ಇದೀಗ ಕಾವೇರಿದೆ ರಾಜಕೀಯ ವಾಗ್ಸಮರ, ಹೊಣೆಗಾರಿಕೆ ಕೊಡವಿಕೊಳ್ಳುವಲ್ಲಿ ಪರಸ್ಪರ ಆರೋಪಗಳೇ ಅಸ್ತ್ರ

ಕಾವೇರಿ ಪ್ರತಿಭಟನೆಯ ಗಲಭೆ ಸಂತ್ರಸ್ತ ಸ್ಥಳಗಳಿಗೆ ಬುಧವಾರ ಗೃಹ ಸಚಿವ ಪರಮೇಶ್ವರ್ ಭೇಟಿ

 

ಡಿಜಿಟಲ್ ಕನ್ನಡ ಟೀಮ್:

ಕಾವೇರಿ ನೀರಿನ ವಿವಾದ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳ ಕಾಲ ಭುಗಿಲೆದ್ದಿದ್ದ ಜನರ ಆಕ್ರೋಶ ಬುಧವಾರ ಕ್ರಮೇಣವಾಗಿ ಕಡಿಮೆಯಾಗಿ ಜನ ಜೀವನ ಸಹಜ ಸ್ಥಿತಿಗೆ ಮರಳಿದೆ. ಇದೀಗ ಕಾವೇರಿ ವಿಚಾರವಾಗಿ ರಾಜಕೀಯ ನಾಯಕರು ಒಬ್ಬರ ಮೇಲೆ ಒಬ್ಬರು ಆರೋಪ ಮಾಡುತ್ತಾ ತಮ್ಮನ್ನು ತಾವು ಸಮರ್ಥಿಸಿಕೊಳ್ಳುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ.

ಕಾವೇರಿ ವಿಚಾರವಾಗಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಹಾಗೂ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರ ಭಿನ್ನ ಹೇಳಿಕೆಗಳಿಂದ ಜೆಡಿಎಸ್ ಪಕ್ಷದ ದ್ವಂದ್ವ ನೀತಿ ಬಗ್ಗೆ ಬಿಜೆಪಿ ನಾಯಕ ಪ್ರಹಲ್ಲಾದ್ ಜೋಷಿ ಟೀಕಿಸಿದ್ದರು. ಹೀಗಾಗಿ ಈ ವಿಚಾರದ ಬಗ್ಗೆ ತಮ್ಮ ಹಾಗೂ ತಮ್ಮ ತಂದೆಯ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ. ಈ ಬಗ್ಗೆ ಅವರು ಹೇಳಿರೋದಿಷ್ಟು…

‘ಪ್ರಹ್ಲಾದ್ ಜೋಷಿ ಅವರು ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಲಿ, ಕಾವೇರಿ ವಿಷಯದಲ್ಲಿ ದೇವೇಗೌಡರ ಬದ್ಧತೆಯನ್ನು ಪ್ರಶ್ನಿಸಲು ಸಾಧ್ಯವಿಲ್ಲ. ಕಾವೇರಿ ವಿಚಾರವಾಗಿ ಅಕ್ಟೋಬರ್ 18 ರಂದು ಹೊರಬರಲಿರುವ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪಿನ ಹಿನ್ನೆಲೆಯಲ್ಲಿ ದೇವೇಗೌಡರು ನ್ಯಾಯಾಲಯದ ಆದೇಶದಂತೆ ನೀರು ಬಿಡಲಿ ಎಂದು ಹೇಳಿದ್ದಾರೆ. ಹೀಗೆ ಮಾಡುವ ಮೂಲಕ ರಾಜ್ಯದ ಪಾಲಿಗೆ ಹೆಚ್ಚು ನೀರು ದೊರಕುವಂತಾಗಲಿ ಎಂಬುದು ಅವರ ಆಶಯ. ರಾಜ್ಯದ ಜನತೆಯ ವಿಷಯವಾಗಿ ಅವರಿಗಿರುವ ವೀಕ್ ನೆಸ್ ಇದು. ಇನ್ನು ಜನರಿಗೆ ತೊಂದರೆ ಆಗುವ ದೃಷ್ಠಿಕೋನದಲ್ಲಿ ತಮಿಳುನಾಡಿಗೆ ನೀರು ಬಿಡೋದು ಬೇಡ ಅಂತಾ ನಾನು ಹೇಳಿದ್ದು ನಿಜ. ನ್ಯಾಯಾಲಯದ ತೀರ್ಪಿನಿಂದ ನೋವಾಗಿದೆ. ಹೀಗಾಗಿ ಈ ತೀರ್ಪಿನ ವಿರುದ್ಧ ಬಹಿರಂಗವಾಗಿ ಮಾತನಾಡಿದರೆ ಕಟಕಟೆಯಲ್ಲಿ ನಿಲ್ಲಿಸುತ್ತಾರೆ. ಹೀಗಾಗಿ ವಿಧಾನಮಂಡಲದ ತುರ್ತು ಅಧಿವೇಶನ ಕರೆಯಿರಿ. ಅಲ್ಲಿ ನಾವು ಈ ಬಗ್ಗೆ ಮಾತನಾಡಲು ಸಾಧ್ಯ.’

ಹೀಗೆ ಕುಮಾರಸ್ವಾಮಿ ತಮ್ಮ ಪಕ್ಷದ ನಿಲುವು ಸಮರ್ಥಿಸಿಕೊಂಡು ವಿಧಾನಮಂಡಲ ಅಧಿವೇಶನ ಕರೆಯುವಂತೆ ಸರ್ಕಾರವನ್ನು ಆಗ್ರಹಿಸಿದರೆ, ಮತ್ತೊಂದೆಡೆ ಬಿಜೆಪಿ ಮುಖಂಡ ಜಗದೀಶ್ ಶೆಟ್ಟರ್ ಅವರು ಸರ್ಕಾರವನ್ನು ದೂಷಿಸುತ್ತಾ ಮತ್ತೆ ನ್ಯಾಯಾಲಯದಲ್ಲಿ ಪುನರ್ ಪರಿಶೀಲನಾ ಅರ್ಜಿ ಹಾಕಬೇಕು ಅಂದ್ರು. ಅವರ ಮಾತುಗಳು ಹೀಗಿವೆ…

‘ತಮಿಳುನಾಡಿಗೆ ನೀರು ಬಿಡುವಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶದಲ್ಲಿ ತಲೆಬುಡವಿಲ್ಲ. ರಾಜ್ಯದ ಪರಿಸ್ಥಿತಿಯನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವುದರಲ್ಲಿ ಕಾನೂನು ತಂಡ ಸಂಪೂರ್ಣವಾಗಿ ಸೋತಿದೆ. ಇನ್ನು ಪರಿಸ್ಥಿತಿ ಅರ್ಥ ಮಾಡಿಕೊಳ್ಳುವಲ್ಲಿಯೂ ಕೋರ್ಟ್ ವಿಫಲವಾಗಿದೆ. ನ್ಯಾಯಾಲಯದ ಮುಂದೆ ಸರ್ಕಾರ ಸದ್ಭಾವನಾ ನಡೆಯಾಗಿ ತಮಿಳುನಾಡಿಗೆ ಪ್ರತಿನಿತ್ಯ 10 ಸಾವಿರ ಕ್ಯೂಸೆಕ್ಸ್ ನೀರು ಬಿಡುತ್ತೇವೆ ಎಂದು ಹೇಳಿದ್ದೆ ತಪ್ಪು. ಹೀಗಾಗಿ ನ್ಯಾಯಾಲಯ ಈ ತೀರ್ಪು ಕೊಟ್ಟಿದೆ. ಆದ್ದರಿಂದ ರಾಜ್ಯದ ಸಂಕಷ್ಟವನ್ನು ವಿವರಿಸಲು ನ್ಯಾಯಾಲಯದ ಮುಂದೆ ಮತ್ತೊಂದು ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಬೇಕು.’

ಹೀಗೆ ಜೆಡಿಎಸ್ ಮತ್ತು ಬಿಜೆಪಿ ಸರ್ಕಾರದ ಮೇಲೆ ಗೂಬೆ ಕೂರಿಸಿದರೆ, ಕಾಂಗ್ರೆಸ್ ಸರ್ಕಾರ ಮಾತ್ರ ಇಲ್ಲಿ ದೂಷಿಸಿದ್ದು ಪ್ರಧಾನಿ ನರೇಂದ್ರ ಮೋದಿ ಅವರನ್ನು. ಈ ವಿಚಾರವಾಗಿ ಮಾತನಾಡಿದ ಬೃಹತ್ ಕೈಗಾರಿಕ ಸಚಿವ ಆರ್.ವಿ ದೇಶಪಾಂಡೆ ಹೇಳಿದಿಷ್ಟು…

‘ಕಾವೇರಿ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸುವುದಕ್ಕೆ ಮಧ್ಯಪ್ರವೇಶಿಸಲು ಪ್ರಧಾನಿ ನರೇಂದ್ರ ಮೋದಿ ಹಿಂದೇಟು ಹಾಕುತ್ತಿದ್ದಾರೆ. ಕಾನೂನಿನ ಮೂಲಕ ವಿವಾದ ಬಗೆಹರಿಯಬೇಕು ಎಂದು ಪ್ರಧಾನಿ ಹೇಳಿದ್ದಾರೆ. ಕಾನೂನಿನಿಂದ ಸಮಸ್ಯೆ ಬಗೆಹರಿಯುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಪ್ರಧಾನಿ ಎರಡೂ ರಾಜ್ಯಗಳ ಮಧ್ಯ ಪ್ರವೇಶಿಸಿ ಸಂಧಾನ ಮಾಡಿ ವಿಷಯ ಇತ್ಯರ್ಥ ಪಡಿಸಬಹುದು. ಆದರೆ ಪ್ರಧಾನಿ ಆ ಪ್ರಯತ್ನವನ್ನು ಮಾಡುತ್ತಿಲ್ಲ.’

Leave a Reply