ಬಂದ್ ಆಗಬೇಕಿರುವ ವಾದವಿದು: ಕರೆ ನೀಡುವುದಕ್ಕೆ ಮಾತ್ರವೇ ಜವಾಬ್ದಾರಿ, ಪರಿಣಾಮಗಳನ್ನು ನಮ್ಮ ಬಳಿ ಕೇಳಬೇಡಿ…

Deserted Streets due to Bandh effect at various places in Bengaluru on Tuesday.

author-geetha‘ನಾವು ಕನ್ನಡಿಗರು ಸಹನಾಶೀಲರು.’ ದನಿಯೆತ್ತರಿಸಿದ ಅವನು.

‘ಹೌದು. ನಾನು ಕನ್ನಡಿಗಳೇ, ನಿಮ್ಮ ಮಾತನ್ನು ಅರ್ಧ ಗಂಟೆಯಿಂದ ಕೇಳಿಸಿಕೊಳ್ಳುತ್ತಿದ್ದೇನೆ.. ಸಹನೆ ಇರುವುದರಿಂದಲೇ..!’

‘ಹೋರಾಟ ಮಾಡದೇ ಏನೂ ದಕ್ಕುವುದಿಲ್ಲ. ಕಾವೇರಿ ನಮ್ಮದು ಅವರು ಕೊಡಿ ಅಂದಾಗಲೆಲ್ಲಾ ಕೊಡಲಾಗುವುದಿಲ್ಲ. ನಮಗೆ ಬೇಡವೇ ನೀರು?’

‘ಬೇಕು. ನಮಗೂ ಬೇಕು. ಅವರಿಗೂ ಬೇಕು.’

‘ಹಾಗಂತ ಕೇಳಿದಾಗಲೆಲ್ಲಾ ಕೊಡಲಾಗುತ್ತದೆಯೇ?’

‘ಆಗೋಲ್ಲ ನಿಜ. ಆದರೆ ಯಾಕೆ ಆಗೊಲ್ಲ ಅಂತ ಕೋರ್ಟಿನಲ್ಲಿ ನಮ್ಮ ಲಾಯರ್ ಗಳು ಹೇಳಬೇಕು. ನಮ್ಮ ನೀರಾವರಿ ಇಲಾಖೆ, ಮುಖ್ಯಮಂತ್ರಿಗಳು, ಕೆ.ಆರ್.ಎಸ್ ಇಂಜಿನಿಯರ್ ಗಳು ಮಾಹಿತಿ ಕೊಡಬೇಕು. ಅದನ್ನು ಇಟ್ಟುಕೊಂಡು ನಮ್ಮ ಲಾಯರ್ ಗಳು ವಾದ ಮಾಡಬೇಕು. ಕೆ.ಆರ್.ಎಸ್ ನಲ್ಲಿ ಎಷ್ಟು ನೀರಿದೆ ಅಂತ ತಮಿಳುನಾಡು ನೇಮಿಸಿರುವ ಲಾಯರ್ ಗಳು ಹೇಳಿದರೆ, ಅದರಲ್ಲಿ ಎಷ್ಟು ಅಡಿ ಹೊಳು (silt!) ಎಂದು ನಮ್ಮ ಲಾಯರ್ ಹೇಳಬೇಕು. ಅವರ ಬೆಳೆ ನಾಶವಾಗುತ್ತಿದೆ ಎಂದು ಹೇಳಿದರೆ, ನಮ್ಮ ರೈತರು ಎರಡನೇ ಬೆಳೆ ಬೆಳೆಯಲೇ ಆಗುತ್ತಿಲ್ಲ.. ಅವರು ಬೆಳೆ ನಾಶವಾಗುತ್ತಿದೆ ಎನ್ನುತ್ತಿರುವುದು ಒಂದು ವರ್ಷದಲ್ಲಿ ಅವರು ಬೆಳೆಯುತ್ತಿರುವ ಮೂರನೇ ಬೆಳೆಗೆ ಎಂದು ನಮ್ಮ ಲಾಯರ್ ಗಳು ಮನವರಿಕೆ ಮಾಡಿಕೊಡಬೇಕು… ಕೊನೆಯಲ್ಲಿ…’

‘ಬಿಡೊಕ್ಕೆ ಆಗೊಲ್ಲ ಅಷ್ಟೇ. ಲಾಯರ್ ಏನು ಹೇಳಿದ್ರು ಅನ್ನೋದಾಗಲೀ, ಏನು ಹೇಳಬೇಕು ಅನ್ನೋದಾಗಲೀ ನಮಗೆ ಬೇಡ. ನಾವು ಬಂದ್ ಮಾಡ್ತೀವಿ. ಟೈರ್ ಸುಡ್ತೀವಿ.. ತಮಿಳು ಮಾತಾನಾಡೋರ್ನ ನಮ್ಮ ರಾಜ್ಯದಿಂದ ಓಡಿಸ್ತೀವಿ. ಅವರ ಕಾರು, ಬಸ್ಸುಗಳನ್ನು ಸುಡ್ತೀವಿ. ತಮಿಳು ಸಿನಿಮಾ ನಮ್ಮ ಊರಲ್ಲಿ ಪ್ರದರ್ಶನ ಆಗದ ಹಾಗೆ ತಡಿತೀವಿ..’

‘ಸರಿ, ಆಗ ನೀವು ಸಹನಾಶೀಲರು ಹೇಗೆ? ಗಲಾಟೆ ಮಾಡ್ತೀವಿ ಅಂತಿದೀರಲ್ಲ…’

‘ನಮ್ಮ ಸಹನೆಗೂ ಮಿತಿಯಿದೆ ಅಲ್ಲವೇ?’

‘ಮಿತಿ ಇದೆ. ಮಿತಿ ಮೀರಿತು ಅಂತ ನೀವು ಹೇಳಿದ್ದೆಲ್ಲಾ ಮಾಡಿದರೆ, ಕಾವೇರಿ ನೀರು ಬಿಡುವುದಿಲ್ಲವೇ ಸರ್ಕಾರ? ಹೀಗೆಲ್ಲಾ ಮಾಡಿದರೆ ನಮಗೇ ನಷ್ಟ ಅಲ್ಲವೇ.. ತಮಿಳುನಾಡಿಗೆ ಏನು ತೊಂದರೆ?’

‘ಹಾಗಂತ ಅಲ್ಲಿ ಹೋಗಿ ಗಲಾಟೆ ಮಾಡೋಕ್ಕೆ ಆಗುತ್ತಾ? ನಿಮಗೆ ಏನು ಅರ್ಥವೇ ಆಗುವುದಿಲ್ಲ ಮೇಡಂ.. ಮೌನ ಮೆರವಣಿಗೆ ಮಾಡಿದ್ರೆ.. ನಿಮ್ಮ ಹಾಗೆ ಲೇಖನ ಬರೆದು ಪ್ರತಿಭಟಿಸಿದರೆ ಯಾರೂ ಕೇರ್ ಮಾಡುವುದಿಲ್ಲ. ಛಾನೆಲ್ಲುಗಳೂ ಕವರ್ ಮಾಡುವುದಿಲ್ಲ. ಕಲ್ಲು ಹೊಡೆದು, ಬೆಂಕಿ ಹಚ್ಚಿದರೆ ಕ್ಯಾಮೆರಾ ಹಿಡಿದು ನಮ್ಮ ಹಿಂದೆ ಛಾನೆಲ್ಲಿನವರು ಬರ್ತಾರೆ… ಟಿ.ವಿಯಲ್ಲಿ ಸುದ್ದಿ ಆಗುತ್ತೆ..’

‘ಅಷ್ಟೇ. ಸುದ್ದಿ ಆಗುತ್ತೆ. ಜನಕ್ಕೆ ತೊಂದರೆ ಆಗುತ್ತೆ. ನಷ್ಟ ಆಗುತ್ತೆ. ಆದರೆ ಕಾವೇರಿ ನೀರು ಹರಿಸಲೇಬೇಕು.’

‘ನಿಮ್ಮ ಜೊತೆ ಮಾತಾಡೋಕ್ಕೆ ನಂಗೆ ಟೈಮಿಲ್ಲ ಮೇಡಂ. ನಿಮ್ಮಿಂದ ಏನೂ ಮಾಡೋಕ್ಕೆ ಆಗೊಲ್ಲ. ನಾವು ಮಾಡೋದನ್ನು ಒಪ್ಪೊಲ್ಲ… ಟೈಂ ವೇಸ್ಟು ನಂಗೆ…’

ಆ ಹೋರಾಟಗಾರ ರಸ್ತೆಗಿಳಿದು ಹೋರಾಟ ಮಾಡಲು ಹೊರಟು ಹೋದ.

‘ಕಾವೇರಿಗಾಗಿ ರೊಚ್ಚಿಗೆದ್ದ ಕನ್ನಡಿಗ’ ಎಂದು ಅವನು ಸಾರ್ವಜನಿಕ ಆಸ್ತಿ ನಾಶ ಮಾಡುವ ಫೋಟೋ, ವಿಡಿಯೋ, ನ್ಯೂಸ್ ಛಾನೆಲ್ಲುಗಳಲ್ಲಿ ಬಿತ್ತರಗೊಳ್ಳುತ್ತದೆ. ನಾಯಕನಾದ ಹೆಮ್ಮೆ ಅವನಿಗೆ.

ಹೋರಾಟಕ್ಕೆ, ಬಂದ್ ಗೆ ಕರೆ ನೀಡಿದ ನಾಯಕರನ್ನು ಕೇಳಿದರೆ ‘ನಾವು ಶಾಂತಿಯುತ ಬಂದ್ ಗೆ ಕರೆ ನೀಡಿದ್ದು ಈ ಹಿಂಸಾಚಾರದಲ್ಲಿ ನಮ್ಮ ಕೈವಾಡವಿಲ್ಲ’ಎನ್ನುತ್ತಾರೆ.

ಬೆಂಕಿಯ ಉರಿ, ಟೈರ್ ಸುಡುತ್ತಿರುವುದು, ಕಲ್ಲು ಎಸೆಯುತ್ತಿರುವುದು, ಗಾಡಿಗಳನ್ನು ಉರುಳಿಸುತ್ತಿರುವುದು ತೋರಿಸುತ್ತೀರಲ್ಲ ಎಂದು ಸುದ್ದಿ ವಾಹಿನಿಯವರನ್ನು ಕೇಳಿದರೆ, ‘ಆಗುತ್ತಿರುವುದನ್ನು ತೋರಿಸುತ್ತಿದ್ದೇವೆ. ನಾವು ಮಾಡಿಸುತ್ತಿದ್ದೇವೆಯೇ? ನಮ್ಮನ್ನು ಯಾಕೆ ಅನ್ನುತ್ತೀರಿ?’ ಎನ್ನುತ್ತಾರೆ. ತೋರಿಸಿದ್ದೇ ತೋರಿಸುತ್ತಾ, ಹೇಳಿದ್ದೇ ಹೇಳುತ್ತಾ, ಯಾರದೋ ಕಾರನ್ನು ಉರುಳಿಸುತ್ತಿರುವಾಗ ಕ್ಯಾಮೆರಾ ಫೋಕಸ್ ಮಾಡಿ ಅದನ್ನು ಚಿತ್ರೀಕರಿಸಿದರೆ ಆ ಕೃತ್ಯಕ್ಕೆ ಪ್ರೋತ್ಸಾಹವಲ್ಲದೆ ಮತ್ತೇನು?

ಅನಾನುಕೂಲಕ್ಕೆ ಒಳಗಾದವರ ಸಂಖ್ಯೆ ಹೆಚ್ಚು ಆದಷ್ಟು, ನಮ್ಮ ಬಂದ್ ಹೆಚ್ಚು ಯಶಸ್ವಿ ಆಯಿತು ಎನ್ನುವ ಮನೋಭಾವ.

‘ನಾವು ರೈಲ್ ರೊಕೋ ಮಾಡುತ್ತೇವೆ. ಕಾವೇರಿ ನೀರು ಹರಿಸಲು ಬಿಡುವುದಿಲ್ಲ’ ಎಂಬ ಹೇಳಿಕೆ ನೀಡುತ್ತಾರೆ. ಕನ್ನಡ ಚಳುವಳಿ ನಾಯಕರು. ರೈಲ್ ರೊಕೋ ಮಾಡಿದರೆ ರೈಲಿನಲ್ಲಿ ಪ್ರಯಾಣ ಮಾಡುವವರಿಗೆ ಅನಾನುಕೂಲವೇ ಹೊರತು, ನೀರು ಹರಿದು ಹೋಗುವುದು (ಬಿಡುವುದು) ನಿಲ್ಲುವುದಿಲ್ಲ.

ಬಂದ್, ಸ್ಟ್ರೈಕ್, ಕಲ್ಲು ತೂರಾಟ, ಅಂಗಡಿ, ಹೋಟೆಲ್ಲು, ಫ್ಯಾಕ್ಟರಿ, ಆಫೀಸು, ಶಾಲಾ, ಕಾಲೇಜು ಎಲ್ಲಾ ಬಂದ್. ಅಷ್ಟು ನಷ್ಟ! ಇಷ್ಟು ನಷ್ಟ!  ಆಟೋ ಇಲ್ಲ, ಟ್ಯಾಕ್ಸಿ ಇಲ್ಲ… ಬಸ್ ಮೊದಲೇ ಇಲ್ಲ… ಬಂದ್ ಯಶಸ್ವಿ! ಮಾಡಿದ್ಯಾಕೆ? ತಮಿಳು ನಾಡಿಗೆ ನೀರು ಬಿಡಬಾರದೆಂದು. ನೀರು ಬಿಡಲಿಲ್ಲವೇ? ಬಿಟ್ಟರು. ನ್ಯಾಯಾಲಯ ಹೇಳಿದಷ್ಟು ನೀರು ಬಿಟ್ಟರು, ಹೇಳಿದಷ್ಟು ದಿನ ಬಿಡುತ್ತಾರೆ ಕೂಡ. ಮತ್ತೇ?

‘ನಮ್ಮ ವಿರೋಧ ತೋರಿಸಲು ನಮಗೆ ಬೇರೆ ಮಾರ್ಗ ಗೊತ್ತಿಲ್ಲ’ ಎಂದು ವಾಟಾಳ್ ನಾಗರಾಜ್ (ಕರೆ ಕೊಡುವ ನಾಯಕ!) ಅವರೇ ಹೇಳಿದ್ದಾರೆ. ಇವರ ಕರೆಗೆ, ನಡೆಗೆ, ಪ್ರಾಮುಖ್ಯ ಕೊಡುವುದನ್ನು ಮಿಡಿಯಾದವರು ಬಿಡಬೇಕು.

ನೀವು ಬಂದ್ ಗೆ ಕರೆ ಕೊಡುತ್ತೀರಿ. ಬಂದ್ ಯಶಸ್ವಿ ಎಂದು ಬೆನ್ನು ತಟ್ಟಿಕೊಳ್ಳುತ್ತೀರಿ. ಸಾರ್ವಜನಿಕ ಆಸ್ತಿಗೆ ಆದ ನಷ್ಟ, ಬಂದ್ ವೇಳೆ ಗುಂಡಾಯಿಸಂ ಇಂದ ಆದ ಹಾನಿಗೆ ನಾವು ಹೊಣೆಯಲ್ಲ ಅನ್ನುತ್ತೀರಿ. ಲೂಟಿ ಆಗುತ್ತದೆ, ಕಲ್ಲು ತೂರಾಟ ಆಗುತ್ತದೆ. ಯಾವುದಕ್ಕೂ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ. ಲಾ ಅಂಡ್ ಆರ್ಡರ್ ನಿಯಂತ್ರಿಸುವುದು ಪೊಲೀಸರ ಕರ್ತವ್ಯ ಅನ್ನುತ್ತೀರಿ. ಗುಂಪನ್ನು ಚದುರಿಸಲು ಅವರು ಲಾಠಿ ಬೀಸುತ್ತಾರೆ, ಗುಂಡು ಹಾರಿಸುತ್ತಾರೆ.. ಆಗ ಅದು ಪೊಲೀಸ್ ದೌರ್ಜನ್ಯವಾಗುತ್ತದೆ. ನಷ್ಟ ಪರಿಹಾರ ಎಂದು ಸರ್ಕಾರವನ್ನೇ ಕೇಳುತ್ತೇವೆ. ಇದರಲ್ಲಿ ನಿಮ್ಮ ಜವಾಬ್ದಾರಿ ಏನು? ಕಲ್ಲು ತೂರಾಟ, ಜನರಿಗೆ ಅನಾನುಕೂಲ ನೀವು ಮಾಡುವುದಿಲ್ಲ, ನಿಮ್ಮ ಶಿಷ್ಯರು ಮಾಡಿರಬಹುದು… ಆದರೆ ಸಮಾಜಘಾತಕ ವ್ಯಕ್ತಿಗಳು ಪ್ರತಿ ಬಾರಿ ಬಂದ್ ಆದಾಗಲೂ ಈ ಬಗೆಯ ಕೃತ್ಯಗಳನ್ನು ಎಸಗುತ್ತಾರೆ. ಅದಕ್ಕೆ ಹೊಣೆ ಯಾರು?

ಬ್ರಿಟಿಷರು ನಮ್ಮನ್ನು ಆಳುತ್ತಿದ್ದ ಕಾಲದಲ್ಲಿ ಬಂದ್ ಗೆ ಕರೆ ನೀಡುತ್ತಿದ್ದರು ಗಾಂಧೀಜಿ. ಅದರಿಂದ ನಷ್ಟವಾಗುತ್ತಿದ್ದದ್ದು ಬ್ರಿಟಿಷ್ ಸರಕಾರಕ್ಕೆ. ಆದರೆ ಈಗ ಬಂದ್ ಕರೆಯಿಂದ ನಷ್ಟ ಆಗುವುದು ನಮಗೆ, ನಮ್ಮ ಜನಕ್ಕೆ. ಬೆಂಗಳೂರಿನ ರಸ್ತೆಗಳಲ್ಲಿ ಗಲಾಟೆ ಮಾಡುತ್ತಿರುವ ಜನಕ್ಕೆ, ರೈತರ ಸಂಕಷ್ಟ ಏನು ಎಂಬ ಅರಿವು ಇದ್ದಂತೆ ಇಲ್ಲ. ಬಂದ್, ಬಂದ್ ನಿಂದ ಆಗುವ ಹಾನಿ, ನಷ್ಟ ಎಲ್ಲಾ ಪುಟಗಟ್ಟಲೇ ಬರೆಯಬಹುದು. ನಮ್ಮ ಸರ್ಕಾರ, ಆ ಸರ್ಕಾರ ನೇಮಿಸಿರುವ ಲಾಯರ್ ಗಳು ಯಾವ ಯಾವ ಪಾಯಿಂಟ್ ಇಟ್ಟುಕೊಂಡು ಹೇಗೆ ವಾದ ಮಾಡಬೇಕೆಂದು ಕೂಡ ಪುಟಗಟ್ಟಲೆ ಬರೆಯಬಹುದು. ಬರೆದಿದ್ದನ್ನು ಓದಲೂಬಹುದು. ಆದರೆ ಈ ವಿಷಯವಾಗಿ ಹುಟ್ಟಿಕೊಂಡಿರುವ ಕೆಲವು ವಾಕ್ಯಗಳ ಜೋಕುಗಳನ್ನು (whatsapp ಹಾಗೂ fbಯಲ್ಲಿ ಹರಿದಾಡುತ್ತಿರುವ) ಓದಿದರೆ ನಗು ಬರುವುದಿರಲಿ ಕೋಪ ಉಕ್ಕಿ ಬರುತ್ತದೆ. ಎಲ್ಲವೂ ಹಾಸ್ಯವೇ? ಎಲ್ಲದಕ್ಕೂ ಹಾಸ್ಯವೇ?

ಯಾವುದಕ್ಕೆ ಹಾಸ್ಯ ಮಾಡಬೇಕು ಎಂಬ ಪರಿಜ್ಞಾನ ನಮ್ಮ ಜನಕ್ಕೆ ಇರಬೇಕು. ‘ಹೆಚ್ಚು ನೀರು ಕುಡಿಯುವ ಪ್ರಾಣಿ ಯಾವುದು?’ ‘ಹೊಡೆಯುತ್ತಿದ್ದರೆ ಅಮ್ಮ ಎನ್ನಬೇಡಿ.. ಮತ್ತಷ್ಟು ಹೊಡೆತ ಬಿದ್ದೀತು’ ಎಂಬ ಜೋಕು.. ಒಂದು ಜೋಕೇ?

ರಸ್ತೆಗಿಳಿದು ಹಾನಿ ಮಾಡಿ, ಯಾವುದೇ ವಿಷಯದಲ್ಲಿ ಗೆಲುವು ಸಾಧಿಸಿದ್ದು ಓದಿಲ್ಲ, ಕಂಡಿಲ್ಲ. ನಾಜೂಕಾದ ನೀರಿನ ವಿಷಯದಲ್ಲಿ ಖಂಡಿತಾ ಸಾಧ್ಯವಿಲ್ಲ. ರಾಜಕೀಯ ಮಾಡದೆ, ಮಾತುಕತೆಯಲ್ಲಿ ಪರಿಹಾರ ಕಂಡುಕೊಳ್ಳಬೇಕು. ನಮ್ಮ ಹಿತಾಸಕ್ತಿ ಕಾಪಾಡಲು ಬಲಿಷ್ಠ ನಾಯಕರಿರಬೇಕು.

ಕರ್ನಾಟಕ, ತಮಿಳುನಾಡು ಒಂದೇ ದೇಶದ ಎರಡು ರಾಜ್ಯಗಳು. ನದಿಗೆ ಯಾವ ರಾಜ್ಯದ ಹಂಗೂ ಇಲ್ಲ. ಕಾವೇರಿ ಆಗಲಿ, ಕೃಷ್ಣೇ ಆಗಲಿ… ಗಂಗೆಯಾಗಲಿ, ತುಂಗೆಯಾಗಲೀ ಹುಟ್ಟುವುದು, ಹರಿದು ಹೋಗಿ ಸಮುದ್ರ ಸೇರುವುದು ಪ್ರಕೃತಿ ನಿಯಮ. ಹಂಚಿ ತಿನ್ನುವುದು ನಮ್ಮ ಧರ್ಮ. ಹಾಗೆಂದು ಸದಾ ಬಿಟ್ಟುಕೊಡುವುದೇ ಆದರೆ ಅನ್ಯಾಯವಾಗುತ್ತದೆ. ಅನ್ಯಾಯವಾಗದಿರಲಿ ಎಂದು ಟ್ರಿಬ್ಯುನಲ್ಲು, ಕೋರ್ಟು… ಆದರೆ ಅಲ್ಲೂ ಅನ್ಯಾಯವಾದರೆ? ಆಗಬಾರದು, ಆಗಬಾರದು ಅಂದರೆ ರಾಜಕೀಯ ಮಾಡಬಾರದು. ಭಗವಂತ ಎಲ್ಲರಿಗೂ ಸದ್ಬುದ್ಧಿ ಕೊಡಲಿ. ಕೊನೆಯಲ್ಲಿ ನ್ಯಾಯ ಖಂಡಿತಾ ಇದ್ದೇ ಇರುತ್ತದೆ.

‘ಬೇವು ಬಿತ್ತಿ ಮಾವು ಬೆಳೆವ ತವಕ ಬೇಡ ಮಾನವ…’ ಮಾವು ಬೇಕೆಂದರೆ ಮಾವಿನ ಸಸಿಯನ್ನೇ ನೆಡಬೇಕು.

Leave a Reply