ಸುಪ್ರೀಂ ಕೋರ್ಟ್ ನಲ್ಲಿ ತೀರ್ಪು ಮಾರ್ಪಾಡು ಅರ್ಜಿ ಸಲ್ಲಿಸಿದ್ದ ಕರ್ನಾಟಕಕ್ಕೆ ಸಿಕ್ಕಿದ್ದು ಮತ್ತದೇ ಸೋಲು

ಡಿಜಿಟಲ್ ಕನ್ನಡ ಟೀಮ್:

ನಮಗೇ ಕುಡಿಯಲು ನೀರಿಲ್ಲ. ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡಿನ ಕೃಷಿಗೆ ನೀರು ಬಿಡಲು ನೀಡಿರುವ ತೀರ್ಪನ್ನು ಮಾರ್ಪಾಡು ಮಾಡಿ ನ್ಯಾಯ ಒದಗಿಸಿ… ಎಂದು ಅರ್ಜಿ ಹಾಕಿದ್ದ ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್ ನಿಂದ ಆಗಿರೋದು ಮತ್ತದೇ ಅನ್ಯಾಯ.

ಪ್ರತಿನಿತ್ಯ ತಮಿಳುನಾಡಿಗೆ 15 ಸಾವಿರ ಕ್ಯೂಸೆಕ್ಸ್ ನಷ್ಟು ನೀರನ್ನು ಹತ್ತು ದಿನಗಳ ಕಾಲ ಬಿಡಬೇಕು ಎಂದು ಸೆ.5 ರಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಈ ತೀರ್ಪನ್ನು ಪರಿಶೀಲಿಸಿ ಮಾರ್ಪಾಡು ಮಾಡಬೇಕು ಎಂದು ಕರ್ನಾಟಕ ಸರ್ಕಾರ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಂತರ ಸುಪ್ರೀಂ ಕೋರ್ಟ್ ನಿಂದ ರಾಜ್ಯಕ್ಕೆ ನ್ಯಾಯ ಸಿಗಬಹುದು ಎಂಬ ನಿರೀಕ್ಷೆಗಳಿತ್ತು. ಆದರೆ, ಸುಪ್ರೀಂ ಕೋರ್ಟ್ ಸೋಮವಾರ ನೀಡಿದ ತೀರ್ಪು ಈ ನಿರೀಕ್ಷೆಗಳನ್ನು ಹುಸಿಯಾಗಿಸುವುದರ ಜತೆಗೆ ಮತ್ತಷ್ಟು ಆಘಾತವನ್ನು ತಂದಿದೆ.

ಕಾರಣ, ರಾಜ್ಯದಿಂದ 15 ಸಾವಿರ ಕ್ಯೂಸೆಕ್ಸ್ ಬದಲಿಗೆ 12 ಸಾವಿರ ಕ್ಯೂಸೆಕ್ಸ್ ಬಿಡಬೇಕು ಎಂದಿದೆ ಸುಪ್ರೀಂ ಕೋರ್ಟ್. ಆ ಮೂಲಕ 3 ಸಾವಿರ ಕ್ಯೂಸೆಕ್ಸ್ ನೀರು ಕಡಿಮೆಯಾಗಿದೆ. ಆದರೆ, ಕರ್ನಾಟಕ ಸೆ.20 ರವರೆಗೆ ನಿತ್ಯ 12 ಸಾವಿರ ಕ್ಯೂಸೆಕ್ಸ್ ನೀರು ಬಿಡಬೇಕು ಎಂದು ಆದೇಶಿಸಿರೋದು ರಾಜ್ಯಕ್ಕೆ ತೀವ್ರ ಆಘಾತ ಉಂಟುಮಾಡಿದೆ.

ಈ ತೀರ್ಪನ್ನು ಲೆಕ್ಕ ಹಾಕಿದಾಗ ಗೊತ್ತಾಗೋದು ಕರ್ನಾಟಕಕ್ಕೆ ಹೆಚ್ಚಿನ ನಷ್ಟ ಆಗಿದೆ ಎಂದು. ಅದು ಹೇಗೆ ಅಂದ್ರೆ, ಸುಪ್ರೀಂ ಕೋರ್ಟಿನ ಈ ಹಿಂದಿನ ಆದೇಶದಂತೆ ಈಗಾಗಲೇ 6 ದಿನಗಳ ಕಾಲ ನೀರನ್ನು ಬಿಟ್ಟಾಗಿದೆ. ಹೀಗಾಗಿ ಉಳಿದ ನಾಲ್ಕು ದಿನಗಳ ಕಾಲ ಮಾತ್ರ 12 ಸಾವಿರ ಕ್ಯೂಸೆಕ್ಸ್ ನೀರು ಬಿಟ್ಟಿದ್ದರೆ, ಪ್ರತಿ ದಿನಕ್ಕೆ 3 ಸಾವಿರ ಕ್ಯೂಸೆಕ್ಸ್ ಉಳಿತಾಯದಂತೆ 12 ಸಾವಿರ ಕ್ಯೂಸೆಕ್ಸ್ ನೀರು ಉಳಿತಾಯವಾಗಬೇಕಿತ್ತು. ಆದರೆ, ನ್ಯಾಯಾಲಯ ಸೆ.20ರವರೆಗೂ ನೀರು ಬಿಡಬೇಕು ಎಂದು ಹೇಳಿರುವುದರಿಂದ 10 ದಿನಗಳ ಕಾಲಾವಧಿ ಜತೆಗೆ ಹೆಚ್ಚುವರಿಯಾಗಿ 4 ದಿನಗಳ ಕಾಲ ಕರ್ನಾಟಕ ನೀರು ಬಿಡಬೇಕಿದೆ. ಅಲ್ಲಿಗೆ ದಿನಕ್ಕೆ 12 ಸಾವಿರ ಕ್ಯೂಸೆಕ್ಸ್ ಅಂದರೆ, ನಾಲ್ಕು ದಿನಕ್ಕೆ 48 ಸಾವಿರ ಕ್ಯೂಸೆಕ್ಸ್ ನೀರು ಬಿಡಬೇಕು. ಹೀಗಾಗಿ ಈ ಹಿಂದಿನ ತೀರ್ಪಿಗಿಂತ ಈಗ ಕರ್ನಾಟಕ ಹೆಚ್ಚುವರಿಯಾಗಿ 3 ಟಿಎಂಸಿ ನೀರನ್ನು ಹೆಚ್ಚುವರಿಯಾಗಿ ಬಿಡಬೇಕಿದೆ. ಹೀಗಾಗಿ ನಮಗೆ ನ್ಯಾಯ ಒದಗಿಸಿ ಎಂದು ಮನವಿ ಇಟ್ಟಿದ್ದ ರಾಜ್ಯಕ್ಕೆ ಕೋರ್ಟ್ ಗಾಯದ ಮೇಲೆ ಬರೆ ಎಳೆದಿದೆ.

ಪರಿಸ್ಥಿತಿ ನಿಯಂತ್ರಣ ತಪ್ಪುತ್ತಿದೆ…

ಇದೇ ವೇಳೆ ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ಹಲ್ಲೆ ಹಾಗೂ ಕನ್ನಡಿಗರ ಆಸ್ತಿಪಾಸ್ತಿ ಮೇಲೆ ದಾಳಿ ನಡೆದಿದ್ದು, ಪರಿಸ್ಥಿತಿ ನಿಯಂತ್ರಣ ತಪ್ಪುವ ಸೂಚನೆಗಳು ವ್ಯಕ್ತವಾಗುತ್ತಿದೆ. ತಮಿಳುನಾಡಿನಲ್ಲಿ ಕನ್ನಡಿಗರ ಮೇಲಿನ ದಾಳಿಯನ್ನು ಖಂಡಿಸಿ ರಾಜ್ಯದಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಮೈಸೂರಿನಲ್ಲಿ ತಮಿಳುನಾಡಿಗೆ ಸೇರಿದ್ದ ಲಾರಿ ಹಾಗೂ ಕಾರಿಗೂ ಬೆಂಕಿ ಹಚ್ಚಿರುವ ಬಗ್ಗೆ ವರದಿಗಳು ಬಂದಿವೆ.

Leave a Reply