ಮಾಜಿ ಭಾರತ ನಿಂದಕ- ಹಾಲಿ ನೇಪಾಳ ಪ್ರಧಾನಿಯ ಪ್ರಚಂಡ ಭೇಟಿ, ಭಾರತ-ನೇಪಾಳಗಳಿಗೀಗ ವಿಶ್ವಾಸ ಕುದುರಿಸಿಕೊಳ್ಳುವ ಒಳತೋಟಿ!

ಡಿಜಿಟಲ್ ಕನ್ನಡ ವಿಶೇಷ:

ನೇಪಾಳ ಪ್ರಧಾನಿ ಪುಷ್ಪ ಕುಮಾರ ದಹಾಲ್ ಅಲಿಯಾಸ್ ಪ್ರಚಂಡ ಗುರುವಾರದಿಂದ 3 ದಿನಗಳ ಭಾರತ ಭೇಟಿಯಲ್ಲಿದ್ದಾರೆ. ಸೆಪ್ಟೆಂಬರ್ 16ರಂದು ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಭೇಟಿ ಮಾಡಿ, ಕೆಲ ಒಪ್ಪಂದಗಳಿಗೆ ಸಹಿ ಹಾಕಿ, ಜಂಟಿ ಪತ್ರಿಕಾ ಹೇಳಿಕೆ ನೀಡಲಿರುವ ಈ ಸಂದರ್ಶನವು ತುಂಬ ಮಹತ್ವದ್ದು.

ಮೊದಲನೆಯದಾಗಿ, ಸಾಂಪ್ರದಾಯಿಕವಾಗಿ ಭಾರತದ ಪರಮ ಸ್ನೇಹಿತನಾಗಿದ್ದ ನೇಪಾಳವು ಈಗ ಚೀನಾ ತೆಕ್ಕೆಗೆ ಜಾರುತ್ತಿರುವ ಕಾಲಘಟ್ಟವಿದು. ಹಾಗೂ ಈಗ ಎರಡನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿರುವ ಮಾಜಿ ಮಾವೋವಾದಿ ಬಂಡುಕೋರ ಪ್ರಚಂಡ ನಖಶಿಖಾಂತ ಭಾರತ ವಿರೋಧಿಯಾಗಿದ್ದ ಎಂಬ ಕಾರಣಕ್ಕೂ ಈ ಭೇಟಿ ಗಮನವನ್ನು ಪಡೆದುಕೊಳ್ಳುತ್ತಿದೆ.ಆದರೆ ಈಗಿನ ಪ್ರಚಂಡ, ಪರಿಸ್ಥಿತಿಗಳ ಒತ್ತಡದಿಂದ ತುಸು ಮೆತ್ತಗಾಗಿರುವ ವ್ಯಕ್ತಿ. ತನ್ನ ಮೊದಲನೇ ಅವಧಿಯಲ್ಲಿ ನೇಪಾಳದ ಎಲ್ಲ ತಲ್ಲಣಗಳಿಗೆ ಈತ ಭಾರತವನ್ನು ದೂರುತ್ತಿದ್ದ.

ತನ್ನ ಕಮ್ಯುನಿಸ್ಟ್ ಕುಟುಂಬವಾದ ಚೀನಾದೊಂದಿಗೆ ಸೇರಿ ಭಾರತವನ್ನು ನಿರ್ಲಕ್ಷಿಸಿ ಬದಿಯಲ್ಲಿಡುವ ಉಮೇದು ಈ ಮಾಜಿ ಮಾವೋವಾದಿಯಲ್ಲಿತ್ತು. ಅದಕ್ಕೆ ತಕ್ಕಂತೆ ನೇಪಾಳಕ್ಕೆ ಹೆಜ್ಜೆ ಹೆಜ್ಜೆಗೂ ಚೀನಾ ಬೆಂಬಲ ಸಿಕ್ಕಿತಾದರೂ ಭಾರತವನ್ನು ಎದುರುಹಾಕಿಕೊಂಡು ನೆಮ್ಮದಿ ಸಾಧ್ಯವಿಲ್ಲ ಎಂಬುದು ನಿಧಾನಕ್ಕೆ ಅರಿವಾಗತೊಡಗಿತು. ಹೀಗಾಗಿ ಪ್ರಚಂಡ, ಚೀನಾದ ಮುದ್ದಿನ ಮಗುವೇ ಆದರೂ ಮೊದಲಿದ್ದ ಭಾರತ ವಿರೋಧಿ ಉದ್ರೇಕ ಈಗಿಲ್ಲ. ಅಲ್ಲದೇ ಹತ್ತು ವರ್ಷಗಳ ಕಾಲ ನೇಪಾಳದ ರಾಯಲ್ ಆರ್ಮಿ ವಿರುದ್ಧ ಶಸ್ತ್ರ ಹಿಡಿದುಕೊಂಡು ಅಬ್ಬರಿಸಿದ್ದ ದಿನಗಳೇ ಬೇರೆ, ಅಧಿಕಾರದ ಗಾದಿಯಲ್ಲಿ ಕುಳಿತಾಗ ಎದುರಾಗುವ ಸವಾಲುಗಳೇ
ಬೇರೆ ಅಂತಲೂ ಅರಿವಾಗಿದೆ.

ಇತ್ತ ಭಾರತಕ್ಕೂ ನೇಪಾಳವನ್ನು ನಿಭಾಯಿಸುವಲ್ಲಿ ಆಯ್ಕೆಗಳು ಕಡಿಮೆ. ರಾಜಮನೆತನದ ಆಡಳಿತ ಕಾಲದಲ್ಲಿ ಅಲ್ಲೆಲ್ಲವೂ ಭಾರತಮಯವಾಗಿತ್ತು. ಅಂಥ ದಿನಗಳನ್ನಂತೂ ಮರುಕಳಿಸಲಾಗದು. ನೇಪಾಳವು ಭದ್ರತೆಯ ದೃಷ್ಟಿಯಿಂದ ಮಗ್ಗುಲಿನ ಅತಿಮುಖ್ಯ ದೇಶವಾದ್ದರಿಂದ ಅಲ್ಲಿನ ಪರಿಸ್ಥಿತಿ ತೀರ ತನ್ನ ಕೈಮೀರಿ ಹೋಗದಂತೆ ತನ್ನದೇ ಪ್ರಭಾವಳಿ ಹೊಂದಿರಬೇಕಾದದ್ದು ಭಾರತಕ್ಕೆ ಅತಿಮುಖ್ಯ. ಈ ಹಿಂದೆ ಪ್ರಧಾನಿಯಾಗಿದ್ದ ಕೆಪಿ ಒಲಿಯೂ ಭಾರತ ನಿಂದನೆಯ ಹಾದಿಯನ್ನೇ ಹಿಡಿದಾಗ, ಭಾರತವು ಮೊದಲಿನಿಂದಲೂ ಚಾಲ್ತಿಯಲ್ಲಿದ್ದ, ಮಾವೋವಾದಿಗಳೊಂದಿಗಿನ ಚೌಕಾಶಿಯಲ್ಲೇ ತೊಡಗಿಸಿಕೊಂಡಿದೆ.

2008ರಲ್ಲಿ ಪ್ರಧಾನಿಯಾಗುತ್ತಲೇ ಇದೇ ಪ್ರಚಂಡ, ಭಾರತಕ್ಕಿದ್ದ ಲಾಗಾಯ್ತಿನ ಪ್ರಾಧಾನ್ಯವನ್ನು ಬದಲಿಸಿ ಚೀನಾಕ್ಕೆ ತನ್ನ ಮೊದಲ ವಿದೇಶಿ ಭೇಟಿ ನೀಡಿದ. ನಂತರ ನೇಪಾಳದ ಪಶುಪತಿನಾಥ ದೇವಾಲಯದಲ್ಲಿ  ತಲೆತಲಾಂತರಗಳಿಂದ ಪೂಜಾಕಾರ್ಯ ನಡೆಸಿಕೊಂಡು ಬರುತ್ತಿದ್ದ ಭಾರತೀಯ ಅರ್ಚಕರನ್ನು ಬದಲಿಸಿ ನೇಪಾಳಿಗಳನ್ನೇ ನೇಮಿಸಬೇಕೆಂದ. ಯಾವಾಗ ನೇಪಾಳದ ಸೇನಾ ಮುಖ್ಯಸ್ಥನನ್ನೇ ಬದಲಿಸಿ, ಚೀನಾ ಬಗೆಯಲ್ಲೇ ಏಕಪಕ್ಷಾಡಳಿತದ ಛಾಪಿಗೆ ಮುಂದಾದನೋ ಆಗ ನೇಪಾಳದ ವಿದ್ಯಮಾನಗಳಲ್ಲಿ ಭಾರತ ಢಾಳಾಗಿಯೇ ಹಸ್ತಕ್ಷೇಪ ನಡೆಸಿತು. ಅದರ ಪರಿಣಾಮ, ಸೇನಾ ಮುಖ್ಯಸ್ಥ ಉಳಿದುಕೊಂಡ ಹಾಗೂ ಪ್ರಚಂಡ ರಾಜೀನಾಮೆ ನೀಡಿ ಅಲ್ಲಿ ಕಮ್ಯುನಿಸ್ಟೇತರ ಪಕ್ಷಗಳ ಸರ್ಕಾರ ರಚನೆಯಾಯಿತು. ಆದರೆ ಕೆಲ ಅವಧಿಯಲ್ಲೇ ಪ್ರಚಂಡ ಈ ಸರ್ಕಾರವನ್ನು ಕೆಡವುವಲ್ಲಿ ಯಶಸ್ವಿಯಾದ. ಆತನಿಗೆ ಪ್ರಧಾನಿಯಾಗುವುದು ಸಾಧ್ಯವಾಗಲಿಲ್ಲವಾದರೂ ಮಾರ್ಕ್ಸ್ ವಾದಿಗಳ ಪಕ್ಷಗಳನ್ನು ಹತ್ತಿರ ತಂದು ಜಲಾನಾಥ ಖನಾಲ್ ರನ್ನು ಪ್ರಧಾನಿಯಾಗಿಸಿದ. ಈ ಎಲ್ಲ ಏಟು- ಪ್ರತಿಏಟುಗಳ ಪರ್ವದಲ್ಲಿ ಭಾರತ ಹಾಗೂ ಪ್ರಚಂಡ ಮತ್ತು ನೇಪಾಳದ ಒಟ್ಟಾರೆ ರಾಜಕಾರಣಕ್ಕೆ ಒಂದು ಪಕ್ಕಾ ಆಗಿಬಿಟ್ಟಿದೆ. ಅದೆಂದರೆ ತಾವು ಪರಸ್ಪರ ಚೌಕಾಶಿಯಲ್ಲೇ ಸಾಗಬೇಕೇ ಹೊರತು, ಮುಖ ತಿರುಗಿಸಿಕೊಂಡು ಸಂವಾದ ಮುರಿದುಕೊಳ್ಳಲು ಆಗದ ಸ್ಥಿತಿಯಲ್ಲಿದ್ದೇವೆ ಅಂತ.

ಸದ್ಯದ ದೊಡ್ಡ ಬಿಕ್ಕಟ್ಟು ಎಂದರೆ ಭಾರತದ ಗಡಿಗೆ ಹೊಂದಿಕೊಂಡಿರುವ ಮಾಧೇಸಿ ಜನಾಂಗವು ನೇಪಾಳ ಸಂವಿಧಾನದಲ್ಲಿ ತಮಗೆ ಪ್ರಾತಿನಿಧ್ಯವಿಲ್ಲ ಎಂಬುದರ ಬಗ್ಗೆ ಧ್ವನಿ ಎತ್ತಿರುವುದು ಹಾಗೂ ಭಾರತ ಇವರ ಆತಂಕಕ್ಕೆ ಧ್ವನಿಗೂಡಿಸಿರುವುದು. ಪ್ರಾರಂಭದಲ್ಲಿ ನೇಪಾಳದ ರಾಜಕಾರಣವು ಭಾರತಕ್ಕೆ ನೀವೇನು ನಮಗೆ ಹೇಳೋದು ಎಂಬರ್ಥದಲ್ಲೇ ಅವಾಜು ಹಾಕಿತು. ಆದರೆ ಮಾಧೇಸಿಗಳ ಪ್ರತಿಭಟನೆಯ ಜೋರಿಗೆ ಇತ್ತ ಭಾರತದಿಂದ ಹೋಗಬೇಕಾದ ಪೂರೈಕೆಗಳೆಲ್ಲ ನಿಂತು ತತ್ವಾರವಾಯಿತು. ‘ಭಾರತಕ್ಕೆ ನಾವು ತಲೆಬಾಗುವುದಿಲ್ಲ, ಚೀನಾದಿಂದ ಅಗತ್ಯ ಪೂರೈಕೆಗಳನ್ನು ಪಡೆಯುತ್ತೇವೆ’ ಅಂತ ನೇಪಾಳ ಗುಟುರು ಹಾಕಿತಾದರೂ ಅದು ಹೇಳಿದಷ್ಟು ಸುಲಭವಲ್ಲ ಅಂತ ಅರಿವಾಗುತ್ತಲೇ ಮೆತ್ತಗಾಯಿತು. ಹಾಗಂತ ಮಾಧೇಸಿಗಳ ಸಾಂವಿಧಾನಿಕ ಪ್ರಾತಿನಿಧ್ಯ ಬೇಡಿಕೆ ಇನ್ನೂ ನಿಷ್ಕರ್ಷೆಯಲ್ಲೇ ಇದೆ.

2015ರ ನೇಪಾಳ ಭೂಕಂಪದಲ್ಲೂ ಭಾರತ ನೆರವಿಗೆ ಧಾವಿಸಿತು. ಆಗ ಇಂಡಿಯಾ ಗೋಬ್ಯಾಕ್ ಎಂಬ ಘೋಷಣೆ ಮೊಳಗಿದ್ದಾಗಿಯೂ ವ್ಯಾಪಕವಾಗಿ ವರದಿಯಾಯಿತು. ಆದರೆ ವಾಸ್ತವವಾಗಿ ಟ್ವಿಟ್ಟರಿನಲ್ಲಿ ಟ್ರೆಂಡ್ ಆಗಿದ್ದು, ಭಾರತ ಹಿಂತಿರುಗಲಿ ಎಂಬ ಘೋಷಣೆ ಆಗಿರಲಿಲ್ಲ ಬದಲಿಗೆ ತಮ್ಮ ಕುಸಿದ ಬದುಕಿನ ಮಗ್ಗುಲನ್ನೆಲ್ಲ ಅತಿಯಾಗಿ ಚಿತ್ರಿಸಿಕೊಂಡಿರುವ ಭಾರತದ ಮಾಧ್ಯಮ ಹಿಂದಕ್ಕೆ ಹೋಗಲಿ ಎಂಬುದಾಗಿತ್ತು. ಅದೇನೇ ಇದ್ದರೂ ಆ ಸಂದರ್ಭದಲ್ಲಿ ಚೀನಾವೇನೋ ಅತ್ಯಮೋಘ ನೆರವು ಕಾರ್ಯದಲ್ಲಿ ತೊಡಗಿಸಿಕೊಂಡಿತು ಎಂಬಂತಹ ಸ್ಥಿತಿಯೇನೂ ಬರಲಿಲ್ಲ. ನೇಪಾಳವನ್ನು ಭಾರತ ವಸಾಹತನ್ನಾಗಿಸಿಕೊಂಡಿದೆ ಎಂದು ಈ ಹಿಂದಿನ ತಮ್ಮ ಮಾವೋವಾದಿ ಅವತಾರದಲ್ಲಿ ಕೂಗಿಕೊಂಡಿದ್ದ ಪ್ರಚಂಡಗೂ ಸೇರಿದಂತೆ ನೇಪಾಳಿಗರಿಗೆಲ್ಲ ಇಂಥ ವಾಸ್ತವ ಸಿಕ್ಕುಗಳ ಅರಿವಾಗಿದೆ. ಹೀಗೆಂದೆ ಇಂದು ಶುರುವಾಗಿರುವ ನೇಪಾಳ ಪ್ರಧಾನಿ ಪ್ರಚಂಡನ ದೆಹಲಿ ಸಂದರ್ಶನವು ಭಾರತಕ್ಕೆ ತನ್ನ ಪಾಲಿಗೆ ಕಳೆದುಹೋಗುತ್ತಿರುವ ನೇಪಾಳವನ್ನು ಜಗ್ಗಿ ಇರಿಸಿಕೊಳ್ಳುವ ಸಮರವಾಗಿ ಹಾಗೂ ಪ್ರಚಂಡನ ಪಾಲಿಗೆ ಚೀನಾದ ಜತೆಯಲ್ಲೇ ಭಾರತದ ವಿಶ್ವಾಸವನ್ನೂ ಆದಷ್ಟು ಕುದುರಿಸಿಕೊಳ್ಳುವ ಶ್ರಮದ ಅವಧಿಯಾಗಿ ತೋರುತ್ತಿದೆ.

Leave a Reply