ಆಪ್ತವಾಗುತ್ತಿದ್ದಂತೆ ಭಾರತ-ಅಮೆರಿಕ ಆಲಿಂಗನ, ಅತ್ತ ಚೀನಾ-ಪಾಕ್-ರಷ್ಯ ಸಮೀಕರಣ… ಹೇಗಿರಲಿದೆ ಭವಿಷ್ಯದ ಕಂಪನ?

ಡಿಜಿಟಲ್ ಕನ್ನಡ ವಿಶೇಷ:

ಇತ್ತ ಭಾರತವು ತನ್ನ ಜಾಗತಿಕ ಕಾರ್ಯತಂತ್ರದ ಭಾಗವಾಗಿ ಅಮೆರಿಕದೊಂದಿಗೆ ಹೆಚ್ಚು ಗುರುತಿಸಿಕೊಳ್ಳುತ್ತಿದ್ದಂತೆ, ಅತ್ತ ಚೀನಾ-ಪಾಕಿಸ್ತಾನ-ರಷ್ಯಾ ಎಂಬ ಕಾರ್ಯತಂತ್ರ ಸಮೂಹವೊಂದು ರೂಪುಗೊಳ್ಳುತ್ತಿದೆಯಾ? ಜಾಗತಿಕ ರಾಜಕೀಯದಾಟದ ಹೊಸ ಕೌತುಕವಿದು.

ಚೀನಾ- ಪಾಕಿಸ್ತಾನದ ಮಿತ್ರತ್ವ ಗೊತ್ತಿರುವುದೇ ಬಿಡಿ. ಆದರೆ ಭಾರತದ ಸಾಂಪ್ರದಾಯಿಕ ಸ್ನೇಹಿತನಾಗಿದ್ದ ರಷ್ಯ ಸಹ ಈಗ ಮಿಲಿಟರಿ ಸಹಭಾಗಿತ್ವದಲ್ಲಿ ಪಾಕಿಸ್ತಾನವನ್ನು ಬಳಸಿಕೊಳ್ಳುತ್ತಿರುವ ಸುದ್ದಿಯೊಂದಕ್ಕೆ ಪುಕ್ಕ ಬಂದಿದೆ. ಹಾಗೂ ಇದೇ ರಷ್ಯ, ಸೌತ್ ಚೀನಾ ಸಮುದ್ರದ ವಿಷಯದಲ್ಲಿ ಚೀನಾ ಪರವೇ ನಿಂತು ಅದರೊಂದಿಗೆ ಜಂಟಿ ನೌಕಾಭ್ಯಾಸದಲ್ಲೂ ಪಾಲ್ಗೊಂಡಿದೆ.

ಇದೇ ವರ್ಷ ಪಾಕಿಸ್ತಾನ ಮತ್ತು ರಷ್ಯಾ ಮೊದಲ ಬಾರಿಗೆ ಜಂಟಿಯಾಗಿ ಮಿಲಿಟರಿ ಶಸ್ತ್ರಭ್ಯಾಸ ನಡೆಸಲು ನಿರ್ಧರಿಸಿವೆ ಅಂತ ‘ಪಾಕಿಸ್ತಾನ್ ಟ್ರಿಬ್ಯೂನ್’ ಪತ್ರಿಕೆ ವರದಿ ಮಾಡಿದೆ. ‘ಫ್ರೆಂಡ್ ಶಿಪ್ 2016’ ಎಂಬ ಹೆಸರಲ್ಲಿ ಉಭಯ ದೇಶಗಳ 200 ಸೈನಿಕರು ಒಟ್ಟಿಗೆ ಸೇರಿ ಜಂಟಿಯಾಗಿ ಮಿಲಿಟರಿ ಶಸ್ತ್ರಭ್ಯಾಸ ನಡೆಸಲಿದ್ದಾರೆ ಎಂಬ ಮಾಹಿತಿ ಸ್ವತಃ ಪಾಕಿಸ್ತಾನ ಹಿರಿಯ ಸೇನಾ ಅಧಿಕಾರಿ ಹೇಳಿದ್ದಾರೆ. ಆದರೆ ಯಾವಾಗ ಈ ಜಂಟಿ ಶಸ್ತ್ರಭ್ಯಾಸ ನಡೆಸಲಾಗುವುದು ಎಂಬುದರ ಬಗ್ಗೆ ನಿಖರ ಮಾಹಿತಿ ಬಿಟ್ಟುಕೊಟ್ಟಿಲ್ಲ. ಅಷ್ಟೇ ಅಲ್ಲದೆ ಪಾಕಿಸ್ತಾನವು ರಷ್ಯಾದಿಂದ ಯುದ್ಧ ವಿಮಾನ ಖರೀದಿಗೆ ಸಿದ್ಧತೆಗಳನ್ನು ನಡೆಸುತ್ತಿದ್ದು, ಈ ಕುರಿತಂತೆ ರಷ್ಯಾಗೆ ಪತ್ರವನ್ನು ಬರೆದಿದೆ. ಇದರೊಂದಿಗೆ ಪಾಕಿಸ್ತಾನ ಹಾಗೂ ರಷ್ಯಾ ಜತೆಗಿನ ಮಿಲಿಟರಿ ಒಪ್ಪಂದಗಳು ಹೆಚ್ಚುವ ಲಕ್ಷಣಗಳು ಗೋಚರಿಸುತ್ತಿವೆ.

ಕೆಲ ತಿಂಗಳ ಹಿಂದಷ್ಟೇ ಪಾಕಿಸ್ತಾನಕ್ಕೆ ಕಡಿಮೆ ವೆಚ್ಚದಲ್ಲಿ ಎಫ್ 16 ಯುದ್ಧ ವಿಮಾನ ನೀಡುವ ವಿಚಾರವನ್ನು ಅಮೆರಿಕ ಕೈಬಿಟ್ಟಿತ್ತು. ಇದರಿಂದ ತೀವ್ರ ಹಿನ್ನಡೆ ಅನುಭವಿಸಿದ್ದ ಪಾಕಿಸ್ತಾನ ಈಗ ಅಮೆರಿಕದ ಸಾಂಪ್ರದಾಯಿಕ ಎದುರಾಳಿ ರಷ್ಯಾದೊಂದಿಗೆ ಕೈಜೋಡಿಸಲು ಸಜ್ಜಾಗಿದೆ. ಭಾರತ ಮತ್ತು ಅಮೆರಿಕ ನಡುವಣ ಮಿಲಿಟರಿ ಒಪ್ಪಂದ ಹೆಚ್ಚುತ್ತಿರುವ ಬೆನ್ನಲ್ಲೇ ಪಾಕಿಸ್ತಾನ ರಷ್ಯಾದ ಸಹಾಯ ಹಸ್ತ ಬೇಡುತ್ತಿದೆ. ಈ ಸಲುವಾಗಿ ಕಳೆದ 15 ತಿಂಗಳಿನಿಂದ ಪಾಕಿಸ್ತಾನದ ಭೂ ಸೇನೆ, ವಾಯು ಹಾಗೂ ನೌಕಾ ಸೇನೆ ಮುಖ್ಯಸ್ಥರು ರಷ್ಯಾಗೆ ಹಲವು ಬಾರಿ ಭೇಟಿ ನೀಡುತ್ತಲೇ ಇದ್ದಾರೆ. ಈ ಸಂದರ್ಭದಲ್ಲಿ ರಷ್ಯಾದಿಂದ ಎಂಐ-35 ಸರಣಿಯ ನಾಲ್ಕು ಯುದ್ಧ ಹೆಲಿಕಾಪ್ಟರ್ ಗಳನ್ನು ಖರೀದಿಗೂ ಸಹಿ ಹಾಕಲಾಗಿದೆ. ಜತೆಗೆ ಮುಂದಿನ ದಿನಗಳಲ್ಲಿ ಎಸ್ ಯು- 35 ಯುದ್ಧ ವಿಮಾನವನ್ನು ಖರೀದಿಸುವ ಇಂಗಿತ ವ್ಯಕ್ತಪಡಿಸಿದೆ ಪಾಕಿಸ್ತಾನ.

ಹಾಗೆಂದು ಭಾರತದೊಂದಿಗಿನ ರಷ್ಯಾ ಸಮೀಕರಣವೇನೂ ಮೇಲ್ನೋಟಕ್ಕೆ ಬದಲಾಗಿಲ್ಲ. ಅಣು ಸ್ಥಾವರ ಸೇರಿದಂತೆ ಹಲವು ವಿಚಾರಗಳಲ್ಲಿ ಭಾರತದೊಂದಿಗಿನ ಬೆಸುಗೆ ಬಲಗೊಳ್ಳುತ್ತ ಸಾಗಿದೆ. ಆದರೆ ರಾಜತಾಂತ್ರಿಕತೆಯಲ್ಲಿ ಮಿತ್ರತ್ವ- ವೈರತ್ವಗಳು ಶಾಶ್ವತವಲ್ಲ. ಅದಕ್ಕಿಂತ ಹೆಚ್ಚಾಗಿ ಶಸ್ತ್ರಾಸ್ತ್ರ ವ್ಯಾಪಾರವೆಂಬುದು ಅಮೆರಿಕ ಮತ್ತು ರಷ್ಯಾಗಳೆರಡಕ್ಕೂ ದೊಡ್ಡ ಕಸಬು. ಈವರೆಗೆ ಭಾರತ ರಷ್ಯದ ಮೇಲೆ ಮಿಲಿಟರಿ ಸಾಧನಗಳಿಗೆ ಅತಿ ಎಂಬಂತೆ ಆತುಕೊಂಡಿತ್ತು. ಯಾವಾಗ ಭಾರತವು ಅಮೆರಿಕದತ್ತ ತಿರುಗಿತೋ, ಆಗ ಪಾಕಿಸ್ತಾನದಲ್ಲಿ ರಷ್ಯ ತನ್ನ ಮಾರುಕಟ್ಟೆ ಕಂಡುಕೊಳ್ಳುತ್ತಿದೆ ಅಂತಲೂ ವಿಶ್ಲೇಷಿಸಬಹುದು.

ಈ ಚೀನಾ-ಪಾಕ್-ರಷ್ಯ ಎಂಬ ಹೊಸ ಸಮೀಕರಣದೆದುರು ಪಾಕ್-ಅಮೆರಿಕದ ಹಳೆ ಸಮೀಕರಣವನ್ನು ನೆನಪಿಸಿಕೊಂಡಾಗ ಭವಿಷ್ಯದ ಸಾಧ್ಯತೆಗಳ ಬಗ್ಗೆ ಕೌತುಕ ಏಳುತ್ತದೆ. ಏಕೆಂದರೆ, ಇಸ್ಲಾಮಿಕ್ ಉಗ್ರವಾದವು ತನ್ನ ಬುಡಕ್ಕೆ ಬಿಸಿ ತರುವವರೆಗೂ ಅಮೆರಿಕವು ಪಾಕಿಸ್ತಾನವನ್ನು ಮುದ್ದಿಸಿಕೊಂಡಿತ್ತು. ಹಾಗಾದರೆ ಇವತ್ತು ಅಮೆರಿಕಕ್ಕೆ ಮುಟ್ಟಿರುವ ಬಿಸಿ, ನಾಳೆ ಚೀನಾಕ್ಕೂ ತಾಗದೇ? ಅಂಥ ಸೂಚನೆಗಳಿವೆ!

ಕೆಲವು ದಿನಗಳ ಹಿಂದಷ್ಟೇ ಕಿರ್ಗಿಜ್ ನ ರಾಜಧಾನಿಯಲ್ಲಿರುವ ಚೀನಾದ ರಾಯಭಾರಿ ಕಚೇರಿ ಮೇಲೆ ಉಗ್ರರು ಆತ್ಮಹತ್ಯಾ ಬಾಂಬ್ ದಾಳಿ ನಡೆಸಿದ್ದಾರೆ. ಪ್ರಸ್ತುತ ಈ ಕೃತ್ಯದ ಜವಾಬ್ದಾರಿಯನ್ನು ಯಾವುದೇ ಉಗ್ರ ಸಂಘಟನೆ ಹೊತ್ತಿಲ್ಲವಾದರೂ, ಬೀಜಿಂಗ್ ಅಧಿಕಾರಿಗಳು ಮಾತ್ರ ಈ ದಾಳಿಯನ್ನು ತುರ್ಕಿಸ್ತಾನ ಇಸ್ಲಾಮಿಕ್ ಪಾರ್ಟಿ (ಟಿಐಪಿ) ನಡೆಸಿದೆ ಎಂದು ಆರೋಪಿಸಿದೆ. ಈ ಟಿಐಪಿ ಸಂಘಟನೆಯು ಸಹ ಪಾಕಿಸ್ತಾನ ಗಡಿಯಲ್ಲಿರುವ ಗುಡ್ಡಗಾಡು ಪ್ರದೇಶದಿಂದಲೇ ತನ್ನ ಬಹುತೇಕ ಕಾರ್ಯಾಚರಣೆ ನಡೆಸುತ್ತಿದೆ. ಚೀನಾವನ್ನು ಗುರಿಯಾಗಿಸಿ ನಡೆದಿರುವ ದಾಳಿಯಿಂದ ಚೀನಾದ ಯ್ಯುಗುರ್ ತೀವ್ರಗಾಮಿಗಳಿಗೂ ಹಾಗೂ ಅಲ್ ಖೈದಾ ಮತ್ತು ಇಸ್ಲಾಮಿಕ್ ಸ್ಟೇಟ್ ನಂತಹ ಜಾಗತಿಕ ಜಿಹಾದಿ ಸಂಘಟನೆಗಳ ಜತೆ ಸಂಪರ್ಕವಿರುವ ಸೂಚನೆಗಳಿವೆ.

ಇನ್ನೊಂದೆರಡು ಬಾಂಬು ಬಿದ್ದು, ಈ ಇಸ್ಲಾಮಿಕ್ ಉಗ್ರವಾದ ಚೀನಾವನ್ನು ತೀವ್ರವಾಗಿ ಕಾಡಿದ್ದೇ ಆದಲ್ಲಿ, ಪಾಕಿಸ್ತಾನದ ಜತೆಗಿನ ಅದರ ಬಾಂಧವ್ಯ ಯಾವ ರೂಪ ತಾಳಲಿದೆ ಎಂಬ ಕುತೂಹಲವೊಂದು ಸದ್ಯಕ್ಕೆ ಕಾಡುತ್ತಿದೆ.

ಇದೇ ವಿರೋಧಾಭಾಸವೇ ಮುಂದೊಂದು ದಿನ ಚೀನಾ-ಪಾಕ್-ರಷ್ಯ ಮೈತ್ರಿಯನ್ನು ಮುರಿದೀತಾ?

Leave a Reply