ಅಪಘಾತದಲ್ಲಿ ಕಾಲು ಕಳೆದುಕೊಂಡ ಮರಿಯಪ್ಪನ್ ತಂಗವೇಲು ಇಂದು ಪ್ಯಾರಾ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದಿದ್ದಾನೆ, ನಮ್ಮೆಲ್ಲರಿಗೂ ಸ್ಫೂರ್ತಿಯಾಗುವ ಈತನ ಕಥೆ ಇದು!

ಪ್ಯಾರಾ ಹೈಜಂಪ್ ಪಟು ಮರಿಯಪ್ಪನ್ ತಂಗವೇಲು…

ಡಿಜಿಟಲ್ ಕನ್ನಡ ಟೀಮ್:

ಭಾರತೀಯ ಕ್ರೀಡಾ ರಸಿಕರಿಗೆ ಶನಿವಾರ ಸಿಹಿಸುದ್ದಿ ಬಂದಿದೆ. ಅದೇನಂದ್ರೆ ರಿಯೋನಲ್ಲಿ ನಡೆಯುತ್ತಿರುವ ಪ್ಯಾರಾ ಒಲಿಂಪಿಕ್ಸ್ ಕ್ರೀಡಾಕೂಟದ ಆರಂಭಿಕ ಹಂತದಲ್ಲೇ ಭಾರತಕ್ಕೆ ಎರಡು ಪದಕ ಬಾಚಿದೆ. ಪುರುಷರ ಟಿ42 ಹೈ ಜಂಪ್ ವಿಭಾಗದಲ್ಲಿ ಮರಿಯಪ್ಪನ್ ತಂಗವೇಲು ಚಿನ್ನ ಗೆದ್ದರೆ, ಇದೇ ವಿಭಾಗದಲ್ಲಿ ವರುಣ್ ಸಿಂಗ್ ಭಾಟಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಇದರೊಂದಿಗೆ ಸಾಧಿಸುವ ಛಲ ಇದ್ದವರಿಗೆ ಅಂಗ ವೈಕಲ್ಯ ಲೆಕ್ಕಕ್ಕಿಲ್ಲ ಎಂಬುದಕ್ಕೆ ಇವರು ತಾಜಾ ನಿದರ್ಶನವಾಗಿ ನಿಂತಿದ್ದಾರೆ.

ಒಲಿಂಪಿಕ್ಸ್ ಅಂಗಣದಲ್ಲಿ ಪೊಡಿಯಂ ಮೇಲೆ ನಿಂತು ರಾಷ್ಟ್ರಧ್ವಜ ಮೇಲಕ್ಕೇರಿಸುತ್ತಾ ರಾಷ್ಟ್ರಗೀತೆ ಮೊಳಗಿಸುವಂತೆ ಮಾಡುವುದು ಪ್ರತಿಯೊಬ್ಬ ಕ್ರೀಡಾಪಟುವಿನ ಪರಮ ಗುರಿಯಾಗಿರುತ್ತದೆ. ಅಂತಹ ಗುರಿಯನ್ನು ಈ ಇಬ್ಬರು ಮುಟ್ಟಿದ್ದಾರೆ. ಶನಿವಾರ ನಡೆದ ಅಂತಿಮ ಸುತ್ತಿನಲ್ಲಿ ತಂಗವೇಲು 1.89 ಮೀ. ಎತ್ತರ ಜಿಗಿದು ಐತಿಹಾಸಿಕ ಸಾಧನೆಯೊಂದನ್ನು ಬರೆದಿದ್ದಾನೆ. ಅದೇನಂದ್ರೆ, ಪ್ಯಾರಾ ಒಲಿಂಪಿಕ್ಸ್ ನ ಹೈಜಂಪ್ ವಿಭಾಗದಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಸ್ಪರ್ಧಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಇನ್ನು ವೈಯಕ್ತಿಕ ಶ್ರೇಷ್ಠ ಸಾಧನೆ ಮಾಡಿದ ವರುಣ್ 1.86 ಮೀ ಜಿಗಿದು ಮೂರನೇ ಸ್ಥಾನದೊಂದಿಗೆ ಕಂಚಿನ ಪದಕ ಪಡೆದಿದ್ದಾರೆ. ಅಮೆರಿಕದ ಸ್ಯಾಮ್ ಗ್ರೇವೆ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ ಪಡೆದಿದ್ದಾರೆ. ಇನ್ನು ಭಾರತದ ಮತ್ತೊಬ್ಬ ಭರವಸೆಯ ಹೈಜಂಪರ್ ಶರತ್ ಕುಮಾರ್ 6ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

ಫೈನಲ್ ಸುತ್ತಿನಲ್ಲಿ ಮರಿಯಪ್ಪನ್ ತಂಗವೇಲು ಅವರ ಚಿನ್ನದ ಜಿಗಿತ ಇಲ್ಲಿದೆ ನೋಡಿ…

ಅಪಘಾತದಲ್ಲಿ ಕಾಲು ಕಳೆದುಕೊಂಡವ ಇಂದು ಚಾಂಪಿಯನ್ ಆದ ಹಾದಿ…

ಮರಿಯಪ್ಪನ್ ತಂಗವೇಲು ತಮಿಳುನಾಡಿನ ಸೇಲಂನಿಂದ 50 ಕಿ.ಮೀ ದೂರದಲ್ಲಿರುವ ಪೆರಿಯವಾಡಂಗಟ್ಟಿ ಎಂಬ ಹಳ್ಳಿಯವ. ಈತನ ತಾಯಿ ತರಕಾರಿ ಮಾರುತ್ತಾ ಜೀವನ ಸಾಗಿಸುತ್ತಿದ್ದಾರೆ. ತನ್ನ 5ನೇ ವಯಸ್ಸಿನಲ್ಲಿ ಶಾಲೆಗೆ ತೆರಳುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ ಈತನ ಕಾಲಿನ ಮೇಲೆ ವಾಹನ ಹರಿದ ಪರಿಣಾಮ ಮರಿಯಪ್ಪನ್ ಅಂಗವೈಕಲ್ಯಕ್ಕೆ ಸಿಲುಕಿದ. ಈತನಿಗೆ ಬಾಲ್ಯದಿಂದಲೇ ಕ್ರೀಡೆಯಲ್ಲಿ ಎಲ್ಲಿಲ್ಲದ ಉತ್ಸಾಹ. ಅದರಲ್ಲೂ ವಾಲಿಬಾಲ್ ಈತನ ಫೇವರೆಟ್ ಆಟವಾಗಿತ್ತು. ಆದರೆ ದೈಹಿಕ ಶಿಕ್ಷಕರ ಸಲಹೆ ಮೇರೆಗೆ ಹೈಜಂಪ್ ನತ್ತ ಹೆಚ್ಚು ಗಮನ ಹರಿಸಿದ. 14ನೇ ವ ಯಸ್ಸಿನಲ್ಲಿ ಇತರೆ ಸಾಮಾನ್ಯ ಮಕ್ಕಳ ಜತೆ ಸ್ಪರ್ಧೆಗಿಳಿದ ಮರಿಯಪ್ಪನ್ ದ್ವಿತೀಯ ಸ್ಥಾನ ಪಡೆದು ಎಲ್ಲರನ್ನು ಅಚ್ಚರಿಗೊಳಿಸಿದ.

ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಸಂದರ್ಭದಲ್ಲಿ ಅಥ್ಲೆಟಿಕ್ಸ್ ಕೋಚ್ ಸತ್ಯನಾರಾಯಣ ಅವರು ಈತನ ಪ್ರತಿಭೆಯನ್ನು ಕಂಡರು. ನಂತರ ತನ್ನ 18ನೇ ವಯಸ್ಸಿಗೆ ಬೆಂಗಳೂರಿಗೆ ಆಗಮಿಸಿದ ಮರಿಯಪ್ಪನ್ ಸತ್ಯನಾರಾಯಣ ಅವರ ಮಾರ್ಗದರ್ಶನದಲ್ಲಿ ಹಗಲಿರುಳು ಶ್ರಮವಹಿಸಿದ. ಕಳೆದ ವರ್ಷ ಅಂದರೆ 2015ರಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಹಿರಿಯರ ಮಟ್ಟದಲ್ಲಿ ಸ್ಪರ್ಧಿಸಿದ ಮರಿಯಪ್ಪನ್ ಕಡಿಮೆ ಅವಧಿಯಲ್ಲಿ ವಿಶ್ವದ ನಂಬರ್ ಒನ್ ಪ್ಯಾರಾ ಹೈಜಂಪ್ ಅಥ್ಲೀಟ್ ಆಗಿ ಹೊರಹೊಮ್ಮಿದ. ನಂತರ ಐಪಿಸಿ ತುನಿಶಿಯಾ ಗ್ರಾನ್ ಪ್ರಿಕ್ಸ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಪ್ಯಾರಾ ಒಲಿಂಪಿಕ್ಸ್ ನಲ್ಲಿ ಭಾಗವಹಿಸುವ ಅರ್ಹತೆ ಗಿಟ್ಟಿಸಿಕೊಂಡ.

ಭಾರತದಲ್ಲಿ ದೈಹಿಕವಾಗಿ ಎಲ್ಲ ಸರಿ ಇರುವ ಆಟಗಾರರಿಗೆ ಸಿಕ್ಕಿರುವ ಸೌಲಭ್ಯ ಪ್ರೋತ್ಸಾಹ ಎಲ್ಲರಿಗೂ ಗೊತ್ತಿರುವ ವಿಚಾರವೇ. ಇಂತಹ ಪರಿಸ್ಥಿತಿಯಲ್ಲೂ ತಮ್ಮ ದೈಹಿಕ ನ್ಯೂನ್ಯತೆಗಳನ್ನು ಪಕ್ಕಕ್ಕಿಟ್ಟು ತಮ್ಮ ಛಲದೊಂದಿಗೆ ಈ ಸಾಧನೆ ಮಾಡಿರೋದು ನಮ್ಮೆಲ್ಲರಿಗೂ ಸ್ಫೂರ್ತಿಯೇ ಸರಿ. ಅಂದು ಅಪಘಾತಕ್ಕೆ ಸಿಲುಕಿ ಕಾಲು ಕಳೆದುಕೊಂಡ ಮರಿಯಪ್ಪನ್, ಇತರರಂತೆ ತನ್ನ ಜೀವನ ಮುಗಿಯಿತು ಎಂದು ಭಾವಿಸಿದ್ದರೆ ಇಂದು ಈ ಸಾಧನೆ ಮಾಡಲು ಸಾಧ್ಯವಾಗುತ್ತಲೇ ಇರಲಿಲ್ಲ. ಅದಕ್ಕೆ ಹೇಳೋದು ಸಾಧನೆ ಮಾಡುವ ಛಲವಿದ್ದರೆ ಈ ಅಂಗವೈಕಲ್ಯ ಎಂಬುದು ಎಂದಿಗೂ ಅಡ್ಡಿಯಾಗದು ಎಂದು. ಅದಕ್ಕೆ ಮರಿಯಪ್ಪನ್, ವರುಣ್ ಹಾಗೂ ಪ್ಯಾರಾ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರನಿನಿಧಿಸುತ್ತಿರುವ ಇತರ ಆಟಗಾರರು ಉತ್ತಮ ಉದಾಹರಣೆ.

(ಚಿತ್ರಕೃಪೆ: ಸ್ಪೋರ್ಟ್ಸ್ ಕೀಡಾ)

Leave a Reply