ಕಾವೇರಿಗಾಗಿ ಬಂದ್, ಈಗ ತಮಿಳುನಾಡು ಸರದಿ! ಕಾವೇರಿ ಹೋರಾಟವೀಗ ತಮಿಳಿಗ ವರ್ಸಸ್ ಕನ್ನಡಿಗ ಆಗುತ್ತಿರುವ ಆತಂಕ

ಡಿಜಿಟಲ್ ಕನ್ನಡ ಟೀಮ್:

ತಮಿಳುನಾಡಿನ ವ್ಯಾಪಾರಿ ಸಂಘಟನೆಗಳು ಶುಕ್ರವಾರ ತಮಿಳುನಾಡು ಬಂದ್ ಗೆ ಕರೆ ಕೊಟ್ಟಿವೆ. ಕರ್ನಾಟಕದಲ್ಲಿ ತಮಿಳರ ಮೇಲಾದ ದೌರ್ಜನ್ಯ ಹಾಗೂ ಕಾವೇರಿ ವಿವಾದಕ್ಕೆ ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ನಡೆಸಲಿರುವ ಈ ಬಂದ್ ಗೆ ಡಿಎಂಕೆ ಸೇರಿದಂತೆ ಹಲವು ಪ್ರತಿಪಕ್ಷಗಳ ಬೆಂಬಲ.

ಏನಿದರ ಪರಿಣಾಮ? ಸುಮಾರು 22 ಲಕ್ಷ ಅಂಗಡಿಗಳು ಬಾಗಿಲು ತೆರೆಯುವುದಿಲ್ಲ. ಸುಮಾರು ಮೂರುಲಕ್ಷ ಲಾರಿಗಳು ರಸ್ತೆಗಿಳಿಯುವುದಿಲ್ಲ. ಈ ಪೈಕಿ 35 ಸಾವಿರ ಲಾರಿಗಳು ಕರ್ನಾಟಕ- ತಮಿಳುನಾಡು ಮಧ್ಯೆ ಸಂಚರಿಸುವಂಥವು ಎಂಬುದು ತಮಿಳುನಾಡು ಲಾರಿ ಮಾಲೀಕರ ಸಂಘದ ಅಧ್ಯಕ್ಷರ ಉವಾಚ. ಕರ್ನಾಟಕದಲ್ಲಿ ಬಂದ್ ವೇಳೆ ಹಾನಿಗೀಡಾದ ಲಾರಿಗಳಿಗೆ ಪರಿಹಾರ ಕೊಡಬೇಕು ಎಂಬುದೂ ಬೇಡಿಕೆಗಳಲ್ಲಿ ಸೇರಿದೆ. ಉಳಿದಂತೆ ಪೆಟ್ರೊಲ್ ಬಂಕುಗಳು ಮುಚ್ಚಿ, ಸಂಚಾರ ವ್ಯವಸ್ಥೆಗಳೆಲ್ಲ ಬಂದ್ ಆಗಿ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ವಹಿವಾಟು ಸ್ತಭ್ಧವಾಗಲಿದೆ. ಪೂರ್ವನಿಗದಿತ ಬಂದ್ ಆದ್ದರಿಂದ ದಿಢೀರ್ ಗೊಂದಲಗಳು ಇರಲಾರವು ಎಂಬುದನ್ನು ಬಿಟ್ಟರೆ ಕರ್ನಾಟಕ ಕಂಡ ವ್ಯಾಪಾರ ನಷ್ಟವನ್ನೇ ತಮಿಳುನಾಡು ಸಹ ಕಾಣುವುದು ಖಚಿತ.

ಇರಲಿ, ಬಂದ್ ಎಂಬುದು ಪ್ರಜಾಸತ್ತಾತ್ಮಕ ಹೋರಾಟದ ಪರಿ ಎಂದುಕೊಂಡರೂ ಇಲ್ಲಿರುವ ಅಪಾಯ ಎಂದರೆ ಕಾವೇರಿ ಹೋರಾಟವು ತಮಿಳು ವರ್ಸಸ್ ಕನ್ನಡಿಗ ಎಂದು ಬದಲಾಗುತ್ತಿರುವುದು. ಗಮನಿಸಬೇಕಾದ ವಿಚಾರ ಎಂದರೆ ಎರಡೂ ರಾಜ್ಯಗಳಲ್ಲೂ ಭಾಷಿಕ ನೆಲೆಯ ಹಿಂಸಾಚಾರಗಳು ನಡೆದಿವೆ. ತಮಿಳುನಾಡಿನ ನಂಬರ್ ಪ್ಲೇಟ್ ಲಾರಿಗಳನ್ನು ಕರ್ನಾಟಕದಲ್ಲಿ ದುಷ್ಕರ್ಮಿಗಳು ಸುಟ್ಟಿರುವುದು ಹೇಗೆ ಸತ್ಯವೋ, ಅತ್ತ ಕಡೆಯಿಂದ ಕನ್ನಡಿಗನಿಗೆ ಕಾವೇರಿ ತಮಿಳುನಾಡಿನದೆಂದು ಹೇಳೆಂದು ಥಳಿಸಿದ್ದು, ಕರ್ನಾಟಕದವರಿದ್ದ ಹೊಟೇಲ್ ಮೇಲೆ ಕಲ್ಲು ತೂರಿದ್ದು ಹಾಗೂ ಕರ್ನಾಟಕದ ನಟರ ನಿಂದನೆ ಮೂಲಕ ಪ್ರಚೋದಿಸಿದ್ದು ಇಂಥ ಘಟನೆಗಳಾಗಿವೆ.

ಅಲ್ಲದೇ ಒಟ್ಟಾರೆ ವಿದ್ಯಮಾನಗಳಲ್ಲಿ ಭಾಷೆ ಹೆಸರಲ್ಲಿ ಮತ್ತೇನೋ ಉದ್ದೇಶದಿಂದ ನಡೆದ ಕೃತ್ಯಗಳೂ ಸೇರಿಕೊಂಡಿರುವ ಸೂಚನೆಗಳಿವೆ. ಉದಾಹರಣೆಗೆ ತಮಿಳುನಾಡು ಮೂಲದ ವ್ಯಕ್ತಿಯ ಟ್ರಾವೆಲ್ ಕಂಪನಿಯ 45 ಬಸ್ಸುಗಳು ಸುಟ್ಟಿದ್ದು ದಂಗೆನಿರತರಲ್ಲ, ಬದಲಿಗೆ ಕಂಪನಿಯವರೇ ಪರಿಸ್ಥಿತಿ ಉಪಯೋಗಿಸಿಕೊಂಡು ವಿಮೆ ಹಣ ಬಳಸಿಕೊಳ್ಳುವುದಕ್ಕೆ ಹಳೆಬಸ್ಸುಗಳನ್ನು ಸುಟ್ಟರೆಂಬ ಆರೋಪವಿದೆ. ಇಂಥವೆಲ್ಲ ಇನ್ನಷ್ಟೇ ಸ್ಪಷ್ಟವಾಗಬೇಕಿರುವ ವಿಚಾರಗಳು. ಹೀಗಾಗಿ ಕರ್ನಾಟಕದಿಂದ ತಮಿಳರ ಮೇಲೆ ದೌರ್ಜನ್ಯ ಇಲ್ಲವೇ ತಮಿಳುನಾಡಿನಿಂದ ಕನ್ನಡಿಗರ ಮೇಲೆ ದೌರ್ಜನ್ಯ ಎಂಬ ವಾದಸರಣಿ ಮುಂದುವರಿಸಿಕೊಂಡಿರುವುದು ಇನ್ನಷ್ಟು ದ್ವೇಷ ಹಬ್ಬಲು ಕಾರಣವಾದೀತೇ ಹೊರತು, ಅದರಿಂದ ಪರಿಹಾರಮಾರ್ಗ ಸಿಗುವುದಕ್ಕೇನಿಲ್ಲ.

ಈ ವಿವೇಚನೆ ಪಕ್ಕಕ್ಕಿರಿಸಿ ಬಂದ್- ಪ್ರತಿಬಂದ್ ಗಳಲ್ಲಿ ತೊಡಗಿಸಿಕೊಳ್ಳುತ್ತ ಹೋದರೆ ಅದು ಎಲ್ಲಿಗೆ ಕರೆದುಕೊಂಡು ಹೋಗುವುದೋ?

Leave a Reply