ಕಾವೇರಿಯಲ್ಲಿ ಮಾತ್ರವಲ್ಲ ರಾಜ್ಯದ ಕೆರೆಗಳಲ್ಲೂ ನೀರಿನ ಬರ, ಅಲ್ಪಸಂಖ್ಯಾತರನ್ನು ಪುಸಲಾಯಿಸಿದ್ರು ಯಡಿಯೂರಪ್ಪ, ಉರಿಯಲ್ಲಿ ಸೈನಿಕರಿಂದ 8 ಉಗ್ರರ ಸಂಹಾರ

Karnataka farmers association led by Kodihalli Chandrashekhar staged a protest against the supreme court verdict on Cauvery issue at Gandhinagar, in Bengaluru on Tuesday.

ತಮಿಳುನಾಡಿಗೆ ಮತ್ತೊಂದು ವಾರಗಳ ಕಾಲ ನಿತ್ಯ 6 ಸಾವಿರ ಕ್ಯುಸೆಕ್ಸ್ ನೀರು ಹರಿಸಬೇಕು ಎಂಬ ಸುಪ್ರೀಂ ಕೋರ್ಟ್ ತೀರ್ಪನ್ನು ವಿರೋಧಿಸಿ ಬೆಂಗಳೂರಿನ ಗಾಂಧಿನಗರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಪ್ರತಿಭಟನೆ ನಡೆಸಿತು…

ಡಿಜಿಟಲ್ ಕನ್ನಡ ಟೀಮ್:

ರಾಜ್ಯದಲ್ಲಿನ ಮಳೆ ಕೊರತೆಯಿಂದ ಕೇವಲ ಕಾವೇರಿ ನದಿಯಲ್ಲಿ ಮಾತ್ರ ನೀರಿನ ಕೊರತೆ ಎದುರಾಗಿಲ್ಲ. ಜತೆಗೆ ರಾಜ್ಯದ ಶೇ.50 ರಷ್ಟು ಕೆರೆಗಳಲ್ಲೂ ಸಹ ನೀರಿನ ಅಭಾವದ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಣಾಮ ರಾಜ್ಯದ ಅರ್ಧದಷ್ಟು ಕೆರೆಗಳು ಈಗಾಗಲೇ ಬತ್ತಿವೆ ಎಂಬ ಆತಂಕಕಾರಿ ಮಾಹಿತಿ ನೀಡಿದೆ ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ.

ರಾಜ್ಯದಲ್ಲಿ ಒಟ್ಟಾರೆ 3598 ಸಣ್ಣ ಕೆರೆಗಳಿದ್ದು, ಆ ಪೈಕಿ ಅರ್ಧದಷ್ಟು ಕೆರೆಗಳಿಗೆ ನೀರೇ ಬಂದಿಲ್ಲ. ಇದುವರೆಗೂ ಮಳೆಯಿಂದಾಗಿ ಭರ್ತಿಯಾಗಿರುವುದು ಕೇವಲ 112 ಕೆರೆಗಳು ಮಾತ್ರ. ಅರ್ಧಕ್ಕಿಂತ ಹೆಚ್ಚು ನೀರು ಸಂಗ್ರಹವಾಗಿರುವ ಕೆರೆಗಳ ಸಂಖ್ಯೆ ಕೇವಲ 311 ಮತ್ತು ಅಲ್ಪಸ್ವಲ್ಪ ನೀರು ತುಂಬಿರುವ ಕೆರೆಗಳ ಸಂಖ್ಯೆ 1600. ಈ ಅಂಕಿ ಅಂಶಗಳು ರಾಜ್ಯದಲ್ಲಿನ ನೀರಿನ ಅಭಾವದ ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿಯಾಗಿದೆ. ಇನ್ನು ಕಾವೇರಿ ಜಲಾನಯನ ಭಾಗವಾದ ದಕ್ಷಿಣ ಒಳನಾಡಿನಲ್ಲಿ 1973 ಕೆರೆಗಳಿವೆ. ಈ ಕೆರೆಗಳಿಂದ 2,05,357 ಎಕರೆ ಅಚ್ಚುಕಟ್ಟು ಪ್ರದೇಶವಿದೆ. ಇಲ್ಲೂ ಕೂಡ ನಾಲ್ಕು ಕೆರೆಗಳಿಗೆ ಮಳೆಗಾಲದಲ್ಲಿ ನೀರು ಬಂದಿಲ್ಲ. ಇದರಿಂದ ಜನ-ಜಾನುವಾರುಗಳು ತತ್ತರಿಸುವಂತಾಗಿದೆ. ಇದರಿಂದ ಈ ಪ್ರದೇಶಗಳಲ್ಲಿ ಈಗಲೇ ಬರದ ಕರಾಳ ಛಾಯೆ ಕಾಣುತ್ತಿದೆ.

ಕರಾವಳಿ, ಮಲೆನಾಡು ಒಳಗೊಂಡಂತೆ ದಕ್ಷಿಣ ಭಾಗದ 17 ಜಿಲ್ಲೆಗಳಲ್ಲಿ ಕೇವಲ ಭರ್ತಿಯಾಗಿರುವುದು 23 ಕೆರೆಗಳು ಮಾತ್ರ. ಅದರಲ್ಲಿ ಬೆಂಗಳೂರು ನಗರದಲ್ಲಿ 5, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 8, ಚಾಮರಾಜನಗರ, ಉಡುಪಿ ಜಿಲ್ಲೆಯಲ್ಲಿ ತಲಾ 4, ದಕ್ಷಿಣ ಕನ್ನಡ, ಮೈಸೂರು ಜಿಲ್ಲೆಗಳಲ್ಲಿ ತಲಾ 1 ಕೆರೆಗಳು ಮಾತ್ರ ಭರ್ತಿಯಾಗಿವೆ.

ಉರಿಯಲ್ಲಿ ನಿಲ್ಲದ ಉಗ್ರರ ಚಟುವಟಿಕೆ, ಮಂಗಳವಾರ 8 ಉಗ್ರರ ಹತ್ಯೆ

ಜಮ್ಮು ಕಾಶ್ಮೀರದ ಉರಿ ಪ್ರದೇಶದಲ್ಲಿ ಭಾರತೀಯ ಸೇನೆ ಹಾಗೂ ಉಗ್ರರ ನಡುವೆ ಕಾದಾಟ ನಡೆದಿದ್ದು, ಈ ವೇಳೆ ಭಾರತೀಯ ಸೇನೆ 8 ಉಗ್ರರನ್ನು ಸಂಹಾರ ಮಾಡಿದೆ. ಇದರೊಂದಿಗೆ ಪಾಕಿಸ್ತಾನದಿಂದ ಭಾರತ ಗಡಿ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಲು ನುಸುಳುಕೋರರು ನಿರಂತರ ಪ್ರಯತ್ನ ನಡೆಸುತ್ತಿರುವುದು ಮತ್ತಷ್ಟು ಸ್ಪಷ್ಟವಾಗಿದೆ. ಮೊನ್ನೆಯಷ್ಟೇ ಉಗ್ರರ ದಾಳಿಯಿಂದ 18 ಯೋಧರು ಸಾವನ್ನಪ್ಪಿದ ಕರಾಳ ಘಟನೆ ಭಾರತೀಯರ ಮನಸ್ಸಿನಲ್ಲಿ ಹಸಿಯಾಗಿರುವಾಗಲೇ, ಅದೇ ಪ್ರದೇಶದಲ್ಲಿ ಮತ್ತೆ ಉಗ್ರರ ಚಟುವಟಿಕೆ ಕಂಡುಬಂದಿದೆ. ‘15 ಉಗ್ರರ ಗುಂಪು ಜಮ್ಮು ಕಾಶ್ಮೀರದ ಗಡಿ ಪ್ರದೇಶವಾಗಿರುವ ಲಾಚಿಪುರವನ್ನು ಪ್ರವೇಶಿಸಲು ಯತ್ನಿಸಿದ್ದಾರೆ. ಈ ವೇಳೆ ಭಾರತೀಯ ಸೇನೆ ಅವರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದೆ’ ಎಂದು ಸೇನಾ ಮೂಲಗಳು ಮಾಹಿತಿ ನೀಡಿವೆ.

ಇನ್ನುಳಿದಂತೆ ನೀವು ತಿಳಿಯಬೇಕಿರೋ ಪ್ರಮುಖ ಸುದ್ದಿ ಸಾಲುಗಳು…

  • ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದ್ರೆ, ಅಲ್ಪಸಂಖ್ಯಾತರು ಊಹಿಸಿಕೊಳ್ಳಲೂ ಸಾಧ್ಯವಾಗದಷ್ಟು ಪ್ರಮಾಣದಲ್ಲಿ ಅನುದಾನ ನೀಡುತ್ತೇವೆ… ಹೀಗೊಂದು ಭರವಸೆಯ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅಲ್ಪಸಂಖ್ಯಾತರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಬಿಜೆಪಿ ಅಲ್ಪಸಂಖ್ಯಾತ ಮೋರ್ಚ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ‘2018ರ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತನ್ನಿ. ಜಾತಿ, ಧರ್ಮ ನೋಡದೆ ಎಲ್ಲರ ಅಭಿವೃದ್ಧಿಗೆ ವಿಶೇಷ ಗಮನ ಹರಿಸಲಾಗುವುದು. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷವನ್ನು ನಂಬಬೇಡಿ’ ಎಂದು ಮನವಿ ಮಾಡಿದ್ರು.
  • ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿಕೊಡಬೇಕೆಂದು ಸಲ್ಲಿಸಲಾಗಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ಮಂಗಳವಾರ ವಜಾ ಮಾಡಿದೆ. ಗಣಪತಿ ಅವರ ತಂದೆ ಕುಶಾಲಪ್ಪ ಹಾಗೂ ಸಹೋದರ ಮಾಚಯ್ಯ ಅವರು ಹೈಕೋರ್ಟ್ ಮುಂದೆ ಅರ್ಜಿ ಸಲ್ಲಿಸಿದ್ದು, ಪ್ರಕರಣದ ವಿಚಾರಣೆಯನ್ನು ನಿಷ್ಟಕ್ಷಪಾತವಾಗಿ ನಡೆಸಲು ಸಿಐಡಿಯಿಂದ ಅಸಾಧ್ಯ ಎಂದು ತಮ್ಮ ಅರ್ಜಿಯಲ್ಲಿ ಕೋರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿದೆ. ಇದರೊಂದಿಗೆ ಮಾಜಿ ಸಚಿವ ಕೆ.ಜೆ.ಜಾರ್ಜ್, ಹಿರಿಯ ಪೊಲೀಸ್ ಅಧಿಕಾರಿಗಳಾದ ಪ್ರಸಾದ್ ಹಾಗೂ ಮೊಹಂತಿ ಅವರಿಗೆ ಕ್ಲೀನ್ ಚಿಟ್ ನೀಡಿ ಮಡಿಕೇರಿಯ ಜೆಎಂಎಫ್ಸಿ ಕೋರ್ಟಿಗೆ ಸಿಐಡಿ ಸಲ್ಲಿಸಿದ್ದ ವರದಿಗೆ ಮತ್ತಷ್ಟು ಬಲ ಬಂದಂತಾಗಿದೆ.
  • ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಇಂದಿನಿಂದ ಎರಡು ದಿನಗಳ ಕಾಲ ರಾಜ್ಯದ ಒಳನಾಡಿನಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಗಳಿವೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ ಮಾಹಿತಿ ನೀಡಿದ್ದಾರೆ. ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣವಿದ್ದು, ಇಂದು ರಾತ್ರಿ ಹಾಗೂ ನಾಳೆ ಒಳ್ಳೆಯ ಮಳೆ ಬೀಳುವ ಸಾಧ್ಯತೆಗಳಿವೆ ಎಂದರು.

Leave a Reply