ್ತು ಕಾಶ್ಮೀರದ ಅಶಾಂತಿಗೆ ಕಾರಣರಾದವರ ಬಗ್ಗೆ ತನಿಖೆ ನಡೆಯಬೇಕು.
 • ಈ ಪ್ರದೇಶದಲ್ಲಿ ಡ್ರಗ್ಸ್ ಕಳ್ಳಸಾಗಾಣಿಕೆಯನ್ನು ನಿರ್ಮೂಲನೆ ಮಾಡಬೇಕು.
 • ಗಡಿಯಲ್ಲಿ ಉಗ್ರರ ದಾಳಿ ಮತ್ತು ನುಸುಳುವಿಕೆಯನ್ನು ತಡೆಯಬೇಕು.
 • ರಾಜ್ಯದಲ್ಲಿನ ಅಲ್ಪಸಂಖ್ಯಾತರಿಗೆ ಭದ್ರತೆ ನೀಡುವುದು.
 • ಪಾಹರಿಸ್ ಸಮುದಾಯಕ್ಕೆ ಎಸ್ಟಿ ಹಾಗೂ ಸಿಖ್ಖರಿಗೆ ಅಲ್ಪಸಂಖ್ಯಾತರ ಸ್ಥಾನಮಾನ ನೀಡುವುದು.
 • ಕಾಶ್ಮೀರಿ ವಲಸಿಗರಿಗೆ ಪರಿಹಾರ ಮತ್ತು ಪುನಶ್ಚೇತನ ಪ್ಯಾಕೇಜ್ ಬಿಡುಗಡೆ ಮಾಡುವುದು.
 • ವಲಸಿಗರ ಬಗ್ಗೆ ಸಂಪೂರ್ಣವಾದ ಮಾಹಿತಿ ದಾಖಲಿಸಿಕೊಳ್ಳುವುದು.
 • ಸೇನೆಯಲ್ಲಿ ಸೇವೆ ಸಲ್ಲಿಸಿದ ಜಮ್ಮು ಕಾಶ್ಮೀರದ ಮಾಜಿ ಅಧಿಕಾರಿಗಳಿಗೆ ಸರ್ಕಾರಿ ಕೆಲಸ ಕೊಡಬೇಕು.
 • ಸರ್ಕಾರಿ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ಪ್ರಕರಣದಲ್ಲಿ ತನಿಖೆ ನಡೆಸಬೇಕು.
 • ಶೈಕ್ಷಣಿಕ ಗುಣಮಟ್ಟ ಹೆಚ್ಚಳ ಹಾಗೂ ಉನ್ನತ ಶಿಕ್ಷಣ ಶಾಲೆಗಳ ಆರಂಭ.
 • ಜಮ್ಮು ಕಾಶ್ಮೀರದ ಯುವಕರಿಗೆ ಇತರೆ ರಾಜ್ಯಗಳಲ್ಲಿ ಉತ್ತಮ ಅವಕಾಶ ನೀಡುವುದು.
 • ಈ ರಾಜ್ಯದಲ್ಲಿ ಕೈಗಾರಿಕರಣಕ್ಕೆ ಒತ್ತು ನೀಡಿ ಸ್ಥಳೀಯವಾಗಿ ಖಾಸಗಿ ಉದ್ಯೋಗ ಸೃಷ್ಟಿಸುವುದು.
 • 2014 ರ ಪ್ರವಾಹದಲ್ಲಿ ಸಂತ್ರಸ್ತರಿಗೆ ಸರಿಯಾಗಿ ಪರಿಹಾರ ತಲುಪಿಲ್ಲ. ಶೀಘ್ರವೇ ಅವರಿಗೆ ಅವರಿಗೆ ತಲುಪಿಸುವುದು.
 • 2010ರಲ್ಲಿ ಕಣಿವೆ ರಾಜ್ಯಕ್ಕೆ ಭೇಟಿ ನೀಡಿದ್ದ ಸರ್ವಪಕ್ಷ ನಿಯೋಗದ ಶಿಫಾರಸ್ಸುಗಳನ್ನು ಜಾರಿಗೊಳಿಸಿಲ್ಲ. ಹೀಗಾಗಿ ಈ ಶಿಫಾರಸ್ಸುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು.

Leave a Reply