ಡಿಜಿಟಲ್ ಕನ್ನಡ ಟೀಮ್:
ರಿಲಯನ್ಸ್ ಜಿಯೋ ಭಾರತೀಯ ಟೆಲಿಕಾಂ ಅಂಗಳಕ್ಕೆ ಕಾಲಿಡುತ್ತಿದ್ದಂತೆ ಅದರ ಮಾರುಕಟ್ಟೆ ಚಿತ್ರಣವೇ ಸಂಪೂರ್ಣವಾಗಿ ಬದಲಾಗಿದೆ. ಜಿಯೋ ಆಗಮನದಿಂದ ಎದ್ದಿರುವ ಪೈಪೋಟಿಯನ್ನು ಎದುರಿಸಲು ಇತರೆ ಟೆಲಿಕಾಂ ಕಂಪನಿಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ಈ ಪೈಪೋಟಿಯ ಪರಿಣಾಮ ಈಗ ರಿಲಯನ್ಸ್ ಜಿಯೋ ಹಾಗೂ ಭಾರ್ತಿ ಏರ್ ಟೆಲ್ ನಡುವಣ ಪ್ರಾಥಮಿಕ ಸಮರ ಶುರುವಾಗಿದೆ. ಅದೇನಂದ್ರೆ, ಜಿಯೋ ಸಂಪರ್ಕದಿಂದ ಏರ್ ಟೆಲ್ ಗೆ ಮಾಡಲಾಗುತ್ತಿರುವ ಕರೆಗಳು ಡ್ರಾಪ್ ಆಗ್ತಿವೆ. ಏರ್ ಟೆಲ್ ನಮಗೆ ಸರಿಯಾಗಿ ಸಂಪರ್ಕ ಬೆಂಬಲ ನೀಡುತ್ತಿಲ್ಲ ಎಂಬುದು ಜಿಯೋ ಆರೋಪ.
‘ಏರ್ ಟೆಲ್ ಅವರ ಇಂಟರ್ ಕನೆಕ್ಟರ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಏರ್ ಟೆಲ್ ಕಂಪನಿ ಈ ಆಂತರಿಕ ಸಂಪರ್ಕದಲ್ಲಿ ನಮಗೆ ಸರಿಯಾದ ರೀತಿಯಲ್ಲಿ ಸಹಕರಿಸುತ್ತಿಲ್ಲ. ಹೀಗಾಗಿ ಪ್ರತಿ ನಿತ್ಯ 2 ಕೋಟಿಗೂ ಹೆಚ್ಚು ಕರೆಗಳು ಡ್ರಾಪ್ ಆಗ್ತಿವೆ’ ಎಂದು ಜಿಯೋ ದೂರುತ್ತಿದೆ. ಆದರೆ ಈ ಆರೋಪವನ್ನು ಬಿಲ್ ಕುಲ್ ಒಪ್ಪದ ಏರ್ ಟೆಲ್, ‘ಜಿಯೋ ಕಂಪನಿಯ ಸಂಪರ್ಕವೇ ಸರಿ ಇಲ್ಲ. ಈ ಕಾರಣದಿಂದಲೇ ಈ ರೀತಿ ಕರೆಗಳು ಡ್ರಾಪ್ ಆಗ್ತಿವೆ’ ಎಂದಿದೆ.
ಶನಿವಾರವಷ್ಟೇ ಜಿಯೋ ಕಂಪನಿಗೆ 15 ಮಿಲಿಯನ್ ಗ್ರಾಹಕರ ಸೇವೆಯನ್ನು ಕಲ್ಪಿಸಲು ಪ್ರತ್ಯೇಕವಾಗಿ ಆಂತರಿಕ ಸಂಪರ್ಕ ಕೇಂದ್ರ (ಪಿಐಒ) ನೀಡುವ ವ್ಯವಸ್ಥೆ ಹೊಂದುವ ಬಗ್ಗೆ ಏರ್ ಟೆಲ್ ತನ್ನ ನಿರ್ಧಾರ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಗಂಭೀರ ಆರೋಪ ಜಿಯೋ, ಏರ್ ಟೆಲ್ ವಿರುದ್ಧ ತನ್ನ ಅಸಮಾಧಾನ ವ್ಯಕ್ತಪಡಿಸಿರೋದು ಹೀಗೆ…
‘ಏರ್ ಟೆಲ್ ಸದ್ಯ ಜಿಯೋಗೆ ನೀಡುತ್ತಿರುವ ಪಿಐಒ ಪ್ರಮಾಣ ಸರಾಸರಿಗಿಂತ ಕಡಿಮೆ ಇದೆ. ಈ ಎರಡು ಸಂಪರ್ಕಗಳ ನಡುವೆ ಸದ್ಯಕ್ಕೆ ಇರುವ ಟ್ರಾಫಿಕ್ ಪ್ರಮಾಣವನ್ನು ಪರಿಗಣಿಸಿದರೆ, ಏರ್ ಟೆಲ್ ನೀಡಿರುವ ಪಿಐಒ ಪ್ರಮಾಣವು ಅಗತ್ಯದ ಪ್ರಮಾಣಕ್ಕಿಂತ ನಾಲ್ಕನೇ ಒಂದು ಭಾಗದಷ್ಟು ಕೊರತೆ ಎದುರಾಗಲಿದೆ. ಅಷ್ಟೇ ಅಲ್ಲ, ಏರ್ ಟೆಲ್ ಕಂಪನಿ ತನ್ನ ಗ್ರಾಹಕರು ಜಿಯೋಗೆ ಸೇರಬಾರದು ಎಂಬ ಉದ್ದೇಶದಿಂದ ತನ್ನ ಮೊಬೈಲ್ ನಂಬರ್ ಅನ್ನು ಬೇರೆ ಕಂಪನಿಯ ಸೇವೆಗೆ ಪೋರ್ಟ್ ಮಾಡಿಕೊಳ್ಳುವ ಅವಕಾಶವನ್ನು ನಿಷೇಧ ಮಾಡಿದೆ.’
ಇದಕ್ಕೆ ಏರ್ ಟೆಲ್ ಕೊಟ್ಟಿರುವ ಉತ್ತರ ಹೀಗಿದೆ… ‘ಇದು ಜಿಯೋದ ಸಮಸ್ಯೆ. ತನ್ನ ಆಂತರಿಕ ಸಂಪರ್ಕ ಸಮಸ್ಯೆಗಳನ್ನು ಮುಚ್ಚಿಹಾಕಲು ಜಿಯೋ ಏರ್ ಟೆಲ್ ಮೇಲೆ ಆಪಾದನೆ ಮಾಡುತ್ತಿದೆ. ಕಾಲ್ ಡ್ರಾಪ್ ಅಥವಾ ವಾಯ್ಸ್ ಓವರ್ ಲಾಂಗ್ ಟರ್ಮ್ ಎವಲ್ಯೂಷನ್ (ವೊಲ್ಟ್) ನ ಸ್ಥಿರತೆಯ ಸಮಸ್ಯೆಯನ್ನು ಪಿಐಒನ ಸಮಸ್ಯೆ ಎಂದು ಆರೋಪಿಸಲು ಸಾಧ್ಯವಿಲ್ಲ. ಕಾರಣ ಇದರ ಸಾಮರ್ಥ್ಯವನ್ನು ಈಗಾಗಲೇ ಹೆಚ್ಚಿಸಿದ್ದೇವೆ. ಅಂದಹಾಗೆ ಸದ್ಯ ಜಿಯೋ 10 ಮಿಲಿಯನ್ ಗ್ರಾಹಕರನ್ನು ಹೊಂದಿದ್ದು, ನಾವು 15 ಮಿಲಿಯನ್ ಗ್ರಾಹಕರಿಗೆ ಸೇವೆ ನೀಡುವಷ್ಟು ಪಿಐಒಗಳನ್ನು ಹೊಂದಿದ್ದೇವೆ. ಹೀಗಾಗಿ ಜಿಯೋ ಆರೋಪ ಒಪ್ಪಲು ಸಾಧ್ಯವಿಲ್ಲ. ಇನ್ನು ಪ್ರತಿನಿತ್ಯ ಸಾವಿರಾರು ಗ್ರಾಹಕರು ಪೋರ್ಟ್ ಮೂಲಕ ನಮ್ಮ ಕಂಪನಿಯ ಸೇವೆಯನ್ನು ಬಿಡುವುದು ಹಾಗೂ ಸೇರುವುದು ಸಾಮಾನ್ಯವಾಗಿಯೇ ನಡೆಯುತ್ತಿದೆ. ಹೀಗಾಗಿ ಜಿಯೋಗೆ ಪೋರ್ಟ್ ಮಾಡಿಕೊಳ್ಳುವ ಅವಕಾಶವನ್ನು ನಿಷೇಧಿಸಿದ್ದೇವೆ ಎಂಬ ಆರೋಪ ಸುಳ್ಳು.’
ಈ ಎರಡು ಕಂಪನಿಗಳ ವಾದವನ್ನು ನೋಡುತ್ತಿದ್ದರೆ, ಟೆಲಿಕಾಂ ಕಂಪನಿಗಳು ಮಾರುಕಟ್ಟೆ ಪೈಪೋಟಿಯ ಜತೆಗೆ ಈ ರೀತಿಯಾದ ಪರೋಕ್ಷ ಕಾದಾಟಕ್ಕೂ ಮುಂದಾಗಿರೋದು ಸ್ಪಷ್ಟವಾಗ್ತಿದೆ. ಇದು ಇನ್ನು ಆರಂಭ ಅಷ್ಟೇ ಮುಂದಿನ ದಿನಗಳಲ್ಲಿ ಈ ರೀತಿಯಾದ ಕಿತ್ತಾಟಗಳು ಹೆಚ್ಚಾದರೆ ಅಚ್ಚರಿ ಇಲ್ಲ.