ಅಪ್ಘನ್- ಭಾರತ ಸ್ನೇಹ ಸೊಗಸು, ಪಾಕಿಸ್ತಾನಕ್ಕೆ ಹೊಟ್ಟೆ ತೊಳಸು:  ‘ಉಗ್ರವಾದ ಸಂಗ- ವ್ಯಾಪಾರ ಭಂಗ’ವೆಂಬ ಪಾಕ್ ಧೋರಣೆ ವಿರುದ್ಧ ಒಂದಾಗುತ್ತಿರುವ ಉಭಯರು

ಡಿಜಿಟಲ್ ಕನ್ನಡ ಟೀಮ್:

ಅಫಘಾನಿಸ್ತಾನ ಅಧ್ಯಕ್ಷ ಅಶ್ರಫ್ ಗನಿ ಬುಧವಾರ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ನಂತರದ ಜಂಟಿ ಹೇಳಿಕೆಯಲ್ಲಿ ಭಾರತ-ಅಫ್ಘನ್ ಸ್ನೇಹ ದಿನೇ ದಿನೆ ಬಲವಾಗುತ್ತಿರುವುದನ್ನು ಸೂಚಿಸುವ ಹಲವು ಅಂಶಗಳು ಹೊರಬಿದ್ದವು.

ಭಾರತ ಮತ್ತು ಅಫಘಾನಿಸ್ತಾನಗಳೆರಡನ್ನೂ ಕಾರ್ಯತಂತ್ರದ ದೃಷ್ಟಿಯಿಂದ ಬೆಸೆದಿರುವ ಮುಖ್ಯ ಅಂಶವೇ ಪಾಕಿಸ್ತಾನ ಅರ್ಥಾತ್, ಪಾಕಿಸ್ತಾನದ ಬಗ್ಗೆ ಎರಡೂ ದೇಶಗಳು ಹೊಂದಿರುವ ಸಮಾನ ಕಳವಳ. ಕಳೆದ ಕೆಲದಿನಗಳಿಂದ ಎಲ್ಲ ಅಂತಾರಾಷ್ಟ್ರೀಯ ಮಹತ್ವದ ಭೇಟಿಗಳಲ್ಲೂ ಪಾಕಿಸ್ತಾನವನ್ನು ಟೀಕಿಸುತ್ತಲೇ ಬಂದಿರುವ, ಅದನ್ನು ಜಾಗತಿಕ ಸಮುದಾಯದ ಎದುರು ಏಕಾಂಗಿಯಾಗಿಸುವ ಪ್ರಯತ್ನದಲ್ಲಿ ಸ್ಪಷ್ಟವಾಗಿ ತೊಡಗಿಕೊಂಡಿದ್ದಾರೆ ಪ್ರಧಾನಿ ಮೋದಿ. ಇಂದಿನ ಅಫ್ಘನ್ ಅಧ್ಯಕ್ಷರ ಜತೆಗಿನ ಮಾತುಕತೆ ನಂತರದ ಜಂಟಿ ಹೇಳಿಕೆಯಲ್ಲೂ ಪ್ರಾರಂಭದ ಅಂಶ ಅದೇ ಆಗಿದೆ.

‘ಅಫಘಾನಿಸ್ತಾನ ಮತ್ತು ಭಾರತಗಳನ್ನು ಗುರಿಯಾಗಿಸುತ್ತಿರುವ ಉಗ್ರವಾದಿಗಳಿಗೆ ಬೆಂಬಲ, ಪ್ರಾಯೋಜಕತ್ವ, ಸುರಕ್ಷಿತ ಸ್ವರ್ಗ ಒದಗಿಸುತ್ತಿರುವ ‘ಸಂಬಂಧಪಟ್ಟವರು’ ಅದನ್ನು ತಕ್ಷಣವೇ ನಿಲ್ಲಿಸುವಂತೆ ಜಂಟಿ ಹೇಳಿಕೆ ಒತ್ತಾಯಿಸಿದೆ.’ ಸಂಬಂಧಪಟ್ಟವರು ಎಂಬುದು ಪಾಕಿಸ್ತಾನವನ್ನು ಉದ್ದೇಶಿಸಿದ್ದು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲವಷ್ಟೆ.

ಉಳಿದಂತೆ, ಭಾರತ- ಅಫಘಾನಿಸ್ತಾನಗಳ ನಡುವೆ ಅಪರಾಧಿಗಳ ಹಸ್ತಾಂತರ ಒಪ್ಪಂದಕ್ಕೆ ಸಹಿ ಬಿದ್ದಿದೆ. ಭಾರತದಿಂದ ಯುದ್ಧ ಹೆಲಿಕಾಪ್ಟರುಗಳನ್ನು ಪಡೆದಿರುವ ಅಫಘಾನಿಸ್ತಾನವು ಇನ್ನಷ್ಟು ಮಿಲಿಟರಿ ಸಹಾಯವನ್ನು ಪಡೆಯುವುದನ್ನೇ ಈ ಭೇಟಿಯ ಮುಖ್ಯ ಉದ್ದೇಶವಾಗಿಸಿಕೊಂಡಿತ್ತು ಎಂದು ಭೇಟಿ ಪೂರ್ವದಲ್ಲಿ ವಿಶ್ಲೇಷಣೆಗಳಿದ್ದವು. ಆದರೆ ಜಂಟಿ ಹೇಳಿಕೆಯಲ್ಲಿ ರಕ್ಷಣಾ ವಿಭಾಗದ ಬೆಳವಣಿಗೆ ಕುರಿತೇನೂ ಪ್ರಸ್ತಾಪಿಸಿಲ್ಲ. ಆದರೆ ಶಿಕ್ಷಣ, ಆರೋಗ್ಯ, ಕೃಷಿ, ಮೂಲಸೌಕರ್ಯ, ಕೌಶಲಾಭಿವೃದ್ಧಿ, ಮಹಿಳಾ ಸಶಕ್ತೀಕರಣ ಹಾಗೂ ಪ್ರಜಾಪ್ರಭುತ್ವದ ಸಂಸ್ಥೆಗಳನ್ನು ಬಲಪಡಿಸುವುದಕ್ಕೆ ಅಫಘಾನಿಸ್ತಾನಕ್ಕೆ 1 ಬಿಲಿಯನ್ ಡಾಲರ್ ಸಹಾಯ ನೀಡಲಿದೆ ಭಾರತ. ಔಷಧ ಪದಾರ್ಥಗಳನ್ನು ಅಗ್ಗದ ಬೆಲೆಗೆ ಒದಗಿಸುವುದಾಗಿಯೂ ಭಾರತ ಭರವಸೆ ನೀಡಿದೆ.

ಚಹಬರ್ ಬಂದರಿನ ಅಭಿವೃದ್ಧಿ ಮೂಲಕ ಭಾರತವು ಇರಾನ್ ಮುಖೇನ ಅಫಘಾನಿಸ್ತಾನವನ್ನು ತಲುಪುವ ಯೋಜನೆಯ ಶೀಘ್ರಗತಿಗೆ ಉಭಯರೂ ಬದ್ಧತೆ ವ್ಯಕ್ತಪಡಿಸಿದ್ದಾರೆ. ಹಾಗೆ ನೋಡಿದರೆ ಅಫಘಾನಿಸ್ತಾನದಿಂದ ಭಾರತಕ್ಕೆ ಬೇಕಿರುವುದು ಪಾಕಿಸ್ತಾನದ ವಿರುದ್ಧ ಬಲ ಹಾಗೂ ವ್ಯಾಪಾರಕ್ಕೆ ಮಾರ್ಗಸೇತುವಾಗುವುದು. ಮೊದಲನೆಯದನ್ನು ಅಫಘಾನಿಸ್ತಾನ ಮಾಡುತ್ತಲೇ ಇದೆ. ವ್ಯಾಪಾರ ಮಾರ್ಗ ಕುದುರಿಸಿಕೊಳ್ಳುವ ಎರಡನೇ ಯತ್ನದಲ್ಲಿ ಪಾಕಿಸ್ತಾನವನ್ನು ಮಾತುಕೇಳಿಸುವುದಕ್ಕೆ ಅಫ್ಘನ್ ಅನ್ನು ಸಾಧನವಾಗಿ ಬಳಸಿಕೊಳ್ಳುವ ಪ್ರಯತ್ನದಲ್ಲಿದೆ ಭಾರತ. ಕೆಲದಿನಗಳ ಹಿಂದಷ್ಟೇ ಅಫಘಾನಿಸ್ತಾನ ಅಧ್ಯಕ್ಷ, ವಾಘಾ ಗಡಿಯಲ್ಲಿ ಭಾರತದೊಂದಿಗೆ ವಹಿವಾಟಿಗೆ ಅಡ್ಡಿಯಾದರೆ ಪಾಕಿಸ್ತಾನಕ್ಕೆ ಮಧ್ಯ ಏಷ್ಯ ತಲುಪಿಕೊಳ್ಳುವ ಮಾರ್ಗ ತಪ್ಪಿಸುವುದಾಗಿ ಎಚ್ಚರಿಸಿದ್ದ ಬಗ್ಗೆ ಓದಿದ್ದಿರಿ. ಅದಕ್ಕೆ ಪಾಕಿಸ್ತಾನವೂ ಪ್ರತಿಕ್ರಿಯಿಸಿ, ವಾಘಾ ಗಡಿ ಬಳಿ ಭಾರತಕ್ಕೆ ಹಣ್ಣುಗಳನ್ನು ತಲುಪಿಸುವುದಕ್ಕೆ ತಾವೇನೂ ಅಡ್ಡಿಪಡಿಸಿಲ್ಲ ಎಂದು ಹೇಳಿತ್ತು.

ಇಲ್ಲೊಂದು ಅರ್ಧಸತ್ಯದ ಸರ್ಕಸ್ಸಿದೆ. ಅದೇನೆಂದರೆ ವಾಘಾ ಬಳಿಯ ಭಾರತದ ಪ್ರದೇಶ ಅಟ್ಟಾರಿಗೆ ಅಫಘಾನಿಸ್ತಾನದ ಟ್ರಕ್ಕುಗಳು ನೇರವಾಗಿ ತಲುಪುವಂತಿಲ್ಲ. ಗಡಿಯ ಬಳಿ ಹಣ್ಣುಗಳನ್ನೆಲ್ಲ ಟ್ರಕ್ಕಿನಿಂದ ಇಳಿಸಿ, ಮತ್ತೊಂದರ ಮೇಲೆ ವರ್ಗಾಯಿಸಿ ನಂತರ ಗಡಿಗೆ ಸಾಗಿಸಲಾಗುತ್ತದೆ. ಇಲ್ಲಿ ನಷ್ಟ ಹಾಗೂ ವೆಚ್ಚ ಹೆಚ್ಚಳದ ಬಿಸಿ ತಾಗುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಮಧ್ಯ ಏಷ್ಯ ಗಡಿಗೆ ಪಾಕಿಸ್ತಾನದ ಪ್ರವೇಶ ಹಾಗೂ ಇತ್ತ ಭಾರತದ ಗಡಿಗೆ ಅಫಘಾನಿಸ್ತಾನದ ವ್ಯಾಪಾರ ಸಂಪರ್ಕ ಒಪ್ಪಿಗೆಯಲ್ಲಿ ಈ ಹಿಂದೆ ಅಫಘಾನಿಸ್ತಾನವು ದಡ್ಡತನವೊಂದನ್ನು ಮೆರೆದಿದೆ. ಅದೆಂದರೆ, ಅದು ಹೇಗೋ ಅಫಘಾನಿಸ್ತಾನದ ಹಣ್ಣಿನ ಟ್ರಕ್ಕುಗಳು ಭಾರತಕ್ಕೆ ಸರಕು ನೀಡಬಹುದಾದರೂ ತಿರುಗಿ ಖಾಲಿ ಹೋಗಬೇಕು! ಅರ್ಥಾತ್ ಭಾರತದ ಪದಾರ್ಥಗಳನ್ನು ಅಫಘಾನಿಸ್ತಾನಕ್ಕೆ ಒಯ್ಯುವಂತಿಲ್ಲ. ಬೇಕಾದರೆ ಹಿಂತಿರುಗುವ ಮಾರ್ಗದಲ್ಲಿ ಪಾಕಿಸ್ತಾನದ ವಸ್ತುಗಳನ್ನು ಒಯ್ಯಬಹುದಾಗಿದೆ. ಈ ನಿಯಮ ಬದಲಾಗಿ, ಭಾರತದ ವಸ್ತುಗಳನ್ನು ಆಮದು ಮಾಡಿಕೊಂಡುಹೋಗುವ ಅವಕಾಶವಿರಬೇಕೆಂಬ ಅಫಘಾನಿಸ್ತಾನದ ಬೇಡಿಕೆಯನ್ನು ಪಾಕಿಸ್ತಾನ ಪುರಸ್ಕರಿಸುತ್ತಿಲ್ಲ. ಭಾರತದ ಮೇಲಿನ ದ್ವೇಷವೇ ಇದಕ್ಕೆ ಕಾರಣ.

ಈ ವಿಷಯದಲ್ಲೂ ಮುಂದಿನ ದಿನಗಳಲ್ಲಿ ಪಾಕಿಸ್ತಾನದ ಮೇಲೆ ಒತ್ತಡ ಹೆಚ್ಚಿಸುವ ದೃಷ್ಟಿ ಭಾರತಕ್ಕಿದೆ. ಆಹಾರ ಕೊರತೆಯಿರುವ ಅಫಘಾನಿಸ್ತಾನಕ್ಕೆ ಭಾರತವು 1.7 ಲಕ್ಷ ಟನ್ ಗೋದಿ ನೀಡಲು ಮುಂದಾದರೂ, ತನ್ನ ಮಾರ್ಗವನ್ನು ಬಳಸಿಕೊಳ್ಳುವುದಕ್ಕೆ ಪಾಕಿಸ್ತಾನ ಅನುವು ಮಾಡಿಕೊಡಲಿಲ್ಲ ಎಂದು ಭಾರತದ ವಿದೇಶ ಕಾರ್ಯದರ್ಶಿ ಎಸ್. ಜಯಶಂಕರ್, ಪಾಕಿಸ್ತಾನವನ್ನು ಕಟಕಟೆಯಲ್ಲಿ ನಿಲ್ಲಿಸುವ ಕೆಲಸ ಮಾಡಿದ್ದಾರೆ.

ಭವಿಷ್ಯದಲ್ಲಿ ಭಾರತ ಮತ್ತು ಅಫಘಾನಿಸ್ತಾನಗಳು ಉಗ್ರವಾದದ ವಿಚಾರದಲ್ಲಿ ಮಾತ್ರವಲ್ಲದೇ ವಹಿವಾಟಿಗೆ ಅಡ್ಡವಾಗಿರುವ ಪಾಕಿಸ್ತಾನದ ಧೋರಣೆಯನ್ನೂ ಪ್ರಶ್ನೆಗೊಳಪಡಿಸಲಿರುವುದು ಖಚಿತ.

1 COMMENT

Leave a Reply