ಕಾವೇರಿ ಪ್ರತಿಭಟನೆಯಲ್ಲೂ ಇಣುಕುವ ಸ್ತ್ರೀ ನಿಂದನೆ, ಅಸಾಮರ್ಥ್ಯಕ್ಕೆ ಮಹಿಳೆಯನ್ನು ಸಮೀಕರಿಸುವ ದುರ್ಬುದ್ಧಿಗೆಂದು ಕೊನೆ?

ಡಿಜಿಟಲ್ ಕನ್ನಡ ವಿಶೇಷ:

ತಮಿಳುನಾಡಿಗೆ ಕಾವೇರಿ ನೀರು ಬಿಡಬೇಕಾಗಿ ಬಂದಿದ್ದರ ಬಗ್ಗೆ ಕರ್ನಾಟಕದ ಜನರಲ್ಲಿ ಸಹಜವಾಗಿಯೇ ಆಕ್ರೋಶ ಮೂಡಿದೆ.  ಈ ಎರಡು ತಿಂಗಳಲ್ಲಿ ಮಳೆ ಆಗದಿದ್ದರೆ ಕುಡಿಯುವ ನೀರಿಗೇ ತತ್ವಾರ ಬರುವ ಪರಿಸ್ಥಿತಿ ಇರುವಾಗ ನೀರು ಬಿಡಿಸಿಕೊಂಡ ತಮಿಳುನಾಡಿನ ಹಠಮಾರಿ ಧೋರಣೆ ಬಗ್ಗೆ ಆಕ್ರೋಶ ಒಂದೆಡೆ ಆದರೆ, ನ್ಯಾಯ ಪಡೆದುಕೊಳ್ಳುವ ಪ್ರಕ್ರಿಯೆಯಲ್ಲಿ ನಮ್ಮ ಸರ್ಕಾರ ಸರಿಯಾಗಿ ವಾದ ಕಟ್ಟಲಿಲ್ಲ ಎಂಬ ಕೋಪ ಇನ್ನೊಂದೆಡೆ.

ಇವೆಲ್ಲದರ ಅಭಿವ್ಯಕ್ತಿಗೆ ಹಲವರು ಹಸಬಗೆಯ ಮಾರ್ಗಗಳನ್ನು ಅನುಸರಿಸುತ್ತಾರೆ. ಹೀಗೆ ಹಿಡಿಯುತ್ತಿರುವ ದಾರಿಗಳಲ್ಲಿ ಕೆಲವೊಂದು ಮನೋವಿಕಾರವೂ ಬಯಲಿಗೆ ಬಂದುಬಿಡುತ್ತದೆ.

ಕಾವೇರಿ ವಿಚಾರದಲ್ಲಿ ಸರ್ಕಾರದ ಅಸಾಮರ್ಥ್ಯವನ್ನು ಖಂಡಿಸುತ್ತ ಶನಿವಾರ ಜೆಡಿಯು ತನ್ನ ಪ್ರತಿಭಟನೆಯನ್ನು ದಾಖಲಿಸಿತು. ‘ರಾಜ್ಯದ ಮಂತ್ರಿಗಳಲ್ಲಿ ಯಾರೂ ಪುರುಷರಿಲ್ಲವೇ ಎಂಬ ಸಂಶಯ ವ್ಯಕ್ತವಾಗುತ್ತಿದೆ’ ಅಂತ ತನ್ನ ಪತ್ರದಲ್ಲಿ ಪ್ರಶ್ನೆ ಎತ್ತಿರುವ ಜೆಡಿಯು, ಮುಖ್ಯಮಂತ್ರಿ ಸಿದ್ದರಾಮಯ್ಯ, ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಹಾಗೂ ಮಂಡ್ಯ ಉಸ್ತುವಾರಿ ಸಚಿವ ಡಿ. ಕೆ. ಶಿವಕುಮಾರ ಅವರ ಹೆಸರಿಗೆ ಬಾಗಿನ ಅರ್ಪಿಸಿ ಫೋಟೊಕ್ಕೆ ಫೋಸು ನೀಡಿ ಕೃತಾರ್ಥವಾಯಿತು.

jdu-min

ಕರ್ನಾಟಕದ ಮಟ್ಟಿಗೆ ಜೆಡಿಯು ಅಂದರೆ ಕೆಜಿಗೆಷ್ಟು ಎಂದು ಕೇಳುವ ಸ್ಥಿತಿಯೇ ಇದ್ದಿರಬಹುದಾದರೂ ಹಾಗೆಂದು ಇವರ ಪ್ರತಿಭಟನಾ ವಿಧಾನವನ್ನು ಸುದ್ದಿ ಚೌಕಟ್ಟಿನಾಚೆ ಇಡುವುದಕ್ಕೆ ಮನಸ್ಸಾಗುತ್ತಿಲ್ಲ. ಏಕೆಂದರೆ ಇವರು ತಮ್ಮ ಪ್ರತಿಭಟನಾವಿಧಾನದಲ್ಲಿ ತಮಗೇ ಗೊತ್ತಿಲ್ಲದಂತೆ ಮನೋವಿಕಾರವೊಂದನ್ನು ಹೊರಹಾಕಿದ್ದಾರೆ ಹಾಗೂ ಅಂಥ ಮಾನಸಿಕ ಸ್ಥಿತಿ ನಮ್ಮಲ್ಲಿ ಬಹುತೇಕರಲ್ಲಿ ಹೇಗೋ ನೆಲೆಯಾಗಿಬಿಟ್ಟಿದೆ.

ರಾಜ್ಯ ಸಂಪುಟದಲ್ಲಿ ಗಂಡಸರಿಲ್ಲವೇ ಎಂಬ ಪ್ರಶ್ನೆಯೇ ಅತ್ಯಂತ ಘಾತಕವಾದದ್ದು. ಸಮಸ್ಯೆ ಬಗೆಹರಿಸುವುದಕ್ಕೆ ಗಂಡಸರೇ ಆಗಬೇಕು, ಬಳೆ ತೊಡುವ ಹೆಂಗಸರಿಂದೇನಾಗುತ್ತದೆ ಎಂಬ ತುಚ್ಛ ಮನಸ್ಥಿತಿ ಇದು. ಕಾವೇರಿ ಆಗಲಿ, ದೇಶವನ್ನೋ ರಾಜ್ಯವನ್ನೋ ಮುನ್ನಡೆಸುವ ವಿಚಾರವಾಗಿರಲಿ…ಇಲ್ಲಿ ಹೆಣ್ಣು-ಗಂಡಿನ ಪ್ರಶ್ನೆಗಳು ಅಪ್ರಸ್ತುತ. ಸಿದ್ದರಾಮಯ್ಯನವರಿರಬಹುದು, ಪ್ರಧಾನಿ ಮೋದಿ ಇರಬಹುದು ಯಾರ ಮೇಲಾದರೂ ಟೀಕೆ ಮಾಡುವುದಕ್ಕೆ ಎಲ್ಲರೂ ಸ್ವತಂತ್ರರಿದ್ದೇವೆ. ಆದರೆ ಅನುಸರಿಸುವ ವಿಧಾನದಲ್ಲಿ ಎಂಥ ಮನಸ್ಥಿತಿ ಅನಾವರಣವಾಗುತ್ತಿದೆ?

ಶುಕ್ರವಾರದ ಕರ್ನಾಟಕ ಬಂದ್ ವೇಳೆ ಕಂಡ ಹಲವು ಪೋಸ್ಟರುಗಳಲ್ಲಿಯೂ ಸಿದ್ದರಾಮಯ್ಯ, ಮೋದಿಯವರಿಗೆ ಸೀರೆ- ಬಳೆ ತೊಡಿಸಿದಂಥ ಹಲವು ಚಿತ್ರಗಳಿದ್ದವು. ಇವೆಲ್ಲದ ಮೂಲಕ ಸಿದ್ದರಾಮಯ್ಯನವರನ್ನೋ ಮೋದಿಯವರನ್ನೋ ಅವಮಾನಿಸುತ್ತಿಲ್ಲ, ಬದಲಿಗೆ ನಮ್ಮದೇ ಮನೆಯ ಹೆಣ್ಣುಮಕ್ಕಳನ್ನು ನಿಂದಿಸುತ್ತಿದ್ದೇವೆ ಅನ್ನೋದು ಇಂಥ ಕೃತ್ಯಗಳಲ್ಲಿ ತೊಡಗಿರುವವರಿಗೆ ಅರಿವಾಗುವುದಾದರೂ ಯಾವಾಗ?

ನಮ್ಮ ಮಹಿಳೆಯರು ಒಲಿಂಪಿಕ್ಸ್ ನಲ್ಲಿ ಪದಕ ಬಾಚಿ ದೇಶಕ್ಕೆ ಗೌರವ ತರುತ್ತಿದ್ದಾರೆ, ಇಸ್ರೊದಲ್ಲಿ ಕುಳಿತು ಮಂಗಳಯಾನದ ನಕ್ಷೆ ತಯಾರಿಸುವಲ್ಲಿ ತೊಡಗಿಕೊಂಡಿದ್ದಾರೆ, ಮಹಿಳೆಯರ ಮೇಲುಗೈ ಎಂಬುದು ಶಿಕ್ಷಣ- ಔದ್ಯೋಗಿಕ ಕ್ಷೇತ್ರಗಳಲ್ಲಿ ಅನುರಣಿಸುತ್ತಿದೆ, ಗಂಡಸುತನವನ್ನು ಶೌರ್ಯಕ್ಕೆ ಸಮೀಕರಿಸುವುದಾದರೆ ಬಳೆ ಧರಿಸಿದ ಇಂದಿರಾ ಗಾಂಧಿಯವರ ಆಡಳಿತವಿದ್ದಾಗಲೇ ಪಾಕಿಸ್ತಾನವನ್ನು ಸದೆಬಡಿದ ಬಾಂಗ್ಲಾ ವಿಮೋಚನೆಯ ಯುದ್ಧವಾಗಿದ್ದು….

ಹೀಗಿದ್ದೂ ಸೀರೆ-ಬಳೆಗಳನ್ನು ಕೈಲಾಗದತನಕ್ಕೆ ಸಮೀಕರಿಸುತ್ತಿದ್ದೇವೆ ಎಂದರೆ, ಬಾಗಿನದಂಥ ಆಪ್ತ ಗೌರವದ ಪರಿಕಲ್ಪನೆಯನ್ನು ನಿಂದನೆಗೆ ಬಳಸಿಕೊಳ್ಳುತ್ತಿದ್ದೇವೆ ಎನ್ನುವುದಾದರೆ ಹಾಗೆ ಮಾಡುವವರ ಮಾನಸಿಕ ಆರೋಗ್ಯದ ಮಟ್ಟ ಅದೆಷ್ಟು ಕುಸಿದಿದ್ದಿರಬಹುದು?

ಚಪ್ಪಲ್ಲಿ ಹಾರ ಹಾಕುವುದು, ಪ್ರತಿಕೃತಿ ದಹನ ಇಂಥವುಗಳ ಬಗ್ಗೆಯೂ ಆಕ್ಷೇಪಗಳಿವೆ. ಆದರೆ ಅವೆಲ್ಲ ತತ್ ಕ್ಷಣದ ಆಕ್ರೋಶವನ್ನು ಹೊರಹಾಕುವ, ವೈಯಕ್ತಿಕ ನೆಲೆಯಲ್ಲಿ ಯಾರ ಮೇಲೆಯೋ ಕೋಪ ತೋರಿಸುವುದಕ್ಕೆ ಬಳಸುವ ಮಾರ್ಗಗಳೆಂದು ಮಾಫಿ ನೀಡಬಹುದು. ಆದರೆ ಈ ಬಳೆ-ಸೀರೆಯ ಉಪಮೆಗಳೆಲ್ಲ ಇಡೀ ಸ್ತ್ರೀ ಕುಲವನ್ನು ಕೀಳಂದಾಜಿಸುವ ಕೆಟ್ಟ ಮಾನಸಿಕತೆಯ ಅಭಿವ್ಯಕ್ತಿ.

ಕಾವೇರಿ ಪ್ರತಿಭಟನೆ ಸಂದರ್ಭದ ಈ ಅಭಿವ್ಯಕ್ತಿಗಳು ಉದಾಹರಣೆ ಮಾತ್ರ. ಬೇರೆ ಸಂದರ್ಭಗಳಲ್ಲೂ ಅಸಾಮರ್ಥ್ಯ, ಹಿನ್ನಡೆ ಅನುಭವಿಸಿದಾಗಲೆಲ್ಲ, ‘ಸೀರೆ ಉಟ್ಕೊ- ಬಳೆತೊಟ್ಕೊ’ ಎಂಬರ್ಥದ ಮಾತುಗಳನ್ನಾಡುವುದು ಸಹಜವೆಂಬಂತಾಗಿರುವುದು ದುರಂತ. ಇದರಿಂದ ಹೊರಬಂದಾಗ ಮಾತ್ರ ನಮ್ಮ ಆರೋಗ್ಯ ಸ್ಥಿತಿ ಉತ್ತಮವಾದೀತು.

1 COMMENT

Leave a Reply