ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲೇ ಭಾರತಕ್ಕೆ ಮೊದಲ ಮಹಿಳಾ ಪದಕ ತಂದ ದೀಪಾ ಮಲಿಕ್, ಇವರ ಬೆಳ್ಳಿ ಗೆಲುವಿನ ಹಿಂದಿದೆ ಬದುಕಿನ ಛಲಗಾಥೆ!

ಡಿಜಿಟಲ್ ಕನ್ನಡ ಟೀಮ್:

ಕಾವೇರಿ ಪ್ರತಿಭಟನೆಯಲ್ಲಿ ಬೆಂಗಳೂರಿನ ಜನಜೀವನ ಅಸ್ತವ್ಯಸ್ತವಾಗಿರುವ ಈ ಗಳಿಗೆಯಲ್ಲೂ ಸಂಭ್ರಮವೊಂದರತ್ತ ಪುಳಕಿತವಾಗಲೇಬೇಕಿದೆ. ರಿಯೊ ಡಿ ಜನೈರೊನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ನಲ್ಲಿ ದೀಪಾ ಮಲಿಕ್ ಶಾಟ್ಪುಟ್ ಎಸೆತದಲ್ಲಿ ಸೋಮವಾರ ಬೆಳ್ಳಿ ಪದಕ ಗೆದ್ದಿದ್ದಾರೆ. ಪ್ಯಾರಾಲಿಂಪಿಕ್ಸ್ ನಲ್ಲಿ ಪದಕದ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳೆ ಎಂಬ ಖ್ಯಾತಿಗೂ ಭಾಜನರಿವರು.

ಇಬ್ಬರು ಮಕ್ಕಳ ತಾಯಿ ದೀಪಾ ಮಲಿಕ್, ಸೇನಾಧಿಕಾರಿಯ ಪತ್ನಿ. ಈಗ್ಗೆ 17 ವರ್ಷಗಳ ಹಿಂದೆ ಬೆನ್ನುಹುರಿಯ ಟ್ಯೂಮರ್ ಕಾಡಿತು. 31 ಶಸ್ತ್ರಚಿಕಿತ್ಸೆಗಳಾದವು. ಸೊಂಟ- ಕಾಲಿನ ಕಡೆಗಳಲ್ಲಿ 183 ಹೊಲಿಗೆಗಳು ಬಿದ್ದವು. ಸೊಂಟದ ಕೆಳಗೆ ಸಂಪೂರ್ಣ ಆಘಾತಕ್ಕೊಳಗಾಗಿ ನಡೆಯುವುದಕ್ಕೆ ಬರದಂತಾಯಿತು.

ಆದರೇನಂತೆ, ಇವರ ಚೈತನ್ಯಕ್ಕಿಲ್ಲ ವೈಕಲ್ಯ. ಪ್ಯಾರಾಲಿಂಪಿಕ್ಸ್ ನಲ್ಲಿ ಇವರು ಭರ್ಜಿ ಎಸೆತದಲ್ಲೂ ಭಾಗವಹಿಸಿದ್ದರು. ಏಷ್ಯ ಕ್ರೀಡಾಕೂಟದಲ್ಲಿ ಈ ವಿಭಾಗದಲ್ಲೂ ದಾಖಲೆ ಮಾಡಿದ್ದಾರೆ. ಅಂತಾರಾಷ್ಟ್ರೀಯ ಕ್ರೀಡಾ ವೇದಿಕೆಗಳಲ್ಲಿ ಈಜಿನಲ್ಲೂ ಭಾಗಿಯಾಗಿದ್ದಾರೆ. 2011ರ ವಿಶ್ವ ಚಾಂಪಿಯನ್ಶಿಪ್ ನಲ್ಲಿ ಭರ್ಜಿ ಎಸೆತ ಮತ್ತು ಚಕ್ರದೆಸೆತಗಳೆರಡರಲ್ಲೂ ಬೆಳ್ಳಿ ಗೆದ್ದಿದ್ದರು. 2012ರಲ್ಲಿ ಇವರಿಗೆ ಅರ್ಜುನ ಪ್ರಶಸ್ತಿ ಒಲಿದಿತ್ತು.

2008ರಲ್ಲಿ 1 ಕಿ. ಮೀ. ಯಮುನಾ ಪ್ರವಾಹವನ್ನು ಈಜಿದ್ದಕ್ಕೆ ಹಾಗೂ 2013ರಲ್ಲಿ ವಿಶೇಷ ಬೈಕಿನಲ್ಲಿ 58 ಕಿ. ಮೀ. ಕ್ರಮಿಸಿದ್ದಕ್ಕೆ ಇವರ ಹೆಸರು ಲಿಮ್ಕಾ ದಾಖಲೆಯಲ್ಲಿ ಸೇರಿದೆ.

ದೀಪಾ ಮಲಿಕ್ ಸ್ಫೂರ್ತಿದಾಯಕ ಉಪನ್ಯಾಸಗಳನ್ನು ನೀಡುವುದರಲ್ಲೂ ತೊಡಗಿಸಿಕೊಂಡಿದ್ದಾರೆ.

ಈ ಬಾರಿ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತೀಯ ಗಣನೀಯ ಸಾಧನೆಯನ್ನೇ ಮಾಡುತ್ತಿದೆ. ಮರಿಯಪ್ಪನ್ ತಂಗವೇಲು ಚಿನ್ನ ಹಾಗೂ ವರುಣ್ ಸಿಂಗ್ ಭಾಟಿ ಕಂಚು ಗೆದ್ದ ನಂತರ ದೀಪಾರಿಂದ ಬೆಳ್ಳಿ ಲಭಿಸಿದೆ. ಹರ್ಯಾಣ ಸರ್ಕಾರ ದೀಪಾರಿಗೆ ನಾಲ್ಕು ಕೋಟಿ ರುಪಾಯಿಗಳ ಬಹುಮಾನ ಘೋಷಿಸಿದೆ.

Leave a Reply