ಎನ್ಜಿಒಗಳ ಪ್ರತಿಬಂಧದ ಕೇಂದ್ರ ಸರ್ಕಾರದ ನಡೆಗೆ ಸಾಥ್ ನೀಡಿತು ಸುಪ್ರೀಂ ಕೋರ್ಟ್

ಡಿಜಿಟಲ್ ಕನ್ನಡ ಟೀಮ್:

ಇತ್ತೀಚಿನ ದಿನಗಳಲ್ಲಿ ದೇಶದಲ್ಲಿನ ವಿವಿಧ ಎನ್ಜಿಒಗಳಿಗೆ ಮೇಲೆ ಕೇಂದ್ರ ಸರ್ಕಾರ ಲಗಾಮು ಹಾಕುತ್ತಿರುವುದಕ್ಕೆ ವಿರೋಧಗಳು ವ್ಯಕ್ತವಾಗುತ್ತಿರೋದನ್ನು ನೋಡುತ್ತಲೇ ಇದ್ದೇವೆ. ಪ್ರತಿ ಬಾರಿ ಎನ್ಜಿಒಗಳ ನಿಯಂತ್ರಣಕ್ಕೆ ಸರ್ಕಾರ ಮುಂದಾದಾಗಲೆಲ್ಲ ಸ್ವಾತಂತ್ರ್ಯದ ಹರಣವಾಗ್ತಿದೆ ಎಂಬ ಕೂಗು ಕೇಳಿಬರುತ್ತಲೇ ಇದೆ. ಆದರೆ, ಈಗ ಸುಪ್ರಿಂ ಕೋರ್ಟ್ ಎನ್ಜಿಒಗಳ ಪ್ರತಿಬಂಧಕ್ಕೆ ಕಾನೂನಿನ ಚೌಕಟ್ಟು ಅತ್ಯಗತ್ಯ ಎಂದು ಅಭಿಪ್ರಾಯಪಟ್ಟಿದೆ. ಇದರೊಂದಿಗೆ ಸರ್ಕಾರದ ಈ ನಿರ್ಧಾರಕ್ಕೆ ಒಂದು ರೀತಿಯಲ್ಲಿ ಬೆಂಬಲ ಸಿಕ್ಕಂತಾಗಿದೆ.

ದೇಶಗಳಲ್ಲಿನ ಎನ್ಜಿಒಗಳು ತಾವು ಪಡೆದ ದೇಣಿಗೆಯನ್ನು ಎಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿವೆ ಹಾಗೂ ಅದಕ್ಕೆ ಎಷ್ಟರ ಮಟ್ಟಿಗೆ ಲೆಕ್ಕ ನೀಡುತ್ತಿವೆ ಎಂಬುದರ ಬಗ್ಗೆ ಅಧ್ಯಯನ ನಡೆಸಲು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಟಿ.ಎಸ್ ಠಾಕೂರ್ ಅವರು ಹಿರಿಯ ವಕೀಲ ರಾಕೇಶ್ ದ್ವಿವೇದಿ ಅವರನ್ನು ನೇಮಕ ಮಾಡಿದ್ರು. ನಂತರ ಅವರಿಂದ ಮಾಹಿತಿಯನ್ನು ಪಡೆಯಲಾಗಿತ್ತು.

‘ಈ ಎನ್ಜಿಒಗಳು ವಿಶ್ವದ ಎಲ್ಲ ಭಾಗಗಳಿಂದ ದೇಣಿಗೆಯನ್ನು ಪಡೆಯುತ್ತವೆ… ಎನ್ಜಿಒ ಅಂದ್ರೆ, ಯಾರುಬೇಕಾದರೂ ಸಂಸ್ಥೆ (ಸೊಸೈಟಿ) ನೋಂದಣಿ ಮಾಡಿಸಿಕೊಂಡರೆ ಅದನ್ನು ಎನ್ಜಿಒ ಆಗಿ ಮಾಡಿಕೊಳ್ಳುವ ವ್ಯವಸ್ಥೆ ಇದೆ. ಈ ಎನ್ಜಿಒಗಳ ಹೊಣೆಗಾರಿಕೆಯನ್ನು ಪ್ರಮಾಣಿಕರಿಸಲು ಕೇಂದ್ರದಲ್ಲಿ ಯಾವುದೇ ನಿರ್ದಿಷ್ಟ ಶಾಸನವಿಲ್ಲ. ಎನ್ಜಿಒ ಸ್ಥಾಪನೆಗೆ ಕೆಲವು ಪ್ರಕ್ರಿಯೆ ಇರುವುದು ಬಿಟ್ಟರೆ, ಅದನ್ನು ನಿಯಂತ್ರಿಸಲು ಕಾನೂನಿನ ಚೌಕಟ್ಟಿಲ್ಲ.’ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ರಾಕೇಶ್ ದ್ವಿವೇದಿ ಅವರು ನ್ಯಾಯಾಲಯಕ್ಕೆ ನೀಡಿರುವ ಮಾಹಿತಿ ಹಾಗೂ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಸುಮಾರು 31 ಲಕ್ಷ ಎನ್ಜಿಒಗಳ ಪೈಕಿ ಶೇ.10 ಕ್ಕೂ ಕಡಿಮೆ ಪ್ರಮಾಣದ ಎನ್ಜಿಒಗಳು ಮಾತ್ರ ತಾವು ಪಡೆದ ಹಣಕ್ಕೆ ರಿಜಿಸ್ಟ್ರಾರ್ ಬಳಿ ಸೂಕ್ತ ದಾಖಲೆಗಳನ್ನು ಒದಗಿಸುತ್ತಿದ್ದು, ಮಿಕ್ಕ ಎನ್ಜಿಒಗಳು ಲೆಕ್ಕ ನೀಡುತ್ತಿಲ್ಲ ಎಂದು ಹೇಳಿದೆ. ಈ ಬಗ್ಗೆ ಕಾನೂನಿನ ನಿಯಂತ್ರಣ ಇಲ್ಲದಿರುವುದರಿಂದ ಎನ್ಜಿಒಗಳು ಈ ರೀತಿ ನಡೆದುಕೊಳ್ಳುತ್ತಿವೆ ಎಂಬುದು ಅಧ್ಯಯನ ಸಮಿತಿಯ ಅಭಿಪ್ರಾಯ.

ಈ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವ ಎಂ.ಎಲ್ ಶರ್ಮಾ ಅವರು ತಮ್ಮ ಅರ್ಜಿಯ ಪ್ರತಿ ಹಾಗೂ ಇತರೆ ದಾಖಲೆಗಳನ್ನು ದ್ವಿವೇದಿ ಅವರಿಗೆ ಸಲ್ಲಿಸುವಂತೆ ನ್ಯಾಯಾಲಯ ಸೂಚನೆ ನೀಡಿದ್ದು, ಅಗತ್ಯ ಬಿದ್ದರೆ ಹೆಚ್ಚಿನ ಅಧ್ಯಯನಕ್ಕಾಗಿ ಈ ವಿಷಯವನ್ನು ಕಾನೂನು ಸಮಿತಿಗೆ ವರ್ಗಾವಣೆ ಮಾಡಲಾಗುವುದು ಎಂದು ಹೇಳಿದೆ.

ಈ ಹಿಂದೆ ಸಿಬಿಐ ನೋಂದಣಿಯಾಗಿರುವ ಎನ್ಜಿಒಗಳ ಮಾಹಿತಿ ಕಲೆಹಾಕಿದಾಗ ದೇಶದಲ್ಲಿ ಸುಮಾರು 31 ಲಕ್ಷ ಎನ್ಜಿಒಗಳು ಇರುವುದು ಕಂಡು ಬಂದಿತು. ಈ ಸಂಖ್ಯೆ ಎಷ್ಟು ದೊಡ್ಡ ಪ್ರಮಾಣದಲ್ಲಿದೆ ಅಂದ್ರೆ, ನಮ್ಮ ದೇಶದಲ್ಲಿರುವ ಶಾಲೆಗಳ ಸಂಖ್ಯೆಗಿಂತ ದುಪ್ಪಟ್ಟು ಎನ್ಜಿಒಗಳಿವೆ. ಇನ್ನು ಸರ್ಕಾರಿ ಆಸ್ಪತ್ರೆಗಳಿಗಿಂತ 250 ಪಟ್ಟು ಹೆಚ್ಚಿವೆ. ಇನ್ನು ಜನಸಂಖ್ಯಾವಾರು ಸರಾಸರಿಯಲ್ಲಿ ಅಳತೆ ಮಾಡಿದರೆ, ದೇಶದಲ್ಲಿ 709 ಜನರಿಗೆ ಒಬ್ಬ ಪೊಲೀಸ್ ಅಧಿಕಾರಿ ಇದ್ದರೆ 400 ಜನರಿಗೆ ಒಂದು ಎನ್ಜಿಒ ಇರುವುದು ಕಂಡುಬರುತ್ತದೆ.

ಈ ಎಲ್ಲ ಅಂಶಗಳಿಂದ ಒನ್ಜಿಒಗಳು ಸೇವೆಗಿಂತ ವ್ಯಾಪಾರವಾಗುತ್ತಿವೆ ಎಂಬುದು ಸ್ಪಷ್ಟವಾಗುತ್ತಿದ್ದು, ಇವುಗಳ ನಿಯಂತ್ರಣಕ್ಕೆ ಕಾನೂನಿನ ಚೌಕಟ್ಟು ಅತ್ಯಗತ್ಯ.

Leave a Reply