ನ್ಯಾಯಾಧೀಶರ ನೇಮಕ ವಿಳಂಬ: ತಪ್ಪು ನಮ್ಮದಲ್ಲ… ಹೈಕೋರ್ಟುಗಳದ್ದು ಎಂದ ಕೇಂದ್ರ ಸರ್ಕಾರ

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್…

ಡಿಜಿಟಲ್ ಕನ್ನಡ ಟೀಮ್:

ಸದ್ಯ ಹೈಕೋರ್ಟ್ ನ್ಯಾಯಾಧೀಶರ ನೇಮಕ ವಿಳಂಬ ದೊಡ್ಡ ಸಮಸ್ಯೆಯಾಗಿ ಚರ್ಚೆಯಾಗುತ್ತಿದೆ. ಈ ವಿಚಾರವಾಗಿ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಟಿ.ಎಸ್ ಠಾಕೂರ್ ಪ್ರಧಾನಿ ಸಮ್ಮುಖದಲ್ಲೇ ಕಣ್ಣೀರು ಹಾಕಿದ್ದು ಉಂಟು. ಈ ಮಧ್ಯೆ ನ್ಯಾಯಾಧೀಶರ ನೇಮಕದಲ್ಲಿ ಕೇಂದ್ರ ಸರ್ಕಾರ ಅನಗತ್ಯ ವಿಳಂಬ ಮಾಡುತ್ತಿದೆ ಎಂಬ ಆಪಾದನೆಯನ್ನು ನಿರಾಕರಿಸಿರುವ ಸರ್ಕಾರ, ಈ ವಿಳಂಬಕ್ಕೆ ಕಾರಣ ಹೈಕೋರ್ಟ್ ಗಳು ಎಂದು ಸುಪ್ರೀಂ ಕೋರ್ಟ್ ನಲ್ಲಿ ವಾದಿಸಿದೆ.

ಪ್ರಸ್ತುತ ಹೈಕೋರ್ಟ್ ಗಳಲ್ಲಿ ಶೇ.45 ರಷ್ಟು ನ್ಯಾಯಾಂಗ ಹುದ್ದೆಗಳು ಖಾಲಿ ಇವೆ. ಹೀಗಾಗಿ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿಗಳು ಆಗಸ್ಟ್ 12ರಂದು ಅಟಾರ್ನಿ ಜೆನರಲ್ (ಎಜಿ) ಮುಕುಲ್ ರೊಹ್ಟಗಿ ಅವರಿಗೆ ಎಚ್ಚರಿಕೆಯನ್ನು ನೀಡಿದ್ದರು. ಅವರ ಎಚ್ಚರಿಕೆ ಹೀಗಿತ್ತು… ‘ಹೈಕೋರ್ಟ್ ಗಳಲ್ಲಿ 478 ಹುದ್ದೆಗಳು ಖಾಲಿ ಇವೆ. ಈ ನ್ಯಾಯಾಲಯಗಳಲ್ಲಿ 40 ಲಕ್ಷ ಪ್ರಕರಣಗಳು ಬಾಕಿ ಇವೆ. ಈ ನೇಮಕ ವಿಳಂಬದಿಂದ ಇಡೀ ವ್ಯವಸ್ಥೆಯೇ ಹದಗೆಟ್ಟಿದೆ. ಈಗಲೂ ನ್ಯಾಯಾಧೀಶರ ನೇಮಕ ವಿಚಾರದಲ್ಲಿ ವಿಳಂಬವನ್ನು ಸಹಿಸಲು ಸಾಧ್ಯವಿಲ್ಲ.’

ಈ ಕುರಿತಂತೆ ಬುಧವಾರ ಸುಪ್ರೀಂ ಕೋರ್ಟ್ ಮುಂದೆ ಕೇಂದ್ರ ಸರ್ಕಾರ ತಮ್ಮ ಅಭಿಪ್ರಾಯ ಹೇಳಿದ ಎಜಿ, ‘ಹೈಕೋರ್ಟುಗಳು ನ್ಯಾಯಾಧೀಶರ ನೇಮಕ ಪ್ರಕ್ರಿಯೆಯನ್ನು ಆರಂಭಿಸುವಲ್ಲಿ ವಿಳಂಬ ಮಾಡಿರುವುದು ಈ ಸಮಸ್ಯೆಗೆ ಪ್ರಮುಖ ಕಾರಣ. ಹೀಗಾಗಿ ನ್ಯಾಯಾಧೀಶರ ನೇಮಕ ಸರಿಯಾಗಿ ಆಗಿಲ್ಲ’ ಎಂದಿದೆ.

ಬುಧವಾರ ಮುಚ್ಚಿದ ಲಕೋಟೆಯಲ್ಲಿ ಅಗತ್ಯ ದಾಖಲೆಗಳನ್ನು ನೀಡಿದ ಮುಕುಲ್ ಅವರು, ನ್ಯಾಯಾಲಯದ ಮುಂದೆ ನ್ಯಾಯಾಲಯದ ಮುಂದೆ ಸಮರ್ಥನೆ ನೀಡಿದರು. ‘ನ್ಯಾಯಾಧೀಶರ ನೇಮಕ ವಿಚಾರದಲ್ಲಿ ಯಾವುದೇ ರೀತಿಯಲ್ಲಿ ಸರ್ಕಾರ ತಡೆ ಹಿಡಿದಿಲ್ಲ. ಇದನ್ನು ಈ ದಾಖಲೆಗಳೇ ಸಾಬೀತುಪಡಿಸುತ್ತವೆ. ಅವುಗಳನ್ನು ಕೂಲಂಕುಶವಾಗಿ ಪರಿಶೀಲಿಸಿ. 2007 ರಿಂದ ಖಾಲಿಯಾದ ಹುದ್ದೆಗಳ ನೇಮಕಕ್ಕೆ ಹೈಕೋರ್ಟುಗಳೆ ಸೂಕ್ತ ಸಮಯದಲ್ಲಿ ಪ್ರಕ್ರಿಯೆ ಆರಂಭಿಸುವಲ್ಲಿ ವಿಫಲವಾಗಿವೆ. ಹೀಗಾಗಿ ಇದರಲ್ಲಿ ಸರ್ಕಾರದ ವಿಳಂಬವಿಲ್ಲ.

ಹೈಕೋರ್ಟುಗಳ ನ್ಯಾಯಾಧೀಶರ ನೇಮಕ ಪ್ರಕ್ರಿಯೆ ರೇಸ್ ಇದ್ದಂತೆ. ಸರಿಯಾದ ಸಮಯದಲ್ಲಿ ಪ್ರಕ್ರಿಯೆ ಆರಂಭಿಸಿದರೆ, ಸರಿಯಾದ ಸಮಯದಲ್ಲಿ ಮುಕ್ತಾಯವಾಗುತ್ತದೆ. ಪರಿಸ್ಥಿತಿ ಹೀಗಿರುವಾಗ ಹೈಕೋರ್ಟ್ ಹುದ್ದೆ ಖಾಲಿಯಾದ 5-6 ವರ್ಷಗಳ ನಂತರ ಆ ಹುದ್ದೆಗೆ ಆಯ್ಕೆ ಪ್ರಕ್ರಿಯೆ ಆರಂಭಿಸಿರುವ ಉದಾಹರಣೆಗಳೂ ಇವೆ.’ ಎಂದು ದಾಖಲೆಗಳನ್ನು ಒದಗಿಸಿದರು.

ಇದಕ್ಕೆ ಪ್ರತಿಯಾಗಿ ಮುಖ್ಯನ್ಯಾಯಮೂರ್ತಿಗಳ ನೇತೃತ್ವದ ಪೀಠ, ‘ರಾಷ್ಟ್ರೀಯ ನ್ಯಾಯಾಂಗ ನೇಮಕ ಸಮಿತಿಯ ಮಾನ್ಯತೆ ಕುರಿತಂತೆ ನಡೆದ ವಿಚಾರಣೆಯಿಂದಾಗಿ ಈ ನೇಮಕ ಪ್ರಕ್ರಿಯೆ ತಡವಾಗಿ ಆರಂಭವಾಗಿರುವುದನ್ನು ಒಪ್ಪಿಕೊಳ್ಳುತ್ತೇವೆ. ಆದರೆ ಈ ಸುಪ್ರೀಂ ಕೋರ್ಟ್ ಸಮಿತಿಯಿಂದ ಶಿಫಾರಸ್ಸಾದ ಹೆಸರುಗಳನ್ನು ನೇಮಕ ಮಾಡಲು ಸರ್ಕಾರದಿಂದ ಯಾವುದೇ ವಿಳಂಬ ಆಗಬಾರದು.’ ಎಂದು ಖಡಕ್ ಸೂಚನೆ ನೀಡಿತು. ಆಗ ಉತ್ತರಿಸಿದ ಮುಕುಲ್ ಅವರು, ‘ಇಲ್ಲ, ಸಮಿತಿ ಈ ಹುದ್ದೆಗಳಿಗೆ ಹೆಸರುಗಳನ್ನು ಶಿಫಾರಸ್ಸು ಮಾಡಿದ ಬಳಿಕ ಸರ್ಕಾರದಿಂದ ಯಾವುದೇ ರೀತಿಯ ವಿಳಂಬವಾಗುವುದಿಲ್ಲ. ಮುಂದಿನ ಎರಡು ವಾರಗಳಲ್ಲಿ ಸಮಿತಿ ಶಿಫಾರಸ್ಸು ಮಾಡಿದ ಹೆಸರುಗಳಿಗೆ ಒಪ್ಪಿಗೆ ನೀಡಲಾಗುವುದು’ ಎಂದು ಭರವಸೆ ನೀಡಿದ್ರು.

Leave a Reply