ಜೀವ ಮಿಟುಕಿದ ಘಳಿಗೆ: ಸಿದ್ಧಾಂತಗಳ ಮೇಲೆ ಸಿದ್ಧಾಂತ– ಜೀವದ ಹುಟ್ಟು ಇಂದಿಗೂ ಗುಟ್ಟು

author-ananthramuನಮ್ಮಲ್ಲಿ ಪಾರ್ಲಿಮೆಂಟರಿ ಚುನಾವಣೆ ಎಂದರೆ ಚುನಾವಣಾ ಪ್ರಣಾಳಿಕೆಯಲ್ಲಿ ಸಾಧ್ಯವಾಗಿಸದ ಎಂಥೆಂಥವೋ ಭರವಸೆಗಳಿರುತ್ತವೆ. ಮಹಿಳೆಯರ ಬಗ್ಗೆ ವಿಶೇಷ ಕಾಳಜಿ, ಮಕ್ಕಳ ಶಿಕ್ಷಣ, ರೈತರಿಗೆ ಪ್ಯಾಕೇಜ್ ಇತ್ಯಾದಿ. ಪ್ರಣಾಳಿಕೆಯಲ್ಲಿ ಘೋಷಿಕೊಂಡ ಕಾರ್ಯಪಟ್ಟಿಯಲ್ಲಿ ಶೇ. 10 ಕೂಡ ಕಾರ್ಯರೂಪಕ್ಕೆ ಬರುವುದಿಲ್ಲ. ನಮ್ಮ ದೇಶದಲ್ಲಿ ಎಂದಾದರೂ ಎಂ.ಪಿ.ಗಳು ವಿಜ್ಞಾನ-ತಂತ್ರಜ್ಞಾನವನ್ನು ಹೊಸ ದಿಕ್ಕಿಗೆ ಒಯ್ಯುತ್ತೇವೆ ಎಂಬ ಅಂಶಗಳನ್ನು ಅವರ ಅಜೆಂಡಾದಲ್ಲಿ ಸೇರಿಸಿರುತ್ತಾರೆಯೆ? ಅಥವಾ ಭಾರತವನ್ನು ಆ ದಿಕ್ಕಿನಲ್ಲಿ ಸಾಗಿಸಲು ಪ್ರಯತ್ನ ಮಾಡುತ್ತೇನೆ ಎಂಬ ಕಿರು ಆಶಾಭಾವನೆಯನ್ನಾದರೂ ಸಾರ್ವಜನಿಕ ಸಮಾರಂಭಗಳಲ್ಲಿ ಹೇಳಿರುತ್ತಾರೆಯೆ? ವಿಜ್ಞಾನದ ಗಾಳಿಗಂಧವೂ ಸೋಕದ ಹಾಗೆ ಇರುತ್ತಾರೆ.

ಆದರೆ ಇದೇ ನವೆಂಬರ್ 8ರಂದು, ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಗಳಾಗಿರುವ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್, ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅವರನ್ನು ಅಲ್ಲಿನ ಬಹುತೇಕ ಮಾಧ್ಯಮಗಳು ಸಂದರ್ಶನಮಾಡಿ ವಿಜ್ಞಾನ-ತಂತ್ರಜ್ಞಾನದ ಬಗ್ಗೆ ಅಮೆರಿಕ ಹೇಗೆ ಮುಂದೆ ಸಾಗಬೇಕು ಎಂಬುದನ್ನು ಕುರಿತು ನೀವು ಏನು ಬದ್ಧತೆ ತೋರಿಸಿದ್ದೀರಿ ಎಂದು ಕೇಳುತ್ತಿವೆ. `ಬಾಹ್ಯಾಕಾಶ ಸಂಶೋಧನೆಗೆ ನನ್ನ ಪೂರ್ಣ ಬೆಂಬಲವಿದೆ. ಮಂಗಳ ಗ್ರಹದಲ್ಲಿ ಅಮೆರಿಕದ ಪ್ರಜೆಯೊಬ್ಬ ಇಳಿಯುವಂತಾದರೆ ಅಮೆರಿಕಕ್ಕೆ ಅದಕ್ಕಿಂತ ಬೇರೆ ಖುಷಿ ಏನಿದೇ?’ ಎನ್ನುತ್ತಿದ್ದಾರೆ ಹಿಲರಿ ಕ್ಲಿಂಟನ್. ಹಾಗಾದರೆ ಟ್ರಂಪ್ ಅವರ ಟ್ರಂಪ್ ಕಾರ್ಡ್ ಯಾವುದು? ಅವರೂ ಅದನ್ನೇ ಹೇಳುತ್ತಿದ್ದಾರೆ ಆದರೆ ಬೇರೆಯದೇ ದನಿಯಲ್ಲಿ.. `ನಾಸಾ ಸಂಸ್ಥೆಯನ್ನು ನಾನು ಪ್ರೀತಿಸುತ್ತೇನೆ. ಬಾಹ್ಯಾಕಾಶ ಸಂಶೋಧನೆ ಸಹಸ್ರಾರು ಮಂದಿಗೆ ಉದ್ಯೋಗ ಅವಕಾಶ ಒದಗಿಸಬೇಕು. ಆದರೆ ಅಮೆರಿಕದ ಬೊಕ್ಕಸ ಬರಿದಾಗುವುದು ಬೇಡ. ಇದಕ್ಕಿಂತಲೂ ಬೇರೆಯ ಆದ್ಯತೆಗಳಿವೆ’ ಎನ್ನುತ್ತಾರೆ ಟ್ರಂಪ್. ಕುಲಾಂತರಿ ಆಹಾರ? ಅದೇ ಒಂದು ಭೂತವಾಗಿ ಕಾಡಿದರೆ ಹೇಗೆ? ಬರನಿರೋಧಕ ತಳಿಗಳನ್ನು ಎಬ್ಬಿಸುವುದಾದರೆ ನಾನು ಅದರ ಪರ ಎನ್ನುತ್ತಾರೆ ಹಿಲರಿ.

`ಕುಲಾಂತರಿ ಎಂದು ಪಟ್ಟಿ ಏಕೆ ಅಂಟಿಸುತ್ತೀರಿ? ಜೈವಿಕ ತಂತ್ರಜ್ಞಾನ ಧಾರಾಳವಾಗಿ ಹಸಿವು ನೀಗಿಸುವುದಾದರೆ ನಾನದಕ್ಕೆ ಬೆಂಬಲಿಸುತ್ತೇನೆ’ ಎನ್ನುತ್ತಾರೆ ಟ್ರಂಪ್. ಹೀಗೆಯೇ ಸಮಕಾಲೀನ ವಿದ್ಯಮಾನಗಳಿಗೆ ಮತ್ತು ತಂತ್ರಜ್ಞಾನ ಅದಕ್ಕೆ ಒದಗಿ ಬರುವ ಬಗೆಗೆ ಹತ್ತಾರು ಪ್ರಶ್ನೆಗಳಿಗೆ ಇಬ್ಬರೂ ತಮ್ಮದೇ ಆದ ರೀತಿಯಲ್ಲಿ ಉತ್ತರ ಕೊಟ್ಟಿದ್ದಾರೆ. ಅಮೆರಿಕದಲ್ಲಿ ಯಾರು ಸೋತರೂ ಅಥವಾ ಗೆದ್ದರೂ ಒಂದಂತೂ ನಿಜ. ವಿಜ್ಞಾನದ ಮುನ್ನಡೆಗೆ ಅಲ್ಲಿನ ರಾಜಕೀಯ ಅಡ್ಡಬರುವ ಸಂದರ್ಭ ಕಡಿಮೆ.

3

ಈ ಮೇಲಿನ ಸಂಗತಿಗೂ ಈ ಲೇಖನದಲ್ಲಿ ಹೇಳಹೊರಟಿರುವ ವಿಷಯಕ್ಕೂ ಏನು ಸಂಬಂಧ? ಇದೆ, ಒಂದೆಡೆ ಮನುಷ್ಯ ಅನ್ಯಗ್ರಹಗಳಲ್ಲಿ ಕಾಲೂರಲು ಹವಣಿಸುತ್ತಿದ್ದಾನೆ. ಇನ್ನೊಂದೆಡೆ ಭೂಮಿಯಲ್ಲಿ ಜೀವ ಮಿಟುಕಿದ ಘಳಿಗೆ ಯಾವುದು ಎಂಬ ಪ್ರಾಥಮಿಕ ತಿಳಿವಳಿಕೆಯ ಬಗ್ಗೆಯೇ ಈಗಲೂ ವಾದ-ವಿವಾದವೇ ಆಗುತ್ತಿವೆ. ಜೀವರಸ ಎಲ್ಲಿಂದ ಬಂತು? ಹೇಗೆ ಬಂತು? ಕೋಶಕ್ಕೆ ಶಕ್ತಿ ವರ್ಗಾವಣೆ ಹೇಗೆ ಆಯಿತು? ಇಂದಿಗೂ ವಿಜ್ಞಾನಿಗಳನ್ನು ಇದು ಕೆಣಕುತ್ತಿದೆ. ಭೂಮಿಯ ಮೇಲೆ ಆದಿಮ ಜೀವಿ ಮೊದಲು ಮಿಸುಕಾಡಿದ್ದು ಸುಮಾರು 350 ಕೋಟಿ ವರ್ಷಗಳ ಹಿಂದೆ ಎಂಬುದು ವಿಜ್ಞಾನಿಗಳ ಅಂದಾಜು. ಆ ಕಾಲವನ್ನು ಅವರಷ್ಟೇ ಊಹಿಸಬಹುದು. ಆದರೆ ಸಾಮಾನ್ಯ ಮಾನವಮತಿಗೆ ಈ ದೀರ್ಘಕಾಲದ ಕಲ್ಪನೆ ಮಾಡುವುದು ಕಷ್ಟವೇ. ವಿಜ್ಞಾನಿಗಳು ಹತ್ತು ಹಲವು ಸಂಶೋಧನೆಗಳನ್ನು ಮಾಡಿ ಕೊನೆಗೂ ಒಂದು ಸಿದ್ಧಾಂತಕ್ಕೆ ಬಂದಿದ್ದಾರೆ. ಜೀವಿ ಹುಟ್ಟಲು ಜೀವದ್ರವ್ಯ ಬೇಕಲ್ಲ? ಶೂನ್ಯದಿಂದ ಏನೂ ಹುಟ್ಟುವುದಿಲ್ಲ ತಾನೆ? ಅದನ್ನು ಆದಿಮ ಜೀವರಸ (Primordial soup) ಎಂದಿದ್ದಾರೆ. ಬರಿ ಜೀವರಸವನ್ನು ಬಿಸಿಲಿಗೊಡ್ಡಿದರೆ ಜೀವ ಹುಟ್ಟೀತೆ? ಇಂಥ ಪ್ರಶ್ನೆಯನ್ನು ಸಾಮಾನ್ಯರೂ ಕೇಳಬಹುದು ಸಹಜವೇ. ಆ ಜೀವರಸವಿದ್ದುದು ಭೂಮಿಯ ಮೇಲಿನ ಕೊಳಗಳಲ್ಲಿ. ಒಂದಲ್ಲ, ಹತ್ತಾರು ಬಗೆಯ ರಾಸಾಯನಿಕ ಕ್ರಿಯೆಗಳು ಜರುಗಿದವು. ಅಣುಗಳು ಜೋಡಣೆಗೊಂಡವು, ಆಗಸದ ಮಿಂಚು ಅಥವಾ ಸೂರ್ಯನಿಂದ ಹೊಮ್ಮು ಅತಿನೇರಿಳೆ ಕಿರಣ (ultra violet rays) ಜೀವಕೋಶಕ್ಕೆ ಬೇಕಾದ ಶಕ್ತಿ ಪೂರೈಸಿರಬಹುದು. ಏಕಕೋಶ ಜೀವಿ ಹುಟ್ಟಲು ಭೂಮಿ ಕೋಟ್ಯಂತರ ವರ್ಷಗಳವರೆಗೆ ಬಸುರಾಗಬೇಕಾಯಿತು ಎನ್ನುವುದು ಅತ್ಯಂತ ಸಂಕ್ಷಿಪ್ತವಾಗಿ ಮೂರೇ ಸಾಲಿನಲ್ಲಿ ಹೇಳಬಹುದಾದ ಉತ್ತರ-ದಶಶ್ಲೋಕಿ ರಾಮಾಯಣ ಹೇಳಿದಂತೆ. ಈ ಸಿದ್ಧಾಂತ ಸುಮಾರು 90 ವರ್ಷಗಳ ಹಿಂದೆ ಪ್ರತಿಪಾದಿತವಾಗಿ ಮೊನ್ನೆ ಮೊನ್ನೆಯವರೆಗೂ ಅದು ತರ್ಕಬದ್ಧ ಎಂದು ವಿಜ್ಞಾನಿಗಳು ಒಪ್ಪಿಕೊಂಡಿದ್ದರು. ಈಗ ಬೇರೆ ಸಾಕ್ಷಿಗಳತ್ತ ಬೆರಳು ತೋರಿಸುತ್ತಿದ್ದಾರೆ.

ವಿಜ್ಞಾನದ ಜಾಯಮಾನವೇ ಹೀಗೆ. ಅದು `ನೇತಿ, ನೇತಿ, ನೇತಿ’ ಎಂದುಕೊಂಡೇ ಇನ್ಯಾವುದನ್ನೋ ಊಹಿಸುತ್ತದೆ, ಒಪ್ಪಿಕೊಳ್ಳುತ್ತದೆ. ಆದರೆ ಕಾಲದ ನಿಕಷಕ್ಕೆ ಒಡ್ಡಿದಾಗ ಅದು ಗೆದ್ದರೆ ಸರ್ವಸಮ್ಮತ, ಬದಲಾದರೆ ಅದು ನಮ್ಮ ಬೌದ್ಧಿಕ ಪ್ರಗತಿಯ ದ್ಯೋತಕ. ಇಲ್ಲಿ ಸುಳ್ಳು – ನಿಜಗಳ ವ್ಯಾಜ್ಯ ಬರುವುದಿಲ್ಲ.

ಈಗ ವಿಜ್ಞಾನಿಗಳು ಹಳೆಯ ಥಿಯರಿಯನ್ನು ಸ್ವಲ್ಪ ಪಕ್ಕಕ್ಕೆ ಸರಿಸಿದ್ದಾರೆ. ಅವರು ಸಾಗರ ತಳದಲ್ಲಿ ಆಗುತ್ತಿರುವ ವಿದ್ಯಮಾನದ ಕಡೆಗೆ ಬೊಟ್ಟುಮಾಡಿದ್ದಾರೆ. ಅವರು ನೀಡಿರುವ ಉದಾಹರಣೆ ತುಂಬ ಸರಳವಾದ್ದು. ನೀವು ಜಲವಿದ್ಯುತ್ ಅಣೆಕಟ್ಟನ್ನು ಜ್ಞಾಪಿಸಿಕೊಳ್ಳಿ. ಇಲ್ಲೂ ಹಾಗೆಯೇ, ಜೀವಕೋಶಗಳ ಕ್ರಿಯೆಗೆ ಬೇಕಾಗುವ ಶಕ್ತಿ ಮೊದಲು ಆಹಾರದಿಂದ ಬರುತ್ತದೆ. ಅದರಿಂದ ಒದಗಿದ ಶಕ್ತಿ ಕೋಶಪೊರೆಗಳಲ್ಲಿ ಪ್ರತ್ಯೇಕವಾದ ಸಂಗ್ರಹದಲ್ಲಿ ಪ್ರೊಟಾನ್ ರೂಪದಲ್ಲಿ ಸಂಚಯನವಾಗುತ್ತದೆ. ಪ್ರೊಟಾನ್ ಸಂಚಯ ಒಂದೆಡೆ ಹೆಚ್ಚಿ, ಅದೇ ಕೋಶ ಪೊರೆಯಿಂದ ಟರ್ಬೈನ್ ನಂತೆ ಹಿಂದಕ್ಕೆ ಬರುತ್ತವೆ. ಅಣೆಕಟ್ಟಿನಲ್ಲಿ ನೀರು ಹೊರಬಿಟ್ಟ ಹಾಗೆ. ಈ ಪ್ರಕ್ರಿಯೆಯಲ್ಲಿ ಅಧಿಕ ಶಕ್ತಿಯ ಸಂಯುಕ್ತಗಳು ಉಂಟಾಗಿ, ಉಳಿದ ಕೋಶಗಳಿಗೆ ಚಾರ್ಚ್ ಮಾಡುತ್ತವೆ.

ವಿಜ್ಞಾನಿಗಳಿಗೆ ಇದು ಹೊಳೆದದ್ದು ಹೇಗೆ? ಸಾಗರ ತಳದಲ್ಲಿ ಸಾವಿರಾರು ಕೊಳವೆಗಳಿವೆ, ಅವು ಈಗಲೂ ಬಿಸಿದ್ರವ್ಯನ್ನು ಹೊರಹಾಕುತ್ತಿವೆ. ಅದು ಕ್ಷಾರೀಯ. ಸಾಗರದ ನೀರೋ ಹೆಚ್ಚು ಆಮ್ಲೀಯ. ಇಲ್ಲೂ ನೈಸರ್ಗಿಕವಾಗಿ ಪ್ರೊಟಾನ್ ಸಾಂದ್ರತೆಯಲ್ಲಿ ವ್ಯತ್ಯಯವಾಗಿ ಇದರ ಹರಿವೇ ಕೋಶಗಳಿಗೆ ಶಕ್ತಿ ಕೊಡುತ್ತದೆ. ವಿಜ್ಞಾನಿಗಳು ಈಗ ಹೇಳಹೊರಟಿರುವುದು ಜೀವಿ ಹೇಗೆ ಹುಟ್ಟಿತು ಎನ್ನುವುದಕ್ಕಿಂತ ಅವುಗಳ ಕೋಶಕ್ಕೆ ಶಕ್ತಿ ಹೇಗೆ ಬಂತು ಎಂಬುದನ್ನು ಕುರಿತು. ಈಗಲೂ ಸಾಗರ ತಳಗಳಲ್ಲಿ ಇಂಥ ಜೀವಂತ ಬಿಸಿದ್ರವ್ಯದ ಕೊಳವೆಗಳನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಅಂದರೆ ಜೀವ ಮೊದಲು ಮಿಟುಕಿದ್ದು ಸಾಗರದಲ್ಲಿ. ಅನಂತರವಷ್ಟೇ ವಿಕಾಸ ಬೇರೆ ಬೇರೆಯ ಹಾದಿ ಹಿಡಿದು ಕೊನೆಗೆ ನೆಲದಲ್ಲೂ ನೆಲೆಯಾದವು ಎಂಬುದು ಈಗಿನ ಸಿದ್ಧಾಂತ. ಮುಂದೆ ಬೇರೆ ಸಾಕ್ಷಿಗಳು ದೊರೆಯಬಹುದು. ಆಗ ಜೀವಿಗಳ ಹುಟ್ಟಿನ ಮೂಲ ಬೇರೆಯದೇ ಎಂದು ತೋರಿಸಬಹುದು. ನಾವಂತೂ ಕಾಲನೌಕೆಯಲ್ಲಿ ಹಿಂದಕ್ಕೆ ಹೋಗಿ ಆ ಘಳಿಗೆಯನ್ನು ಎಂದೂ ನೋಡಲಾರೆವು.

Leave a Reply