ಬಾಲಿವುಡ್‍ನಲ್ಲಿ ಚಿತ್ರಗೀತೆಗಳು ಕೋಟಿಗಟ್ಟಲೆ ಹಣ ಬಾಚುತ್ತಿರುವಾಗ ಕನ್ನಡದ ಚಿತ್ರಗೀತೆಗಳಿಂದ ಏಕೆ ಸಾಧ್ಯವಾಗುತ್ತಿಲ್ಲ?

author-ssreedhra-murthy2010ರಲ್ಲಿ ತೆರೆ ಕಂಡ ‘ತೀಸ್ ಮಾರ್ ಖಾನ್’ ಚಿತ್ರದಲ್ಲಿ ಸುನಿಧಿ ಚೌಹಾನ್ ಹಾಡಿದ ‘ಶೀಲಾ ಕಿ ಜವಾನಿ’ ಒಳ್ಳೆಯ ಹಾಡೋ ಕೆಟ್ಟ ಹಾಡೋ ಎನ್ನುವುದು ಚರ್ಚೆಗೆ ಬಿಟ್ಟ ವಿಷಯ, ಆದರೆ ಇದು ಭಾರತೀಯ ಚಿತ್ರಗೀತೆಗಳ ಅರ್ಥಶಾಸ್ತ್ರವನ್ನೇ ಬದಲಾಯಿಸಿ ಬಿಟ್ಟಿತು ಎನ್ನುವುದು ಮಾತ್ರ ಸತ್ಯ. ಏಕೆಂದರೆ ಇಂದಿನವರೆಗೆ ಈ ಹಾಡೊಂದೇಗಳಿಸಿದ ಆದಾಯ ಸರಿಸುಮಾರು ಹದಿನೆಂಟು ಕೋಟಿ. ಚಿತ್ರಗಳು ಹಣ ಮಾಡುವುದು ಬೇರೆ, ಚಿತ್ರಗೀತೆಯೊಂದೇ ಈ ಮಟ್ಟಿಗೆ ಹಣ ಮಾಡುವ ಸಾಧ್ಯತೆ ಬೇರೆ, ಹೀಗೂ ಸಾಧ್ಯ ಎಂಬ ಅರಿವು ಬಾಲಿವುಡ್‍ನ ಸ್ವರೂಪವನ್ನೇ ಬದಲಾಯಿಸಿಬಿಟ್ಟಿತು. ಹಾಗೆ ನೋಡಿದರೆ 1990 ರ ನಂತರವೇ ಈ ಮಾದರಿಯ ಬದಲಾವಣೆಯ ಗಾಳಿ ಬೀಸಲು ಆರಂಭಿಸಿತ್ತು. ಚಿತ್ರಗೀತೆಗಳ ವಾಣಿಜ್ಯಿ ಕಬಳಿಕೆ ಬೇರೆ ಬೇರೆ ನೆಲೆಯಲ್ಲಿ ಹೆಚ್ಚಾಗುತ್ತಾ ಸಾಗಿತ್ತು ‘ಹಮ್ ಆಪ್‍ ಕೆ ಹೆ ಕೌನ್’ ಚಿತ್ರದ ಗೆಲುವು ಕೆಲಮಟ್ಟಿಗೆ ಚಿತ್ರಗೀತೆಗಳ ಹಣದ ಹರಿವನ್ನು ತೋರಿಸಿಕೊಟ್ಟಿತ್ತು. ನಂತರ ರಿಯಾಲಿಟಿ ಶೋಗಳ ಸಂಖ್ಯೆ ಹೆಚ್ಚಾಯಿತು, ಮೊಬೈಲ್ ರಿಂಗ್ ಟೋನ್ ಆಗಿ ಚಿತ್ರಗೀತೆಗಳು ಬಳಕೆಯಾಗಲು ಆರಂಭಿಸಿದವು. ಎಫ್‍.ಎಂಗಳ ಸಂಖ್ಯೆ ಹೆಚ್ಚಾಯಿತು.

ಅಲ್ಲಿಯವರೆಗೆ ಚಿತ್ರಗೀತೆಗಳ ಆದಾಯವನ್ನು 1957 ರ ಕೃತಿಸ್ವಾಮ್ಯ ಕಾಯಿದೆ ಸೆಕ್ಷನ್ 33(3)ರಂತೆ ಇಂಡಿಯನ್ ಪರ್ ಫಾರ್ಮಿಂಗ್ ರೈಟ್ಸ್ ಸೊಸೈಟಿ ನಿರ್ವಹಿಸುತ್ತಿತ್ತು. 2004ರಲ್ಲಿ ಅದರ ಆದಾಯ 25 ಕೋಟಿಗಳನ್ನು ದಾಟಿದಾಗ ಮ್ಯೂಸಿಕ್ ಕಂಪನಿಗಳ ಕಣ್ಣುಬಿದ್ದಿತು. ಬಹುತೇಕ ಹಳೆಯ ಚಿತ್ರಗೀತೆಗಳ ಹಕ್ಕನ್ನು ಹೊಂದಿದ ಸಾರೆಗಾಮಸಂಸ್ಥೆ 2005 ಸೆಪ್ಟಂಬರ್ 8ರಂದು ಕಾನೂನು ಹೋರಾಟ ಆರಂಭಿಸಿತು. ಇದು ವಿವಿಧ ಸ್ವರೂಪವನ್ನು ತಾಳಿ 2012ರ ಜೂನ್ 8ರಂದು ಹೊಸ ಹಕ್ಕುಸ್ವಾಮ್ಯ ಕಾಯಿದೆಯನ್ನು ಭಾರತ ಸರ್ಕಾರ ಜಾರಿಗೆ ತಂದಿತು. ಇದರ ಸೆಕ್ಷನ್‍ 31(ಸಿ) ವಾಣಿಜ್ಯಿಕ ಬಳಕೆಯ ಕುರಿತು ಮಾಡಿರುವ ಪ್ರಸ್ತಾಪ ಕ್ರಾಂತಿಕಾರಕ ಬದಲಾವಣೆಗಳಿಗೆ ನಾಂದಿಹಾಡಿತು. ಹಾಗೆ ನೋಡಿದರೆ 1985ರಲ್ಲೇ ‘ಜಾನಿಕಿಬಾಜಿ’ ಚಿತ್ರದ ಹಾಡುಗಳ ಚಿತ್ರೀಕರಣವನ್ನು ಮಾಡುವ ಮೂಲಕ ವೀನಸ್ ಸಂಸ್ಥೆ ಈ ಪ್ರಯೋಗವನ್ನು ಮಾಡಿತ್ತು. ಆದರೆ ಅದು ವಿಫಲವಾಗಿದ್ದರಿಂದ ತಾತ್ಕಾಲಿಕವಾಗಿ ಅಂತಹ ಪ್ರಯೋಗ ನಿಂತಿತ್ತು. ಆದರೆ ಈಗ ಮ್ಯೂಸಿಕ್ ಕಂಪನಿಗಳೇ ಚಿತ್ರ ನಿರ್ಮಾಣದಿಂದ ಹಿಡಿದು ಮಾರುಕಟ್ಟೆಯವರೆಗೆ ಚಿತ್ರಗೀತೆಗಳ ಪೂರ್ಣ ಹಕ್ಕನ್ನು ಹೊಂದುವುದು ಲಾಭದಾಯಕವೂ ಆಯಿತು. ಈಗ ಬಾಲಿವುಡ್‍ನಲ್ಲಿ ಯೂನಿವರ್ಸಲ್, ಟೈಮ್ಸ್‍, ಸೋನಿ, ಜೀ, ಮೊದಲಾದ ಮ್ಯೂಸಿಕ್ ಕಂಪನಿಗಳು ಚಿತ್ರಗೀತೆಗಳನ್ನು ರೂಪಿಸುವುದರಿಂದ ಹಿಡಿದು ಚಿತ್ರೀಕರಿಸುವ ಮಾರಾಟ ಮಾಡುವ ಎಲ್ಲಾ ಹೊಣೆಗಾರಿಕೆಯನ್ನೂ ನಿರ್ವಹಿಸುತ್ತಿವೆ. ಚಿತ್ರ ನಿರ್ಮಾಪಕರಿಗೂ ಚಿತ್ರಗೀತೆಗಳಿಗೂ ಸಂಬಂಧವೇ ಇಲ್ಲದಂತಹ ವಾತಾವರಣ ಇದರಿಂದ ನಿರ್ಮಾಣವಾಗಿದೆ.

ಇದರ ಪರಿಣಾಮ ಈಗ ನೀವು ಮಾರುಕಟ್ಟೆಯಲ್ಲಿ ಕೊತ್ತುಂಬರಿ ಸೊಪ್ಪನ್ನು ಖರೀದಿಸಿಷ್ಟು ಸುಲಭವಾಗಿ ಚಿತ್ರಗೀತೆಗಳನ್ನೂ ಕೊಂಡುಕೊಳ್ಳಬಹುದು. ನಿಮಗೆ ಲವ್ ಸಾಂಗ್ ಬೇಕೆ? ಐಟಂ ನಂಬರ್ ಬೇಕೆ, ಡ್ಯೂಯೆಟ್ ಬೇಕೆ, ಪ್ಯಾಥೋಬೇಕೆ ಎಲ್ಲವೂ ಧ್ವನಿಮುದ್ರಣಗೊಂಡು ಸಿದ್ದವಾಗಿರುತ್ತದೆ. ಅಗತ್ಯ ಬಿದ್ದರೆ ಚಿತ್ರಗೀತೆಯ ಸಾಹಿತ್ಯವನ್ನು ಬದಲಾಯಿಸಿಕೊಡಲಾಗುತ್ತದೆ. ಇವನ್ನು ಬಾಲಿವುಡ್‍ನ ಖ್ಯಾತಗಾಯಕರೇ ಹಾಡಿರುತ್ತಾರೆ. ಕಲಾವಿದರ ಕಾಲ್‍ಶೀಟ್ ಅವರಿಗೆ ನೀಡಿದರೆ ಆಯಿತು, ನಿಮಗೆ ಬೇಕಾದ ಜಾಗದಲ್ಲಿ ಶೂಟಿಂಗ್ ಮಾಡಿ ಹಾಡನ್ನು ತೆರೆಯ ಮೇಲೆ ಕಾಣಲು ಸಿದ್ಧಗೊಳಿಸಿಕೊಡುತ್ತಾರೆ. ಇದನ್ನು ಚಿತ್ರಕ್ಕೆ ನೀವು ಹೊಂದಿಸಿಕೊಂಡರಾಯಿತು. ಆದರೆ ಇಷ್ಟೆಲ್ಲಾ ಮಾಡಿದ ನಂತರ ಹಕ್ಕುಗಳು ನಿಮ್ಮದಾಗಿರುವುದಿಲ್ಲ ಅಷ್ಟೇ! ಇದರಿಂದ ಸೃಜನಶೀಲತೆ ಎಲ್ಲಿ ಉಳಿಯುತ್ತದೆ ಎಂದು ಕೇಳಲೇಬೇಡಿ ‘ಇಲ್ಲಿ ನಾವು ಮಾಡುತ್ತಿರುವುದು ವ್ಯಾಪಾರ ಸಂಸ್ಕೃತಿಯನ್ನು ಉಳಿಸುವ ಕೆಲಸ ಅಲ್ಲ’ ಎಂಬ ಖಡಕ್ ಉತ್ತರ ಬರುತ್ತದೆ. ಮೌಲ್ಯಗಳ ಕುರಿತಂತೂ ಯೋಚಿಸುವಂತೆಯೇ ಇಲ್ಲ. ಹೀಗಿದ್ದರೂ ಬಾಲಿವುಡ್‍ನಲ್ಲಿ ಚಿತ್ರಗೀತೆಗಳು ದಿನದಿಂದ ದಿನಕ್ಕೆ ಲಾಭ ತರುತ್ತಿವೆ. ಕಳೆದ ವರ್ಷ ಚಿತ್ರಗೀತೆಗಳಿಂದ ಬಂದ ಒಟ್ಟು ಆದಾಯ 98.8 ಬಿಲಿಯನ್ ರುಪಾಯಿಗಳು. ಇದರಲ್ಲಿ ಶೇ.50 ಡಿಜಿಟಲ್ ರಂಗದಿಂದ, ಶೇ.20 ನೇರ ಬಳಕೆಯಿಂದ, ಶೇ.20 ಟೆಲಿವಿಷನ್ ಮತ್ತು ಎಫ್.ಎಂಗಳಿಂದ, ಶೇ.10 ಸಾರ್ವಜನಿಕ ಪ್ರದರ್ಶನದಿಂದ ಬಂದಿದೆ. 2019ರ ವೇಳಗೆ ಈ ಹಣದ ಹರಿವು ನಾಲ್ಕು ಪಟ್ಟು ಹೆಚ್ಚಾಗಲಿದೆ ಎನ್ನುವುದು ಸಮೀಕ್ಷೆಯೊಂದರ ನಿರ್ಣಯ.

SHREYA_GHOSHAL1_

ಆದರೆ ಕನ್ನಡಲ್ಲಿ ಏನಾಗುತ್ತಿದೆ? ಕಾಪಿರೈಟ್ ವಿಷಯದಲ್ಲಿ ಯಾರಲ್ಲಿಯೂ ಸ್ಪಷ್ಟತೆ ಇಲ್ಲ. ಸಂಗೀತ ಕಂಪನಿಗಳು ಅಡಿಯೋ ಮಾರುಕಟ್ಟೆ ಕುಸಿದುಹೋಗಿವೆ ಎನ್ನುತ್ತಿವೆ. ಪೈರಸಿ ಇದಕ್ಕೆ ಕಾರಣ ಎಂಬ ಮಾತೂ ಇದೆ. ‘ಪ್ರೇಮಲೋಕ’ದ ನಂತರ ಕನ್ನಡದಲ್ಲಿ ಅಡಿಯೋ ಮಾರುಕಟ್ಟೆ ಕೂಡ ನಿರ್ಮಾಪಕರಿಗೆ ಬಲ ತುಂಬುತ್ತಿತ್ತು. ಚಿತ್ರ ಸೋತರೂ ಅಡಿಯೋದಿಂದ ಹಣ ಬರುವ ನಿರೀಕ್ಷೆ ಇತ್ತು. ಆದರೆ ಇಂದು ಆ ಸ್ಥಿತಿ ಇಲ್ಲ. ಸಂಗೀತ ಕಂಪನಿಗಳು ಮತ್ತು ಸಂಗೀತ ನಿರ್ದೇಶಕರು, ಗೀತ ರಚನೆಕಾರರ ನಡುವೆ ಮುಸುಕಿನ ಯುದ್ಧ ನಡೆಯುತ್ತಿದೆ. ಪರಿಣಾಮ ಚಿತ್ರಗೀತೆಗಳನ್ನು ಬಳಸದಿದ್ದರೇ ಹಣ ಉಳಿಸಬಹುದು ಎಂದು ನಿರ್ಮಾಪಕರು ಯೋಚಿಸುತ್ತಿದ್ದಾರೆ. ಒಂದು ಕಾಲದಲ್ಲಿ ಚಿತ್ರಗೀತೆಗಳನ್ನು ಜನರಿಗೆ ತಲುಪಿಸುತ್ತಿದ್ದ ಆಕಾಶವಾಣಿಯ ಏಕಸ್ವಾಮ್ಯಕ್ಕೆ ತೆರೆ ಬಿದ್ದಿದ್ದು ಹತ್ತಾರು ಎಫ್.ಎಂ ಕೇಂದ್ರಗಳು ತಲೆ ಎತ್ತಿವೆ. ಅವರು ಕೇಳುತ್ತಾರೆ ಎಂದು ಹೀರೋಗಳಷ್ಟೇ ಸಂಭಾವನೆ ಕೊಟ್ಟು ಸೋನು ನಿಗಮ್, ಶ್ರೇಯಾ ಘೋಷಲ್ ಅವರನ್ನು ಕರೆ ತರುವ ನಿರ್ಮಾಪಕರು ಈ ವಿವೇಚನಾರಹಿತ ನಡೆಯಿಂದ ಕೈಸುಟ್ಟುಕೊಳ್ಳುತ್ತಿದ್ದಾರೆ. ಕನ್ನಡದಲ್ಲಿ ಚಿತ್ರಗೀತೆಗಳ ಮಧುರತೆಯ ಯುಗ ಮುಗಿದು ಹಲವು ವರ್ಷಗಳೇ ಕಳೆದಿವೆ. ಈಗ ಅದು ಹಣ ತರುವ ಕ್ಷೇತ್ರವಾಗಿ ಕೂಡ ಉಳಿದಿಲ್ಲ.

ಬಾಲಿವುಡ್‍ನಲ್ಲಿ ಚಿತ್ರಗೀತೆಗಳು ಹಣದ ಹೊಳೆಯನ್ನೇ ತರುತ್ತಿದ್ದರೆ ನಮ್ಮಲ್ಲಿ ಹೀಗೇಕೆ ಗಂಭೀರವಾಗಿ ಯೋಚಿಸಬೇಕಾದ ವಿಷಯವಲ್ಲವೆ? ಸಂಸ್ಕೃತಿಯ ಮಾತು ಬಿಡಿ ಕನಿಷ್ಠ ವಾಣಿಜ್ಯದ ದೃಷ್ಟಿಯಿಂದಲಾದರೂ!

Leave a Reply