ಪಾಕ್ ವಿರುದ್ಧ ಮುಂದಿನ ನಡೆ ಬಗ್ಗೆ ಮೋದಿ, ರಾಜನಾಥ್, ಜೇಟ್ಲಿ, ಪರಿಕರ್ ಸಭೆ… ಹುತಾತ್ಮ ಯೋಧರಿಗೆ ಅಂತಿಮ ನಮನ

ಡಿಜಿಟಲ್ ಕನ್ನಡ ಟೀಮ್:

ಜಮ್ಮು ಮತ್ತು ಕಾಶ್ಮೀರದ ಉರಿ ಪ್ರದೇಶದ ಸೇನಾ ನೆಲೆಯ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟ 17 ಭಾರತೀಯ ಯೋಧರಿಗೆ ಸೋಮವಾರ ಅಂತಿಮ ನಮನ ಸಲ್ಲಿಸಲಾಯ್ತು. ಜಮ್ಮು ಮತ್ತು ಕಾಶ್ಮೀರದಲ್ಲಿ ಮುಖ್ಯಮಂತ್ರಿ ಮೆಹಬೂಬ್ ಮುಫ್ತಿ ಸೇರಿದಂತೆ ಭಾರತೀಯ ಸೇನೆಯಿಂದ ಹುತಾತ್ಮರಿಗೆ ಅಂತಿಮ ನಮನ ಸಲ್ಲಿಸಲಾಯ್ತು.

ಕಳೆದ ದಶಕದಲ್ಲೇ ಅತಿ ದೊಡ್ಡ ಪ್ರಮಾಣದಲ್ಲಿ ಭಾರತೀಯ ಸೈನಿಕರನ್ನು ಬಲಿ ಪಡೆದ ಉಗ್ರ ದಾಳಿ ಇದಾಗಿದ್ದು, ಈ ದಾಳಿಯಲ್ಲಿ 20ಕ್ಕೂ ಹೆಚ್ಚು ಸೈನಿಕರು ಗಾಯಗೊಂಡಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಇವರಿಗೆ ಅಂತಿಮ ಗೌರವ ಸಲ್ಲಿಸಿದ ನಂತರ ಇವರ ಪಾರ್ಥೀವ ಶರೀರವನ್ನು ಅವರ ತವರು ಊರಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಈ ಯೋಧರ ಕುಟುಂಬಸ್ಥರ ರೋದನ ಮುಗಿಲು ಮುಟ್ಟಿದೆ.

ಈ ದಾಳಿಯಲ್ಲಿ ಮೃತಪಟ್ಟ ಯೋಧರ ವಿವರ ಹೀಗಿದೆ… ಸುಬೇದಾರ್ ಕರ್ನೈಲ್ ಸಿಂಗ್ (ಜಮ್ಮು ಕಾಶ್ಮೀರ), ಹವಿಲ್ದಾರ್ ರವಿ ಪೌಲ್ (ಜಮ್ಮು ಕಾಶ್ಮೀರ), ಸಿಪಾಯಿ ರಾಕೇಶ್ ಸಿಂಗ್ (ಬಿಹಾರ), ಸಿಪಾಯಿ ಜವ್ರಾ ಮುಂಡಾ (ಜಾರ್ಖಂಡ್), ಸಿಪಾಯಿ ನೈಮನ್ ಕುಜುರ್ (ಜಾರ್ಖಂಡ್), ಸಿಪಾಯಿ ಯುಕಿ ಜನ್ರಾವ್ (ಮಹಾರಾಷ್ಟ್ರ), ಹವಿಲ್ದಾರ್ ಎನ್.ಎಸ್ ರಾವತ್ (ರಾಜಸ್ಥಾನ), ಸಿಪಾಯಿ ಗಣೇಶ್ ಶಂಕರ್ (ಉ.ಪ್ರ), ನಾಯ್ಕ್ ಎಸ್.ಕೆ ವಿದಾರ್ಥಿ (ಬಿಹಾರ), ಸಿಪಾಯಿ ಬಿಸ್ವತ್ ಘೊರಾಯ್ (ಪ.ಬಂ), ಲ್ಯಾನ್ಸ್ ನಾಯ್ಕ್ ಜಿ.ಶಂಕರ್ (ಮಹಾರಾಷ್ಟ್ರ), ಸೆಪ್ ಜಿ.ದಲಾಯ್ (ಪ.ಬಂ), ಲ್ಯಾನ್ಸ್ ನಾಯ್ಕ್ ಆರ್.ಕೆ ಯಾದವ್ (ಉ.ಪ್ರ), ಸಿಪಾಯಿ ಹರಿಂದರ್ ಯಾದವ್ (ಉ.ಪ್ರ), ಸಿಪಾಯಿ ಟಿ.ಎಸ್ ಸೋಮ್ ನಾಥ್ (ಮಹಾರಾಷ್ಟ್ರ), ಹವಿಲ್ದಾರ್ ಅಶೋಕ್ ಕುಮಾರ್ ಸಿಂಗ್ (ಬಿಹಾರ), ಸಿಪಾಯಿ ರಾಕೇಶ್ ಕೆ.ಆರ್ ಸಿಂಗ್ (ಉ.ಪ್ರ).

final tribute

ಇತ್ತ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನದ ಈ ಕುತಂತ್ರಿ ನಡೆಯ ವಿರುದ್ಧ ಮುಂದಿನ ನಡೆಗಳಲ್ಲಿ ಯಾವ ರೀತಿಯ ಹೆಜ್ಜೆ ಇಡಬೇಕೆಂಬುದರ ಬಗ್ಗೆ ಉನ್ನತಮಟ್ಟದ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಗೃಹ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಸಚಿವ ಮನೋಹರ್ ಪರಿಕರ್, ಹಣಕಾಸು ಸಚಿವ ಅರುಣ್ ಜೇಟ್ಲಿ ಸೇರಿದಂತೆ ಅಧಿಕಾರಿಗಳ ಜತೆ ಚರ್ಚೆ ನಡೆಸಿದರು. ಈ ವೇಳೆ ಪರಿಕರ್ ಅವರು ಪ್ರಧಾನಿ ಅವರಿಗೆ ಬೆಳಗಿನವರೆಗಿನ ಮಾಹಿತಿಯನ್ನು ನೀಡಿದರು. ಇನ್ನು ನ್ಯೂಯಾರ್ಕ್ ನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆ ಸಭೆಯಲ್ಲಿ ಈ ದಾಳಿಯ ವಿಷಯವನ್ನು ಇಟ್ಟುಕೊಂಡು ಪಾಕಿಸ್ತಾನ ವಿರುದ್ಧ ದಾಳಿ ಮಾಡುವ ಬಗ್ಗೆಯು ಚರ್ಚಿಸಲಾಗಿದೆ ಎಂಬ ಮಾಹಿತಿಗಳು ಬಂದಿವೆ.

ಇನ್ನು ಜಮ್ಮು ಮತ್ತು ಕಾಶ್ಮೀರದ ಮೆಹಬೂಬ ಮುಫ್ತಿ ಆಸ್ಪತ್ರೆಗೆ ಭೇಟಿ ಮಾಡಿ ಗಾಯಗೊಂಡಿರುವ ಯೋಧರನ್ನು ಆರೋಗ್ಯ ವಿಚಾರಿಸಿದರು. ಇನ್ನು ದೇಶದಾದ್ಯಂತ ಪಾಕಿಸ್ತಾನ ವಿರುದ್ಧ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿದ್ದರೆ, ಮತ್ತೆ ಕೆಲವೆಡೆ ಶಾಲಾ ಮಕ್ಕಳಿಂದ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಲಾಗುತ್ತಿದೆ.

ಇತ್ತ ಪಾಕಿಸ್ತಾನ ಈ ದಾಳಿಗೂ ತಮಗೂ ಸಂಬಂಧ ಇಲ್ಲ ಎಂದು ತನ್ನ ಹಳೇಯ ರಾಗ ಹಾಡುತ್ತಿದ್ದರೆ, ಅತ್ತ ಉರಿ ದಾಳಿಗೆ ವಿಶ್ವದಾದ್ಯಂತ ವಿರೋಧ ವ್ಯಕ್ತವಾಗಿದೆ. ಆ ಪೈಕಿ ಅಮೆರಿಕ, ಬ್ರಿಟನ್, ಫ್ರಾನ್ಸ್ ರಾಷ್ಟ್ರಗಳು ಉಗ್ರರ ದಾಳಿಯನ್ನು ತೀವ್ರವಾಗಿ ಖಂಡಿಸಿವೆ.

Leave a Reply