ಹ್ಯಾಪಿ ಬರ್ತ್ ಡೆ ನರೇಂದ್ರ ಮೋದಿ, ಪ್ರಧಾನಿ ವ್ಯಕ್ತಿತ್ವದಲ್ಲಿ ಆಯ್ದುಕೊಳ್ಳಬೇಕಾದ ನಾಯಕತ್ವ ಮಾದರಿ

ಡಿಜಿಟಲ್ ಕನ್ನಡ ಟೀಮ್:

ಇಂದು (ಸೆ. 17) ಪ್ರಧಾನಿ ನರೇಂದ್ರ ಮೋದಿ ಜನ್ಮದಿನ. ಹಾಗೆಂದೇ ತಮ್ಮ ರಾಜ್ಯವಾದ ಗುಜರಾತಿಗೆ ಭೇಟಿ ನೀಡಿ ತಾಯಿ ಹಿರಾಬೆನ್ ಅವರ ಆಶೀರ್ವಾದ ಪಡೆದರು ಪ್ರಧಾನಿ ಮೋದಿ. ಗಣ್ಯ ವಲಯದಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

ಜೈ ಎನ್ನುವ ಭಕ್ತ ಪರಂಪರೆ ಹಾಗೂ ಏನೇ ಮಾಡಿದರೂ ಈ ವ್ಯಕ್ತಿಯನ್ನು ವಿರೋಧಿಸಿಯೇ ಸಿದ್ಧ ಎನ್ನುವ ಸಮೂಹ ಇವೆರಡು ಅತಿಗಳು ಮೋದಿ ವಿಷಯದಲ್ಲಿ ಇವೆಯಾದರೂ ವಾಸ್ತವಿಕವಾಗಿ ರಾಜಕೀಯ ಕನ್ನಡಕ ತೆಗೆದಿರಿಸಿದಾಗ ವಿರೋಧಿಗಳೂ ಈ ಮೋದಿ ಎಂಬ ಬೆರಗನ್ನು ಗೌಣಗೊಳಿಸಲಾರರು. ಮೋದಿ ಯಾವಾಗ ರಾಜಕೀಯ ಪ್ರವೇಶಿಸಿದರು, ಯಾವಾಗ ಮುಖ್ಯಮಂತ್ರಿಯಾದರು, ಗೋಧ್ರಾ ಕಟ್ಟಿಕೊಟ್ಟ ಇಮೇಜೇನು, ಪ್ರಧಾನಿ ಪಟ್ಟಕ್ಕೆ ಹೇಗೆ ಯಾವಾಗ ಎತ್ತರಿಸಿಕೊಂಡರು ಎಂಬೆಲ್ಲ ಟೈಮ್ ಲೈನುಗಳ ವಿವರ ಪಕ್ಕಕ್ಕಿಟ್ಟು, ನರೇಂದ್ರ ಮೋದಿ ಎಂಬ ವ್ಯಕ್ತಿತ್ವ ಏನೆಲ್ಲ ಸಾರಾಂಶಗಳನ್ನು ಅರುಹುತ್ತದೆ ಎಂಬುದನ್ನು ಜನ್ಮದಿನದ ಪ್ರಯುಕ್ತ ಗಮನಿಸಬಹುದು.

ಇದು ಅರ್ಜೆಂಟಲ್ಲಿ ಅರಳಿದ ಆಕರ್ಷಣೆ ಅಲ್ಲ

ನರೇಂದ್ರ ಮೋದಿ ತಮ್ಮ ಮಾತುಗಳಲ್ಲಿ ಮರುಳು ಮಾಡಿ ಬೆಂಬಲ ಗಿಟ್ಟಿಸಿಕೊಂಡಿದ್ದಾರೆ ಎಂಬುದು ರಾಜಕೀಯ ಎದುರಾಳಿಗಳು ತಮ್ಮ ನಿರಾಕರಣ ಧೋರಣೆಯಲ್ಲಿ ಆಗಾಗ ಹೇಳುವ ಮಾತು. ನಿಜ, ಅಂಕಿಅಂಶಗಳ ನೀರಸ ಭಾವದಲ್ಲಿ ಉಳಿಯಬಹುದಿದ್ದನ್ನೆಲ್ಲ ಉದಾಹರಣೆಗಳು- ರೂಪಕಗಳ ಮೂಲಕ ಆಪ್ತವಾಗಿಸುವ ಮಾತಿನ ವೈಖರಿ ಅವರಲ್ಲಿದೆ. ಹಾಗೆಂದು ಅದಷ್ಟೇ ಎಂಬ ಟೀಕೆಯಲ್ಲಿ ಹುರುಳಿಲ್ಲ. ಇವತ್ತಿನ ಅಧಿಕಾರ- ಆಕರ್ಷಣೆಗಳನ್ನು ಅವರಿಗೆ ಯಾರೋ ಬಂಗಾರದ ಬಟ್ಟಲಲ್ಲಿಟ್ಟುಕೊಟ್ಟಿದ್ದಲ್ಲ. ಅದು ದಶಕಗಳ ಪರಿಶ್ರಮದಿಂದ ಗಳಿಸಿಕೊಂಡಿದ್ದು. ಎಂಬತ್ತರ ದಶಕದಲ್ಲಿ ಆರೆಸ್ಸೆಸ್ಸಿನಲ್ಲಿ ಚಹಾ-ತಿಂಡಿ ಪೂರೈಕೆಯ ಪ್ರಾಥಮಿಕ ಹಂತದಿಂದ ಕೆಲಸ ಶುರುಮಾಡಿದ ವ್ಯಕ್ತಿ ಮೋದಿ. ವಹಿಸಿದ ಪ್ರತಿ ಕೆಲಸದಲ್ಲೂ ಬದ್ಧತೆ ಹಾಗೂ ಆ ಬದ್ಧತೆಯ ಜತೆ ಬುದ್ಧಿವಂತಿಕೆ ಅವರನ್ನು ಇಲ್ಲಿಯವರೆಗೆ ತಂದು ನಿಲ್ಲಿಸಿ, ಭಾರತವಷ್ಟೇ ಅಲ್ಲ, ಜಗತ್ತಿನ ಪ್ರಮುಖ ನಾಯಕರಲ್ಲಿ ಒಬ್ಬರನ್ನಾಗಿಸಿದೆ.

ಇವತ್ತಿನ ಅವರ ಲೋಕಪ್ರಿಯ ಜನಪ್ರಿಯತೆಯ ಹಿಂದೆ ಇಪ್ಪತ್ತೋ- ಮುವತ್ತೋ ವರ್ಷಗಳ ಅನಾಮಧೇಯ ಪರಿಶ್ರಮವಿದೆ. ಪ್ರಧಾನಿ ಮೋದಿ ದಣಿವರಿಯದೇ, ನಿದ್ರೆ-ರಜೆಗಳ ಬಗ್ಗೆ ಆಸಕ್ತಿ ಇಲ್ಲದೇ ಕೆಲಸ ಮಾಡುತ್ತಾರೆ ಎಂಬುದು ಅವರ ಮೇಲಿರುವ ಹೊಗಳಿಕೆ. ಇವತ್ತು ಬಹುಸಂಖ್ಯೆಯ ಭಾರತ ‘ಮೋದಿ…ಮೋದಿ’ ಎಂದು ಚಿಯರ್ ಮಾಡುತ್ತಿರುವಾಗ ಅಲ್ಲಿಂದಲೇ ಇಂಥದೊಂದು ಸ್ಫೂರ್ತಿ ಅವರಿಗೆ ಸಿಕ್ಕಿರಬಹುದು. ಆದರೆ ಈ ಜಯ ಜಯಕಾರಗಳು ಇಲ್ಲದ ಸಂದರ್ಭದಲ್ಲಿ ಮೋದಿ ಕಾಪಾಡಿಕೊಂಡಿದ್ದ ಶಿಸ್ತು ಹಾಗೂ ಪರಿಶ್ರಮಗಳಿವೆಯೆಲ್ಲ… ನಾವು ಅಚ್ಚರಿಪಡಬೇಕಾಗಿದ್ದು ಹಾಗೂ ಯಾವುದೇ ಕ್ಷೇತ್ರದಲ್ಲಿ ಸ್ಫೂರ್ತಿ ಹೊಂದಬೇಕಾದದ್ದು ಆ ಗುಣದಿಂದ. ಏಕೆಂದರೆ, ಆ ಸಂದರ್ಭದಲ್ಲಿ ‘ಐ ಕ್ವಿಟ್’ ಅಂತ ಪಕ್ಕಕ್ಕೆ ಸರಿದುಬಿಟ್ಟಿದ್ದರೆ ಅದು ಸುದ್ದಿಯೂ ಆಗುತ್ತಿರಲಿಲ್ಲ, ಮೋದಿಯೂ ರೂಪುಗೊಳ್ಳುತ್ತಿರಲಿಲ್ಲ. ಈ ನಿಟ್ಟಿನಲ್ಲಿ ಮೋದಿ ತಮ್ಮ ಸಂವಾದಗಳ ನಡುವೆ ಹೇಳಿದ ಎರಡು ಮಾತುಗಳು ಮರುಸ್ಮರಣೆಗೆ ಯೋಗ್ಯ. ದೀಪಾವಳಿ ಮಿಲನ್ ಹೆಸರಲ್ಲಿ ಪತ್ರಕರ್ತರೊಂದಿಗೆ ಬೆರೆಯುವ ಕಾರ್ಯಕ್ರಮದಲ್ಲಿ ಹೇಳಿದ್ದು- ‘ಇವತ್ತು ನಿಮ್ಮನ್ನು ಉದ್ದೇಶಿಸಿ ಮಾತನಾಡುತ್ತಿದ್ದೇನೆ. ಇದು ಬಹಳ ಭಾವನಾತ್ಮಕ ಅಂಶ. ಏಕೆಂದರೆ ಒಂದೊಮ್ಮೆ ನನ್ನ ಪತ್ರಕರ್ತ ಮಿತ್ರರಿಗೆ ಆಸನದ ವ್ಯವಸ್ಥೆ ಮಾಡುವ ಕೆಲಸ ನಿರ್ವಹಿಸುತ್ತಿದ್ದೆ.’ ವಿದ್ಯಾರ್ಥಿಗಳ ಜತೆಗಿನ ಸಂವಾದವೊಂದರಲ್ಲಿ ಹುಡುಗನೊಬ್ಬ- ಮೋದೀಜಿ, ನಾನೂ ಪ್ರಧಾನಿಯಾಗಬೇಕು ಎಂದಿದ್ದ. ನಸುನಗುತ್ತಲೇ ಮೋದಿ ಉತ್ತರ ಬಂದಿತ್ತು- ಚುನಾವಣೆಗೆ ಈಗಿನಿಂದಲೇ ತಯಾರಿ ಆರಂಭಿಸು!

ಜಾತಿಯಲ್ಲ, ಅರ್ಹತೆ…

ಹಿಂದುಳಿದ ಗಾಂಚಿ ಜಾತಿಯಲ್ಲಿ ಜನಿಸಿದ ಮೋದಿ, ವೈಯಕ್ತಿಕವಾಗಿ ಜಾತಿ ಕಾರ್ಡನ್ನು ಎಂದೂ ಬಳಸಿಲ್ಲ ಎಂಬುದೇ ಹಿಂದುತ್ವ ಭಾವನೆಯ ರಾಜಕೀಯ ಸಮೂಹಕ್ಕೆ ಅವರು ಆಪ್ತರಾಗಲು ಕಾರಣ.

ಇಲ್ಲೂ ಸಹ ತಮ್ಮ ರಾಜಕೀಯ ಯಾನದಲ್ಲಿ ಮೋದಿ ಪ್ರಾರಂಭಿಕ ಆಕರ್ಷಣೆಗಳನ್ನು ಮೀರಿದ್ದಿರಬೇಕು. ಏಕೆಂದರೆ ಜಾತಿ ನಾಯಕನಾಗಿ, ಜಾತಿಯೊಂದರ ಟೇಕೆದಾರನಾಗಿ ಗುರುತಿಸಿಕೊಳ್ಳುವುದು ಅಲ್ಪಾವಧಿಯಲ್ಲಿ ಆಕರ್ಷಣೆ ಮತ್ತು ಯಶಸ್ಸನ್ನು ತಂದುಕೊಡಬಲ್ಲ ಮಾರ್ಗ. ಬುದ್ಧಿಜೀವಿಗಳು ಹಾಗೂ ತಥಾಕಥಿತ ಸೆಕ್ಯುಲರ್ ರಾಜಕಾರಣಕ್ಕೆ ಒಪ್ಪಿತ ವ್ಯಕ್ತಿ ಆಗಬೇಕೆಂದರೆ ಈ ಜಾತಿ ಕಾರ್ಡು, ಬ್ರಾಹ್ಮಣ ಹಾಗೂ ಮೇಲ್ವರ್ಗ ವಿರೋಧಿ ಮಾತುಗಳು ತುಂಬಾ ಸಹಾಯಕ್ಕೆ ಬರುತ್ತವೆ. ದಲಿತರ ಬಗ್ಗೆ ಮೋದಿಯ ಅಂತ್ಯೋದಯ ಪರಿಕಲ್ಪನೆ ಮಾತುಗಳಿಗೂ ಇತರ ರಾಜಕಾರಣಿಗಳ ವರಸೆಗೂ ಭಿನ್ನತೆ ಇದೆ. ಎಲ್ಲರನ್ನೂ ಆರ್ಥಿಕ ಒಳಗೊಳ್ಳುವಿಕೆಯಿಂದ ಉದ್ಧರಿಸಬೇಕೆಂಬ ಧಾಟಿಯಿಂದಾಗಿಯೇ ಮೋದಿ ಜಾತಿ-ವರ್ಗಗಳನ್ನು ಮೀರಿ ವ್ಯಾಪಕ ಬೆಂಬಲ ಗಳಿಸಲು ಸಹಾಯಕವಾಯಿತು.

ಮೋದಿಗೂ ಮೊದಲೂ ನಾಯಕತ್ವವಿತ್ತು, ಆದರೆ…

ಸ್ವತಂತ್ರ ಭಾರತದ ಮೊದಲ ದಾಡಸಿ ನಾಯಕ, ಜಾಗತಿಕ ವರ್ಚಸ್ವಿ ಎಂದರೆ ನರೇಂದ್ರ ಮೋದಿ ಎಂಬುದು ಉತ್ಪ್ರೇಕ್ಷೆಯ ಮಾತು. ಸರ್ವಾಧಿಕಾರಿ ದೋರಣೆ, ದೋಷಗಳ ಪಟ್ಟಿ ಏನೇ ಇರಬಹುದಾಗಲೀ ಇಂದಿರಾ ಗಾಂಧಿಯವರಲ್ಲೂ ಅಂಥದೊಂದು ಛಾತಿ ಇತ್ತು. ಉಗ್ರವಾದ ಎದುರಿಸುವಲ್ಲಿ, ಅಮೆರಿಕದಂಥ ದೈತ್ಯ ರಾಷ್ಟ್ರದ ಕಣ್ಣಲ್ಲಿ ಕಣ್ಣಿಟ್ಟು ಮಾತಾಡುವುದರಲ್ಲಿ ಇಂದಿರಾ ಸಹ ಹಿಂದೆ ಬಿದ್ದಿರಲಿಲ್ಲ. ಆದರೆ ನೆಹರು ಮಗಳಾಗಿ ಆಕೆ ಹೊಂದಿದ್ದ ಹಿಡಿತಕ್ಕೂ, ಇತ್ತ ಯಾವ ರಾಜಕೀಯ ಹಿನ್ನೆಲೆಗಳೂ ಇಲ್ಲದೇ, ಶ್ರೀಮಂತ ಕುಟುಂಬದ ಹಿನ್ನೆಲೆಯೂ ಇಲ್ಲದೇ ನರೇಂದ್ರ ಮೋದಿ ಏರಿರುವ ಎತ್ತರಕ್ಕೂ ವ್ಯತ್ಯಾಸಗಳಿವೆ. ಮೋದಿಯ ಹೋರಾಟ ದೊಡ್ಡದಿದೆ. ಇದುವೇ ಮೋದಿ ನಾಯಕತ್ವದ ಅನನ್ಯತೆ. ಉಳಿದಂತೆ, ಇಂಥದೇ ಸ್ವತಂತ್ರ ಆಲೋಚನಾ ಹಿನ್ನೆಲೆ ಹೊಂದಿದ್ದ ಶಾಸ್ತ್ರೀ, ವಾಜಪೇಯಿ, ಪಿವಿಎನ್ ಇವರಿಗೆಲ್ಲ ಸಿಗದ ಸಮಯ- ಬಹುಮತ ವ್ಯಾಪ್ತಿಗಳನ್ನು ಮೋದಿ ಗಳಿಸಿಕೊಂಡಿದ್ದಾರೆ.

ಸೃಷ್ಟಿಸಬೇಕಿರುವುದು ಪ್ರತಿಕ್ರಿಯೆಗಳನ್ನಲ್ಲ, ವ್ಯಾಖ್ಯಾನಗಳನ್ನು…
ಬೇರೆ ಬೇರೆ ಕ್ಷೇತ್ರಗಳಲ್ಲಿರುವವರೂ ಅನುಸರಿಸಬೇಕಾದ ಮೋದಿ ಮಾದರಿ ಇದು. ಟೀಕಾಕಾರರಿಗೆಲ್ಲ ಉತ್ತರಿಸಿಕೊಂಡಿರುತ್ತೇನೆ ಎಂದರೆ ಪ್ರತಿಕ್ರಿಯೆ ನೀಡುವುದಷ್ಟೇ ಕೆಲಸವಾಗುತ್ತದೆ. ಮೋದಿ ಅದರಿಂದ ದೂರ. ಹಾಗಂತ ಕೇವಲ ಮೌನವೇ ಉತ್ತರವಾಗಿದ್ದರೆ ಮನಮೋಹನ ಸಿಂಗರಾಗುತ್ತಿದ್ದರು. ಇಲ್ಲಿ ಮೋದಿ ಭಿನ್ನತೆ ಏನು ಹಾಗಾದರೆ? ಮೋದಿ ಸರ್ಕಾರ ಪ್ರತಿದಿನವೂ ತನ್ನದೇ ವ್ಯಾಖ್ಯಾನಗಳನ್ನು, ಅಭಿವೃದ್ಧಿ ಕತೆಗಳನ್ನು, ವಿದೇಶಿ ವಿಕ್ರಮಗಳನ್ನು ದೇಶದ ಮುಂದಿಡುತ್ತ ಹೋಗುತ್ತಿದೆ. ಈ ಬಗ್ಗೆ ಟೀಕೆಗಳೂ ಇವೆ. ಆದರೆ ಟೀಕೆಗೆ ಉತ್ತರಿಸುವುದರಲ್ಲೇ ಮಗ್ನವಾಗದೇ ಮರುವ್ಯಾಖ್ಯಾನಗಳ ಸೃಷ್ಟಿಯಲ್ಲಿ ತೊಡಗಿಸಿಕೊಂಡಿರುವುದೇ ಗಮನಿಸಬೇಕಿರುವ ಅಂಶ. ಯಾವುದೇ ಪ್ರಬಲ ರಾಜಕೀಯ ವ್ಯವಸ್ಥೆ ತಾನು ನರೇಟಿವ್ ಗಳನ್ನು ಸೃಷ್ಟಿಸುತ್ತದೆಯೇ ಹೊರತು ಕೌಂಟರ್ ನರೇಟಿವ್ ಗಳಲ್ಲೇ ಕಾಲ ಕಳೆಯುವುದಿಲ್ಲ.

ಎಲ್ಲ ಕ್ಷೇತ್ರಗಳಲ್ಲೂ ದೀರ್ಘಾವಧಿ ಯಶಸ್ಸಿಗೆ ಸಹಕರಿಸಬಲ್ಲ ಹಲವು ಸೂತ್ರಗಳನ್ನು ಮೋದಿ ಬದುಕಿನಿಂದ ಆಯ್ದುಕೊಳ್ಳಬಹುದು.

Leave a Reply