ವಿಶ್ವ ಮಾರ್ಷಲ್ ಆರ್ಟ್ಸ್ ನಲ್ಲಿ ಕಂಚು ಗೆದ್ದ ಸಿಕ್ಕಿಂ ಕುವರಿ ಸುಶ್ಮಿತಾ, ಹೆಣ್ಮಕ್ಳು ಹಾಗೂ ಈಶಾನ್ಯ ಭಾರತ ಎರಡೂ ಸ್ಟ್ರಾಂಗು ಗುರೂ

ಡಿಜಿಟಲ್ ಕನ್ನಡ ಟೀಮ್:

ಕ್ರೀಡೆ ಹೆಣ್ಣುಮಕ್ಕಳಿಗಲ್ಲ… ಎಂದು ರಾಗ ಹಾಡುತ್ತಿದ್ದ ಕಾಲ ಒಂದಿತ್ತು. ಈಗ ಅದರ ಚಿತ್ರಣ ಸಂಪೂರ್ಣವಾಗಿ ಬದಲಾಗುತ್ತಿದೆ. ಕಾರಣ, ಇತ್ತೀಚೆಗಷ್ಟೇ ರಿಯೋ ಒಲಿಂಪಿಕ್ಸ್ ನಲ್ಲಿ ಭಾರತೀಯ ಮಹಿಳಾ ಕ್ರೀಡಾಪಟುಗಳು ಪದಕ ಗೆದ್ದು ಭಾರತ ಮಾನ ಕಾಪಾಡಿದ್ದರು. ಇನ್ನು ತ್ರಿಪುರಾ ಮೂಲದ ದೀಪಾ ಕರ್ಮಕಾರ್ ಅವರ ಅಮೋಘ ಪ್ರದರ್ಶನ ಈಶಾನ್ಯ ಭಾರತ ಪ್ರದೇಶದ ಗಮನ ಸೆಳೆದಿತ್ತು. ಈಗ ಅಂತಹುದೇ ಮತ್ತೊಂದು ಸಾಧನೆ ಈಶಾನ್ಯ ಭಾರತದ ಮತ್ತೊಂದು ರಾಜ್ಯ ಸಿಕ್ಕಿಂನ ಮಹಿಳಾ ಕ್ರೀಡಾಪಟುವಿನಿಂದ ಹೊರಹೊಮ್ಮಿದೆ. ಆ ಮಹಿಳಾ ಕ್ರೀಡಾಪಟು ಮಾರ್ಷಲ್ ಆರ್ಟ್ಸ್ ಪಟು ಸುಶ್ಮಿತಾ ರೈ…

ಹೌದು, ದಕ್ಷಿಣ ಕೊರಿಯಾದ ಚೆಂಗ್ಜೌ ನಲ್ಲಿ ನಡೆಯುತ್ತಿರುವ ವಿಶ್ವ ಮಾರ್ಷಲ್ ಆರ್ಟ್ಸ್ ಮಾಸ್ಟರ್ ಶಿಪ್ ಕ್ರೀಡಾಕೂಟದಲ್ಲಿ ಸುಶ್ಮಿತಾ ಕಂಚಿನ ಪದಕ ಗೆದ್ದಿದ್ದಾರೆ. ಇದರೊಂದಿಗೆ ಮಹಿಳಾ ಕ್ರೀಡಾಪಟುಗಳ ಸಾಧನೆಯ ಹಾದಿ ಮುಂದುವರಿದಿದೆ. ಈ ಕ್ರೀಡಾಕೂಟದಲ್ಲಿ ಭಾರತದಿಂದ 12 ಸ್ಪರ್ಧಿಗಳ ತಂಡ ಭಾಗವಹಿಸಿತ್ತು. ಆ ಪೈಕಿ ಸುಶ್ಮಿತಾ ಸಹ ಒಬ್ಬರಾಗಿದ್ದರು.

ಪೂರ್ವ ಸಿಕ್ಕಿಂ ಭಾಗದ ಮಜ್ಹಿತಾರ್ ನ ಭಸ್ಮೇ ಹಳ್ಳಿಯ ಮೂಲದವರಾದ ಸುಶ್ಮಿತಾ ಚಿಕ್ಕ ವಯಸ್ಸಿನಲ್ಲೇ ಈ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ. ಸದ್ಯ ತಡೊಂಗ್ ಗಂಗ್ಟೊಕ್ ನ ಸಿಕ್ಕಿಂ ಸರ್ಕಾರಿ ಕಾಲೇಜಿನಲ್ಲಿ ಬಿಎ ಪದವಿ ವ್ಯಾಸಂಗ ಮಾಡುತ್ತಿದ್ದು, ರೇ ವ್ಯಾಲಿ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಮಕ್ಕಳಿಗೂ ಮಾರ್ಷಲ್ ಆರ್ಟ್ಸ್ ತರಬೇತಿಯನ್ನು ನೀಡುತ್ತಿದ್ದಾರೆ.

(ಚಿತ್ರ ಕೃಪೆ: ದ ನಾರ್ಥ್ ಈಸ್ಟ್ ಟುಡೆ)

Leave a Reply