ಮಾನವ ಹಕ್ಕು ಎಂಬ ಅಸ್ತ್ರ ಉಪಯೋಗಿಸಿಕೊಂಡು ಕದಡಿದ ಕಾಶ್ಮೀರದಲ್ಲಿ ಮೀನು ಹಿಡಿಯಲು ಸಿದ್ಧವಾಗಿದ್ದ ವಿಶ್ವಸಂಸ್ಥೆಗೆ ಭಾರತ ಕೊಟ್ಟ ಉತ್ತರವೇನು?

ಡಿಜಿಟಲ್ ಕನ್ನಡ ಟೀಮ್:

ಭಾರತ-ಪಾಕಿಸ್ತಾನಗಳ ಜಮ್ಮು-ಕಾಶ್ಮೀರ ಗಡಿಯ ಆಚೀಚಿನ ಪ್ರದೇಶಗಳೆರಡಕ್ಕೂ ವಿಶ್ವಸಂಸ್ಥೆಯ ಮಾನವ ಹಕ್ಕು ಏಜೆನ್ಸಿಗೆ ಅನಿಯಂತ್ರಿತ ಸಂಪರ್ಕ ನೀಡಬೇಕೆಂಬ ವಿಶ್ವಸಂಸ್ಥೆ ಒತ್ತಾಯವನ್ನು ಭಾರತ ಮಂಗಳವಾರ ತಿರಸ್ಕರಿಸಿದೆ.

ಕಾಶ್ಮೀರವನ್ನು ಪಾಕ್ ಆಕ್ರಮಿತ ಕಾಶ್ಮೀರದೊಂದಿಗೆ ಸಮೀಕರಿಸುವುದಕ್ಕೆ ಭಾರತದ ತಕರಾರು. ‘ಜಮ್ಮು-ಕಾಶ್ಮೀರದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಉಂಟಾಗಿರುವುದಕ್ಕೆ ಕಾರಣ ಹಲವು ಉಗ್ರಕೃತ್ಯಗಳ ಸಂಬಂಧ ಬೇಕಾಗಿದ್ದ ಹಿಜ್ಬುಲ್ ಮುಜಾಹಿದೀನ್ ಉಗ್ರಸಂಘಟನೆಯ ಸ್ವಘೋಷಿತ ನಾಯಕನ ಹತ್ಯೆ. ನಂತರದ ಬೆಳವಣಿಗೆಗಳಲ್ಲಿ ಪಾಕಿಸ್ತಾನ ಪ್ರೇರಿತವಾದ ಗಡಿಯಾಚೆಗಿನ ಪ್ರಚೋದನೆಯೂ ಸೇರಿದೆ.’

‘ಇದನ್ನು ಪಾಕ್ ಆಕ್ರಮಿತ ಕಾಶ್ಮೀರದೊಂದಿಗೆ ತಳುಕು ಹಾಕುವ ಅಗತ್ಯವಿಲ್ಲ. ಏಕೆಂದರೆ ಜಮ್ಮು-ಕಾಶ್ಮೀರದಲ್ಲಿ ಚುನಾಯಿತ ಸರ್ಕಾರವನ್ನು ಭಾರತ ಹೊಂದಿದೆ. ಆದರೆ ಪಾಕ್ ಆಕ್ರಮಿತ ಕಾಶ್ಮೀರವನ್ನು ಪಾಕಿಸ್ತಾನದ ಇಚ್ಛೆಗನುಗುಣವಾಗಿ ನೇಮಕವಾದ ರಾಯಭಾರಿ ಮೂಲಕ ನಿಯಂತ್ರಿಸಲಾಗುತ್ತಿದೆ. ಜಮ್ಮು-ಕಾಶ್ಮೀರವು ಬಹುತ್ವ ಮತ್ತು ಸೆಕ್ಯುಲರ್ ಮೌಲ್ಯಗಳಲ್ಲಿ ರೂಪುಗೊಂಡಿದೆ ಹಾಗೂ ಸ್ವತಂತ್ರ ಮಾಧ್ಯಮವಿದೆ. ಆದರೆ ಪಾಕ್ ಆಕ್ರಮಿತ ಕಾಶ್ಮೀರವು ರಹಸ್ಯ ಪ್ರಾಂತ್ಯವಾಗಿದ್ದು ಜಗತ್ತಿಗೆ ಭಯೋತ್ಪಾದನೆಯನ್ನು ರಫ್ತು ಮಾಡುತ್ತಿದೆ’ ಎಂದು ವ್ಯತ್ಯಾಸಗಳನ್ನು ಸಾರಿದೆ.

ಪಾಕಿಸ್ತಾನದ ಚಿತಾವಣೆಯಿಂದ ವಿಶ್ವಸಂಸ್ಥೆಯ ಸತ್ಯಶೋಧನಾ ಸಮಿತಿಯೊಂದು ಜಮ್ಮು-ಕಾಶ್ಮೀರಕ್ಕೆ ಆಗಮಿಸುವ ಉತ್ಸಾಹ ತೋರಿತ್ತು. ಇಂಥ ನಡೆಗಳಿಂದ ಜಮ್ಮು-ಕಾಶ್ಮೀರದ ವಿವಾದಗ್ರಸ್ತ ಲಕ್ಷಣವನ್ನು ಗಟ್ಟಿಯಾಗಿಸಿ, ವಿಶ್ವಸಂಸ್ಥೆ ರೂಪದಲ್ಲಿ ಪಾಶ್ಚಾತ್ಯ ಶಕ್ತಿಗಳು ಪ್ರವೇಶಿಸುವ ಸ್ಪಷ್ಟ ಪ್ರಯತ್ನ ಇದಾಗಿದ್ದರಿಂದ, ಭಾರತದ ವಿದೇಶ ಸಚಿವಾಲಯವು ಈ ಮೇಲಿನಂತೆ ಉತ್ತರಿಸಿ ನಿರಾಕರಣೆ ತೋರಿದೆ.

‘ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿರುವುದು ಭಯೋತ್ಪಾದನೆಯಿಂದ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈ ಕಮಿಷನರ್ ನೀಡುತ್ತಿರುವ ಹೇಳಿಕೆಗಳನ್ನು ಗಮನಿಸಿದಾಗ ಅವರಿಗೆ ಕಾಶ್ಮೀರದ ಸ್ಥಿತಿ ಬಗ್ಗೆ ವಿಘಟನಾತ್ಮಕ ಅಭಿಪ್ರಾಯಗಳು ಹೋಗಿಸುವುದು ತಿಳಿಯುತ್ತದೆ. ಭಾರತದ ಭದ್ರತಾ ಪಡೆ ಎಷ್ಟೊಂದು ಜೀವಹಾನಿ ಹಾಗೂ ನಷ್ಟ ಅನುಭವಿಸಿದೆ ಎಂಬುದನ್ನು ಗಣನೆಗೆ ತೆಗೆದುಕೊಂಡರೆ ಕಾಶ್ಮೀರ ಸಂಘರ್ಷದಲ್ಲಿ ಭಾರತ ವಹಿಸಿರುವ ಸಂಯಮ ಅರ್ಥವಾಗುತ್ತದೆ. ಉಗ್ರವಾದದಿಂದ ಜಾಗತಿಕವಾಗಿ ದಮನವಾಗುತ್ತಿರುವ ಮಾನವ ಹಕ್ಕುಗಳ ಬಗ್ಗೆ ಚರ್ಚೆ ಆಗಲಿ’ ಅಂತ ವಿಶ್ವಸಂಸ್ಥೆಗೆ ಖಡಕ್ ಉತ್ತರ ನೀಡಿದೆ ಭಾರತ.

Leave a Reply