ಮತ್ತೆ ‘ಕೈ’ ತಪ್ಪಿದ ಅರುಣಾಚಲ ಪ್ರದೇಶ, ರಣ ಚಾಣಾಕ್ಷ್ಯ ಅಮಿತ್ ಶಾ ಎದುರು ರಾಹುಲ್ ಪ್ರಣೀತ ಕಾಂಗ್ರೆಸ್ಸಿಗೆ ಈಶಾನ್ಯದಲ್ಲಿ ಮಂಚವೇ ಗತಿ ಎಂಬುದೇ ಸಂದೇಶ

ಡಿಜಿಟಲ್ ಕನ್ನಡ ಟೀಮ್:

ಕೇವಲ ಎರಡು ತಿಂಗಳ ಹಿಂದೆ ಪಕ್ಷದಲ್ಲಿನ ಬಂಡಾಯವನ್ನು ಬಗೆಹರಿಸಲು ಬಂಡಾಯದ ಗುಂಪಿನವರೇ ಆಗಿದ್ದ ಪೆಮಾ ಖಂಡು ಅವರನ್ನು ಮುಖ್ಯಮಂತ್ರಿ ಮಾಡಿ ಅರುಣಾಚಲ ಪ್ರದೇಶದಲ್ಲಿ ತನ್ನ ಸರ್ಕಾರ ಉಳಿಸಿಕೊಂಡಿದ್ದ ಕಾಂಗ್ರೆಸ್, ಬಿಜೆಪಿ ವಿರುದ್ಧ ಸೆಡ್ಡು ಹೊಡೆದು ಬೀಗಿತ್ತು. ಆದರೆ ಕಾಂಗ್ರೆಸ್ ನ ಈ ಸಂತೋಷ ಹೆಚ್ಚಿನ ದಿನ ಉಳಿಯಲೇ ಇಲ್ಲ. ಕಾರಣ, ಶುಕ್ರವಾರ ಮುಖ್ಯಮಂತ್ರಿ ಪೆಮಾ ಖಂಡು ಸೇರಿದಂತೆ ಕಾಂಗ್ರೆಸ್ಸಿನ 43 ಹಾಗೂ ಇಬ್ಬರು ಪಕ್ಷೇತರ ಶಾಸಕರು ಸ್ಥಳೀಯ ಪಕ್ಷವಾದ ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲ್ (ಪಿಪಿಎ) ಜತೆ ವಿಲೀನವಾಗಿದ್ದಾರೆ. ಇದರೊಂದಿಗೆ ಅರುಣಾಚಲ ಪ್ರದೇಶದ ಮೇಲಿನ ನಿಯಂತ್ರಣವನ್ನು ಕಾಂಗ್ರೆಸ್ ಮತ್ತೆ ಕಳೆದುಕೊಂಡಿದೆ.

ಬಹುಸಂಖ್ಯಾತ ಶಾಸಕ ಬಲದೊಂದಿಗೆ ಇಂಥದೊಂದು ವಿಲೀನ ನಡೆದಿರುವುದರಿಂದ ಪಕ್ಷಾಂತರ ಕಾಯ್ದೆ ವ್ಯಾಪ್ತಿಗೂ ಇದು ಬರುವುದಿಲ್ಲ. ‘ಇದರಲ್ಲಿ ಬಿಜೆಪಿಯನ್ನು ದೂರಬೇಡಿ. ಕಾಂಗ್ರೆಸ್ ತೊರೆದವರು ಬಿಜೆಪಿಯನ್ನು ಸೇರಿಲ್ಲ, ಸ್ಥಳೀಯ ಪಕ್ಷವನ್ನು ಸೇರಿಕೊಂಡಿದ್ದಾರೆ’ ಎಂದು ಅರುಣಾಚಲದವರಾದ, ಕೇಂದ್ರ ಸಚಿವರೂ ಆಗಿರುವ ಕಿರಣ್ ರಿಜಿಜು ಪ್ರತಿಕ್ರಿಯಿಸಿದ್ದಾರೆ.

ಈ ಪಿಪಿಎ ಬಿಜೆಪಿಯ ಮೈತ್ರಿ ಪಕ್ಷವಾಗಿದೆ. 60 ಶಾಸಕರ ಸಾಮರ್ಥ್ಯವಿರುವ ಅರುಣಾಚಲ ಪ್ರದೇಶದಲ್ಲಿ ಕಾಂಗ್ರೆಸ್ 44 ಸ್ಥಾನ ಹೊಂದಿತ್ತು, ಇನ್ನು 2 ಪಕ್ಷೇತರರಿಂದ ಬೆಂಬಲದೊಂದಿಗೆ ಸರ್ಕಾರ ರಚಿಸಿತ್ತು. ಈಗ ಖಂಡು ತನ್ನ ಜತೆಗೆ ಇತರೆ 42 ಶಾಸಕರನ್ನು ಕಾಂಗ್ರೆಸ್ ನಿಂದ ಹೊರಗೆ ಕರೆದುಕೊಂಡು ಬಂದಿದ್ದಾರೆ. ಹೀಗಾಗಿ ಸದ್ಯ ಕಾಂಗ್ರೆಸ್ ನಲ್ಲಿ ಕೇವಲ ಒಬ್ಬ ಶಾಸಕ ಮಾತ್ರ ಉಳಿದಿದ್ದಾರೆ. ಅದು ಬೇರೆಯಾರೂ ಅಲ್ಲ, ಬಂಡಾಯವನ್ನು ಹತ್ತಿಕ್ಕಲು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿ ಪೆಮಾ ಖಂಡುಗೆ ಜಾಗ ಮಾಡಿಕೊಟ್ಟಿದ ನಬಮ್ ತುಕಿ.

ಹೀಗೆಲ್ಲ ಪಕ್ಷ ತೊರೆಯುವವರ ನೈತಿಕತೆ ಏನು ಎಂಬೆಲ್ಲ ಪ್ರಶ್ನೆಗಳು ಪ್ರಸ್ತುತವೇ ಆದರೂ ಈ ಹಂತದಲ್ಲಿ ಒಂದಂಶವನ್ನು ಕಾಂಗ್ರೆಸ್ ಅರ್ಥ ಮಾಡಿಕೊಳ್ಳಬೇಕು. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಪಕ್ಷ ಸಂಘಟನೆ ವಿಚಾರದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಹತ್ತಿರಕ್ಕೂ ಬರುವುದಿಲ್ಲ. ಅರುಣಾಚಲದಲ್ಲಿ ಕಾಂಗ್ರೆಸ್ ಈ ಸ್ಥಿತಿಗೆ ಬಂದಿರುವುದಕ್ಕೆ ಪಕ್ಷ ತೊರೆದವರನ್ನು ಟೀಕಿಸುವುದಕ್ಕಿಂತ ಮೊದಲು, ಕಾಂಗ್ರೆಸ್ಸಿನ ಹೈಕಮಾಂಡ್ ಇವರೆಲ್ಲರೊಂದಿಗೆ ಸಂಪರ್ಖ ಇರಿಸಿಕೊಳ್ಳುವುದರಲ್ಲಿ, ವಿಶ್ವಾಸ ಗೆಲ್ಲುವಲ್ಲಿ ಸಂಪೂರ್ಣ ವಿಫಲವಾಯಿತು ಎಂಬುದೇ ಸ್ಪಷ್ಟವಾಗಿ ತೋರುತ್ತಿರುವ ಅಂಶ. ಅಸ್ಸಾಮಿನಲ್ಲಿ ಬಿಜೆಪಿ ಜತೆ ಕೈಜೋಡಿಸಿ, ಈಶಾನ್ಯ ಭಾರತದಲ್ಲಿ ಅದಕ್ಕೆ ನಿರ್ಣಾಯಕ ಅಧಿಕಾರ ಜಾಗವೊಂದನ್ನು ದೊರಕಿಸುವಲ್ಲಿ ಸಫಲರಾಗಿದ್ದ ಹಿಮಂತೊ ಸರ್ಮ ಅವರ ಮಾತುಗಳಲ್ಲೇ ರಾಹುಲ್ ನಾಯಕತ್ವದ ವೈಫಲ್ಯ ಚೆನ್ನಾಗಿ ಬಿಂಬಿತವಾಗಿದೆ. ಈಶಾನ್ಯ ಭಾರತದ ಸ್ಥಳೀಯ ನಾಯಕರೊಂದಿಗೆ ರಾಹುಲ್ ಗಾಂಧಿ ಬೆರೆಯದೇ, ವಾಸ್ತವಗಳನ್ನೇನನ್ನೂ ಅರಿಯದೇ, ತನ್ನದೇ ಹಿಂಬಾಲಕರ ನಡುವೆ ಇದ್ದಿದ್ದೇ ತಾವು ಆ ಪಾಳೆಯ ತೊರೆಯಲು ಕಾರಣ ಎಂದು ಹಿಮಂತೊ ಹಲವು ಸಂದರ್ಶನಗಳಲ್ಲಿ ಪದೇ ಪದೆ ಹೇಳಿದ್ದಾರೆ.

ಬಹುಶಃ ಇಷ್ಟೇ ಆಗಿದ್ದರೆ ಸಂಕಷ್ಟ-ಜಗಳಗಳ ನಡುವೆಯೇ ಕಾಂಗ್ರೆಸ್ ಹಾಗೂ ಹೀಗೂ ಉಸಿರಾಡಿಕೊಂಡಿರುತ್ತಿತ್ತೇನೋ. ಆದರೆ ಈಶಾನ್ಯ ಭಾರತದ ಮೇಲೆ ತೀವ್ರ ಗಮನ ಕೇಂದ್ರೀಕರಿಸಿರುವ ಬಿಜೆಪಿ ಅಲ್ಲಿ ಪರ್ಯಾಯ ರಾಜಕೀಯ ಶಕ್ತಿಯೊಂದನ್ನು ಸಂಯೋಜಿಸಿದೆ. ನಾರ್ತ್ ಈಸ್ಟ್ ಡೆಮಾಕ್ರಟಿಕ್ ಅಲಾಯನ್ಸ್ ಹೆಸರಲ್ಲಿ ಕಾಂಗ್ರೆಸ್ಸೇತರ ಶಕ್ತಿಗಳನ್ನೆಲ್ಲ ಒಗ್ಗೂಡಿಸುವ ಯತ್ನವನ್ನು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಎಂದೋ ಶುರುಹಚ್ಚಿಕೊಂಡಿದ್ದಾರೆ. ಸಿಕ್ಕಿಂನಂಥ ಬಿಜೆಪಿಯ ಬೇರುಗಳೇ ಇರದಿದ್ದ ಕಡೆಯೂ ಅದಾಗಲೇ ಸಂಘಟನಾತ್ಮಕ ಶ್ರಮಗಳು ತಳಮಟ್ಟದಿಂದ ಶುರುವಾಗಿವೆ. ಹೀಗೆಲ್ಲ ಇರುವಾಗ ಕಾಂಗ್ರೆಸ್ ವಹಿಸಬೇಕಾಗಿದ್ದ ಎಚ್ಚರಿಕೆ- ಆಕ್ರಮಣಶೀಲತೆ ಎಂಥಾದ್ದು? ಈ ಹಿಂದೆ ಅರುಣಾಚಲದಲ್ಲಿ ರಾಷ್ಟ್ರಪತಿ ಆಡಳಿತ ಹೇರಿದಾಗ ಅದು ಕೇಂದ್ರದ ಬಿಜೆಪಿಯನ್ನು ಬಯ್ದುಕೊಳ್ಳಲು ಶುರುಮಾಡಿತು. ಸುಪ್ರೀಂಕೋರ್ಟ್ ಸಹ ಇದನ್ನು ತೆರವುಗೊಳಿಸಿದಾಗ, ದೇಶಾದ್ಯಂತ ಜನಾಭಿಪ್ರಾಯ ಸಹ ಇದು ಬಿಜೆಪಿಯ ದುಸ್ಸಾಹಸವಾಗಿತ್ತು ಎಂದೇ ವ್ಯಕ್ತವಾಯಿತು. ಕಾಂಗ್ರೆಸ್ ಈ ಚಿಕ್ಕ ವಿಜಯದಲ್ಲೇ ಪುಳಕಿತಗೊಂಡು ಮೋದಿ-ಅಮಿತ್ ಶಾ ವಿರುದ್ಧ ವಾಗ್ದಾಳಿ ಮಾಡಿಕೊಂಡಿರುವಾಗ, ಅವರಾಗಲೇ ಎರಡನೇ ನಡೆ ಯೋಜಿಸುತ್ತ ಕುಳಿತುಬಿಟ್ಟಿದ್ದರು. ಈಗ ಬೆಲೆ ತೆರುತ್ತಿದ್ದಾರೆ.

‘ಇಂದು ವಿಧಾನ ಸಭೆಯ ಸ್ಪೀಕರ್ ಅವರನ್ನು ಭೇಟಿ ಮಾಡಿ, ಕಾಂಗ್ರೆಸ್ ಪಕ್ಷವನ್ನು ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲ್ ಜತೆ ವಿಲೀನ ಮಾಡಿಕೊಳ್ಳುತ್ತಿರುವುದಾಗಿ ಮಾಹಿತಿ ನೀಡಿದ್ದೇನೆ’ ಎಂದು ಪೆಮಾ ಖಂಡು ಮಾಹಿತಿ ನೀಡಿರುವುದಾಗಿ ಪಿಟಿಐ ವರದಿ ಮಾಡಿದೆ.

ಇದರೊಂದಿಗೆ ಅರುಣಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಆಡಳಿತ ಅಂತ್ಯಗೊಂಡಿದ್ದು, ಪಿಪಿಎ ಅಧಿಕಾರಕ್ಕೆ ಬರುವಂತಾಗಿದೆ. ಇದು ಕಾಂಗ್ರೆಸ್ಸಿಗೆ ಎಷ್ಟು ಹಿನ್ನಡೆಯೋ ಅಷ್ಟೆ ಪ್ರಮಾಣದಲ್ಲಿ ಬಿಜೆಪಿಗೆ ಜಯವೂ ಆಗಿದೆ. ಅನಾರೋಗ್ಯದ ಕಾರಣವೋ ಏನೋ, ಇದ್ದಿದ್ದರಲ್ಲಿ ಆಗಾಗ ಕಾಂಗ್ರೆಸ್ಸಿನ ಡ್ಯಾಮೇಜ್ ಕಂಟ್ರೋಲ್ ಮಾಡುತ್ತಿದ್ದ ಸೋನಿಯಾ ಗಾಂಧಿಯವರೂ ಮುನ್ನಲೆಯಲ್ಲಿಲ್ಲ. ಮಂಚದಲ್ಲಿ ಮೈಚೆಲ್ಲಿ ಕ್ರಾಂತಿ ಮಾಡುವ ದುಬಾರಿ ಕನಸನ್ನು ಪ್ರಶಾಂತ್ ಕಿಶೋರರಿಂದ ಖರೀದಿಸಿ, ಮಗುವಿಗೆ ಹೊಸ ಆಟಿಕೆ ಸಿಕ್ಕಾಗಿನ ಸಂಭ್ರಮವೊಂದರಲ್ಲಿ ಮೈಮರೆತಂತಿರುವ ರಾಹುಲ್ ಗಾಂಧಿಗೆ ಇವ್ಯಾವವನ್ನೂ ಸಂಭಾಳಿಸುವ ಸಾಮರ್ಥ್ಯವಿಲ್ಲ. ಎಲ್ಲರಿಗೂ ಗೊತ್ತಿರುವ ಈ ಸತ್ಯವನ್ನು ಕಾಂಗ್ರೆಸ್ಸಿಗರು ಬೇಗ ಒಪ್ಪಿಕೊಂಡಷ್ಟೂ ಅವರಿಗೇ ಒಳಿತಾಗಲಿದೆ.

ಅರುಣಾಚಲ ಪ್ರದೇಶದ ಕಾಂಗ್ರೆಸ್ ನಲ್ಲಿ ಕಳೆದ ಒಂದು ವರ್ಷದಲ್ಲಿನ ಬಂಡಾಯದ ಹಾದಿ, ಅದನ್ನು ಬಗೆಹರಿಸಲು ಕಾಂಗ್ರೆಸ್ ಪಟ್ಟ ಪ್ರಯತ್ನ ಹಾಗೂ ಬಂಡಾಯ ಬಗೆಹರಿಸಿ ಸರ್ಕಾರ ಉಳಿಸಿಕೊಂಡು ಬಿಜೆಪಿಗೆ ಕೊಟ್ಟ ತಿರುಗೇಟಿನ ಬಗ್ಗೆ ಈ ಹಿಂದೆ ಡಿಜಿಟಲ್ ಕನ್ನಡ ನೀಡಿದ್ದ ವರದಿ ಇಲ್ಲಿದೆ ನೋಡಿ.

Leave a Reply