ಗೂಗಲ್, ಯಾಹೂವಿನಿಂದ ಲಿಂಗಪತ್ತೆ ಮಾಹಿತಿಗೆ ನಿರ್ಬಂಧ.. ಇದು ಸುಪ್ರೀಂ ಕೋರ್ಟಿನ ಖಡಕ್ ಎಚ್ಚರಿಕೆಗೆ ಸಿಕ್ಕ ಫಲ

(ಸಾಂದರ್ಭಿಕ ಚಿತ್ರ)

ಡಿಜಿಟಲ್ ಕನ್ನಡ ಟೀಮ್:

ಗರ್ಭದಲ್ಲಿರುವ ಶಿಶುವಿನ ಲಿಂಗ ಪತ್ತೆ ಹಚ್ಚುವುದಕ್ಕೆ ಭಾರತದಲ್ಲಿ ಕಾನೂನಿನ ನಿರ್ಬಂಧ ಇದೆ. ಆದರೂ ಇಷ್ಟು ದಿನಗಳ ಕಾಲ ಗೂಗಲ್, ಯಾಹೂ ಮತ್ತು ಮೈಕ್ರೋಸಾಫ್ಟ್ ಅಂತರ್ಜಾಲ ಶೋಧತಾಣಗಳು ಈ ಲಿಂಗ ಪತ್ತೆಹಚ್ಚುವ ಬಗ್ಗೆ ಮಾಹಿತಿ ಹಾಗೂ ಜಾಹೀರಾತುಗಳನ್ನು ನೀಡುತ್ತಲೇ ಬಂದಿದ್ದವು. ಆದರೆ ಸುಪ್ರೀಂ ಕೋರ್ಟಿನ ತಾಕೀತಿನ ಪರಿಣಾಮವಾಗಿ ಈಗ ಈ ಅಂತರ್ಜಾಲ ತಾಣಗಳು ಈ ಮಾಹಿತಿಗೆ ನಿರ್ಬಂಧ ಹೇರಲು ಮುಂದಾಗಿವೆ.

ಈ ಅಂತರ್ಜಾಲ ತಾಣಗಳು ಲಿಂಗಪತ್ತೆಗೆ ಸಂಬಂಧಿಸಿದ ಸಾಮಗ್ರಿಗಳ ಕಿಟ್ ಹಾಗೂ ಕ್ಲೀನಿಕ್ ಗಳ ಬಗ್ಗೆ ಜಾಹೀರಾತು ಪ್ರಕಟಿಸುತ್ತಲೇ ಬಂದಿದ್ದವು. ಇದರ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ಕೆಲವು ವಾರಗಳ ಹಿಂದೆಯಷ್ಟೇ ‘ಭಾರತದಲ್ಲಿ ಲಿಂಗಪತ್ತೆ ಕಾನೂನು ಬಾಹಿರವಾಗಿದೆ. ಈ ಕಾನೂನು ನಿಮಗೂ ಅನ್ವಯವಾಗುತ್ತದೆ. ಈ ನೆಲದ ಕಾನೂನನ್ನು ಪಾಲಿಸುವುದು ನಿಮ್ಮ ಕರ್ತವ್ಯ’ ಎಂದು ಅಂತರ್ಜಾಲ ತಾಣಗಳಿಗೆ ಖಡಕ್ ಎಚ್ಚರಿಕೆ ನೀಡಿತ್ತು.

ಈಗ ಗೂಗಲ್, ಯಾಹೂ ಮತ್ತು ಮೈಕ್ರೋಸಾಫ್ಟ್ ಗಳು ತಮ್ಮ ಶೋಧ ವ್ಯವಸ್ಥೆಯಲ್ಲಿ ಈ ಲಿಂಗಪತ್ತೆಗೆ ಸಂಬಂಧಿಸಿದ ಪ್ರಮುಖ ಶೋಧಪದ (key words) ಗಳನ್ನು ತೆಗೆದುಹಾಕಿದೆ. ಆ ಪೈಕಿ ‘ಜೆಂಡರ್ ಸೆಲೆಕ್ಷನ್’, ‘ಪೇರೆಂಟಲ್ ಸೆಕ್ಸ್ ಡಿಟರ್ಮಿನೇಷನ್’ ಸೇರಿದಂತೆ ಒಟ್ಟು 22 ಪ್ರಮುಖ ಪದಗಳನ್ನು ತೆಗೆದುಹಾಕಿದೆ. ಇದರಿಂದ ಈ ಲಿಂಗ ಪತ್ತೆ ಬಗೆಗಿನ ಮಾಹಿತಿ ಅಂತರ್ಜಾಲದಲ್ಲಿ ಲಭ್ಯವಿದ್ದರೂ ಅದನ್ನು ಶೋಧಿಸುವುದು ಕಷ್ಟಕರವಾಗಲಿದೆ. ಇನ್ನು ಲಿಂಗಪತ್ತೆಗೆ ಸಂಬಂಧಿಸಿದ ಜಾಹೀರಾತಿಗೆ ಸಂಪೂರ್ಣ ನಿಷೇಧ ಹೇರಲಾಗಿದೆ.

2008ರಲ್ಲಿ ಸಬು ಮ್ಯಾಥ್ಯೂ ಜಾರ್ಜ್ ಎಂಬ ಸಾಮಾಜಿಕ ಕಾರ್ಯಕರ್ತರೊಬ್ಬರು ಈ ಕುರಿತು ಸಾರ್ವಜನಿಕ ಅರ್ಜಿ ಸಲ್ಲಿಸಿದ್ದರು. ಕೋರ್ಟ್ ಈ ಆದೇಶವನ್ನು ನೀಡುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಅಂತರ್ಜಾಲ ಕಂಪನಿಗಳು ಈ ಬಗ್ಗೆ ಕ್ರಮಕ್ಕೆ ಮುಂದಾಗಿವೆ. ಇದರೊಂದಿಗೆ ಈ ನೆಲದಲ್ಲಿನ ಕಾನೂನಿನ ಚೌಕಟ್ಟನ್ನು ದಾಟಲು ಯಾರಿಗೂ ಅವಕಾಶ ಇಲ್ಲ ಎಂಬುದು ಸ್ಪಷ್ಟವಾಗಿದೆ. ಅಲ್ಲದೆ ಕಾನೂನಿನ ಚೌಕಟ್ಟನ್ನು ಮೀರಿದವರಿಗೆ ಖಡಕ್ ಎಚ್ಚರಿಕೆ ನೀಡಿದರೆ ಖಂಡಿತವಾಗಿಯೂ ಅದನ್ನು ಕೇಳಲೇಬೇಕು ಎಂಬುದಕ್ಕೆ ಈ ಪ್ರಕರಣ ಒಂದು ಉದಾಹರಣೆ. ಅಂದಹಾಗೆ ಈ ರೀತಿಯಾಗಿ ಲಿಂಗಪತ್ತೆಯ ಮಾಹಿತಿಯನ್ನು ನಿಷೇಧಿಸುತ್ತಿರುವುದನ್ನು ಅಂತರ್ಜಾಲ ಸೆನ್ಸಾರ್ ಎಂದು ಪರಿಗಣಿಸದೇ ಸಂವಿಧಾನಾತ್ಮಕವಾಗಿ ಅಸಿಂಧು ಎಂದು ಪರಿಗಣಿಸಿ ಕ್ರಮ ಕೈಗೊಳ್ಳಲಾಗುತ್ತಿದೆ.

Leave a Reply