ಭಾರತದ ಬಂದರುಕಟ್ಟೆಯಲ್ಲಿ ಶಿಪ್ಪಿಂಗ್ ಲಾಬಿಯೆಂಬ ಮೋಸ, ಮೋದಿ ಸರ್ಕಾರ ಬದಲಿಸೀತೇ ಇದರ ಚಿತ್ರ?

praveen kumar shetty (2)ಪ್ರವೀಣ್ ಶೆಟ್ಟಿ, ಕುವೈತ್

ಕ್ರಿ.ಶ 1333 ರಲ್ಲಿ ಭಾರತಕ್ಕೆ ಕಾಲಿಟ್ಟ ಇಬ್ನ ಬಟೂಟ ಎಂಬ ಹೆಸರಿನ ಮೊರೊಕ್ಕೋ ದೇಶದ ಪ್ರವಾಸಿಗನು, ಭಾರತದಲ್ಲಿರುವ ಸುಂದರವಾದ ಬಂದರುಗಳ ಬಗ್ಗೆ ತನ್ನ ಪ್ರವಾಸ ಕಥನದಲ್ಲಿ ಸವಿಸ್ತಾರವಾಗಿ ಬರೆದಿದ್ದಾನೆ. ದೆಹಲಿಯಿಂದ ಗೋವಾಕ್ಕೆ ತಲುಪಿದ ಇಬ್ನ ಬಟೂಟ, ಬಂದರು ಕಟ್ಟೆಗಳಾದ ಹಿನ್ವಾರ್ (ಈಗಿನ ಹೊನ್ನಾವರ), ಬಾರ್ಸೆಲೋರ್ (ಈಗಿನ ಬಸ್ರೂರು), ಫ಼ಕ್ಕಾನ್ನೂರು (ಬಹುಶಃ ಈಗಿನ ಬಾರ್ಕೂರು) ಮತ್ತು ಮಂಜುರಾನ್ (ಈಗಿನ ಮಂಗಳೂರು) ಗೆ ಭೇಟಿ ಕೊಟ್ಟಿದ್ದನು. ಇಬ್ನ ಬಟೂಟನ ಪ್ರವಾಸ ಕಥನದಲ್ಲಿ ಚೀನಾ ದೇಶದ ಹಡಗೊಂದು ಕಲ್ಲಿಕೋಟೆಯ ಬಂದರಿನಲ್ಲಿ ಲಂಗರು ಹಾಕಿದ್ದು ಮತ್ತು ಅದರ ಗಾತ್ರ, ಪರಿಮಾಣಗಳ ಬಗ್ಗೆ ಸ್ಪಷ್ಟವಾಗಿ ವರ್ಣಿಸಿದ್ದಾನೆ. ಎಂಟು ಶತಮಾನಗಳ ಹಿಂದೆಯೇ ಆಗಿನ ಕಾಲದ ವಿಶ್ವದ ಬೃಹತ್ ಹಡಗುಗಳನ್ನು ನಿಭಾಯಿಸುತ್ತಾ ಬಂದಿದ್ದ ಭಾರತದ ಬಂದರುಗಳು, ಸ್ವಾತಂತ್ರ್ಯೋತ್ತರದಲ್ಲಿ ಈಗಿನ ಕಾಲದ ಬೃಹತ್ ಗಾತ್ರದ ಹಡಗುಗಳನ್ನು ಮಾತ್ರ ಬರಮಾಡಿಕೊಳ್ಳಲಾಗುತ್ತಿಲ್ಲವೆಂಬದು ಕಟು ಸತ್ಯ.

ಹೌದು, ಜಗತ್ತಿನ ಅತಿದೊಡ್ಡ ಹಡಗನ್ನು ಬರಮಾಡಿಕೊಳ್ಳಲು ನಮ್ಮ ಬಂದರಿನ ಅಳಿವೆಯ ಆಳ ಕನಿಷ್ಟ 17 ರಿಂದ 23 ಮೀಟರಿನಷ್ಟು ಅಗತ್ಯವಿದೆ. ಆದರೆ ನಮ್ಮ ಪ್ರಮುಖ ಬಂದರುಗಳಾದ ಚೆನ್ನೈ, ಕಾಂಡ್ಲಾ, ವಿಶಾಖಪಟ್ಟನಮ್, ಮಂಗಳೂರು, ಮುಂಬಯಿ ಮತ್ತು ಕೋಲ್ಕೊತ್ತಾದಂತಹ ಬಂದರುಗಳು ಬರೇ 12 ರಿಂದ 14 ಮೀಟರಿನಷ್ಟೇ ಆಳವನ್ನು ಹೊಂದಿವೆ.  ಇದೇ ಕಾರಣಕ್ಕೆ ಭಾರತಕ್ಕೆ ಸರಕು ತುಂಬಿಸಿಕೊಂಡು ಬರುವ CSCL Global (ಇಪ್ಪತ್ತು ಅಡಿ ಉದ್ದದ, ಮತ್ತು ಎಂಟು ಆಡಿ ಆಗಲ, ಎಂಟೂವರೆ ಅಡಿ ಎತ್ತರದ, ಸುಮಾರು 19,000 ಕಂಟೈನರುಗಳನ್ನು ಹೊರುವ ಸಾಮರ್ಥ್ಯದ) ನಂತಹ ಬೃಹತ್ ಹಡಗುಗಳು ನಮ್ಮ ದೇಶಕ್ಕೆ ಸಮೀಪದ ಶ್ರೀಲಂಕಾದ ಕೋಲೊಂಬೊ ಬಂದರಿಗೋ, ದುಬೈನ ಜಬೆಲ್ ಆಲಿ ಬಂದರಿಗೋ ಅಥವಾ ಸಿಂಗಾಪುರದ ಬಂದರಿನಲ್ಲಿ ಲಂಗರು ಹಾಕಿ, ಅಲ್ಲಿಯೇ ಕಂಟೈನರುಗಳನ್ನು ಇಳಿಸಿ ಬಿಡುತ್ತವೆ. ಅಲ್ಲಿಂದ ನಾವು ಸಣ್ಣ ಮತ್ತು ಮದ್ಯಮ ಗಾತ್ರದ ಹಡಗುಗಳಲ್ಲಿ ಅಲ್ಲಿ ಇಳಿಸಿದಂತಹ ಕಂಟೈನರುಗಳನ್ನು ಭಾರತದ ಬಂದರುಗಳಿಗೆ ಸಾಗಿಸುತ್ತಿದ್ದೇವೆ. ನೇರವಾಗಿ ಭಾರತಕ್ಕೆ ಬರಬೇಕಾಗಿದ್ದ ಆಮದು ಉತ್ಪನ್ನಗಳನ್ನು ಇನ್ನೊಂದು ದೇಶದ ಬಂದರಿನಿಂದ ತರಿಸಿಕೊಳ್ಳಲು ಮತ್ತೆ ತೆರಿಗೆ ಪಾವತಿಸಿ, ಸಾಗಾಟದ ವೆಚ್ಚವನ್ನು ಭರಿಸುತ್ತಿದ್ದೇವೆ. ಹೀಗೆ ಸಾಮಾನುಗಳನ್ನು ಸಾಗಿಸುವುದರಿಂದ ಭಾರತದ ಸರಕುಗಳ ಮೇಲೆ ಸಾಗಾಟದ ವೆಚ್ಚದಲ್ಲಿ ಕನಿಷ್ಟ ಪಕ್ಷ ಶೇ. 20 ರಷ್ಟು ಅಧಿಕ ಹೊರೆ ಮತ್ತು ಕನಿಷ್ಟ ಏಳು ದಿನಗಳ ವಿಳಂಬವಾಗಿ ಸರಕುಗಳು ನಮ್ಮ ದೇಶದ ಬಂದರಿಗೆ ಬಂದು ಬೀಳುತ್ತಿವೆ.

ಸ್ಪರ್ಧಾತ್ಮಕ ಜಗತ್ತಿನಲ್ಲಿ, ಕಡಿಮೆ ವೆಚ್ಚದಲ್ಲಿ ಮತ್ತು ಕನಿಷ್ಟ ಸಮಯದಲ್ಲಿ ಸರಕು ಸಾಮಾನುಗಳನ್ನು ಪೂರೈಸುವ ಸಂಸ್ಥೆಗಳು ಮಾತ್ರ ಪೈಪೋಟಿ ನೀಡಬಲ್ಲವು. ಗುಲ್ಬರ್ಗಾದಲ್ಲಿ ಬೆಳೆದ ಜೋಳ, ತೊಗರಿಬೇಳೆ, ಕಬ್ಬು , ಶೇಂಗಾ, ಸೂರ್ಯಕಾಂತಿ , ಎಳ್ಳು, ಹುರುಳಿ ಮತ್ತು ರಾಗಿಯಂತಹ ಉತ್ಪನ್ನಗಳು ಸಮರ್ಪಕವಾದ ರಾಷ್ಟ್ರೀಯ ಹೆದ್ದಾರಿಯ ಮೂಲಕ ತ್ವರಿತವಾಗಿ ವಿಶಾಖಪಟ್ಟನಮ್ ಬಂದರಿಗೆ ತಲುಪಿ ಅಲ್ಲಿಂದ ನೇರವಾಗಿ CSCL Global ನಂತಹ ಗಾತ್ರದ ಬೃಹತ್ ಹಡಗುಗಳಲ್ಲಿ ವಿಶ್ವದೆಲ್ಲೆಡೆಗೆ ಕಡಿಮೆ ವೆಚ್ಚದಲ್ಲಿ ಮತ್ತು ಅತ್ಯಧಿಕ ಕಡಿಮೆ ಸಮಯದಲ್ಲಿ ರಫ್ತಾಗಬೇಕಿತ್ತು. ಆದರೆ ನಮ್ಮಲ್ಲಿನ ಬಂದರು ವ್ಯವಸ್ಥೆಯ ಮೂಲಭೂತ ಸೌಕರ್ಯದ ಕೊರತೆಯಿಂದ ಸಣ್ಣ ಸಣ್ಣ ಹಡಗುಗಳ ಮೂಲಕ ಒಂದೋ ಅಧಿಕ ವೆಚ್ಚಭರಿಸಿಕೊಂಡೋ ಅಥವಾ ಪಕ್ಕದ ಶ್ರೀಲಂಕಾಗೆ ಕಳುಹಿಸಿ ವಿಳಂಬವಾಗಿ ಖರೀದಿದಾರರಿಗೆ ತಲುಪಿಸುವ ದೈನೇಸಿ ಸ್ಥಿತಿಗೆ ಬಂದಿದ್ದೇವೆ. ನಮ್ಮ ಉತ್ಪನ್ನಗಳನ್ನು ಸ್ಪರ್ಧಾತ್ಮಕ ಬೆಲೆಗೂ ಮಾರಲಾಗುತ್ತಿಲ್ಲ ಹಾಗೂ ಬೇಗನೆ ಕ್ಷಯಿಸುವ ವಸ್ತುಗಳನ್ನು ತ್ವರಿತವಾಗಿ ಸಾಗಾಟ ಮಾಡಲೂ ಆಗುತ್ತಿಲ್ಲ. ಶತ ಶತಮಾನಗಳ ಹಿಂದೆ ಬಂದರು ನಾಡಾಗಿದ್ದ ನಮ್ಮ ದೇಶಕ್ಕೆ ಈಗೇನಾಯ್ತು? ನಮ್ಮ ಬಂದರುಗಳ ಅಳಿವೆಯ ಆಳವನ್ನೇಕೆ ಹೆಚ್ಚಿಗೆ ಮಾಡಲಿಲ್ಲ? ದೊಡ್ಡ ದೊಡ್ಡ ಹಡಗುಗಳು ನಮ್ಮಲ್ಲಿಗೇಕೆ ಬರುವುದು ಬೇಡ? ಅದಕ್ಕೂ ಕಾರಣವಿದೆ…. ಅದೇ ಲಾಬಿ, ಗುಪ್ತವಾದ ಮಹಾನ್ ಶಿಪ್ಪಿಂಗ್ ಲಾಭಿ..!

2010 ರಲ್ಲಿ ಬೆಳಕಿಗೆ ಬಂದ ರಾಡಿಯಾ ಟೆಲಿಫೋನ್ ಟೇಪುಗಳನ್ನು ಕೇಳಿಸಿಕೊಂಡರೆ, ಅದರಲ್ಲಿ ಕೇಂದ್ರ ಸರಕಾರದ ಮಂತ್ರಿ ಮಂಡಲದಲ್ಲಿ ದೂರಸಂಪರ್ಕ ಖಾತೆಯೊಂದಿಗೆ ಶಿಪ್ಪಿಂಗ್ (ಬಂದರು ಮತ್ತು ಒಳಾಡಳಿತ) ಖಾತೆಗಾಗಿ ತಮಿಳುನಾಡಿನ ಪ್ರಾದೇಶಿಕ ಪಕ್ಷಗಳು ಲಾಭಿ ಮಾಡುತ್ತಿದ್ದ ಬಗ್ಗೆ ಕೆಲವೊಂದು ಮಾತುಕತೆಯ ತುಣುಕುಗಳು ಸಿಗುತ್ತವೆ. ದೂರಸಂಪರ್ಕ ಖಾತೆಯಾದರೂ 2G ಹಗರಣ ಮಾಡಲು ಬೇಕಾಗಿತ್ತು ಓಕೆ, ಆದರೆ ಈ ಶಿಪ್ಪಿಂಗ್ ಖಾತೆಗಾಗಿ ಲಾಭಿ ಯಾಕೆ?  ಇದರ ಬಗ್ಗೆ ನೀವು ಚಿಂತಿಸಿ, ಕೆದುಕಲು ಹೊರಟರೆ, ಅಲ್ಲೊಂದು ಭಯಾನಕ ಲಾಬಿ ಎದ್ದುಕಾಣಿಸುತ್ತದೆ. ಭಾರತದ ಅಳಿವೆಯ ಆಳವನ್ನು ಹಿಗ್ಗಿಸಿ, ಬೃಹತ್ ಹಡಗುಗಳನ್ನು ಆಮಂತ್ರಿಸಿಕೊಂಡರೆ, ಚೆನ್ನೈ ಮುಂತಾದೆಡೆಯಲ್ಲಿ  Transit ship (ಕೋಲೊಂಬೋ /ಸಿಂಗಾಪುರ/ದುಬೈ- ಭಾರತದ ನಡುವಿನ ಸಾಗಾಣಿಕಾ ಹಡುಗು) ಗಳಾಗಿ ಕಾರ್ಯನಿರ್ವಹಿಸುತ್ತಿರುವ ಹಡಗುಗಳ ನಿಶ್ಚಿತ ವರಮಾನಕ್ಕೆ ಕತ್ತರಿ ಬೀಳುತ್ತದೆ. ಆಚೆಯಿಂದ ಈಚೆಗೆ ಸರಕುಗಳನ್ನು ಹೊತ್ತು ತರುವ ಮಧ್ಯಮ ಗಾತ್ರದ ಹಡಗುಗಳ ಮಾಲಿಕರ ಸಂಘವೇ, ಭಾರತದ ಬಂದರಿನ ಅಭಿವೃದ್ಧಿಗೆ ಕಲ್ಲು ಹಾಕುತ್ತಿವೆ. ಈ ಹಿಂದೆಲ್ಲಾ ಕೇಂದ್ರದ ಶಿಪ್ಪಿಂಗ್ ಸಚಿವಾಲಯಕ್ಕೆ ಒತ್ತಡ ಹೇರಿ ತಮ್ಮ ಸ್ವಹಿತಾಸಕ್ತಿಗೆ ಧಕ್ಕೆಯಾಗುವ ಯಾವುದೇ ಯೋಜನೆಯನ್ನು ತಡೆಹಿಡಿಯುತ್ತಿದ್ದರು. ಭವಿಷ್ಯತ್ತಿನ ಬೇಡಿಕೆ ಮತ್ತು ಅವಶ್ಯಕತೆಯನ್ನು ಮನಗೊಂಡು 2003 ರಲ್ಲಿ ಅಟಲ್ ಬಿಹಾರಿ ವಾಜಪೇಯಿ, “ಸಾಗರಮಾಲಾ” ಎಂಬ ಭಾರತದ ಬಂದರು ಮತ್ತು ಬಂದರುಗಳಿಗೆ ಸಂಪರ್ಕ ಕಲ್ಪಿಸುವ ಬೃಹತ್ ಯೋಜನೆಯೊಂದನ್ನು ರೂಪಿಸಿದ್ದರು.  2004 ರಲ್ಲಿ ವಾಜಪೇಯಿ ಸರಕಾರ ಪತನಗೊಂಡ ನಂತರದ ಹತ್ತುವರ್ಷಗಳಲ್ಲಿ ನಮ್ಮನ್ನಾಳಿದ “ಮಹಾ ಜನರು” ಈ ಸಾಗರಮಾಲಾ ಯೋಜನೆಯ ಕಡತವನ್ನು ಬಂದರಿನ ಅಳಿವೆಯಡಿಯಲ್ಲಿ ಹಾಕಿ, ಶಿಪ್ಪಿಂಗ್ ಲಾಭಿ ಹಾಕಿದ ಲಂಗರಿಗೆ ಸಿಕ್ಕಿಬಿಟ್ಟರು.

ಅಟಲ್ ಬಿಹಾರಿ ವಾಜಪೇಯಿ ರೂಪಿಸಿದ “ಸಾಗರಮಾಲ” ಯೋಜನೆಯನ್ನು ಮರುನಾಮಕರಣಗೊಳಿಸಿ ಅದನ್ನೇ Maritime Agenda 2010- 2020 ಎನ್ನುವ ಯೋಜನಾ ವರದಿಯೊಂದನ್ನು 2010 ರಲ್ಲಿ ಬಿಡುಗಡೆಗೊಳಿಸಿದ್ದನ್ನು ಬಿಟ್ಟರೆ, ಭಾರತದ ಯಾವುದೇ ಬಂದರಿನ ಅಳಿವೆಯ ಆಳವನ್ನು ಶಿಪ್ಪಿಂಗ್ ಲಾಭಿಗೆ ಮಣಿದು 14 ಮೀಟರಿಗಿಂತ ಕೆಳಕ್ಕಿಳಿಸಲಿಲ್ಲ.  ಕಳೆದ ಹತ್ತು ವರ್ಷಗಳಲ್ಲಿ ವಿಶ್ವದ ಅಭಿವೃದ್ಧಿಶೀಲ ರಾಷ್ಟ್ರಗಳೆಲ್ಲವೂ ಆಧುನಿಕತೆಗೆ ಹೊಂದಿಕೊಳ್ಳುತ್ತಿರುವಾಗ, ಭಾರತ ದೇಶವು ಮಾತ್ರ ನಮ್ಮ ಮುತ್ತಾತ ಕಟ್ಟಿಸಿಟ್ಟ ಹಳೆಯ ಬಂದರು ವ್ಯವಸ್ಥೆಯಲ್ಲೇ ಕಾರ್ಯನಿರ್ವಹಿಸುತ್ತಿದೆ. ಪಕ್ಕದ ಪುಟ್ಟ ರಾಷ್ಟ್ರವಾದ ಶ್ರೀಲಂಕಾ ದೇಶವೇ 14ನೇ ಶತಮಾನದಲ್ಲಿ ನಿರ್ಮಿತವಾದ ಕೋಲೊಂಬೊ ಬಂದರನ್ನು ಅಂತರಾಷ್ಟ್ರೀಯ ಗುಣಮಟ್ಟದ ಮೇಲ್ದರ್ಜೆಗೇರಿಸಿಕೊಂಡು ಎಲ್ಲಾ ವಿಧದ ಹಡಗುಗಳನ್ನು ಸ್ವೀಕರಿಸುತ್ತಿರುವಾಗ ನಾವು transit shipping ಲಾಭಿಯಲ್ಲಿ ಮುಳುಗಿಬಿಟ್ಟಿದ್ದೇವೆ.

ನಮ್ಮಲ್ಲಿ ಈರುಳ್ಳಿಯ ಬೆಲೆ ಕಿಲೋವೊಂದಕ್ಕೆ ಹತ್ತು ಪೈಸೆಯಾಗಿ, ಕಷ್ಟು ಪಟ್ಟು ಬೆಳೆದ ರೈತ ಸಾಲಗಾರನಾಗಿ ನೇಣು ಹಾಕಿಕೊಂಡಾಗಲೂ, ಹೊರದೇಶಗಳಲ್ಲೆಲ್ಲೂ ಈರುಳ್ಳಿಗೆ ಹತ್ತು ಪೈಸೆಯ ಬೆಲೆಯಿಟ್ಟು ಯಾರೂ ಸೂಪರ್ ಮಾರ್ಕೇಟುಗಳಲ್ಲಿ ಬಿಕರಿಗಿಟ್ಟಿರಲಿಲ್ಲ. ಕಷ್ಟಪಟ್ಟು ಬೆಳೆದ ಟೋಮ್ಯಾಟೋವನ್ನು ರಾಮನಗರದ ರಸ್ತೆಯಲ್ಲಿ ಕಸದಂತೆ ಸುರಿದು ಹೋದ ತಿಂಗಳಿನಲ್ಲೂ ಆಫ್ರಿಕಾ ದೇಶದಲ್ಲಿ ಯಾರಿಗೂ ಟೋಮ್ಯಾಟೊ ಪುಕ್ಕಟೆ ಬೆಲೆಗೆ ಸಿಗಲಿಲ್ಲ. ಇದರ ಭಾವಾರ್ಥ ಇಷ್ಟೆ, ನಮ್ಮಲ್ಲಿ ಅಧಿಕವಾಗಿ ಬೆಳೆದಿದ್ದ ವಸ್ತುಗಳನ್ನು ಬೇರೆಡೆಗೆ ರಪ್ತುಮಾಡುವ ವಿಫುಲ ಅವಕಾಶ ನಮಗಿತ್ತು. ಆದರೆ ಅದಕ್ಕೆ ಬೇಕಾಗಿದ್ದ ಸರಳ ಸೌಲಭ್ಯವಿರಲಿಲ್ಲ. ಬೇರೆಡೆಯಿಂದ ನಮ್ಮ ಉತ್ಪನ್ನಗಳಿಗೆ ಪದೇ ಪದೇ ಬೇಡಿಕೆ ಬರುತ್ತಿತ್ತು ಆದರೆ ನಮ್ಮ ಜನನಾಯಕರಿಗೆ ಅದನ್ನು ಆರ್ಥಮಾಡಿಕೊಳ್ಳಲಾಗಲಿಲ್ಲ. ಹತ್ತು ಎಕರೆಯ ಹೊಲದ ಒಡೆಯನಿಗೆ ತಿಂಗಳಿಗೆ ಮೂವತ್ತು ಕೆಜಿ ಅಕ್ಕಿ ಕೊಡುವುದೇ ದೇಶದ ಅಭಿವೃದ್ಧಿ ಎಂದುಕೊಂಡುಬಿಟ್ಟರು. ಮುಂದಿನ ತಿಂಗಳು ಇಪ್ಪತ್ತನೇ ತಾರೀಖಿಗೆ ದೊಡ್ಡದೊಂದು ಹಡಗು ಬರುತ್ತಿದೆ, ನೀನೆಷ್ಟು ಈರುಳ್ಳಿ ಬೆಳೆದುಕೊಡುತ್ತಿಯಪ್ಪಾ ಎಂದು ನಮ್ಮ ರೈತನನ್ನು ಯಾವ ಆಡಳಿತಗಾರನೂ ಕೇಳಲಿಲ್ಲ. ಮುಂದಿನ ಮೂರು ತಿಂಗಳಿಗೆ ಆಫ್ರೀಕಾ ದೇಶಕ್ಕೆ 50 ಸಾವಿರ ಟನ್ ಟೋಮ್ಯಾಟೋದ ಅವಶ್ಯಕತೆಯಿದೆ ಯಾರೆಷ್ಟು ಬೆಳೆದುಕೊಡುತ್ತಿರೆಂದು ಯಾವ ಸರಕಾರಿ ಇಲಾಖೆಯೂ ರೈತನನ್ನು ಕೇಳಲೇ ಇಲ್ಲ. ರೈತ ತನಗನಿಸಿದ್ದನ್ನು ಬೆಳೆದುಬಿಟ್ಟ, ರಾಜಕಾರಣಿಗಳು ತಮಗನಿಸಿದ ರಸ್ತೆಗೆ ಡಾಂಬಾರು ಮೆತ್ತಿದರು. ದಲಿತರ ಉದ್ದಾರದ ಹೆಸರಿನಲ್ಲಿ ಮುರುಕಲು ಮನೆಯಲ್ಲೇ ಅಧ್ವಾನದಿಂದ ವಾಸಿಸುವ ಹತ್ತು ದಲಿತ ಕುಟುಂಬವಿರುವ ಹಳ್ಳಿಗೆ ಕೋಟಿಗಟ್ಟಲೇ ಸುರಿದು ಕಾಂಕ್ರೀಟ್ ರಸ್ತೆ ಮಾಡಿ ಕಾಸುಮಾಡಿಕೊಂಡರೇ ವಿನಃ ಅದೇ ದಲಿತರಿಗೆ ಅವಶ್ಯಕವಾಗಿ ಬೇಕಾಗಿದ್ದ ಸುಸಜ್ಜಿತವಾದ ಮನೆಕಟ್ಟಿಕೊಡಲಿಲ್ಲ. ಯಾವ ಯೋಜನೆಯನ್ನು ಎಲ್ಲಿ ಯಾವಾಗ ಕಾರ್ಯಗತ ಮಾಡಬೇಕೋ ಅಲ್ಲಿ ಅದನ್ನು ಮಾಡಲೇ ಇಲ್ಲ. ಪ್ರಜೆಗಳ ಆದ್ಯತೆ ಯಾವತ್ತೂ ಸರ್ಕಾರದ ನೀತಿಯಾಗಿರಲೇ ಇಲ್ಲ. ಇದೇ ಅವ್ಯವಸ್ಥೆಯ ಆಗರವಾದ ಸರಕಾರದಿಂದಲೇ ನಾವು ಇವತ್ತು ಚೀನಾದೆದುರು ಮುಗ್ಗರಿಸಿ ಬಿದ್ದುಕೊಂಡಿದ್ದೇವೆ.

ಪ್ರತಿಯೊಂದು ರಾಜಕೀಯ ಪಕ್ಷಗಳೂ ರೈತನ ಕ್ಷೇಮಾಭಿವೃದ್ಧಿಯ ಮಾತನಾಡುತ್ತವೆ ಮತ್ತು ರೈತನ ಬೆಳೆಗೆ ಚಿನ್ನದಂತಹ ಬೆಲೆ ಸಿಗಬೇಕೆಂದು ಘೋಷಣೆ ಹಾಕಿಯೇ ಅಧಿಕಾರ ಹಿಡಿದು ಕುಳಿತುಕೊಳ್ಳುತ್ತವೆ. ಆದರೆ ರೈತನ ಉತ್ಪನ್ನಗಳು ಬಳಕೆದಾರ ಗ್ರಾಹಕನಿಗೆ ತಲುಪಿಸುವ ಮಾರ್ಗವನ್ನು ನಿರ್ಮಿಸುವುದೇ ಇಲ್ಲ. ಹಳೆ ರಸ್ತೆಗೆ ಮತ್ತೆ ಮತ್ತೆ ಡಾಂಬಾರು ಮೆತ್ತಿಯೇ, ವರ್ಷದ ಬಜೆಟ್ ಖಾಲಿ ಮಾಡುವ ಹೆದ್ದಾರಿ ಇಲಾಖೆ, ರೈತನಿಗೆ ನೇರವಾಗಿ ಬಂದರಿಗೆ ಸಂಪರ್ಕಿಸುವ ಆಡೆತಡೆಯಿಲ್ಲದ ರಸ್ತೆಯೊಂದನ್ನು ನಿರ್ಮಿಸಬೇಕು, ಬಂದರಿನಲ್ಲಿ ರಪ್ತು ವ್ಯವಹಾರಿಕೆ ನೆಡೆಸುವ ಅಂತರಾಷ್ಟ್ರೀಯ ಖರೀದಿ ಎಜೆಂಟರುಗಳ ಕಚೇರಿಯಿರಬೇಕು, ರಪ್ತುದಾರರಿಗೆ ಬೃಹತ್ ಹಡಗುಗಳನ್ನು ಬರಮಾಡಿಕೊಳ್ಳುವ ವ್ಯವಸ್ಥೆಯಿರಬೇಕೆಂಬ ಕನಿಷ್ಟ ಯೋಜನೆಯೊಂದನ್ನೂ ಕಾರ್ಯಗತಗೊಳಿಸುತ್ತಿಲ್ಲ. ಮಿಕ್ಸಿ, ಪ್ರಿಜ್ಜು, ಅಕ್ಕಿ, ಮಂಚ, ಬೆಂಚು, ಹಲ್ಲುಸೆಟ್ಟು, ಸೈಟು ಮತ್ತು ಲ್ಯಾಪಟಾಪುಗಳನ್ನು ಉಚಿತವಾಗಿ ಕೊಡುತ್ತೇವೆಂದು ಅಧಿಕಾರಕ್ಕೆ ಬಂದವರಿಗೆ, ಚುನಾವಣೆಗೆ ಮುನ್ನ ಹೇಳಿದ್ದನ್ನು ಮಾತ್ರ ಅಷ್ಟೊ ಇಷ್ಟೋ ಕೊಟ್ಟು ಬಿಡುವ ತವಕ, ಅದಾದ ಮೇಲೆ ಈ ದೇಶಾಭಿವೃದ್ಧಿ ಯಾರಿಗೆ ಬೇಕಿದೆ? ಐದು ವರ್ಷದಲ್ಲಿ ಕುರ್ಚಿಬಿಟ್ಟೆದ್ದು ಮತ್ತೆ ಗೆಲ್ಲಲು ದುಡ್ಡುಕೊಡಲು ನಿಂತಿರುವವರ ಲಾಬಿಗೆ ದೇಶವನ್ನೇ ಮಾರಲು ತಯಾರಿರುವ ನಮ್ಮಲ್ಲಿ, ಭವಿಷ್ಯತ್ತಿನ ಭಾರತದ ಶಿಶುವಿಗೆ ಪ್ರಯೋಜನಕ್ಕೆ ಬರುವ ದೂರಗಾಮಿ ಯೋಜನೆ ರೂಪಿಸುವ ದರ್ದು ಎಷ್ಟು ಜನನಾಯಕನಿಗಿದೆ.

ಆದರೆ ನಮ್ಮ ಭಾರತಾಂಭೆಯ ಹೆಮ್ಮೆಯ ಪುತ್ರನೊಬ್ಬ ಅಧಿಕಾರದ ಚುಕ್ಕಾಣಿ ಹಿಡಿದು, ಕಳೆದ ಹತ್ತು ವರ್ಷಗಳಲ್ಲಿ ಅಭಿವೃದ್ಧಿಯ ಪಥದಲ್ಲಿ ಕಳೆದು ಹೋಗಿದ್ದ ಭಾರತವನ್ನು ಮತ್ತೆ ಹಳಿಯ ಮೇಲೆ ಎಳೆದು ತರುತ್ತಿದ್ದಾನೆ. ಹೌದು ನರೇಂದ್ರ ಮೋದಿಯ ಸರಕಾರ ಅಧಿಕಾರಕ್ಕೆ ಬಂದ ತಕ್ಷಣವೇ 2014 ರಲ್ಲಿ ನಾಲ್ಕು ಲಕ್ಷಕೋಟಿ ರೂಪಾಯಿ ಮೊತ್ತದ ಸಾಗರಮಾಲ ಯೋಜನೆಯನ್ನು ಪುನಃ ಸ್ಥಾಪಿಸಿ, ಭಾರತಕ್ಕೆ ಮಹತ್ತರವಾಗಿ ಬೇಕಾಗಿದ್ದ ಬೃಹತ್ ಹಡಗುಗಳು ತಮಿಳುನಾಡಿನ ಕಾಮರಾಜರ್ ಬಂದರು ಮತ್ತು ಗೋವಾ ಬಂದರಿಗೆ ಬರುವಂತಾಗಲು ಈಗಾಗಲೇ ಮೊದಲ ಹಂತವಾಗಿ 17 ಮೀಟರ್ ಆಳದಷ್ಟು ಹೂಳೆತ್ತುವ ಕೆಲಸಕ್ಕೆ ಆದೇಶ ನೀಡಲಾಗಿದೆ. ಈಗಾಗಲೇ ಇಪ್ಪತ್ತೈದು ಸಾವಿರ ಕೋಟಿ ರೂಪಾಯಿಯಷ್ಟು ಹಣವನ್ನು ಬಿಡುಗಡೆಗೊಳಿಸಿದ್ದರಿಂದ ಭಾರತದ ಪ್ರಮುಖ ಬಂದರುಗಳು ಮೇಲ್ದರ್ಜೆಗೇರಿಸುವ ಕೆಲಸ ಆರಂಭವಾಗಿದೆ. ಹಳ್ಳಿಯಿಂದ ಬಂದರುಗಳಿಗೆ ನೇರ ಸಂಪರ್ಕ ರಸ್ತೆಗಳಾಗಲಿವೆ. ಮತ್ತೂ ಮುಖ್ಯವಾಗಿ ಭವಿಷ್ಯತ್ತಿನ ಭಾರತಕ್ಕೆ ಬೇಕಾದ ಯೋಜನೆಯೊಂದು ಸದ್ದಿಲ್ಲದೆ ಜಾರಿಯಾಗುತ್ತಿದೆ. ರಪ್ತು ಮತ್ತು ಆಮದು ವ್ಯವಹಾರದಲ್ಲಿನ ವೇಗವು ಭಾರತದ ಆರ್ಥಿಕತೆಗೆ ಮತ್ತಷ್ಟು ಬಲ ತುಂಬಲಿದೆ. ಶಿಪ್ಪಿಂಗ್ ಲಾಭಿಗಳು ಮೂಲೆಗೆ ತಳ್ಳಲ್ಪಟ್ಟು, ಸರಕನ್ನು ಹಿಡಿದಿಟ್ಟುಕೊಂಡು ಕೃತಕ ಅಭಾವ ಸೃಷ್ಟಿಸಿ ಲಾಭ ಮಾಡಿಕೊಳ್ಳುವ ದಲ್ಲಾಳಿಗಳು ಕಾಲ್ಕೀಳಲಿದ್ದಾರೆ. ಆದರೆ ನಾವು ಇದಕ್ಕಾಗಿ ಒಂದೆರಡು ವರ್ಷ ಕಾಯಬೇಕಿದೆ. ಯಾರೇನೇ ಬೊಬ್ಬೆ ಹೊಡೆದುಕೊಳ್ಳಲಿ, ಆಚ್ಚೇದಿನವಂತೂ ಬಂದೇ ಬರಲಿದೆ.

(ಲೇಖಕರು ತೈಲ ಕ್ಷೇತ್ರದಲ್ಲೇ ಕಾರ್ಯನಿರ್ವಹಿಸುತ್ತಿದ್ದು ಈ ವಿಭಾಗದ ಆಳ ಅಗಲವನ್ನು ಬಲ್ಲವರು.)

1 COMMENT

  1. Sir, It is an Excellent article. Only a true Desh-premi can bring a change for our nation. And Modi is doing that. This kind of scams that has been robing our national fortunes for so many years. Our shortsighted politicians, mainly congress, have been selling our nation for selfish motives.

Leave a Reply