ಕಾವೇರಿ: ನ್ಯಾಯ ಪರಿಣತರ ಜತೆ ಮು.ಮಂ ಚರ್ಚೆ, ದೆಹಲಿ ಚಿಕುನ್ ಗುನ್ಯಾಕ್ಕೆ ಆಪ್ ಚಲ್ತಾ ಹೈ ಧೋರಣೆ, ಅಪ್ಪ ವರ್ಸಸ್ ಮಗ- ಇದು ಉ.ಪ್ರ ಸಮಾಜವಾದಿ ಸಂಕಷ್ಟ, ಟೆಲಿಕಾಂ ಪೈಪೋಟಿ ಎದುರಿಸಲು ಆರ್ ಕಾಮ್- ಏರ್ ಸೆಲ್ ವಿಲೀನ

ಕಾವೇರಿ ನೀರು ವಿಚಾರದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ಕಾನೂನು ಹೋರಾಟದ ಬಗ್ಗೆ ಚರ್ಚೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗೃಹ ಕಚೇರಿ ಕೃಷ್ಣಾದಲ್ಲಿ ಗುರುವಾರ ಕಾನೂನು ತಜ್ಞರೊಂದಿಗೆ ಚರ್ಚೆ ನಡೆಸಿದ ಸಂದರ್ಭ…

ಡಿಜಿಟಲ್ ಕನ್ನಡ ಟೀಮ್:

‘ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರದಲ್ಲಿ ಸುಪ್ರಿಂ ಕೋರ್ಟ್ ಆದೇಶ ಉಲ್ಲಂಘಿಸಿದರೆ ಸರ್ಕಾರ ಗಂಡಾಂತರಕ್ಕೆ ಸಿಲುಕುವುದರ ಜತೆಗೆ, ನಮ್ಮ ಜಲಾಶಯಗಳನ್ನು ಕೇಂದ್ರ ಸರ್ಕಾರದ ವಶಕ್ಕೆ ಒಪ್ಪಿಸುವ ಸಾಧ್ಯತೆ ಇದೆ. ಹೀಗಾಗಿ ಎಚ್ಚರಿಕೆಯಿಂದ ಹೆಜ್ಜೆ ಇಡಿ…’ ಇದು ರಾಜ್ಯ ಸರ್ಕಾರಕ್ಕೆ ಕಾನೂನು ತಜ್ಞರು ನೀಡಿರುವ ಎಚ್ಚರಿಕೆ.

ಕಾವೇರಿ ವಿಚಾರದಲ್ಲಿ ರಾಜ್ಯದ ಮುಂದಿನ ಹೆಜ್ಜೆಗಳ ಬಗ್ಗೆ ಚರ್ಚೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗೃಹ ಕಚೇರಿ ಕೃಷ್ಣಾದಲ್ಲಿ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿಗಳು, ಮಾಜಿ ಅಡ್ವೋಕೇಟ್ ಜನರಲ್ ಹಾಗೂ ಹಿರಿಯ ವಕೀಲರು ಮತ್ತು ಕಾನೂನು ತಜ್ಞರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದ್ರು.

‘ಸೆಪ್ಟೆಂಬರ್ 5 ಹಾಗೂ 12 ರಂದು ನ್ಯಾಯಾಲಯ ನೀಡಿರುವ ತೀರ್ಪನ್ನು ಗಮನಿಸಿದರೆ, ಸೆಪ್ಟೆಂಬರ್ 20 ರ ವಿಚಾರಣೆ ಸಂದರ್ಭದಲ್ಲೂ ರಾಜ್ಯಕ್ಕೆ ಒಳ್ಳೆಯ ತೀರ್ಪು ಬರುತ್ತದೆ ಎಂದು ಭಾವಿಸುವಂತಿಲ್ಲ ಎಂದ ತಜ್ಞರು, ಈ ವಿಷಯದಲ್ಲಿ ತಮಿಳುನಾಡು ಸರ್ಕಾರ ಕಾನೂನಿನ ಜೊತೆಗೆ ರಾಜಕೀಯ ಮತ್ತು ಇನ್ನಿತರ ಸನ್ನಿವೇಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿದೆ. ಹೀಗಾಗಿ ಮುಂದೆ ಸೆ. 19 ರಂದು ಕಾವೇರಿ ಉಸ್ತುವಾರಿ ಪ್ರಾಧಿಕಾರದ ಸಭೆ ಮತ್ತು 20 ರಂದು ನ್ಯಾಯಾಲಯದ ಮುಂದೆ ಬರುತ್ತಿರುವ ವಿಚಾರಣೆಯನ್ನು ಗಮನದಲ್ಲಿಟ್ಟುಕೊಂಡು ಹೆಜ್ಜೆ ಇಡಿ’ ಎಂದು ಸಲಹೆ ನೀಡಿದ್ರು.

ಸಭೆಯಲ್ಲಿ ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯನ್ಯಾಯಮೂರ್ತಿ ರಾಜೇಂದ್ರ ಬಾಬು, ಹೈ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಾಮಾಜೋಯಿಸ್,  ಎ.ಜೆ.ಸದಾಶಿವ, ಎನ್.ಕುಮಾರ್, ಮಾಜಿ ಅಡ್ವೊಕೇಟ್ ಜನರಲ್ ಗಳಾದ ಬಿ.ವಿ.ಆಚಾರ್ಯ, ಅಶೋಕ್ ಹಾರ್ನಳ್ಳಿ, ರವಿವರ್ಮ ಕುಮಾರ್, ಹಾಲಿ ಅಡ್ವೊಕೇಟ್ ಜನರಲ್ ಮಧುಸೂಧನ ನಾಯಕ್, ಹೆಚ್ಚುವರಿ ಅಡ್ವೊಕೇಟ್ ಜನರಲ್ ಪೊನ್ನಣ್ಣ, ಸುಪ್ರಿಂ ಕೋರ್ಟಿನಲ್ಲಿ ರಾಜ್ಯದ ಪರ ವಕೀಲ ಮೋಹನ್ ಕಾತರಕಿ, ಕಾನೂನು ಸಚಿವ ಟಿ.ಬಿ.ಜಯಚಂದ್ರ, ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ರು.

ಸಭೆಯ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ಸಚಿವ ಟಿ.ಬಿ.ಜಯಚಂದ್ರ ಹಾಗೂ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ‘ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಕಾನೂನು ತಜ್ಞರಿಗೆ ಮಾಹಿತಿ ನೀಡಿ, ಅವರ ಸಲಹೆ ಮತ್ತು ಸಹಕಾರ ಪಡೆದಿದ್ದೇವೆ.

ಮುಂದಿನ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಅವರ ಸಲಹೆಗಳನ್ನು ಅಳವಡಿಸಿಕೊಳ್ಳಲಾಗುವುದು. ಅವರು ನೀಡಿರುವ ಕೆಲವು ಸಲಹೆಗಳನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸಲು ಸಾಧ್ಯವಿಲ್ಲ’ ಎಂದರು.

ಇದೇ ಕಾವೇರಿ ವಿಚಾರವಾಗಿ ನ್ಯಾಯಾಲಯ ನೀಡಿರುವ ತೀರ್ಪನ್ನು ಪ್ರಶ್ನಿಸುವಂತಿಲ್ಲ. ಅಲ್ಲದೆ ಈ ತೀರ್ಪನ್ನು ವಿರೋಧಿಸಿ ಪ್ರತಿಭಟಿಸುವಂತಿಲ್ಲ ಎಂದು ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳಿಗೆ ಸ್ಪಷ್ಟ ಸೂಚನೆ ನೀಡಿದೆ ಸುಪ್ರೀಂ ಕೋರ್ಟ್. ಈ ಸಂದರ್ಭದಲ್ಲಿ ಆಯಾ ರಾಜ್ಯಗಳಲ್ಲಿ ಯಾವುದೇ ರೀತಿಯಲ್ಲಿ ಆಸ್ತಿಪಾಸ್ತಿ ಹಾನಿ, ಅಶಾಂತಿ ನಡೆಯದಂತೆ ಕಾನೂನು ಸುವ್ಯವಸ್ಥೆ ಕಾಪಾಡುವುದು ರಾಜ್ಯ ಸರ್ಕಾರಗಳ ಹೊಣೆ ಎಂದು ತಿಳಿಸಿದೆ.

ಮತ್ತೊಂದೆಡೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಕಾವೇರಿ ವಿವಾದ ಬಗೆಹರಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಧ್ಯೆ ಪ್ರವೇಶಿಸಬೇಕು ಎಂದು ಹಳೇ ವಾದ ಮುಂದುವರಿಸಿದ್ದಾರೆ. ‘ಕಾವೇರಿ ಹಾಗೂ ಮಹಾದಾಯಿ ವಿವಾದಗಳಿಗೆ ಸಂಬಂಧಿಸಿದಂತೆ ಇದುವರೆಗೂ ಮುಖ್ಯಮಂತ್ರಿಗಳು ಐದು ಪತ್ರಗಳನ್ನು ಪ್ರಧಾನಿ ಕಛೇರಿಗೆ ಬರೆದಿದ್ದಾರೆ. ಒಂದು ಪತ್ರಕ್ಕೂ ಉತ್ತರಿಸುವ ಸೌಜನ್ಯವನ್ನು ಪ್ರಧಾನ ಮಂತ್ರಿಗಳು ತೋರಿಸಿಲ್ಲ. ರಾಜ್ಯ ಬಿಜೆಪಿ ನಾಯಕರು ಕಾವೇರಿ ಹಾಗೂ ಮಹದಾಯಿ ವಿವಾದಗಳು ನ್ಯಾಯಾಲಯದಲ್ಲಿದ್ದು, ಪ್ರಧಾನ ಮಂತ್ರಿಗಳು ಮಧ್ಯೆ ಪ್ರವೇಶಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ’ ಎಂದು ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ರು.

ನೀವು ತಿಳಿಯಬೇಕಿರುವ ಪ್ರಮುಖ ಸುದ್ದಿಸಾಲುಗಳು…

  • ಲಿಬಿಯಾದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರ ಒತ್ತೆಯಾಳಾಗಿದ್ದ ಇಬ್ಬರು ಭಾರತೀಯರನ್ನು ಬಿಡುಗಡೆ ಮಾಡಲಾಗಿದೆ ಅಂತಾ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಗುರುವಾರ ಟ್ವೀಟ್ ಮಾಡಿದ್ದಾರೆ. ಕಳೆದ ವರ್ಷ ಜುಲೈ 29 ರಂದು ಒಟ್ಟು ನಾಲ್ವರು ಭಾರತೀಯರನ್ನು ಲಿಬಿಯಾದಲ್ಲಿ ಐಎಸ್ ಉಗ್ರರು ಅಪಹರಿಸಿದ್ದರು. ಆ ಪೈಕಿ ಕರ್ನಾಟಕದವರಾದ ಲಷ್ಕ್ಮಿಕಾಂತ್ ಮತ್ತು ವಿಜಯ್ ಕುಮಾರ್ ಎಂಬುವವರನ್ನು ಎರಡು ದಿನಗಳ ನಂತರ ಬಿಡುಗಡೆ ಮಾಡಲಾಗಿತ್ತು. ಈಗ ಟಿ.ಗೋಪಾಲಕೃಷ್ಣನ್ ಹಾಗೂ ಸಿ.ಬಾಲಕೃಷ್ಣನ್ ಅವರನ್ನು ಬಿಡುಗಡೆ ಮಾಡಲಾಗಿದೆ.
  • ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಾಗಲೇ ಅಧಿಕಾರದಲ್ಲಿರುವ ಸಮಾಜವಾದಿ ಪಕ್ಷದಲ್ಲಿ ಒಡಕು ಮೂಡಿದೆ. ಮುಖ್ಯಮಂತ್ರಿ ಅಖಿಲೇಶ್ ಯಾದವ್ ಪಕ್ಷದ ಹಿರಿಯ ನಾಯಕ ಹಾಗೂ ಸಂಬಂಧಿಯೂ ಆಗಿರುವ ಶಿವಪಾಲ್ ಯಾದವ್ ಅವರನ್ನು ಮಂತ್ರಿ ಸ್ಥಾನದಿಂದ ಕೆಳಗಿಳಿಸಿ ನಾಲ್ಕು ಇಲಾಖೆಯ ಜವಾಬ್ದಾರಿ ಕಸಿದುಕೊಂಡಿದ್ದಾರೆ. ಪರಿಣಾಮ ಶಿವಪಾಲ್ ದೆಹಲಿಗೆ ಹೋಗಿ ಪಕ್ಷದ ಹಿರಿಯ ಮುಖಂಡ ಮುಲಾಯಂ ಸಿಂಗ್ ಯಾದವ್ ಅವರ ನೆರವು ಕೋರಿದ್ದಾರೆ. ಪಕ್ಷದಲ್ಲಿನ ಈ ಸಮಸ್ಯೆ ಬಗೆಹರಿಸಲು ಮುಲಾಯಂ ಸಿಂಗ್ ಶುಕ್ರವಾರ ಸಂಸದೀಯ ಸಭೆ ಕರೆದಿದ್ದಾರೆ. ಅಖಿಲೇಶ್ ಮುಖ್ಯಮಂತ್ರಿಯಾಗಿದ್ದರೂ ಪಕ್ಷದಲ್ಲಿ ಮುಲಾಯಂ ಸಿಂಗ್ ಅವರ ಪ್ರಭಾವ ಹೆಚ್ಚಾಗಿಯೇ ಇದೆ. ಹೀಗಾಗಿ ಸದ್ಯ ಉತ್ತರ ಪ್ರದೇಶ ಸಮಾಜವಾದಿ ಪಕ್ಷದಲ್ಲಿ ಅಪ್ಪ ವರ್ಸಸ್ ಮಗ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.
  • ಪ್ರಸ್ತುತ ದೇಶದ ಟೆಲಿಕಾಂ ಕ್ಷೇತ್ರದ ಮಾರುಕಟ್ಟೆಯಲ್ಲಿನ ಸ್ಪರ್ಧೆ ಎದುರಿಸುವ ಸಲುವಾಗಿ ಆರ್ ಕಾಮ್ (ರಿಲಯನ್ಸ್ ಕಮ್ಯುನಿಕೇಶನ್) ಮತ್ತು ಏರ್ ಸೆಲ್ ಕಂಪನಿಗಳು ವಿಲೀನಕ್ಕೆ ಮುಂದಾಗಿವೆ. ಇದರೊಂದಿಗೆ ₹ 65 ಸಾವಿರ ಕೋಟಿ ಮೌಲ್ಯದ ಹೊಸ ಕಂಪನಿಯಾಗಿ ರೂಪತಾಳಲಿದ್ದು, ಗ್ರಾಹಕ ಮತ್ತು ಆದಾಯ ಅಂಶದಲ್ಲಿ ದೇಶದ ನಾಲ್ಕನೇ ಅತಿದೊಡ್ಡ ಟೆಲಿಕಾಂ ಸಂಸ್ಥೆಯಾಗಿ ಹೊರಹೊಮ್ಮಲಿದೆ. ಈ ಕಂಪನಿಗೆ ರಷ್ಯಾ ಮೂಲದ ಸಿಸ್ಟೆಮಾ ಸಹ ಶೇ.25 ರಷ್ಟು ಬಂಡವಾಳ ಹೂಡುವ ಮೂಲಕ ಇದರ ಭಾಗವಾಗಲಿದೆ.
  • ಚಿಕುನ್ ಗುನ್ಯದಿಂದಾಗಿ ದೆಹಲಿಯ ಜನತೆ ಹೆದರಬೇಕಿಲ್ಲ. ಗೂಗಲ್ ನ ಮಾಹಿತಿ ಪ್ರಕಾರ ಚಿಕುನ್ ಗುನ್ಯದಿಂದ ಪ್ರಾಣ ಹೋಗುವುದಿಲ್ಲ. ಎಲ್ಲರು ಮುಂಜಾಗೃತಾ ಕ್ರಮ ಕೈಗೊಳ್ಳಬೇಕು. ವೈದ್ಯರು ಸಲಹೆ ನೀಡಿದರಷ್ಟೇ ಆಸ್ಪತ್ರೆಗೆ ದಾಖಲಾಗಬೇಕು… ಇದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರ ಬೇಜವಾಬ್ದಾರಿ ಹೇಳಿಕೆ. ದೆಹಲಿಯಲ್ಲಿ ಚಿಕುನ್ ಗುನ್ಯ ರೋಗಕ್ಕೆ ನಾಲ್ವರು ಮೃತಪಟ್ಟಿರುವ ಪ್ರಕರಣ ಕಂಡುಬಂದಿರುವ ಹಿನ್ನೆಲೆಯಲ್ಲಿ ಭೀತಿ ಎದುರಾಗಿದ್ದು, ಇಂತಹ ಪರಿಸ್ಥಿತಿಯಲ್ಲಿ ಈ ರೀತಿ ಹೇಳಿಕೆ ನೀಡಿದ್ದಾರೆ. ಇನ್ನು ಈ ರೀತಿಯಾದ ಪರಿಸ್ಥಿತಿಯಲ್ಲಿ ದೆಹಲಿಯ ಮುಖ್ಯಮಂತ್ರಿಯಾಗಲಿ ಅಥವಾ ಹೆಚ್ಚಿನ ಸಚಿವರಾಗಲಿ ದೆಹಲಿಯಲ್ಲಿ ಇಲ್ಲದಿರುವುದು ಮತ್ತೊಂದು ಬೇಸರದ ಸಂಗತಿ.

Leave a Reply