
ತಮಿಳುನಾಡಿಗೆ ನೀರು ಹರಿದು ಬಿಟ್ಟಿರುವ ಹಿನ್ನೆಲೆಯಲ್ಲಿ ಶುಕ್ರವಾರ ಕರೆ ನೀಡಲಾಗಿದ್ದ ರಾಜ್ಯ ಬಂದ್ ವೇಳೆ ನಗರದ ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ವರೆಗೂ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಡಿಜಿಟಲ್ ಕನ್ನಡ ಟೀಮ್:
ಕಾವೇರಿ ನೀರು ವಿಚಾರದಲ್ಲಿ ರಾಜ್ಯದ ಜನರ ಅಕ್ರೋಶ ಮುಗಿಲು ಮುಟ್ಟಿದ್ದು, ತಕ್ಷಣವೇ ಈ ವಿಷಯದಲ್ಲಿ ಮಧ್ಯಪ್ರವೇಶ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ.
‘ಭಾರತದ ಒಕ್ಕೂಟ ವ್ಯವಸ್ಥೆಯ ಮುಖ್ಯಸ್ಥರೂ ಆಗಿರುವ ನೀವು ಕಾವೇರಿ ನದಿ ಪಾತ್ರದ ಮುಖ್ಯಮಂತ್ರಿಗಳ ಸಭೆ ಕರೆದು ಸಮಸ್ಯೆ ಬಗೆಹರಿಸಿ. ಸರ್ವಪಕ್ಷ ನಿಯೋಗ ಬಂದಾಗ ರಾಜ್ಯದ ನೀರಿನ ಪರಿಸ್ಥಿತಿ ಅಂಕಿ-ಅಂಶಗಳ ಸಮೇತ ನಿಮಗೆ ತಿಳಿಸಿದ್ದೇವೆ. ನಮ್ಮ ರಾಜ್ಯದ ಪರಿಸ್ಥಿತಿ ತೀರಾ ಶೋಚನೀಯವಾಗಿದೆ. ಇಂತಹ ಸಂದರ್ಭದಲ್ಲಿ ನೀರು ಬಿಡುಗಡೆ ಅಸಾಧ್ಯ. ಆದರೆ, ನ್ಯಾಯಾಲಯ ತೀರ್ಪು ನಮಗೆ ಆಘಾತ ತಂದಿದೆ.
1995 ರ ನ್ಯಾಯಾಲಯ ತೀರ್ಪು ಪ್ರಕಾರ ಪ್ರಧಾನಿ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಲು ಅವಕಾಶ ಇದೆ. ಹೀಗಾಗಿ, ಎಲ್ಲ ಮುಖ್ಯಮಂತ್ರಿಯವರ ಸಭೆ ಕರೆದು ಚರ್ಚಿಸಿ ವಾಸ್ತವ ಪರಿಸ್ಥಿತಿ ಮನವರಿಕೆ ಮಾಡಿಕೊಂಡು ನಮ್ಮ ಸಹಾಯಕ್ಕೆ ಬನ್ನಿ. ಕಾವೇರಿ ವಿಚಾರದಲ್ಲಿ ನಿಮ್ಮ ಪತ್ರ ಅಥವಾ ಸೂಚನೆಗಾಗಿ ನಾನು ಕಾಯುತ್ತಿರುತ್ತೇನೆ. ದಯವಿಟ್ಟು ಇಂತಹ ಸಂದರ್ಭದಲ್ಲಿ ರಾಜ್ಯದ ಜನರ ಭಾವನೆ ಅರ್ಥಮಾಡಿಕೊಂಡು ಸೂಕ್ತ ನಿಲುವು ತೆಗೆದುಕೊಳ್ಳಬೇಕು.’ ಎಂದು ಸಿಎಂ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಇನ್ನು ಕಾವೇರಿ ಜಲ ವಿವಾದ ರಾಜ್ಯಾದ್ಯಂತ ಹೊತ್ತಿ ಉರಿಯುತ್ತಿರುವ ಬೆನ್ನಲ್ಲೆ ಮುಖ್ಯಮಂತ್ರಿ ಸಿದ್ದರಾಮ್ಯಯ ನಾಳೆ ಸಂಜೆ ತುರ್ತು ಸಚಿವ ಸಂಪುಟ ಸಭೆ ಕರೆದಿದ್ದಾರೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವಿಧೇಯಕಕ್ಕೆ ಅನುಮತಿ ಪಡೆಯಲು ಸೆಪ್ಟೆಂಬರ್ 14 ರಂದು ವಿಶೇಷ ಅಧಿವೇಶನ ಕರೆಯಲಾಗಿದೆ. ಅಧಿವೇಶನಕ್ಕೂ ಮುನ್ನ ಕೇಂದ್ರ ತೆಗೆದುಕೊಂಡ ನಿರ್ಧಾರಕ್ಕೆ ರಾಜ್ಯ ಸಚಿವ ಸಂಪುಟದ ಅನುಮತಿ ಅಗತ್ಯ. ಈ ಹಿನ್ನೆಲೆಯಲ್ಲಿ ತುರ್ತು ಸಚಿವ ಸಂಪುಟ ಸಭೆ ಕರೆಯಲಾಗಿದೆ ಎಂದಿವೆ ಮೂಲಗಳು.
ಮತ್ತೊಂದೆಡೆ ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ದೆಹಲಿಗೆ ತೆರಳಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಹಿರಿಯ ವಕೀಲ ನಾರಿಮನ್ ಅವರನ್ನು ಭೇಟಿ ಮಾಡಿ ತಮ್ಮ ಅಳಲು ತೋಡಿಕೊಂಡರು. ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ಇರುವ ನೀರಿನ ಪ್ರಮಾಣ, ಕುಡಿಯಲು ಮತ್ತು ಬೆಳೆಗೆ ಬೇಕಾದ ನೀರಿನ ಪ್ರಮಾಣ ಹಾಗೂ ತಮಿಳುನಾಡು ಕೇಳುತ್ತಿರುವ ನೀರಿನ ಪ್ರಣಾಮ ಸೇರಿದಂತೆ ಎಲ್ಲ ವಿಷಯಗಳ ಬಗ್ಗೆ ಚರ್ಚಿಸಿದರು.
ಬಂದ್ ಯಶಸ್ವಿ…
ತಮಿಳುನಾಡಿಗೆ ಪ್ರತಿನಿತ್ಯ ಹದಿನೈದು ಸಾವಿರ ಕ್ಯೂಸೆಕ್ಸ್ ನಂತೆ 10 ದಿನ ಕಾವೇರಿ ನೀರು ಬಿಡುಗಡೆ ಮಾಡುವಂತೆ ಸುಪ್ರಿಂಕೋರ್ಟ್ ತೀರ್ಪು ವಿರೋಧಿಸಿ ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ ಸಂಪೂರ್ಣ ಯಶಸ್ವಿಯಾಗಿದೆ. ಇದರೊಂದಿಗೆ ನಾಡಿನ ಜಲಕ್ಕಾಗಿ ಇಡೀ ರಾಜ್ಯ ಒಗ್ಗಟ್ಟು ಪ್ರದರ್ಶಿತು.
ರಾಜಧಾನಿ ಬೆಂಗಳೂರು ಸೇರಿದಂತೆ ಉತ್ತರ ಕರ್ನಾಟಕ, ಮಲೆನಾಡು, ಕರಾವಳಿ ಸೇರಿ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿ ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ರಾಜ್ಯ ಸ್ಥಬ್ಧವಾಗಿತ್ತು. ಬಸ್ ಸಂಚಾರ, ಮೆಟ್ರೋ ಸಂಚಾರ, ಸಿನಿಮಾ ಪ್ರದರ್ಶನ, ವಾಣಿಜ್ಯ ವಹಿವಾಟು ಯಾವುದೇ ಚಟುವಟಿಕೆಗಳು ಇರದೆ ಜನಜೀವನ ಸಂಪೂರ್ಣ ಸ್ಥಗಿತಗೊಂಡಿತ್ತು. ಸಂಘಟನೆಗಳು, ಸಿನಿಮಾ ನಟ-ನಟಿಯರು ಪ್ರತಿಭಟನೆ ನಡೆಸಿ ತಮಿಳುನಾಡು ಮತ್ತು ರಾಜ್ಯ ಸರ್ಕಾರ ಹಾಗೂ ಸುಪ್ರಿಂಕೋರ್ಟ್ ಆದೇಶದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿ ಧರಣಿ, ಪ್ರತಿಭಟನೆ, ರಸ್ತೆ ತಡೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದವು.
ಅಚ್ಛೇ ದಿನ್ ಇದೇನಾ? ಪ್ರಧಾನಿಗೆ ಕಪಿಲ್ ಪ್ರಶ್ನೆ
‘ಪ್ರತಿ ವರ್ಷ ನಾನು ಸರ್ಕಾರಕ್ಕೆ ₹ 15 ಕೋಟಿ ತೆರಿಗೆ ಕಟ್ಟುತ್ತಿದ್ದೇನೆ. ಆದರೂ ನನ್ನ ಕಚೇರಿಯ ಬಾಗಿಲು ತೆರೆಯಲು ₹ 5 ಲಕ್ಷ ಲಂಚ ನೀಡಬೇಕಂತೆ… ಇದೇನಾ ನಿಮ್ಮ ಅಚ್ಛೇ ದಿನ್?’ ಹೀಗೊಂದು ವಿವಾದಾತ್ಮಕ ಟ್ವೀಟ್ ಮೂಲಕ ಖ್ಯಾತ ಹಾಸ್ಯ ಕಲಾವಿದ ಕಪಿಲ್ ಶರ್ಮಾ ಪ್ರಧಾನಿ ಮೋದಿಗೆ ಪ್ರಶ್ನೆ ಹಾಕಿದ್ದಾರೆ.
ಈ ಟ್ವೀಟ್ ರಾಷ್ಟ್ರೀಯ ವಾಹಿನಿಗಳಲ್ಲಿ ವ್ಯಾಪಕ ಚರ್ಚೆಯಾಗಿದ್ದು, ಬಾಂಬೆ ನಗರ ಪಾಲಿಕೆ ಅಧಿಕಾರಿಗಳು ತಮ್ಮ ಕಚೇರಿ ಕಟ್ಟಡ ತೆರೆಯಲು ಅವಕಾಶ ನೀಡಲು ಲಂಚ ಕೇಳುತ್ತಿದ್ದಾರೆ ಎಂಬುದು ಕಪಿಲ್ ಅವರ ಆರೋಪ. ಇದಕ್ಕೆ ಟ್ವಿಟರ್ ಮೂಲಕವೇ ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿರೋದಿಷ್ಟು, ‘ಸಹೋದರ ಕಪಿಲ್ ಅವರೆ, ನಿಮಗಾಗಿರುವ ಭ್ರಷ್ಟಾಚಾರದ ಅನುಭವದ ಸಂಪೂರ್ಣ ಮಾಹಿತಿ ನೀಡಿ. ಈ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳುವಂತೆ ನಗರ ಪಾಲಿಕೆ ಹಾಗೂ ಬಾಂಬೆ ಮಹಾನಗರ ಪಾಲಿಕೆಗೆ ಸೂಚನೆ ನೀಡಿದ್ದೇನೆ. ತಪ್ಪಿತಸ್ಥರನ್ನು ಸುಮ್ಮನೆ ಬಿಡುವುದಿಲ್ಲ.’
ಈ ಎಲ್ಲದರ ಮಧ್ಯೆ, ಕಪಿಲ್ ಶರ್ಮಾ ಅವರ ಕಟ್ಟಡ ಕಾನೂನು ಬಾಹಿರವಾಗಿ ನಿರ್ಮಾಣಗೊಂಡಿದ್ದು, ಅನಧಿಕೃತವಾಗಿದೆ ಎಂದು ಬಾಂಬೆ ಮಹಾನಗರ ಪಾಲಿಕೆ ದಾಖಲೆ ಬಿಡುಗಡೆ ಮಾಡಿದೆ ಎಂದು ನ್ಯೂಸ್ 18 ವರದಿ ಮಾಡಿದೆ.
ಅಯೋಧ್ಯೆಗೆ ರಾಹುಲ್ ಭೇಟಿ
ಉತ್ತರ ಪ್ರದೇಶ ಚುನಾವಣಾ ಪ್ರಚಾರದಲ್ಲಿ ಸಕ್ರಿಯರಾಗಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಶುಕ್ರವಾರ ಅಯೋಧ್ಯೆಗೆ ಭೇಟಿ ನೀಡಿದ್ದಾರೆ. ಚುನಾವಣ ಪ್ರಚಾರದ ಆರಂಭದಲ್ಲಿ ಖಾಟ್ ಸಭಾ ಕಾರ್ಯಕ್ರಮದಲ್ಲಿ ಆದ ಮುಜುಗುರ ರಾಹುಲ್ ಅವರ ಉತ್ಸಾಹಕ್ಕೆ ಯಾವುದೇ ಕುಂದು ತಂದಿಲ್ಲ. ಅವರು ಇಲ್ಲಿನ ಹನುಮಗರ್ಹಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಇನ್ನು 1992 ರ ನಂತರ ಮೊದಲ ಬಾರಿಗೆ ಅಯೋಧ್ಯೆಗೆ ಭೇಟಿ ನೀಡಿದ ನೆಹರು ಕುಟುಂಬದ ಸದಸ್ಯರಾಗಿ ಬಿಂಬಿತವಾಗಿರೋದು ಈ ಭೇಟಿಗೆ ಮಹತ್ವ ನೀಡಿದೆ.