ಬಗರ್ ಹುಕುಂಗೆ ಮತ್ತೆ ಅವಕಾಶ ಅಂದ್ರು ಕಾಗೋಡು, ಲೋಕಾಯುಕ್ತ ಭ್ರಷ್ಟರಿಗೆ ಸಿಕ್ತು ಜಾಮೀನು, ಎಸ್ಐಟಿಗೆ ಎಚ್ಡಿಕೆ- ಎಸ್ಎಂ ಕೃಷ್ಣ ಅಕ್ರಮ ಗಣಿಗಾರಿಕೆ ಕೇಸ್

Pro Kannada activists stage protest for Cauvery issue at Attibele in Bengaluru on Monday.

ಕಾವೇರಿ ನೀರು ಹಂಚಿಕೆಯಲ್ಲಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಪ್ರತಿಭಟಿಸಿ ಅತ್ತಿಬೆಲೆಯಲ್ಲಿ ಕನ್ನಡ ಪರ ಚಳುವಳಿಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಸೋಮವಾರ ನಡೆದ ಪ್ರತಿಭಟನೆ…

ಡಿಜಿಟಲ್ ಕನ್ನಡ ಟೀಮ್:

ಬಗರ್ ಹುಕ್ಕುಂ ಸಕ್ರಮಕ್ಕೆ ಅರ್ಜಿ ಸಲ್ಲಿಸಲು ಮತ್ತೆ ಅವಕಾಶ ಅಂದ್ರು ಕಾಗೋಡು ತಿಮ್ಮಪ್ಪ

ಅರಣ್ಯಭೂಮಿ ಒತ್ತುವರಿಯಲ್ಲಿ ಸಾಗುವಳಿ ಮಾಡುತ್ತಿರುವ ಬಗರ್ ಹುಕುಂ ಭೂಮಿಯನ್ನು ಸಕ್ರಮಗೊಳಿಸಲು ನೀಡಿದ್ದ ಕಾಲಾವಕಾಶ ಮುಕ್ತಾಯವಾಗಿರುವ ಬೆನ್ನಲ್ಲೇ, ಈ ಅರ್ಜಿಯನ್ನು ಸಲ್ಲಿಸಲು ಮತ್ತೆ ಅವಕಾಶ ನೀಡಲಾಗುವುದು ಎಂದಿದ್ದಾರೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ. ರಾಜ್ಯದ ಎಲ್ಲೆಡೆಯಿಂದ ಅರ್ಜಿ ಸಲ್ಲಿಸಲು ಮತ್ತೆ ಅವಕಾಶ ನೀಡಿ ಎಂದು ಮನವಿ ಬಂದಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.

ಒಬ್ಬ ವ್ಯಕ್ತಿ ಎಪ್ಪತ್ತೈದು ವರ್ಷಗಳಿಂದ ಸದರಿ ಭೂಮಿಯಲ್ಲಿ ವಾಸವಾಗಿದ್ದರೆ, ಒಂದಕ್ಕಿಂತ ಹೆಚ್ಚು ಸಾಕ್ಷ್ಯಗಳಿದ್ದರೆ ಆ ಬಗರ್ ಹುಕುಂ ಜಮೀನನ್ನು ಸಕ್ರಮವಾಗಿ ಮಂಜೂರು ಮಾಡಬಹುದು ಎಂದು ಕಾಯ್ದೆ ಹೇಳಿದೆ. ಹೀಗಾಗಿ ಸಕ್ರಮ ಮಾಡಿಸಿಕೊಳ್ಳಲು ಹಿರಿಯರ ಹೇಳಿಕೆ, ಮತದಾರರ ಚೀಟಿ, ವಾಸ ಧೃಢೀಕರಣ ಪತ್ರ ಒದಗಿಸಿದರೆ ಸಾಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಇನ್ನುಮುಂದೆ ಕೆರೆ ಹಾಗೂ ಸರ್ಕಾರಿ ಭೂಮಿ ಒತ್ತುವರಿಯಾದರೆ, ಅದಕ್ಕೆ ಗ್ರಾಮ ಲೆಕ್ಕಿಗನನ್ನೇ ಹೊಣೆ ಮಾಡಲಾಗುವುದು ಎಂದು ತಿಮ್ಮಪ್ಪನವರು ಇದೇ ಸಂದರ್ಭದಲ್ಲಿ ಹೇಳಿದ್ರು. ಗ್ರಾಮಲೆಕ್ಕಿಗರು ತಾವು ಕೆಲಸ ಮಾಡುವ ಹಳ್ಳಿಯಲ್ಲೇ ವಾಸ ಮಾಡಬೇಕು. ಆಗ ಇವರು ಸರ್ಕಾರಿ ಭೂಮಿ ಒತ್ತುವರಿಯಾಗುವ ಬಗ್ಗೆ ಸ್ಪಷ್ಟ ನಿಗಾ ಇಡಬಹುದು ಎಂದು ಅಭಿಪ್ರಾಯಪಟ್ಟರು. ಇನ್ನು ಈಗಲ್ ಟನ್ ರೆಸಾರ್ಟ್ ಪ್ರಕರಣಕ್ಕೆ ಮತ್ತೆ ಜೀವ ಬಂದಿದೆ. ಈ ಬಗ್ಗೆ ಮಾಹಿತಿ ನೀಡಿದ ಸಚಿವರು ರೆಸಾರ್ಟ್ ವಶದಲ್ಲಿರುವ 77 ಎಕರೆ ಸರ್ಕಾರಿ ಭೂಮಿಗೆ ಪ್ರತಿಯಾಗಿ 998 ಕೋಟಿಯನ್ನು ಶುಲ್ಕ ವಸೂಲು ಮಾಡಲು ಸರ್ಕಾರ ನಿರ್ಧರಿಸಿರುವುದಾಗಿ ಮಾಹಿತಿ ನೀಡಿದ್ರು.

ಲೋಕಾಯುಕ್ತದಲ್ಲಿ ಭ್ರಷ್ಟಾಚಾರ: 11 ಆರೋಪಿಗಳಿಗೆ ಜಾಮೀನು

ಲೋಕಾಯುಕ್ತ ಸಂಸ್ಥೆಯಲ್ಲಿ ಭ್ರಷ್ಟಾಚಾರ ನಡೆಸಿ ಕಳೆದ ಒಂದು ವರ್ಷದಿಂದ ಜೈಲಿನಲ್ಲಿದ್ದ 11 ಆರೋಪಿಗಳಿಗೆ ಸೋಮವಾರ ಷರತ್ತುಬದ್ಧ ಜಾಮೀನು ನೀಡಲಾಗಿದೆ. ಮಾಜಿ ಲೋಕಾಯುಕ್ತ ಭಾಸ್ಕರ್ ರಾವ್ ಅವರ ಪುತ್ರ ಅಶ್ವಿನ್ ಸೇರಿದಂತೆ 11 ಮಂದಿ 2015 ರ ಜುಲೈ 15ರಿಂದ ಜೈಲಿನಲ್ಲಿದ್ದರು. ತನಿಖೆಗೆ ಸಹಕಾರ ನೀಡಬೇಕು ಹಾಗೂ ಸಾಕ್ಷ್ಯಾಧಾರ ನಾಶ ಮಾಡಬಾರದು ಎಂಬ ಷರತ್ತಿನ ಮೇಲೆ ಈ ಆರೋಪಿಗಳಿಗೆ ನ್ಯಾಯಾಲಯ ಜಾಮೀನು ನೀಡಿದೆ.

ಎಸ್.ಎಂ ಕೃಷ್ಣ, ಎಚ್ಡಿಕೆ ವಿರುದ್ಧದ ಅಕ್ರಮ ಗಣಿಗಾರಿಕೆ ಕೇಸ್ ಎಸ್ಐಟಿಗೆ ನೀಡಲು ಸುಪ್ರೀಂ ಆದೇಶ

ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ ಕುಮಾರಸ್ವಾಮಿ ಹಾಗೂ ಎಸ್.ಎಂ ಕೃಷ್ಣ ಅವರ ವಿರುದ್ಧದ ಅಕ್ರಮ ಗಣಿಗಾರಿಕೆ ತನಿಖೆಯನ್ನು ವಿಶೇಷ ತನಿಖಾ ತಂಡ (ಎಸ್ಐಟಿ)ಕ್ಕೆ ವಹಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಆದೇಶ ಹೊರಡಿಸಿದೆ. 2012 ರಲ್ಲಿ ಲೋಕಾಯುಕ್ತ ತನಿಖೆಗೆ ತಡೆ ನೀಡಿದ್ದ ತೀರ್ಮಾನ ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಇನ್ನು ಈ ಪ್ರಕರಣಗಳ ರದ್ದತಿ ಕೋರಿ ಈ ಇಬ್ಬರು ನಾಯಕರು ಸುಪ್ರೀಂ ಕೋರ್ಚಿಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಈ ಪ್ರಕರಣಗಳ ತನಿಖೆಯನ್ನು ಎಸ್ಐಟಿಗೆ ನೀಡುವಂತೆ ಸೂಚಿಸಲಾಗಿದೆ.

ನೀವು ತಿಳಿಯಬೇಕಿರೋ ಪ್ರಮುಖ ಸುದ್ದಿ ಸಾಲುಗಳು…

  • ಇತ್ತೀಚೆಗೆ ರಷ್ಯಾದಲ್ಲಿ ನಡೆದ ಚುನಾವಣೆಯಲ್ಲಿ ವ್ಲಾಡ್ಮಿರ್ ಪುಟಿನ್ ಅವರ ನೇತೃತ್ವದ ಯುನೈಟೆಡ್ ರಷ್ಯಾ ಪಾರ್ಟಿ ಭರ್ಜರಿ ಜಯ ದಾಖಲಿಸಿದೆ. ಸದ್ಯ ನಡೆದಿರುವ ಪಾರ್ಲಿಮೆಂಟರಿ ಚುನಾವಣೆಯಲ್ಲಿ ಪುಟಿನ್ ಅವರ ಪಕ್ಷ ಸುಲಭ ಜಯ ದಾಖಲಿಸಿದ್ದು, ಇದರೊಂದಿಗೆ 2018ರ ಪ್ರಮುಖ ಚುನಾವಣೆಯಲ್ಲೂ ಪುಟಿನ್ ಅವರೇ ನಾಲ್ಕನೇ ಅವಧಿಗೆ ಪ್ರಧಾನಿಯಾಗಿ ಮುಂದುವರಿಯುವುದು ಬಹುತೇಕ ಖಚಿತವಾಗಿದೆ.
  • ಕೆಲ ತಿಂಗಳ ಹಿಂದೆ ಚೆನ್ನೈ ರೈಲ್ವೇ ನಿಲ್ದಾಣದಲ್ಲಿ ಇನ್ಫೊಸಿಸ್ ಉದ್ಯೋಗಿ ಸ್ವಾತಿ ಎಂಬಾಕೆಯನ್ನು ಹತ್ಯೆ ಮಾಡಿದ್ದ ಆರೋಪಿ ರಾಮ್ ಕುಮಾರ್ ಈಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಹತ್ಯೆ ಪ್ರಕರಣದ ಏಕೈಕ ಆರೋಪಿಯಾಗಿದ್ದ ರಾಮ್ ಕುಮಾರ್ ವಿದ್ಯುತ್ ತಂತಿಯನ್ನು ಹಿಡಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಹಿಂದೆ ಜುಲೈನಲ್ಲಿ ಆತನನ್ನು ಬಂಧಿಸಲು ಪೊಲೀಸರು ಆತನ ಮನೆಗೆ ತೆರಳಿದ್ದಾಗಲು ಗಂಟಲನ್ನು ಕುಯ್ದುಕೊಂಡು ಸಾಯಲು ಪ್ರಯತ್ನಿಸಿದ್ದ. ಸ್ವಾತಿ ತನ್ನ ಪ್ರೀತಿ ತಿರಸ್ಕರಿಸಿದ್ದ ಕಾರಣಕ್ಕೆ ರಾಮ್ ಕುಮಾರ್ ಆಕೆಯನ್ನು ಹತ್ಯೆ ಮಾಡಿದ್ದಾಗಿ ಪೊಲೀಸ್ ತನಿಖೆಯಿಂದ ತಿಳಿದು ಬಂದಿತ್ತು. ಆಕೆಯನ್ನು ಸಾಹಿಸಿ ತಾನು ಸತ್ತ ರಾಮ್ ಕುಮಾರ್, ಪ್ರಸಕ್ತ ಯುವಕರು ಮಾನಸಿಕವಾಗಿ ಎಷ್ಟು ದುರ್ಬಲವಾಗಿದ್ದಾರೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿ.
  • ಚೆನ್ನೈನ ಕಾನೂನು ವಿದ್ಯಾರ್ಥಿಯೊಬ್ಬ ಸೋಮವಾರ ಬೆಳಗಿನ ಜಾವ 3.30ರ ವೇಳೆಗೆ ಕುಡಿದ ಮತ್ತಿನಲ್ಲಿ ಅತಿಯಾದ ವೇಗದಲ್ಲಿ ಪೊರ್ಚೆ ಕಾರು ಚಾಲನೆ ಮಾಡಿದ ಪರಿಣಾಮ ಸರಣಿಯಾಗಿ ನಿಂತಿದ್ದ 12 ಆಟೋಗಳಿಗೆ ಡಿಕ್ಕಿ ಹೊಡೆದಿದ್ದು, ಆ ಪೈಕಿ ಓರ್ವ ಆಟೋ ಚಾಲಕ ಮೃತಪಟ್ಟಿದ್ದಾನೆ. ಉಳಿದಂತೆ ಇಬ್ಬರು ಆಟೋ ಚಾಲಕರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
  • ಪರಿಸರ ಕಾಯ್ದೆ ಉಲ್ಲಂಘನೆ ಆಪಾದನೆಯಲ್ಲಿ ಖ್ಯಾತ ಹಾಸ್ಯ ಕಲಾವಿದ ಕಪಿಲ್ ಶರ್ಮಾ ಸಿಲುಕಿದ್ದು, ಅವರ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ. ಸುಬುರ್ಬನ್ ವೆರ್ಸೊವಾ ಪ್ರದೇಶದಲ್ಲಿರುವ ತಮ್ಮ ಬಂಗಲೆಯ ಹಿಂದೆ ಕಪಿಲ್ ಶರ್ಮಾ ಅವರು ತಮ್ಮ ಮನೆಯ ಕಸವನ್ನು ಹಾಕುತ್ತಾರೆ ಹಾಗೂ ಕಾನೂನು ಬಾಹೀರವಾಗಿ ಕಟ್ಟಡ ನಿರ್ಮಿಸಿದ್ದಾರೆ ಎಂಬ ಆರೋಪದ ಮೇಲೆ ಕಪಿಲ್ ಅವರ ವಿರುದ್ಧ ಈ ದೂರು ದಾಖಲಾಗಿದೆ ಎಂದು ವರದಿಗಳು ಬಂದಿವೆ.

Leave a Reply