ಸಂಜೆಗೆ ತೆರೆದ ಅಂಗಡಿಗಳು, ಸುಪ್ರೀಂ ಆದೇಶ ಪಾಲನೆಯೊಂದೇ ಮಾರ್ಗ ಎಂದ ಮುಖ್ಯಮಂತ್ರಿ, ನಾಳೆ ಸಹಜತೆ ಅಂತ ಪಕ್ಕಾ ಹೇಳುವುದು ಕಷ್ಟ, ವಹಿವಾಟಿಗೆ ಎಷ್ಟು ನಷ್ಟ?, ಪ್ರಧಾನಿ ಟ್ವೀಟ್- ಮಾಧ್ಯಮಗಳಿಗೆ ವಾರ್ತಾ ಇಲಾಖೆ ಮಾರ್ಗದರ್ಶಿ ಸೂತ್ರ

ಡಿಜಿಟಲ್ ಕನ್ನಡ ಟೀಮ್:

ಮಂಗಳವಾರ ಹಗಲಿಡೀ ಸ್ತಬ್ಧವಾಗಿದ್ದ ಬೆಂಗಳೂರಿನಲ್ಲಿ ಸಂಜೆ ವೇಳೆಗೆ ಹಲವು ಪ್ರದೇಶಗಳಲ್ಲಿ ಅಂಗಡಿ ಮುಂಗಟ್ಟುಗಳು ತೆರೆದುಕೊಂಡು ‘ಸಹಜ ಸ್ಥಿತಿ’ಯ ಆಸೆ ಹುಟ್ಟಿಸಿವೆ. ಆದರೆ ಬುಧವಾರವೂ ಶಾಲಾ-ಕಾಲೇಜು ಮತ್ತು ಕಚೇರಿಗಳಿಗೆ ರಜೆ ಇರುವುದರಿಂದ, ನಾಳೆಯ ಪರಿಸ್ಥಿತಿ ಬಗ್ಗೆ ನಿಖರವಾಗಿ ಹೇಳಲಾಗದ ಸ್ಥಿತಿ.

ಮಂಗಳವಾರ ಸಂಪುಟ ಸಭೆ ನಡೆಸಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ‘ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸಲೇಬೇಕಾಗುತ್ತದೆ. ಬುಧವಾರ ಪ್ರಧಾನಿಯವರನ್ನು ಭೇಟಿ ಆಗಲಿದ್ದೇನೆ’ ಎಂಬ ನಿರ್ಧಾರ ಪ್ರಕಟಿಸಿ ಹಿಂಸೆಯಿಂದ ಏನೂ ಸಾಧಿಸಲಾಗದು ಅಂತ ಶಾಂತತೆಗೆ ಮನವಿ ಮಾಡಿದರು.

ಕಾನೂನು ಸುವ್ಯವಸ್ಥೆ ಬಗ್ಗೆ ವಿವರಿಸಿದ ಗೃಹ ಸಚಿವ ಪರಮೇಶ್ವರ ಅವರು ಈವರೆಗೆ ಶಾಂತಿಭಂಗ ಮಾಡುತ್ತಿದ್ದ ಸುಮಾರು 350 ಮಂದಿಯನ್ನು ಬಂಧಿಸಿರುವುದಾಗಿ ಹೇಳಿದ್ದಾರೆ. ಬೆಂಗಳೂರು ನಗರದಲ್ಲಿ ಗಲಭೆಯಲ್ಲಿ ಅಗ್ನಿಗಾಹುತಿ ಆಗಿರುವ ವಾಹನಗಳ ಸಂಖ್ಯೆ 97 ಎಂದಿದ್ದಾರೆ.

ಅತ್ತ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ, ಕರ್ನಾಟಕದಲ್ಲಿ ಉದ್ಭವಿಸಿರುವ ಸ್ಥಿತಿ ವೈಯಕ್ತಿಕವಾಗಿ ನೋವನ್ನುಂಟುಮಾಡಿದೆ ಎಂದು ಹೇಳುತ್ತ ಉಭಯ ರಾಜ್ಯಗಳ ಜನರಲ್ಲಿ ಶಾಂತಿಗೆ ಮನವಿ ಮಾಡಿದ್ದಾರೆ. ಕಾನೂನಿನ ಚೌಕಟ್ಟು ಹಾಗೂ ಪರಸ್ಪರ ಮಾತುಕತೆಗಳ ಮೂಲಕವೇ ಪರಿಹಾರ ಸಾಧ್ಯ ಎಂಬ ಅಭಿಪ್ರಾಯ ಅವರ ಟ್ವೀಟ್ ಸರಣಿಗಳಲ್ಲಿ ವ್ಯಕ್ತವಾಗಿದೆ.

ಕಾವೇರಿ ಪ್ರತಿಭಟನೆ ಹುಟ್ಟುಹಾಕಿರುವ ಹಿಂಸಾಚಾರ ಹಾಗೂ ಬಂದ್ ಸ್ಥಿತಿಯಿಂದಾಗಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಫಾರ್ಚೂನ್ 500 ಕಂಪನಿಗಳು ಕಾರ್ಯನಿರ್ವಹಿಸಲಾಗದ ಸ್ಥಿತಿ ತಲುಪಿದ್ದು, ದಿನವೊಂದರಲ್ಲೇ 22000-25000 ಕೋಚಿ ರುಪಾಯಿಗಳ ನಷ್ಟವನ್ನು ಈ ವಲಯ ಅನುಭವಿಸಿರುವುದಾಗಿ ವ್ಯಾಪಾರಿ ಒಕ್ಕೂಟ ಅಸ್ಸೊಚಾಮ್ ಹೇಳಿದೆ.

ಬೆಂಗಳೂರಿನಲ್ಲೇ ಮುಖ್ಯ ನೆಲೆ ಹೊಂದಿರುವ ಇನ್ಫೊಸಿಸ್, ವಿಪ್ರೊ, ಎಂಪಸಿಸ್, ಫ್ಲಿಪ್ಕಾರ್ಟ್, ಒಲಾಗಳೆಲ್ಲ ಮಂಗಳವಾರ ಬಾಗಿಲು ಮುಚ್ಚಿದ್ದು, ಬುಧವಾರ ಸಹ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಉದ್ಯೋಗಿಗಳಿಗೆ ಮನೆಯಲ್ಲೇ ಇರಲು ಹೇಳಿವೆ.

ಕಾರ್ಮಿಕ ಮುಷ್ಕರವೂ ಸೇರಿದಂತೆ ಈ ತಿಂಗಳು ನಾಲ್ಕು ದಿನ ಅದಾಗಲೇ ವಹಿವಾಟು ಸ್ಥಗಿತಗೊಂಡಿರುವುದು ಬೆಂಗಳೂರಿನ ಬಿಸಿನೆಸ್ ಸ್ನೇಹಿ ವಾತಾವರಣಕ್ಕೆ ಭಾರಿ ಪೆಟ್ಟು ನೀಡಿದೆ.

ಕೇಂದ್ರದ ವಾರ್ತಾ ಮತ್ತು ಪ್ರಸಾರ ಇಲಾಖೆಯು ಕಾವೇರಿ ವಿವಾದವನ್ನು ಬಿತ್ತರಿಸುವಲ್ಲಿ ಮಾಧ್ಯಮಗಳಿಗೆ ಮಾರ್ಗದರ್ಶಿ ಸೂತ್ರಗಳ ಸುತ್ತೋಲೆ ಬಿಡುಗಡೆ ಮಾಡಿದೆ. ವೈಷಮ್ಯಕ್ಕೆ ಎಡೆ ಮಾಡುವ, ಹಿಂಸೆಯನ್ನು ಪ್ರಚೋದಿಸುವ ದೃಶ್ಯಗಳನ್ನು ಪ್ರಸಾರ ಮಾಡದಿರುವಂತೆ ಸೂಚಿಸಿದೆ. ದಂಗೆಯ ದೃಶ್ಯಾವಳಿಗಳನ್ನು ನೇರಪ್ರಸಾರದಲ್ಲಾಗಲ್ಲಿ ಕಡತ ಚಿತ್ರಗಳ ರೂಪದಲ್ಲಾಗಲೀ ಪದೇ ಪದೆ ಪ್ರಸಾರ ಮಾಡುವುದು ಸಲ್ಲ. ಕಾವೇರಿ ಪ್ರತಿಭಟನೆ ಬಗ್ಗೆ ಪ್ರಸಾರ ಮಾಡುವಾಗ ನದಿಪಾತ್ರ ಹಾಗೂ ಕಾನೂನು ಕಾಪಾಡುತ್ತಿರುವ ಪಡೆಗಳ ದೃಶ್ಯವನ್ನೇ ಹೆಚ್ಚು ಬಳಸಲು ಸೂಚಿಸಲಾಗಿದೆ.

Leave a Reply