ನಾವು ಬೆಂಗಳೂರಲ್ಲಿ ಎಲ್ಲರಿಗೂ ಬದುಕಲು ಬಿಟ್ಟವರು, ಇವರೆಲ್ಲರಿಗೂ ಕಾವೇರಿಯೇ ಕುಡಿಯುವ ನೀರು!

ಡಿಜಿಟಲ್ ಕನ್ನಡ ವಿಶೇಷ:

ಕಾವೇರಿಗಾಗಿ ಬೆಂಗಳೂರು ಸ್ತಬ್ಧ ಎನ್ನುವುದು ಶುಕ್ರವಾರದ ಸುದ್ದಿಸಾರ. ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಡಿದರೆಂಬ ಮಾಹಿತಿಯೂ ರಾಷ್ಟ್ರೀಯ ಮಾಧ್ಯಮದ ವರದಿ ಸಾಲಿನಲ್ಲಿ ಪ್ರಮುಖವಾಗಿ ಸೇರಿಕೊಂಡಿದೆ.

ಒಳ್ಳೆಯದೇ. ಒಂದು ದಿನದ ಕಷ್ಟ. ಆದರೆ ಹಾಗಾದರೂ ಬೇರೆ ಬೇರೆ ರಾಜ್ಯಗಳಿಗೆ ಕರ್ನಾಟಕ ಮುನಿದಿದೆ ಎಂಬ ಸಂದೇಶ ತಲುಪುವಂತಾಗಲಿ. ಸುಪ್ರೀಂಕೋರ್ಟಿನ ಆದೇಶ ಏನು ಮಾಡೋಕಾಗುತ್ತೆ ಎನ್ನುವವರಿಗೆ, ಜನ ಇಷ್ಟು ಮುನಿದಿದ್ದಾರೆಂದ ಮೇಲೆ ಆಕ್ರೋಶ ಪೊಳ್ಳಲ್ಲ ಎಂಬ ಅರಿವಾಗಿ ಯೋಚನೆ ಹತ್ತುವಂತಾಗುವಲ್ಲಿ ಬಂದ್ ಪಾತ್ರ ದೊಡ್ಡದಿದೆ.

ವಹಿವಾಟು ನಷ್ಟವಾಯಿತು ಎನ್ನುವ ಉದ್ಯಮವಲಯದವರಿದ್ದಾರೆ. ಹಿಂಸಾತ್ಮಕ ಹಾಗೂ ಸಾರ್ವಜನಿಕ ಆಸ್ತಿಗಳಿಗೆ ಹಾನಿ ಮಾಡುವ ಘಟನೆಗಳು ಆಗಕೂಡದೆಂಬುದನ್ನು ಒಪ್ಪಬೇಕಾದರೂ ಇವತ್ತು ಬೆಂಗಳೂರು ಸ್ಥಗಿತಕೊಂಡಿರುವುದು ವಾಸ್ತವ ಅರಿವು ಮಾಡಿಸುವುದಕ್ಕೆ ಒಳ್ಳೆಯ ವಿಧಾನವೇ.

  • ಕಾವೇರಿ ಕೇವಲ ಮಂಡ್ಯ-ಮೈಸೂರು ಭಾಗದ ವಿಷಯವಲ್ಲ. ಬೆಂಗಳೂರಿನ ದಾಹ ತಣಿಸುತ್ತಿರುವ ಮುಖ್ಯ ಮೂಲವಿದು. ಅದರರ್ಥ ಇದು ಬೆಂಗಳೂರಿನ ಬಿಸಿ ಎಂದಲ್ಲ. ಏಕೆಂದರೆ ಉತ್ತರ ಕರ್ನಾಟಕ ಸೇರಿದಂತೆ ಎಲ್ಲ ಭಾಗದ ಜನರೂ, ಅದರಲ್ಲೂ ಇವತ್ತಿನ ಯುವ ಸಮುದಾಯ, ಉದ್ಯೋಗ ಅರಸಿಕೊಂಡು ಬಂದಿರುವುದು ಬೆಂಗಳೂರಿಗೆ. ಕೃಷ್ಣಾ ಕೊಳ್ಳವೂ ಸೇರಿದಂತೆ ಬೇರೆ ನದಿಗಳ ವಿಷಯದಲ್ಲೂ ಕರ್ನಾಟಕ ಇಷ್ಟೇ ಭಾವನಾತ್ಮಕವಾಗಬೇಕು ಎಂಬುದು ಖರೆಯೇ. ಆದರೆ ಕಾವೇರಿ ವಿಚಾರದಲ್ಲಿ ಬೆಂಗಳೂರಿನ ಭಾವತೀವ್ರತೆಯನ್ನು ಆಡಿಕೊಳ್ಳುವುದಕ್ಕೆ ಅದು ಕಾರಣವಾಗಬಾರದು.
  • ನದಿಪಾತ್ರ ತಮ್ಮಲ್ಲಿ ಹೆಚ್ಚಿದೆ, ವರ್ಷದ ಮೂರನೇ ಬೆಳೆ ಹಾಳಾಗಿಹೋಗುತ್ತದೆ ಎಂಬೆಲ್ಲ ವಾದಗಳಲ್ಲಿ ನ್ಯಾಯಾಲಯದ ಮೂಲಕ ನೀರು ಬಿಡಿಸಿಕೊಳ್ಳುತ್ತಿರುವ ತಮಿಳುನಾಡು, ನಗರೀಕರಣದ ಹೊಸ ವಾಸ್ತವಗಳನ್ನು ನಿರ್ಲಕ್ಷಿಸುತ್ತಿರುವುದು ದೂರವಾಗಬೇಕು. 2008ರ ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ತಮಿಳುನಾಡಿನ ಹೊರಗಡೆ ತಮಿಳರ ಅತಿ ಹೆಚ್ಚಿನ ವಾಸ್ತವ್ಯ ಇರುವ ರಾಜ್ಯ ಕರ್ನಾಟಕ. 18.9ಲಕ್ಷ ಜನರು ಇಲ್ಲಿದ್ದಾರೆ ಹಾಗೂ ಇದು ತಮಿಳುನಾಡಿನಲ್ಲಿರುವ ಕರ್ನಾಟಕದವರ ಎರಡುಪಟ್ಟು ಜನಸಂಖ್ಯೆ. ಇದರಲ್ಲಿ ಹೆಚ್ಚಿನವರು ಇರುವುದು ಬೆಂಗಳೂರಿನಲ್ಲಿಯೇ. ಹೀಗಿರುವಾಗ, ಮಳೆ ಕಡಿಮೆಯಾಗಿರುವ ಸಂಕಷ್ಟ ಕಾಲದಲ್ಲೂ ತನ್ನ ರೈತರಿಗೆ ನೀರು ಬಿಡಿಸಿಕೊಂಡೇ ಸಿದ್ಧ ಎನ್ನುವ ತಮಿಳುನಾಡು, ಹಾಗಾದರೆ ಕರ್ನಾಟಕದಲ್ಲಿ ನೆಲೆ-ಉದ್ಯೋಗ ಕಂಡುಕೊಂಡಿರುವ ಬಹುದೊಡ್ಡ ಜನಸಂಖ್ಯೆ ಅವರದ್ದಲ್ಲವೇ ಎಂಬ ಪ್ರಶ್ನೆಗೆ ಉತ್ತರ ಹೇಳಬೇಕಾಗುತ್ತದೆ. ಬೆಂಗಳೂರಿನಲ್ಲಿ ನೆಲೆ ನಿಂತ ಇವರಿಗೂ ನಮ್ಮ ಸಂಗ್ರಹದ ನೀರಲ್ಲೇ ತಾನೇ ಪಾಲು ಕೊಡಬೇಕಾದದ್ದು. ‘ಬದುಕಿ-ಬದುಕಲು ಬಿಡಿ’ ಎನ್ನುವವರಿಗೆ, ನಾವು ಎಷ್ಟರಮಟ್ಟಿಗೆ ಬದುಕಲುಬಿಟ್ಟಿದ್ದೇವೆ ಎಂಬ ಈ ಆಯಾಮವನ್ನೂ ನೆನಪು ಮಾಡಿಕೊಡಬೇಕಾಗುತ್ತದೆ.
  • ಫೆಬ್ರವರಿ 2007ರ ನ್ಯಾಯಾಧಿಕರಣದ ತೀರ್ಪಿನ ಪ್ರಕಾರ ತಮಿಳುನಾಡಿಗೆ 419 ಟಿಎಂಸಿ, ಕರ್ನಾಟಕಕ್ಕೆ 270 ಟಿಎಂಸಿ, ಕೇರಳಕ್ಕೆ 30 ಟಿಎಂಸಿ, ಪುದುಚೆರಿಗೆ 7 ಟಿಎಂಸಿ ನಿಗದಿಯಾಗಿದೆ. ಪ್ರತಿವರ್ಷ ಕರ್ನಾಟಕವು ತಮಿಳುನಾಡಿಗೆ ಬಿಡಬೇಕಾದ ನೀರಿನ ಪ್ರಮಾಣ 192 ಟಿಎಂಸಿ. ಮಳೆ ಕಡಿಮೆ ಆದಾಗಲೆಲ್ಲ ಕರ್ನಾಟಕಕ್ಕೆ ಇಷ್ಟು ನೀರು ಬಿಡುವುದು ಕಷ್ಟವಾಗುತ್ತದೆ. ಏಕೆಂದರೆ ನದಿಪಾತ್ರದ ಅವಶ್ಯಕತೆಗಳನ್ನು ಗಮನದಲ್ಲಿರಿಸಿ ಆದೇಶ ನೀಡುವಾಗ ಬೆಂಗಳೂರಿನ ಅಗತ್ಯಕ್ಕೆ ತೀರ ಕಡಿಮೆ ನೀರು ಅಂದಾಜಿಸಿರುವುದರಿಂದ, ಬೆಳೆಯುತ್ತಿರುವ ಜನಸಂಖ್ಯೆಗೂ ಅದಕ್ಕೂ ತಾಳೆಯಿಲ್ಲ. ಸಂಕಷ್ಟದ ಸಂದರ್ಭದಲ್ಲೂ ಇಲ್ಲಿಗೆ ಕುಡಿಯುವ ನೀರು ಕೊಟ್ಟಾದ ಮೇಲೆ ಅತ್ತ ಕಾವೇರಿ ಕೊಳ್ಳದ ಕರ್ನಾಟಕ ರೈತರಿಗೆ ಬೆಳೆಗೆ ನೀರಿಲ್ಲದ ಸ್ಥಿತಿ.
  • ಬೆಂಗಳೂರೇಕೆ ಕಾವೇರಿ ನೀರಿನ ಮೇಲೆ ಅವಲಂಬಿತವಾಗಿರಬೇಕು, ಅದರ ನೀರಿನ ಅಗತ್ಯವನ್ನು ಕೆರೆ-ಕಟ್ಟೆಗಳ ಮೂಲಕ ಅದೇ ಮಾಡಿಕೊಳ್ಳಬೇಕು ಎಂದು ಹೇಳುವುದು ತಮಿಳುನಾಡಿನವರಿಗಾಗಲೀ ನಮ್ಮದೇ ರಾಜ್ಯದ ಇತರ ಭಾಗದವರಿಗಾಗಲೀ ಸುಲಭ. ಆದರೆ ಅದೇ ತಮಿಳುನಾಡು ಮತ್ತು ಇತರ ಭಾಗಗಳಿಂದಲೂ ಜನ ಇಲ್ಲಿಗೆ ಬಂದಿದ್ದಾರಲ್ಲ. ಅಂಥ ನಮ್ಮೆಲ್ಲರ ದಾಹ ತಣಿಯಬೇಕು ಹಾಗೂ ಬೆಂಗಳೂರೂ ಮಹಾನಗರವಾಗಿಯೇ ಇರಬೇಕು ಎಂಬ ಆಶಯ ಅವಾಸ್ತವಿಕ. ಮಳೆ ನೀರು ಕೊಯ್ಲು, ಕೆರೆ ಒತ್ತುವರಿ ತೆರವು ಇವೆಲ್ಲ ಆಗಬೇಕಾದ್ದೆಂಬುದರಲ್ಲಿ ಎರಡು ಮಾತಿಲ್ಲ. ಆದರೆ ಇವೇನೇ ಆದರೂ 1 ಕೋಟಿ ಜನಸಂಖ್ಯೆಯ ಬೆಂಗಳೂರನ್ನು ಭವಿಷ್ಯದಲ್ಲಿ ಕಾವೇರಿ ನೀರೇ ಸಲಹಬೇಕು ಹೊರತು ಮತ್ಯಾವ ಮಾರ್ಗವಿಲ್ಲ. ಇದೇ ಬೆಂಗಳೂರಿನಲ್ಲಿ ತಮಿಳರೂ ದೊಡ್ಡ ಸಂಖ್ಯೆಯಲ್ಲಿದ್ದಾರೆ ಎಂಬುದನ್ನು ಮರೆಯುವುದು ತರವಲ್ಲ. ಕಾಲುವೆ ತೆರವು, ನೀರು ಹರಿಯುವ ಮಾರ್ಗಗಳ ಸುಧಾರಣೆ ಮೂಲಕ ಬೆಂಗಳೂರಿನ ಕೆರೆಗಳನ್ನುಈಗಿರುವ ಕೆಟ್ಟ ಸ್ಥಿತಿಗಿಂತ ತುಸು ಮೇಲೆತ್ತಬಹುದಾದರೂ ಯಾವುದೇ ಮಹಾನಗರದ ಕುಡಿಯುವ ನೀರು ಹತ್ತಿರದ ಊರಿನ ನದಿಯನ್ನೇ ಅವಲಂಬಿಸಿರುತ್ತದೆ ಎಂಬುದು ವಾಸ್ತವ.
  • ಬೆಂಗಳೂರಿನ ಬಗ್ಗೆ ಸಿನಿಕತೆ- ತಾತ್ಸಾರ ಹೊಂದುವುದಾದರೆ ಅತ್ತ ಕೃಷಿ ವಾಸ್ತವಗಳನ್ನೂ ತುಸುವಾದರೂ ಪ್ರಶ್ನಿಸಬೇಕಾಗುತ್ತದೆ. ತಮಿಳುನಾಡು ಮತ್ತು ಕರ್ನಾಟಕದ ಕಾವೇರಿ ಪಾತ್ರಗಳೆರಡರಲ್ಲೂ ಅತಿ ನೀರು ಬೇಡುವ ಕಬ್ಬು ಮತ್ತು ಭತ್ತವನ್ನೇ ಹೆಚ್ಚಾಗಿ ಬೆಳೆಯುತ್ತಿರುವುದನ್ನು ಬದಲಾಯಿಸಬೇಕೆಂಬ ಅಭಿಪ್ರಾಯಗಳೀಗ ಕೇಳಿಬರುತ್ತಿವೆ.
  • ಕನ್ನಡ ನಾಡಿನ ಈ ವಾಸ್ತವಗಳನ್ನೆಲ್ಲ ಅರ್ಥಮಾಡಿಕೊಂಡು, ಇದನ್ನು ಕಾನೂನು ಚೌಕಟ್ಟಿನಲ್ಲಿಟ್ಟು ವಾದ ಮಾಡುವ ಹೊಣೆಗಾರಿಕೆಯನ್ನು ದೆಹಲಿಯಲ್ಲಿ ಕುಳಿತ ವಕೀಲರಿಗೆ (ಅವರೆಷ್ಟೇ ದೊಡ್ಡವರಾಗಿದ್ದರೂ) ಹೊರೆಸಿ ತಣ್ಣಗಿರುವ ನೀತಿಯಿಂದ ಕರ್ನಾಟಕವೂ ಹೊರಬರಬೇಕಿದೆ. ಇದೀಗ 10 ದಿನಗಳ ಕಾಲ 15 ಸಾವಿರ ಕ್ಯುಸೆಕ್ಸ್ ನೀರು ಬಿಡುವ ಸುಪ್ರೀಂ ಆದೇಶ ಬಂದಿರುವುದರ ಹಿಂದೆಯೂ, ನಾರಿಮನ್ ತಮ್ಮ ವಾದದಲ್ಲಿ 10 ಸಾವಿರ ಕ್ಯುಸೆಕ್ಸ್ ಬಿಡಲು ಸಾಧ್ಯ ಎಂದು ವಾದಿಸಿದ್ದೇ ಕಾರಣ ಎಂಬ ಅಂಶಗಳು ಬೆಳಕಿಗೆ ಬಂದಿವೆ. ಅವರು ಹೀಗೆ ವಾದಿಸುವ ವಿಚಾರವೇ ಗೊತ್ತಿರಲಿಲ್ಲ ಅಂತ ಮುಖ್ಯಮಂತ್ರಿಗಳು ಪ್ರತಿಕ್ರಿಯಿಸಿದ್ದಾರೆ. ಇದು ಇವರೂ ಸೇರಿದಂತೆ ಹಿಂದಿನ ಸರ್ಕಾರಗಳೆಲ್ಲ ತೋರಿಸಿಕೊಂಡುಬಂದಿರುವ ಕಾಳಜಿಯ ಪ್ರಮಾಣ. ನಮ್ಮ ನೆಲದ ವಾಸ್ತವಗಳ ವಾದ ನಮ್ಮ ಪರಿಣತರಿಂದಲೇ ರೂಪುಗೊಳ್ಳಬೇಕು. ಈ ನಿಟ್ಟಿನಲ್ಲಿ ನ್ಯಾಯತಂಡದ ನೇಮಕವಾಗುವಾಗ ಅವರು ಕಾಂಗ್ರೆಸ್ ವಕೀಲನೋ ಬಿಜೆಪಿ ವಕೀಲನೋ ಎಂದು ನೋಡುವುದರ ಬದಲು ಸಾಮರ್ಥ್ಯವೇ ಮಾನದಂಡವಾಗದಿದ್ದರೆ ಉಳಿಗಾಲವಿಲ್ಲ.

ದೇಶದ ಗಮನವನ್ನು ಇತ್ತ ತಿರುಗಿಸಿ ಅನನ್ಯ ಯಶಸ್ಸನ್ನು ಕಾಣುತ್ತಿರುವ ಕರ್ನಾಟಕ ಬಂದ್, ಈ ಮೇಲಿನ ಯೋಚನೆಗಳನ್ನು ಪ್ರೇರೇಪಿಸಲಿ. ಮದ್ರಾಸ್ ಪ್ರೆಸಿಡೆನ್ಸಿ ಕಾಲದಿಂದಲೂ ಕಾವೇರಿ ವಿವಾದ ಇದ್ದದ್ದೇ ಎಂಬ ರಾಗ ಬದಲಾಗಿ, ಇವತ್ತಿನ ವಾಸ್ತವಗಳ ಎದುರಲ್ಲಿ ಪರಿಹಾರಕ್ಕೆಳೆಸುವಂತಾಗಬೇಕು. ಬದುಕಲು ಬಿಡಿ ಎಂಬ ಪಾಠವನ್ನು ಕನ್ನಡಿಗರು ಹೇಳಿಸಿಕೊಳ್ಳಬೇಕಿಲ್ಲ, ಆ ಔದಾರ್ಯ ಇರುವುದರಿಂದಲೇ ಇವತ್ತು ತಮಿಳಿಗರೂ ಸೇರಿದಂತೆ ಎಲ್ಲರೂ ಈ ನೆಲದಲ್ಲಿ ಭವಿಷ್ಯ ಗಟ್ಟಿಗೊಳಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿದೆ ಎಂಬುದನ್ನಂತೂ ಇಂದಿನ ಕರ್ನಾಟಕ ಬಂದ್ ದೇಶಕ್ಕೆ ಸಾರಿ ಹೇಳುತ್ತಿದೆ.

Leave a Reply