ವಾಘಾ ಗಡಿಯಲ್ಲಿ ಭಾರತದೊಂದಿಗೆ ವಹಿವಾಟಿಗೆ ಸಹಕರಿಸದಿದ್ದರೆ ನಿಮ್ಮ ಮಧ್ಯ ಏಷ್ಯ ಸಂಪರ್ಕ ತಪ್ಪಿಸುತ್ತೇವೆ: ಪಾಕಿಸ್ತಾನಕ್ಕೆ ಅಪ್ಘನ್ ಅಧ್ಯಕ್ಷನ ಎಚ್ಚರಿಕೆ!

ಡಿಜಿಟಲ್ ಕನ್ನಡ ಟೀಮ್:

ವಾಘಾ ಗಡಿಯ ಮೂಲಕ ಭಾರತದೊಂದಿಗೆ ವ್ಯಾಪಾರ ವಹಿವಾಟು ನಡೆಸುವುದಕ್ಕೆ ಪಾಕಿಸ್ತಾನವು ಅಫಘಾನಿಸ್ತಾನಕ್ಕೆ ಅವಕಾಶ ಮಾಡಿಕೊಡದಿದ್ದರೆ, ಮಧ್ಯ ಏಷ್ಯದ ಜತೆ ವ್ಯವಹರಿಸುವುದಕ್ಕೆ ಪಾಕಿಸ್ತಾನಕ್ಕೆ ಅನುಕೂಲ ಒದಗಿಸುತ್ತಿರುವ ಅಫ್ಘನ್ ಗಡಿಯನ್ನು ಮುಚ್ಚುತ್ತೇವೆ! – ಇದು ಪಾಕಿಸ್ತಾನಕ್ಕೆ ಅಫಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಗನಿ ನೀಡಿರುವ ಎಚ್ಚರಿಕೆ.

ರಾಜತಾಂತ್ರಿಕತೆ ಕೆಲಸ ಮಾಡಬೇಕಿರುವು ಹೀಗೆ! ಮಧ್ಯ ಏಷ್ಯದ ಜತೆ ಭಾರತವು ಭೂಸಂಪರ್ಕ ಹೊಂದುವುದಕ್ಕೆ ಅಡ್ಡಿಯಾಗಿ ನಿಂತಿರುವುದೇ ಪಾಕಿಸ್ತಾನ. ಆದರೆ, ಅಫಘಾನಿಸ್ತಾನದ ಜತೆ ಭಾರತವು ಗಟ್ಟಿಮಾಡಿಕೊಂಡಿರುವ ಸ್ನೇಹವು ಕಾರ್ಯತಂತ್ರ ದೃಷ್ಟಿಯಿಂದ ಈಗ ಪಾಕಿಸ್ತಾನಕ್ಕೆ ಇಂಥ ಏಟುಗಳನ್ನು ಕೊಡುತ್ತಿದೆ. ಈ ಹಿಂದಿನ ಮನಮೋಹನ್ ಸಿಂಗ್ ಸರ್ಕಾರದಿಂದ ಹಿಡಿದು ಮೋದಿ ಸರ್ಕಾರದವರೆಗೆ ಅಫ್ಘನ್ ನೀತಿ ಮಾತ್ರ ಉತ್ತಮವಾಗಿಯೇ ಸಾಗುತ್ತಿದೆ. ಈ ಹಿಂದಿನ ಯುಪಿಎ ಸರ್ಕಾರ ಅಫ್ಘನ್ ಮರು ನಿರ್ಮಾಣದಲ್ಲಿ ನಿರ್ಣಾಯಕವಾಗಿ ತೊಡಗಿಸಿಕೊಂಡಿತ್ತಾದರೂ ಅದಕ್ಕೆ ಶಸ್ತ್ರಗಳನ್ನು ನೀಡುವ ವಿಚಾರದಲ್ಲಿ ಹಿಂದೇಟು ಹಾಕಿತ್ತು. ಈಗ ಆ ನಿಟ್ಟಿನಲ್ಲೂ ಪ್ರಗತಿಗಳಾಗುತ್ತಿವೆ.

ಇವೆಲ್ಲದರ ಪರಿಣಾಮ, ಪಾಕಿಸ್ತಾನದ ಸೊಕ್ಕು ಮುರಿಯುವ ಕಾರ್ಯಕ್ಕೆ ಅಫಘಾನಿಸ್ತಾನವೂ ಭಾರತದೊಂದಿಗೆ ಕೈಜೋಡಿಸಿದೆ. ಭಾರತದ ಜತೆ ತಮ್ಮ ಸಂಬಂಧ ಸರಿಯಿಲ್ಲ ಎಂಬ ಕಾರಣಕ್ಕೆ ವಾಘಾ ಗಡಿಯಲ್ಲಿ ಪಾಕಿಸ್ತಾನ ನಿಯಂತ್ರಣಗಳನ್ನು ಹೇರಿದೆ. ಅತ್ತ ಪಾಕಿಸ್ತಾನ ಮತ್ತು ಅಫಘಾನಿಸ್ತಾನದ ನಡುವೆಯೂ ಗಡಿ ಕ್ಯಾತೆ ಇದೆಯಾದರೂ ವ್ಯಾಪಾರ- ವಹಿವಾಟುಗಳಿಗೆ ಮುಕ್ತ ನೀತಿ ಇದೆ. ಹೀಗೆ ಅಫ್ಘನ್ ನಿಂದ ಪಾಕಿಸ್ತಾನವನ್ನು ತಲುಪುವ ವರ್ತಕರಿಗೆ, ಹಾಗೆಯೇ ಮುಂದುವರಿದು ಭಾರತದ ಬೃಹತ್ ಮಾರುಕಟ್ಟೆಗೆ ಪ್ರವೇಶ ಪಡೆಯುವುದಕ್ಕೆ ವಾಘಾ ಗಡಿಯೇ ಅಡ್ಡಿ. ಮುಖ್ಯವಾಗಿ ಅಫ್ಘನ್ ನ ಹಣ್ಣುಗಳನ್ನು ಭಾರತಕ್ಕೆ ಮಾರುವ ಬಯಕೆ ಅದರದ್ದು. ಇದಕ್ಕೆ ಸುಂಕ ವಿನಾಯತಿಗಳನ್ನೂ ಭಾರತ ಸರ್ಕಾರ ನೀಡಿದೆ. ಆದರೆ ವಾಘಾದ ಬಳಿ ಇರುವ ಭಾರತೀಯ ಪಟ್ಟಣ ಅಟ್ಟಾರಿಯಲ್ಲಿ ಹಣ್ಣುಗಳನ್ನು ಇಳಿಸುವುದಕ್ಕೆ ಪಾಕಿಸ್ತಾನ ಅವಕಾಶ ನೀಡುತ್ತಿಲ್ಲ.

ಅಫಘಾನಿಸ್ತಾನ ಹಾಗೂ ಪಾಕಿಸ್ತಾನಗಳಿಗೆ ಇಂಗ್ಲೆಂಡ್ ನ ವಿಶೇಷ ರಾಯಭಾರಿ ಆಗಿರುವ ಒವೆನ್ ಜೆನ್ಕಿನ್ಸ್ ಅವರೊಂದಿಗಿನ ಮಾತುಕತೆಯಲ್ಲಿ ಪಾಕಿಸ್ತಾನಕ್ಕೆ ಈ ಮೇಲಿನ ಎಚ್ಚರಿಕೆ ರವಾನಿಸಿದ್ದಾರೆ ಅಫ್ಘನ್ ಅಧ್ಯಕ್ಷ ಗನಿ. ಅಷ್ಟೇ ಅಲ್ಲ, ಪಾಕಿಸ್ತಾನವು ತನ್ನ ನೆಲದಲ್ಲಿ ಉಗ್ರವಾದವನ್ನು ಉತ್ಪಾದಿಸುತ್ತಿದೆ ಅಂತಲೂ ಹೇಳಿದ್ದಾರೆ. ಇದು ಸಹ, ಪ್ರಧಾನಿ ಮೋದಿ ಹಲವು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಉಗ್ರವಾದದ ವಿಷಯದಲ್ಲಿ ಪಾಕಿಸ್ತಾನವನ್ನು ಏಕಾಂಗಿಯಾಗಿಸುತ್ತಿರುವ ನಡೆಗೆ ಪೂರಕವೇ ಆಗಿದೆ.

ಅಂದಹಾಗೆ ಸೆಪ್ಟೆಂಬರ್ 14ರಂದು ಅಶ್ರಫ್ ಗನಿ ಎರಡು ದಿನಗಳ ಭಾರತದ ಭೇಟಿಗೆ ಬರಲಿದ್ದಾರೆ. ಪ್ರಧಾನಿ ಮೋದಿಯವರನ್ನು ಸಂದರ್ಶಿಸಿ ಹೆಚ್ಚಿನ ಮಿಲಿಟರಿ ಸಹಾಯಕ್ಕೆ ಬೇಡಿಕೆ ಇಡುವ ನಿರೀಕ್ಷೆ ಇದೆಯಲ್ಲದೇ, ನವದೆಹಲಿಯಲ್ಲಿ ಉದ್ಯಮಿಗಳು ಮತ್ತು ಚಿಂತನಕೂಟವನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.

 ಇತ್ತ ಅಫ್ಘನ್ ಆಕ್ರೋಶಕ್ಕೆ ಪ್ರತಿಕ್ರಿಯಿಸಿರುವ ಪಾಕಿಸ್ತಾನವು ‘ಅಫ್ಘಾನಿಸ್ತಾನ ಭಾರತದೊಂದಿಗೆ ವಹಿವಾಟು ನಡೆಸಲು ವಾಘ ಗಡಿಯಲ್ಲಿ ನಿರ್ಬಂಧ ಹೇರಿಲ್ಲ’ ಎಂದು ಪಾಕ್ ವಿದೇಶಾಂಗ ಇಲಾಖೆ ಅಧಿಕಾರಿ ನಫೀಜ್ ಝಕಾರಿಯಾ ಮೂಲಕ ಸ್ಪಷ್ಟನೆ ನೀಡಿದೆಯಾದರೂ, ಇದು ಹೆಸರಿಗಷ್ಟೇ ನಿರ್ಭಂದ ತೆರವು ಎನಿಸಿದೆ. ಏಕೆಂದರೆ ವಾಘಾದವರೆಗೆ ಬಂದು, ಅಫ್ಘನ್ ನ ವಸ್ತುಗಳನ್ನೆಲ್ಲ ಅಲ್ಲಿ ಇಳಿಸಿ, ಪಾಕಿಸ್ತಾನಕ್ಕೆ ಸೇರಿದ ವಾಹನಗಳಲ್ಲಿ ಅವನ್ನಿಟ್ಟು ಭಾರತಕ್ಕೆ ಸಾಗಿಸುವುದಕ್ಕೆ ಅಡ್ಡಿಯಿಲ್ಲವಂತೆ. ಆದರೆ ಇದು ವೆಚ್ಚ ಹೆಚ್ಚಿಸುವುದಲ್ಲದೇ ಹಣ್ಣಿನಂಥ ಕೆಡುವ ವಸ್ತುಗಳ ವಿಷಯದಲ್ಲಿ ದುಬಾರಿಯಾಗಿ ಪರಿಗಣಿಸುತ್ತದೆ ಎಂಬುದು ಗಮನಾರ್ಹ. ಈ ಧೋರಣೆಯನ್ನೇ ಅಫಘಾನಿಸ್ತಾನ ವಿರೋಧಿಸುತ್ತಿದೆ.

Leave a Reply