ಪಾಕಿಸ್ತಾನದಿಂದ ಪರೋಕ್ಷ ಯುದ್ಧ ಘೋಷಣೆ, ಕುತೂಹಲ ಮೂಡಿಸಿದೆ ಭಾರತದ ಮುಂದಿನ ನಡೆ

ಡಿಜಿಟಲ್ ಕನ್ನಡ ಟೀಮ್:

ಜಮ್ಮು-ಕಾಶ್ಮೀರದ ಬಾರಮುಲ್ಲ ಕೇಂದ್ರದ ಉರಿ ವಲಯದಲ್ಲಿ ಭಾರತೀಯ ಸೇನಾ ಕೇಂದ್ರದ ಮೇಲೆ ಗಡಿಯಾಚೆಗಿನ ಉಗ್ರರು ದಾಳಿ ನಡೆಸಿದ್ದಾರೆ. ಪರಿಣಾಮ 17 ಯೋಧರು ಮೃತಪಟ್ಟಿದ್ದು, 25ಕ್ಕೂ ಹೆಚ್ಚು ಯೋಧರು ಗಂಭೀರ ಗಾಯಗೊಂಡಿದ್ದಾರೆ.

ಕಾಶ್ಮೀರದಲ್ಲಿ ಎರಡು ತಿಂಗಳಿಂದ ಕರ್ಫ್ಯೂ ಹೇರಿರುವ ಪರಿಸ್ಥಿತಿ ಇರುವುದು ಕೇವಲ ಕೇಂದ್ರದ ವೈಫಲ್ಯವೆಂದೋ, ಕಾಶ್ಮೀರಿಗಳ ಜತೆ ಸಂವಾದ ನಡೆಸುವಲ್ಲಿ ಭಾರತ ವಿಫಲವಾಗಿರುವುದೇ ಈ ಪರಿಸ್ಥಿತಿಗೆ ಕಾರಣ ಎಂದೋ ವಾದಿಸುವವರು ಈ ಬಗೆಯ ಸಂಯೋಜಿತ ದಾಳಿಗಳ ಅರ್ಥವನ್ನು ಮನಗಾಣಬೇಕಿದೆ. ಕಾಶ್ಮೀರ ಕಣಿವೆಯ ಜಿಲ್ಲೆಗಳಲ್ಲಿ ಕಲ್ಲು ತೂರುತ್ತ, ಇಡೀ ಜಮ್ಮು-ಕಾಶ್ಮೀರ ಹಿಂಸಾಗ್ರಸ್ತ ಹಾಗೂ ಭಾರತ ಇದರ ಹಿತ ಕಾಯಲು ವಿಫಲವಾಗುತ್ತಿದೆ ಎಂಬ ಸಂದೇಶವು ಜಾಗತಿಕ ಮಟ್ಟದಲ್ಲಿ ಮೂಡುವಂತೆ ಇಲ್ಲಿನ ಪ್ರತ್ಯೇಕತಾವಾದಿ ಪಾಕ್ ಪ್ರೇರಿತರು ನೋಡಿಕೊಳ್ಳುತ್ತಿದ್ದಾರೆ. ಅತ್ತ, ಪಾಕಿಸ್ತಾನದ ನೆಲದಿಂದ ಒಳನುಸುಳುವಿಕೆ ಹಾಗೂ ಸೇನಾ ನೆಲೆಗಳ ಮೇಲಿನ ದಾಳಿ ತೀವ್ರವಾಗುತ್ತಲೇ ಇದೆ.

ಭಾನುವಾರ ಮುಂಜಾನೆಯ 5.30ರ ವೇಳೆ ಬಹುತೇಕ ನಿದ್ರೆಯ ಮಂಪರಿರುವ ಸಂದರ್ಭ ನೋಡಿಕೊಂಡು ಈ ದಾಳಿ ನಡೆದಿದೆ. ಇದು ಕಳೆದ 15 ವರ್ಷಗಳಲ್ಲಿ ಅತಿ ಹೆಚ್ಚು ಯೋಧರನ್ನು ಬಲಿ ಪಡೆದಿರುವುದರಿಂದ ಇದನ್ನು ದೊಡ್ಡ ದಾಳಿಯಾಗಿ ಪರಿಗಣಿಸಲಾಗುತ್ತಿದೆ. ಈ ದಾಳಿಯಲ್ಲಿ ವಶಪಡಿಸಿಕೊಳ್ಳಲಾದ ಶಸ್ತ್ರಾಸ್ತ್ರಗಳ ಮೇಲೆ ಪಾಕಿಸ್ತಾನ ಗುರುತು ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಈ ದಾಳಿಯ ಹಿಂದೆ ಜೈಶೆ ಮೊಹಮದ್ ಉಗ್ರ ಸಂಘಟನೆ ಕೈವಾಡವಿದೆ ಎಂಬ ವರದಿಗಳು ಬರುತ್ತಿವೆ. ಇನ್ನು ಮಾಜಿ ಸೇನಾ ಅಧಿಕಾರಿಗಳ ಪ್ರಕಾರ ಇದು ಕೇವಲ ಬರಿ ಉಗ್ರರ ದಾಳಿಯಲ್ಲ, ಪಾಕಿಸ್ತಾನದ ಸೇನೆ ಹಾಗೂ ಐಎಸ್ಐನ ಸಹಕಾರವೂ ಇದೆ ಎಂಬ ಗಂಭೀರ ಆರೋಪವನ್ನು ಮಾಡಿದ್ದಾರೆ.

ಈ ದಾಳಿಯನ್ನು ಪ್ರತ್ಯೇಕವಾಗಿ ನೋಡುವುದಕ್ಕೆ ಸಾಧ್ಯವಿಲ್ಲ. ಏಕೆಂದರೆ, ಇಂಥ ಸರಣಿಗಳಲ್ಲಿ ಇದು ಒಂದು ದಾಳಿಯಷ್ಟೆ. ಗೃಹ ಸಚಿವಾಲಯದ ಸಹಾಯಕ ಸಚಿವ ಹಂಸರಾಜ್ ಅಹಿರ್ ಅವರು ರಾಜ್ಯಸಭೆಯಲ್ಲಿ ನೀಡಿರುವ ಮಾಹಿತಿ ಪ್ರಕಾರ ಒಳನುಸುಳುವಿಕೆ ಮತ್ತು ಗಡಿಯಾಚೆಯಿಂದ ಉದ್ಭವವಾಗುತ್ತಿರುವ ದಾಳಿ ಪ್ರಮಾಣದಲ್ಲಿ ಗಣನೀಯ ಏರಿಕೆ ಆಗಿದೆ.

ಜೂನ್ 2016ರಲ್ಲಿ ಇಂಥ 90 ಒಳನುಸುಳುವಿಕೆ ಪ್ರಕರಣಗಳು ದಾಖಲಾಗಿವೆ. 2015ರ ಜೂನ್ ವೇಳೆಯ ಅಂಕಿಅಂಶವಾದ 29 ಒಳನುಸುಳುವಿಕೆ ಪ್ರಯತ್ನಕ್ಕೆ ಹೋಲಿಸಿದರೆ ಹೆಚ್ಚಳ ಗಮನಕ್ಕೆ ಬರುತ್ತದೆ. ಕಲ್ಲು ತೂರಾಟಗಾರರು ಮತ್ತು ಗಡಿಯಾಚೆಗಿನ ದಾಳಿಕೋರರು ಇಬ್ಬರ ಗುರಿಯೂ ಸೇನೆಯೇ. ಜಮ್ಮು-ಕಾಶ್ಮೀರದಲ್ಲಿ ಸೇನಾ ಉಪಸ್ಥಿತಿ ಇರಬಾರದು ಎಂಬ ಇಲ್ಲಿನವರ ವಾದ ಹಾಗೂ ಪಾಕಿಸ್ತಾನದ ಉದ್ದೇಶಗಳೆರಡಕ್ಕೂ ಸ್ಪಷ್ಟ ತಾಳೆಯಾಗುತ್ತದೆ. ಇದೀಗ ಉರಿ ವಿಭಾಗದಲ್ಲಾದ ದಾಳಿ ಹಿನ್ನೆಲೆಯಲ್ಲಿ ಆ ಬಗ್ಗೆ ಗಮನಹರಿಸುವುದಕ್ಕೆ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ತಮ್ಮ ರಷ್ಯ ಹಾಗೂ ಅಮೆರಿಕ ಭೇಟಿಗಳನ್ನು ರದ್ದುಗೊಳಿಸುತ್ತಿದ್ದಾರೆ.

ಜಮ್ಮು-ಕಾಶ್ಮೀರವನ್ನು ಸಂಘರ್ಷದಲ್ಲಿಡುವ ಮೂಲಕ ಪಾಕಿಸ್ತಾನವು ಭಾರತದ ದೈನಂದಿನ ಜಾಗತಿಕ ಸಂಸಾರ ಪ್ರಗತಿಗೆ ಹೇಗೆ ಅಡ್ಡಿ ಮಾಡುತ್ತಿದೆ ಎಂಬುದಕ್ಕೆ ಇದೊಂದು ಉದಾಹರಣೆ. ಜಮ್ಮು-ಕಾಶ್ಮೀರವನ್ನು ಸದಾ ವಿವಾದಗ್ರಸ್ತವಾಗಿಸಿ, ಅಂತಾರಾಷ್ಟ್ರೀಯ ಚರ್ಚೆಯನ್ನಾಗಿಸಿ, ಉತ್ತರಿಸುವ ಜಾಗದಲ್ಲಿ ಭಾರತವನ್ನು ನಿಲ್ಲಿಸುವುದಕ್ಕೂ ಪಾಕಿಸ್ತಾನದ ಈ ನೀತಿ ಅದಕ್ಕೆ ಸಹಾಯಕ. ಭಾರತೀಯ ಸೇನೆಯ ಮೇಲಿನ ದಾಳಿಗಳು ಹೇಗೆ ನಿರಂತರವಾಗಿ ನಡೆಯುತ್ತಿವೆ ಎಂಬುದಕ್ಕೆ ಕೆಲ ಉದಾಹರಣೆಗಳನ್ನು ಗಮನಿಸಿ. ಜೂನ್ ನಲ್ಲಿ ಪಾಂಪೋರ್ ನಲ್ಲಿ ನುಸುಳುಕೋರ ಉಗ್ರರು ನಡೆಸಿದ ದಾಳಿಗೆ ಸಿ ಆರ್ ಪಿ ಎಫ್ ನ 8 ಸಿಬ್ಬಂದಿ ಹುತಾತ್ಮರಾಗಿ 20 ಮಂದಿ ಗಾಯಾಳುಗಳಾದರು.

ಸ್ವಾತಂತ್ರ್ಯ ದಿನದ ಎರಡೇ ದಿನಗಳಲ್ಲಿ ದಾಳಿ ನಡೆಯಿತು. ಆಗಸ್ಟ್ 19ರಂದು ಕುಪ್ವಾರಾದ ಬಿಎಸ್ಎಫ್ ಮೇಲಾದ ದಾಳಿಯಲ್ಲಿ ನಮ್ಮ 19 ಯೋಧರು ಗಾಯಾಳುಗಳಾದರು. ಸೆಪ್ಟೆಂಬರ್ 9ರಂದು ಪುಲ್ವಾಮಾದ ಡಿಗ್ರಿ ಕಾಲೇಜಿನ ಬಳಿ ಭದ್ರತಾ ಪಡೆ ಮೇಲೆ ಗ್ರೆನೇಡ್ ದಾಳಿಯಾಗಿ 18 ಯೋಧರನ್ನು ಘಾಸಿಗೊಳಿಸಿತು.

ಇವೆಲ್ಲ ಪ್ರಮುಖ ಉದಾಹರಣೆಗಳು ಮಾತ್ರ. ಇತ್ತೀಚಿನ ಕ್ಯಾಲೆಂಡರ್ ತೆಗೆದು ಗುರುತು ಹಾಕಲು ಕುಳಿತರೆ ಜಮ್ಮು-ಕಾಶ್ಮೀರದಲ್ಲಿ ಸೇನಾ ನೆಲೆಗಳ ಮೇಲೆ, ಸೇನಾ ವಾಹನಗಳ ಮೇಲೆ ದಾಳಿ ಆಗದ ದಿನಗಳೇ ಕಡಿಮೆ ಎಂಬಂತಾಗಿದೆ. ಜಮ್ಮು-ಕಾಶ್ಮೀರದ ಹೊರಗೆ ಅದಕ್ಕೆ ಅತಿ ಸನಿಹದಲ್ಲಿರುವ ದೊಡ್ಡ ಸೇನಾ ನೆಲೆ ಎಂದರೆ ಪಠಾಣ್ ಕೋಟ್. ಅದರ ಮೇಲೆಯೇ ಪಾಕ್ ಉಗ್ರರ ದಾಳಿ ಆಯಿತು. ಇವೆಲ್ಲದರ ಅರ್ಥ ತಿಳಿದುಕೊಳ್ಳುವುದಕ್ಕೆ ರಕ್ಷಣಾ ಪರಿಣತರೇ ಆಗಬೇಕಿಲ್ಲ. ಜಮ್ಮು-ಕಾಶ್ಮೀರದಲ್ಲಿ ಭಾರತ ಅದಾಗಲೇ ರಣಾಂಗಣದಲ್ಲಿ ನಿಂತುಬಿಟ್ಟಿದೆ ಎಂಬುದೇ ವಾಸ್ತವ.

ಈ ದಾಳಿಗೆ ಸಂಬಂಧಿಸಿದಂತೆ ಟ್ವಿಟರ್ ಮೂಲಕ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ‘ಈ ಕೃತ್ಯ ಎಸಗಿದವರಿಗೆ ಶಿಕ್ಷೆ ನೀಡದೇ ಬಿಡುವುದಿಲ್ಲ’ ಎಂದು ಖಾರವಾದ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಬಿಜೆಪಿ ನಾಯಕ ರಾಮ್ ಮಾದವ್ ಅವರು ತಮ್ಮ ಫೇಸ್ ಬುಕ್ ಪುಟದಲ್ಲಿ ‘ಈ ದಾಳಿಗೆ ನಮ್ಮ ಪ್ರತಿಕ್ರಿಯೆ ಹಲ್ಲಿಗೆ ಹಲ್ಲು ಕೀಳುವಂತಿರಬಾರದು. ಬದಲಿಗೆ ಹಲ್ಲಿಗೆ ಪ್ರತಿಯಾಗಿ ಅವರ ದವಡೆಯನ್ನೇ ಕೀಳಬೇಕು’ ಎಂದು ಹೇಳಿದ್ದಾರೆ. ಈ ಎಲ್ಲ ಪ್ರತಿಕ್ರಿಯೆಗಳು ಆಕ್ರಮಣಕಾರಿಯಾಗಿದ್ದು, ಭಾರತದ ಮುಂದಿನ ಹೆಜ್ಜೆ ಯಾವ ರೀತಿ ಇರಲಿದೆ ಎಂಬುದು ಕುತೂಹಲ ಮೂಡಿಸಿದೆ.

2 COMMENTS

Leave a Reply