ಹತ್ತಿರದಲ್ಲೇ ಇನ್ನೊಂದು ಭೂಮಿ – ಏಲಿಯನ್ಸ್ ಅಲ್ಲಿರಬಹುದೆ? ಇಲ್ಲದಿದ್ದರೆ ನಾವೇ ಅಲ್ಲಿ ನೆಲೆಯೂರಬಹುದೆ?

author-ananthramuಮನುಷ್ಯನ ಕುತೂಹಲವೇ ಹಾಗೆ. ಪಕ್ಕದಮನೆ ವರ್ಷಗಟ್ಟಳೆ ಖಾಲಿ ಇದ್ದು ಎಂದೋ ಒಂದು ದಿನ ಯಾರೋ ಡಿಢೀರೆಂದು ಬಂದು ಟ್ರಕ್ ನಿಂದ ಸಾಮಾನು ಸರಂಜಾಮು ಇಳಿಸಿ ಮನೆಗೆ ತುಂಬಿ ಸ್ವಲ್ಪ ಹೊತ್ತಿನಲ್ಲೇ ಲೈಟ್ ಹಾಕುತ್ತಾರೆ ಎನ್ನಿ. ಅವರು ಯಾರು? ಎಷ್ಟು ಜನ? ಹೇಗಿದ್ದಾರೆ? ಎನ್ನುವುದನ್ನು ತಿಳಿಯುವ ಕುತೂಹಲ ಯಾರಿಗೆ ತಾನೇ ಇರುವುದಿಲ್ಲ? ಕೊನೆಯ ಪಕ್ಷ ಕಿಟಕಿಯ ಮೂಲಕವಾದರೂ ನೋಡಿ ಕುತೂಹಲ ತಣಿಸಿಕೊಳ್ಳುವುದಿಲ್ಲವೆ?

ಇದೇ ಕಲ್ಪನೆಯನ್ನು ಬಾಹ್ಯಾಕಾಶಕ್ಕೂ ವಿಸ್ತರಿಸಿದರೆ ಆಗಲೂ ಇಂಥದೇ ಕುತೂಹಲ, ಕಾತರ ಹುಟ್ಟುತ್ತದೆ. ಸೌರಮಂಡಲಕ್ಕೆ ಅತ್ಯಂತ ಸಮೀಪವಿರುವ ನಕ್ಷತ್ರ ಯಾವುದು ಎಂದು ಹೈಸ್ಕೂಲ್ ವಿದ್ಯಾರ್ಥಿಗಳನ್ನು ಕೇಳಿ ನೋಡಿ. ಥಟ್ಟನೆ ಅದು ಆಲ್ಫಾ ಸೆಂಟೌರಿ ಎಂಬ ಉತ್ತರ ಬರುತ್ತದೆ. ವಿದ್ಯಾರ್ಥಿ ಇನ್ನೂ ಬುದ್ಧಿವಂತನಾಗಿದ್ದರೆ ಅದು ಸೌರಮಂಡಲಕ್ಕೆ ಬರಿ 3.7 ಜ್ಯೋತಿರ್ವರ್ಷ ದೂರದಲ್ಲಿದೆ ಎಂದು ಹೇಳಲೂಬಹುದು. ಇಲ್ಲಿ 3.7 ಎನ್ನುವುದು ಸಂಖ್ಯಾದೃಷ್ಟಿಯಿಂದ ದೊಡ್ಡದೇನಲ್ಲ. ಆದರೆ ಇದರಲ್ಲಿ ಘನ ಗಾತ್ರದ ಕಾಲಮಾಪಕ ಅಡಗಿದೆ. ಸೆಕೆಂಡಿಗೆ ಸುಮಾರು ಮೂರು ಲಕ್ಷ ಕಿಲೋ ಮೀಟರ್ ವೇಗದಲ್ಲಿ ಅಂದರೆ ಬೆಳಕಿನ ವೇಗದಲ್ಲಿ ಒಂದು ನೌಕೆ ಬಾಹ್ಯಾಕಾಶದಲ್ಲಿ ಸಾಗುತ್ತಿದೆ ಎನ್ನಿ. ಈ ಆಲ್ಫಾ ಸೆಂಟೌರಿ ನಕ್ಷತ್ರ ತಲಪಲು ಮೂರು ವರ್ಷ, ಏಳು ತಿಂಗಳು ಬೇಕಾದೀತು. ಇನ್ನೂ ಒಂದು ವಿಚಾರವಿದೆ, ಆ ವ್ಯೋಮನೌಕೆ ಎಂದೂ ನಕ್ಷತ್ರವನ್ನು ತಲಪುವುದಿಲ್ಲ, ಭಸ್ಮವಾಗಿಬಿಡುತ್ತದೆ. ಏಕೆಂದರೆ ಪ್ರಾಕ್ಸಿಮಾ ಸೆಂಟೌರಿ ಕೂಡ ಒಂದು ಸೂರ್ಯ.

ನಮ್ಮ ಹೇಳಿಕೆಯಲ್ಲಿ ಒಂದು ತಪ್ಪಿದೆ, ತಿದ್ದುಕೊಳ್ಳಿ ಎನ್ನುತ್ತಿದ್ದಾರೆ ಖಗೋಳ ವಿಜ್ಞಾನಿಗಳು. ಏನದು ಅಂಥ ತಪ್ಪು? ನಾವು ಭಾವಿಸಿದಂತೆ ಆಲ್ಫಾ ಸೆಂಟೌರಿ ಒಂಟಿ ನಕ್ಷತ್ರವಲ್ಲ. ಅದು ನಕ್ಷತ್ರಪುಂಜ-ಮೂರು ನಕ್ಷತ್ರಗಳ ಕೂಟ. ಆಲ್ಫಾ ಸೆಂಟೌರಿ-ಎ, ಆಲ್ಫಾ ಸೆಂಟೌರಿ-ಬಿ ಮತ್ತು ಮೂರನೆಯದು ಮಂದವಾಗಿ ಬೆಳಕು ಸೂಸುವ ಕೆಂಪು ಕುಬ್ಜ ನಕ್ಷತ್ರ ಪ್ರಾಕ್ಸಿಮಾ ಸೆಂಟೌರಿ. ಇದಕ್ಕೆ ಸೂರ್ಯನಿಗಿಂತ ಕಡಿಮೆ ದ್ರವ್ಯರಾಶಿ ಇದೆ. ಹಾಗೆಯೇ ಕಾಂತಿ ಕೂಡ ಕಡಿಮೆ. ಈ ಪ್ರಾಕ್ಸಿಮಾ ಸೆಂಟೌರಿ ಅಡ್ಡಾದಿಡ್ಡಿ ಎಲ್ಲೋ ಹೋಗಿ ಅಂಡಲೆಯದಂತೆ ಈ ಗುಂಪಿನ ಎರಡು ನಕ್ಷತ್ರಗಳು ಗುರುತ್ವವನ್ನು ಬಳಸಿ ಲಗಾಮು ಹಾಕಿ ಹಿಡಿದಿಟ್ಟಿವೆ.

ಈಗ ಖಗೋಳ ವಿಜ್ಞಾನಿಗಳ ದೃಷ್ಟಿ ಪ್ರಾಕ್ಸಿಮಾ ಸೆಂಟೌರಿ ಸೆರೆಹಿಡಿದಿರುವ ಗ್ರಹದ ಮೇಲೆ. ಇದನ್ನು ಪ್ರಾಕ್ಸಿಮಾ ಸೆಂಟೌರಿ-ಬಿ ಎಂದಿದ್ದಾರೆ. ವಾಸ್ತವವಾಗಿ ಸೌರಮಂಡಲಕ್ಕೆ ಬಹು ಸಮೀಪತಮ ನಕ್ಷತ್ರ ಎಂದು ಹೇಳುವುದು ಪ್ರಾಕ್ಸಿಮಾ ಸೆಂಟೌರಿಯನ್ನೇ. ಹೀಗೆ ಹೇಳುವಾಗ ವಿಜ್ಞಾನಿಗಳಿಗೆ ಉತ್ಸಾಹ ಬರುತ್ತದೆ. ಭವಿಷ್ಯದಲ್ಲಿ ಅತಿ ಹೆಚ್ಚು ಗಮನ ಸೆಳೆಯುವುದು ಪ್ರಾಕ್ಸಿಮಾ ಸೆಂಟೌರಿ ಸೆರೆಹಿಡಿದಿರುವ ಗ್ರಹವೇ. ಅಂತರನಾಕ್ಷತ್ರಿಕ ಪಯಣದಲ್ಲಿ ರೊಬಟ್ ಅನ್ನು ಅಲ್ಲಿಗೆ ಕಳಿಸಿ ಅದರ ಜಾತಕ ಜಾಲಾಡುವ ಅವಕಾಶ ಕೂಡ ಇದೆ ಎಂಬ ಆಸೆ ಹುಟ್ಟಿಸಿದೆ. ಲಂಡನ್ನಿನ ಕ್ವೀನ್ ಮೇರಿ ವಿಶ್ವವಿದ್ಯಾಲಯದ ಇಬ್ಬರು ಖಗೋಳ ತಜ್ಞರು ಇದನ್ನು ಪತ್ತೆ ಹಚ್ಚಿದ ಮೇಲೆ ಜಗತ್ತು ರೋಮಾಂಚನಗೊಂಡಿದೆ. ಅದರ ಇನ್ನಷ್ಟು ವಿವರ ಪಡೆಯಲು ಖಗೋಳ ವಿಜ್ಞಾನಿಗಳ ದೊಡ್ಡ ಪಡೆಯೇ ಕಾತರವಾಗಿದೆ.

ಯಾವುದೇ ಗ್ರಹದಲ್ಲಿ ಜೀವಿ-ಕೊನೆಯ ಪಕ್ಷ ಸೂಕ್ಷ್ಮರೂಪದಲ್ಲಾದರೂ ಇದ್ದರೆ ಸದ್ಯಕ್ಕೆ ಅದೇ ಬಹು ದೊಡ್ಡ ಸುದ್ದಿಯಾಗುತ್ತದೆ. ವಿಜ್ಞಾನಿಗಳ ದೃಷ್ಟಿ ಅತ್ಯಂತ ಖಚಿತ. ಅನ್ಯ ಸೌರಮಂಡಲದಲ್ಲಿ ಯಾವುದಾದರೂ ಗ್ರಹವನ್ನು ಪತ್ತೆಹಚ್ಚಿದರೆ ಮೊದಲು ಹಾಕುವ ಪ್ರಶ್ನೆ ಅದರ ಸೂರ್ಯನಿಂದ ಆ ಗ್ರಹ ಎಷ್ಟು ದೂರದಲ್ಲಿದೆ ಎಂಬುದು. ಸೂರ್ಯನಿಂದ ಗ್ರಹ ತೀರ ಹತ್ತಿರವಿದ್ದರೂ ಪ್ರಯೋಜನವಿಲ್ಲ. ಅತಿ ತಾಪದಿಂದಾಗಿ ಜೀವ ಮೊಳೆಯಲು ಅದು ಅಡ್ಡಬರುತ್ತದೆ-ನಮ್ಮ ಬುಧ ಗ್ರಹವಿದ್ದಂತೆ. ಅತಿ ದೂರದಲ್ಲಿದ್ದರೂ ಪ್ರಯೋಜನವಿಲ್ಲ. ಅತ್ಯಂತ ಶೀತಲ ವಾತಾವರಣದಲ್ಲೂ ಜೀವ ಹುಟ್ಟುವುದು ಅನುಮಾನ-ನಮ್ಮ ನೆಪ್ಚ್ಯೂನ್ ಇದ್ದಂತೆ. ಸದ್ಯ ಭೂಮಿ ಮತ್ತು ಸೂರ್ಯನ ನಡುವೆ ಇರುವ ದೂರವಿದೆಯಲ್ಲ, ಅದೇ ಜೀವಿಗಳ ಹುಟ್ಟು, ಉಳಿವಿಗೆ ಅತ್ಯಂತ ಪ್ರಶಸ್ತ ಎನ್ನುತ್ತಾರೆ ವಿಜ್ಞಾನಿಗಳೂ. ಇದನ್ನೇ `ಹ್ಯಾಬಿಟೆಬಲ್ ಜೋನ್’ ಎನ್ನುವುದು. ಈ ಹೊಸ ಗ್ರಹ ಪ್ರಾಕ್ಸಿಮಾ-ಬಿ ಈ ಅಗತ್ಯವನ್ನು ಪೂರೈಸುತ್ತದೆ. ಗಾತ್ರದಲ್ಲಿ ಭೂಮಿಗಿಂತಲೂ 1.3ರಷ್ಟು ದೊಡ್ಡದು, ತನ್ನ ಸೂರ್ಯನನ್ನು ಇದು 7.5ದಶಲಕ್ಷ ಕಿಲೋ ಮೀಟರ್ ದೂರದಿಂದ ಪರಿಭ್ರಮಿಸುತ್ತದೆ (ನಮ್ಮ ಭೂಮಿ ಸುಮಾರು 14 ಕೋಟಿ ಕಿಲೋ ಮೀಟರ್ ದೂರದಿಂದ ಸೂರ್ಯನನ್ನು ಪರಿಭ್ರಮಿಸುತ್ತಿದೆ). ಬರೀ 11.2 ದಿನದಲ್ಲಿ ಅದು ತನ್ನ ಸೂರ್ಯನನ್ನು ಪರಿಭ್ರಮಿಸುತ್ತದೆ. ಸದ್ಯ ಅಲ್ಲಿ ನೀರಿರುವುದು ಖಚಿತವಾಗಿಲ್ಲ. ಇರುವ ಸಾಧ್ಯತೆ ಹೆಚ್ಚು ಎನ್ನುತ್ತಿದ್ದಾರೆ ವಿಜ್ಞಾನಿಗಳು.

3

ಒಂದುವೇಳೆ ಏಲಿಯನ್ಸ್ ಗಳಿದ್ದರೂ ಅಲ್ಲಿನ ಪರಿಸರ ಹೇಗಿದೆ ಎಂದರೆ ಸೂರ್ಯನಿಂದ ಬರುವ ಅತಿ ನೇರಿಳೆ ಕಿರಣಗಳು ಮತ್ತು ಎಕ್ಸ್ ಕಿರಣಗಳು ನಿರಂತರವಾಗಿ ಈ ಗ್ರಹವನ್ನು ತಾಡಿಸುತ್ತಿವೆ. ಇವೆಲ್ಲವನ್ನೂ ತಟ್ಟಿಕೊಂಡೇ ಅಲ್ಲಿ ಜೀವ ಬೆಳೆಯಬೇಕು. ಆ ಸಾಧ್ಯತೆ ಕೂಡ ಕಡಿಮೆ ಎನ್ನುತ್ತಿದ್ದಾರೆ. ನಾವು ಅಲ್ಲಿ ನೆಲೆಯೂರಲು ಇದೇ ಪರಿಸರ ಎದುರಾಗುತ್ತದೆ. ಆ ಹೊತ್ತಿಗೆ ನಮ್ಮ ವಿಜ್ಞಾನ-ತಂತ್ರಜ್ಞಾನದ ಬೆಳವಣಿಗೆಗಳು ಹೇಗಿರುತ್ತವೋ ಅದರ ಊಹೆಯೂ ಈಗ ಕಷ್ಟ. ಪ್ರಾಕ್ಸಿಮಾ ಸೆಂಟೌರಿ ನಕ್ಷತ್ರವನ್ನು ಈ ಗ್ರಹ ಕೂಡ ಅಲ್ಲಾಡಿಸಿತ್ತು. ಪ್ರಬಲ ದೂರದರ್ಶಕಗಳಿಂದ ವಿಜ್ಞಾನಿಗಳು ಈ ತೆರೆಮರೆಯ ಆಟವನ್ನು ಗಮನಿಸಿ, ಈ ಗ್ರಹವನ್ನು ಪತ್ತೆಹಚ್ಚಿದ್ದರು. ಸುಮಾರು 14 ವರ್ಷಗಳ ಕಾಲ ಇದರ ಅಧ್ಯಯನ ನಡೆದಿದೆ. ವಿಜ್ಞಾನಿಗಳು ಇನ್ನಷ್ಟು ಮಾಹಿತಿ ಪಡೆದು ವಿಶ್ಲೇಷಿಸಬೇಕು ಎನ್ನುತ್ತಿದ್ದಾರೆ. ಈ ತಿಂಗಳ ಕೊನೆಯ ಹೊತ್ತಿಗೆ ಗ್ರಹದ ಅಸ್ತಿತ್ವಕ್ಕೆ ಖಚಿತ ಪುರಾವೆಗಳು ಸಿಕ್ಕಬಹುದು ಎಂಬ ಊಹೆಗಳಿವೆ.

ಇನ್ನೂ ಒಂದು ವಿಶೇಷವೆಂದರೆ ಪ್ರಾಕ್ಸಿಮಾ ಸೆಂಟೌರಿ ನಕ್ಷತ್ರಕ್ಕೆ ನಮ್ಮ ಸೂರ್ಯನಿಗಿಂತಲೂ ಹೆಚ್ಚು ಆಯುಷ್ಯವಿದೆ. ಆದ್ದರಿಂದ ಯಾವುದೋ ಒಂದು ಹಂತದಲ್ಲಿ ಅದರ ಗ್ರಹ ಜೀವರಸವನ್ನು ತಯಾರಿಸಲೂಬಹುದು ಎನ್ನುವ ಆಸೆಯನ್ನಂತೂ ಚಿಗುರಿಸಿದೆ. ಇನ್ನೊಂದೆಡೆ ಅಂತರನಾಕ್ಷತ್ರಿಕ ಪಯಣಕ್ಕೆ ಎಂಥ ವ್ಯೋಮನೌಕೆಗಳು ಬೇಕು ಎಂಬುದರ ಮಾದರಿಗಳ ಬಗ್ಗೆ ಈಗಾಗಲೇ ವಿಜ್ಞಾನ-ತಂತ್ರಜ್ಞಾನ ಕೇಂದ್ರದಲ್ಲಿ ದಾಪುಗಾಲಿಡುತ್ತಿರುವ ವಿಜ್ಞಾನಿಗಳು ನೀಲನಕ್ಷೆ ತಯಾರಿಸಿದ್ದಾರೆ. ಬೆಳಕಿನ ವೇಗದಲ್ಲಿ ವ್ಯೋಮನೌಕೆಗಳು ಸಾಗುತ್ತವೆ ಎಂಬ ಮಾತೇ ಸಾಕು ಸಾವಿರ ಸಾವಿರ ಕನಸುಗಳನ್ನು ಅದು ತೆರೆದಿಡುತ್ತದೆ.

Leave a Reply