ಬಿರುಸಾಗುತ್ತಿದೆ ಪಾಕಿಸ್ತಾನದ ವಿರುದ್ಧ ಭಾರತದ ಬಲೊಚ್ ಪಂಚ್:  ಆಕಾಶವಾಣಿ ಸಹಯೋಗ, ಬಲೊಚ್ ಹೋರಾಟಗಾರರಿಗೆ ಆಶ್ರಯ, ವಿಶ್ವಸಂಸ್ಥೆಯಲ್ಲೂ ಧ್ವನಿ, ಜಾಗತಿಕ ಚರ್ಚಾಕೇಂದ್ರವಾಯ್ತು ಬಲೊಚ್

ಡಿಜಿಟಲ್ ಕನ್ನಡ ಟೀಮ್:
ಪಾಕಿಸ್ತಾನದ ವಿರುದ್ಧ ಭಾರತದ ರಾಜತಾಂತ್ರಿಕ ಸಮರ ಕಳೆಗಟ್ಟಿದೆ. ಒಂದು ತಿಂಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯೋತ್ಸವದ ಭಾಷಣ ಮಾಡುತ್ತಲೇ ಇಂಥದೊಂದು ರಾಜತಾಂತ್ರಿಕ ಸಮರದ ಕುರುಕ್ಷೇತ್ರ ಬಲೊಚಿಸ್ತಾನವಾಗಲಿದೆ ಎಂಬುದರ ಸೂಚನೆ ನೀಡಿದ್ದರು. ಅದಾಗಿ ಒಂದು ತಿಂಗಳ ಅವಧಿಯಲ್ಲಿ ಆ ನಿಟ್ಟಿನಲ್ಲಿ ಅತಿ ತ್ವರಿತವಾಗಿ ಆಗುತ್ತಿರುವ ಬೆಳವಣಿಗೆಗಳು ಹೀಗಿವೆ.

  • ಇವತ್ತು ಶುಕ್ರವಾರ ಪ್ರಸಾರ ಭಾರತಿ ಅಧ್ಯಕ್ಷ ಅರಕಲಗೂಡು ಸೂರ್ಯಪ್ರಕಾಶ್ ಅವರು ಆಲ್ ಇಂಡಿಯಾ ರೆಡಿಯೊದ ಬಲೊಚಿ ಭಾಷೆಯ ಸೇವೆ ಹಾಗೂ ಈ ಸಂಬಂಧದ ಕಿರುತಂತ್ರಾಂಶ ಮತ್ತು ವೆಬ್ ಪುಟವನ್ನು ಲೋಕಾರ್ಪಣೆ ಮಾಡುತ್ತಿದ್ದಾರೆ. ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧೀನದಲ್ಲಿ ‘ಎಕ್ಸಟರ್ನಲ್ ಸರ್ವೀಸ್ ಡಿವಿಷನ್’ (ಇಎಸ್ಡಿ) ಎಂಬ ವಿಭಾಗವು ವಿದೇಶಿ ಭಾಷೆಗಳಲ್ಲಿ ಸೇವೆ ನೀಡುವ ಯೋಜನೆಗಳಲ್ಲಿ ತೊಡಗಿಸಿಕೊಂಡಿದೆ. ಆ ಪ್ರಕಾರ 1974-75ರಲ್ಲೇ ಬಲೊಚಿ ಭಾಷೆ ಸೇರಿಕೊಂಡಿತ್ತಾದರೂ ಕೆಳಮಟ್ಟದ ತರಂಗಾಂತರ ಸೇವೆಗಳಿದ್ದವು. ಇದನ್ನು ಈಗ ಸುಧಾರಿತ ರೂಪಕ್ಕೆ ಎತ್ತರಿಸಲಾಗಿದ್ದು ಜಗತ್ತಿನಾದ್ಯಂತ ಇರುವ ಬಲೊಚಿ ಭಾಷಾ ಜನರಿಗೆ ಇದನ್ನು ದೊರಕಿಸಲಾಗುತ್ತದೆ. ಇಎಸ್ಡಿ ಅದಾಗಲೇ 27 ವಿದೇಶಿ ಭಾಷೆಗಳಲ್ಲಿ 108 ದೇಶಗಳಿಗೆ ಸೇವೆ ನೀಡುತ್ತಿದೆ. ಹೆಚ್ಚಿನವು ಪೂರ್ವ ಮತ್ತು ದಕ್ಷಿಣ ಏಷ್ಯ ಗಮನವನ್ನು ಹೊಂದಿದ್ದವು.
  • ಪಾಕಿಸ್ತಾನದ ದಮನ ನೀತಿಯಿಂದ ದೇಶಭ್ರಷ್ಟರಾಗಿ ಜರ್ಮನಿಯಲ್ಲಿದ್ದುಕೊಂಡು ಬಲೊಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುತ್ತಿರುವ ಬ್ರಹುಮ್ದಾಗ್ ಬುಗ್ತಿ ಎಂಬ ನಾಯಕನಿಗೆ ಭಾರತದಲ್ಲಿ ಆಶ್ರಯ ಸಿಗುವುದು ಬಹುತೇಕ ಖಚಿತವಾಗಿದೆ. ಈ ಬಗ್ಗೆ ಜಿನೆವಾದ ಭಾರತೀಯ ದೂತಾವಾಸ ಕಚೇರಿಯಲ್ಲಿ  ಸೆ.18-19ರಂದು ನಡೆಯುವ ಸಭೆಯಲ್ಲಿ ನಿರ್ಧಾರ ಹೊರಬೀಳಲಿದೆ ಎಂದು ‘ಇಂಡಿಯಾ ಟುಡೆ’ ವರದಿ ಮಾಡಿದೆ. ಬಲೊಚಿಸ್ತಾನ ರಿಪಬ್ಲಿಕನ್ ಪಾರ್ಟಿ ಹೆಸರಲ್ಲಿ ಸ್ವಾತಂತ್ರ್ಯ ಹೋರಾಟ ನಡೆಸುತ್ತಿರುವ ಬುಗ್ತಿ, ಭಾರತದ ಪಾಸ್ಪೋರ್ಟ್ ಬಳಸಿಕೊಂಡೇ ಜಗತ್ತಿನಾದ್ಯಂತ ಸಂಚರಿಸುವ ದಿನಗಳು ಸಾಕಾರವಾಗಲಿವೆ. ಇವರ ಸಹಚರರಾದ ಶೇರ್ ಮೊಹಮದ್ ಬುಗ್ತಿ ಹಾಗೂ ಅಜಿಜುಲ್ಲಾ ಬುಗ್ತಿ ಸಹ ಭಾರತೀಯ ಪಾಸ್ಪೋರ್ಟ್ ಪಡೆಯಲಿದ್ದಾರೆ.
  • ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಷಯವನ್ನಿಟ್ಟುಕೊಂಡು ಭಾರತವು ಸೇನಾಬಲ ಪ್ರಯೋಗಿಸುತ್ತಿದೆ ಎಂದು ಬಿಂಬಿಸುವ ಪಾಕಿಸ್ತಾನಕ್ಕೆ ಉತ್ತರಿಸುತ್ತ ಭಾರತವು ಅದೇ ವಿಶ್ವಸಂಸ್ಥೆ ವೇದಿಕೆಯಲ್ಲಿ ಬಲೊಚಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರಗಳಲ್ಲಿ ಆಗುತ್ತಿರುವ ನಿರಂತರ ಮಾನವ ಹಕ್ಕು ಉಲ್ಲಂಘನೆಗಳ ಬಗ್ಗೆ ಬುಧವಾರವೇ ಪ್ರಶ್ನೆ ಎತ್ತಿದೆ. ಪಾಕಿಸ್ತಾನವು ತನ್ನದೇ ಪ್ರಜೆಗಳಾದ ಬಲೊಚಿಗರ ಮೇಲೆ ಹಿಂಸಾಚಾರ ಎಸಗುತ್ತಿದೆ ಎಂದು ಭಾರತದ ರಾಯಭಾರಿ ಹಾಗೂ ವಿಶ್ವಸಂಸ್ಥೆಯಲ್ಲಿ ಭಾರತದ ಪ್ರತಿನಿಧಿ ಅಜಿತ್ ಕುಮಾರ್ ಹೇಳಿರುವುದು ಮುಖ್ಯ ಬೆಳವಣಿಗೆ. ಏಕೆಂದರೆ, ವಿಶ್ವಸಂಸ್ಥೆಯ ಜಾಗತಿಕ ವೇದಿಕೆಯಲ್ಲಿ ಪಾಕಿಸ್ತಾನದ ಆಂತರಿಕ ವಿಷಯವನ್ನು ಭಾರತ ಪ್ರಸ್ತಾಪಿಸಿರುವುದು ಇದೇ ಮೊದಲು.
  • ಭಾರತ ಭೇಟಿಗೆ ಆಗಮಿಸಿದ್ದ ಅಫ್ಘನ್ ಅಧ್ಯಕ್ಷ ಅಶ್ರಫ್ ಗನಿ ಸಹ ಪಾಕಿಸ್ತಾನದ ಬಗೆಗಿನ ತಮ್ಮ ಪರೋಕ್ಷ ಮಾತುಕತೆಯಲ್ಲಿ ಹಲವು ಬಗೆಯ ಅಸಮಾಧಾನಗಳನ್ನು ವ್ಯಕ್ತಪಡಿಸುತ್ತ, ಬಲೊಚಿಸ್ತಾನದಲ್ಲಿ ಪಾಕಿಸ್ತಾನ ಬಳಸುತ್ತಿರುವ ಸೇನಾಬಲವನ್ನು ಪ್ರಶ್ನಿಸಿದ್ದಾರಲ್ಲದೇ ಇದೇ ಮಾದರಿಯನ್ನು ಪಾಕಿಸ್ತಾನವು ಅಫಘಾನಿಸ್ತಾನ ಗಡಿಯ ಪ್ರದೇಶಗಳಾದ ವಾಯುವ್ಯ ಪ್ರಾಂತ್ಯಗಳಲ್ಲೂ ಉಪಯೋಗಿಸುತ್ತಿದೆ ಎಂಬ ಆಕ್ಷೇಪದ ಮಾತುಗಳನ್ನಾಡಿರುವುದು ಗಮನಾರ್ಹ.

ಹೀಗೆ ಭಾರತದ ಬೆಂಬಲದೊಂದಿಗೆ ಬಲೊಚಿಸ್ತಾನವು ಅಂತಾರಾಷ್ಟ್ರೀಯ ಚರ್ಚೆಯ ವಿಷಯವಾಗುತ್ತಿದ್ದು ಪಾಕಿಸ್ತಾನಕ್ಕೆ ಭಿನ್ನ ಒತ್ತಡವೊಂದನ್ನು ಎದುರಾಗಿಸಿದೆ. ಈ ನಿಟ್ಟಿನ ಪ್ರಕ್ರಿಯೆಗಳೆಲ್ಲ ಶುರುವಾಗಿದ್ದು ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಪ್ರಧಾನಿಯ ಕೆಂಪುಕೋಟೆ ಭಾಷಣದಲ್ಲಿ. ಪ್ರಧಾನಿ ಮೋದಿ ಮಾತಲ್ಲಿ ಬಲೊಚಿಸ್ತಾನದಲ್ಲಿ ಆಗುತ್ತಿರುವ ಮಾನವಹಕ್ಕುಗಳ ಉಲ್ಲಂಘನೆ ಪ್ರಸ್ತಾಪವಾಗುತ್ತಲೇ ಈ ಸಮರ ತೆರೆದುಕೊಂಡಿತು. ಅದಕ್ಕೂ ಮೊದಲು ಕಾಶ್ಮೀರದ ಕುರಿತ ಸರ್ವಪಕ್ಷಗಳ ಸಭೆಯಲ್ಲಿ ಪ್ರಧಾನಿ ಮೋದಿ, ಪಾಕಿಸ್ತಾನವನ್ನು ಎದುರಿಸುವಾಗ ಪಾಕ್ ಆಕ್ರಮಿತ ಕಾಶ್ಮೀರ ಹಾಗೂ ಬಲೊಚಿಸ್ತಾನಗಳಲ್ಲಾಗುತ್ತಿರುವ ಮಾನವ ಹಕ್ಕುಗಳ ದಮನವನ್ನು ನಾವು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ತೆರೆದಿರಿಸಬೇಕು ಎಂದು ಹೇಳಿದ್ದರು. ತಮ್ಮ ಈ ಮಾತಿಗೆ ಬಲೊಚಿಗಳು ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ ಜನರು ಧನ್ಯವಾದ ಹೇಳುತ್ತಿದ್ದಾರೆ ಎಂದು ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಹೇಳುತ್ತಲೇ ಸಾಮಾಜಿಕ ಮಾಧ್ಯಮದಲ್ಲಿ ಬಲೊಚಿಸ್ತಾನ ಸ್ವಾತಂತ್ರ್ಯ ಹೋರಾಟಗಾರರು ಭಾರತದ ಬೆಂಬಲಕ್ಕೆ ಧನ್ಯವಾದ ಹೇಳುತ್ತ ಪಾಕಿಸ್ತಾನದ ವಿರುದ್ಧ ತೀವ್ರ ಮಾಹಿತಿ ಯುದ್ಧದಲ್ಲಿ ತೊಡಗಿಕೊಂಡರು. ಇವರ ಹೋರಾಟ ಹಳೆಯದೇ ಆಗಿದ್ದರೂ ಭಾರತದ ಪ್ರಧಾನಿಯ ಹೇಳಿಕೆಯಿಂದ ಹಿಂದೆಂದೂ ಸಿಗದಿದ್ದ ಅಂತಾರಾಷ್ಟ್ರೀಯ ಗಮನ ಸಿಕ್ಕಿಬಿಟ್ಟಿತು. ಇದನ್ನು ಚೆನ್ನಾಗಿಯೇ ಬಳಸಿಕೊಂಡ ಹೋರಾಟಗಾರರು ಪಾಶ್ಚಾತ್ಯ ರಾಷ್ಟ್ರಗಳ ರಾಯಭಾರಿ ಕಚೇರಿಗಳ ಎದುರು ಬಲೊಚ್ ಬಾವುಟ ಹಿಡಿದು ಪಾಕ್ ವಿರುದ್ಧ ಪ್ರತಿಭಟನೆ ತೀವ್ರಗೊಳಿಸಿದರು. ಇಂಥ ಎಲ್ಲ ಸತ್ಯಾಗ್ರಹಗಳಲ್ಲಿ ಭಾರತದ ತ್ರಿವರ್ಣ ಧ್ವಜ ಹಾಗೂ ಪ್ರಧಾನಿ ಮೋದಿ ಚಿತ್ರಗಳು ಜತೆಯಾಗಿದ್ದು ವಿಶೇಷ.

Leave a Reply