ಪ್ರಧಾನಿ ಮೋದಿ ಈಗಲೂ ಭಾರತೀಯರ ಫೇವರಿಟ್… ಇದು ಭಕ್ತರ ವಾದವಲ್ಲ ಸಮೀಕ್ಷೆಯ ಫಲಿತಾಂಶ

ಡಿಜಿಟಲ್ ಕನ್ನಡ ಟೀಮ್:

2014ರ ಲೋಕಸಭೆ ಚುನಾವಣೆಯಲ್ಲಿ ಹಾಟ್ ಫೇವರಿಟ್ ಆಗಿ ಪ್ರಚಂಡ ಜಯ ಸಾಧಿಸಿದ್ದ ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗಿ ಬಹುತೇಕ ಅರ್ಧ ಅವಧಿ ಪೂರೈಸಿದ್ದಾರೆ. ಈ ಅವಧಿಯಲ್ಲಿ ಅಸಹಿಷ್ಟುತೆ, ಜೆ ಎನ್ ಯು ಪ್ರಕರಣಗಳನ್ನಿಟ್ಟುಕೊಂಡು ವಿಪಕ್ಷಗಳು ಸಾಕಷ್ಟು ಟೀಕಾ ಪ್ರಹಾರ ನಡೆಸಿದ್ದಾರೆ. ಆದರೆ, ವಿಪಕ್ಷಗಳ ಈ ಯಾವುದೇ ಪ್ರಯತ್ನಗಳು ಮೋದಿಯ ಖ್ಯಾತಿಯನ್ನು ಕಡಿಮೆ ಮಾಡಲು ಸಾಧ್ಯವಾಗಿಲ್ಲ.

ದೇಶದಲ್ಲಿ ಮೋದಿ ಖ್ಯಾತಿ ಕುಗ್ಗಿಲ್ಲ ಅಂತಾ ಹೇಳಿದ್ರೆ ಕೆಲವರು ಇದ್ಯಾರೋ ಮೋದಿ ಭಕ್ತರ ಹಳೇ ರಾಗ ಎಂದು ಮೂಗು ಮುರಿಯುವುದು ಸಹಜ. ಆದ್ರೆ, ಇದನ್ನು ನಿಜ ಅಂತಾ ಹೇಳ್ತಿದೆ ‘ಪೆವ್ ರಿಸರ್ಚ್ ಸೆಂಟರ್’ ಇತ್ತೀಚೆಗೆ ನಡೆಸಿದ ಸಮೀಕ್ಷೆ ವರದಿಯ ಅಂಕಿ ಅಂಶಗಳು. ಈ ಸಮೀಕ್ಷೆಯಲ್ಲಿ ಭಾಗಿಯಾದವರ ಪೈಕಿ ಶೇ.81 ರಷ್ಟು ಮಂದಿ ನರೇಂದ್ರ ಮೋದಿ ಅವರಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಶೇ.80 ರಷ್ಟು ಮಂದಿ ಭಾರತದ ಪ್ರಸಕ್ತ ಆರ್ಥಿಕತೆ ಉತ್ತಮವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಶೇ.65 ಮಂದಿ ಮೋದಿ ಭಾರತವನ್ನು ಮುನ್ನಡೆಸುತ್ತಿರುವ ಹಾದಿಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ ಎಂದು ಫಸ್ಟ್ ಪೋಸ್ಟ್ ವರದಿಯಲ್ಲಿ ತಿಳಿಸಲಾಗಿದೆ.

ಈ ಸಮೀಕ್ಷೆಯನ್ನು 2016 ರ ಏಪ್ರಿಲ್ 7 ರಿಂದ ಮೇ 24ರವರೆಗೆ ನಡೆಸಲಾಗಿದ್ದು, ಈ ಸಮೀಕ್ಷೆಯಲ್ಲಿ 2,464 ಜನರ ಪ್ರತಿಕ್ರಿಯೆ ಒಳಗೊಂಡಿತ್ತು. ಆದರೆ ಈ ಸಮೀಕ್ಷೆಯ ನಂತರ ಕಾಶ್ಮೀರದ ಅಶಾಂತಿ ಪರಿಸ್ಥಿತಿ, ದಲಿತರ ಮೇಲಿನ ದೌರ್ಜನ್ಯ ಹಾಗೂ ಉರಿಯಲ್ಲಿ ಉಗ್ರರ ದಾಳಿಯಂತಹ ಘಟನೆಗಳು ಮೋದಿ ಸರ್ಕಾರಕ್ಕೆ ದೊಡ್ಡ ಸವಾಲಾಗಿರುವುದನ್ನು ಮರೆಯುವಂತಿಲ್ಲ.

ಅಂದಹಾಗೇ ಇದು ಕೇವಲ ಮೋದಿ ಖ್ಯಾತಿಯ ಪರೀಕ್ಷೆಗೆ ನಡೆಸಿದ ಸಮೀಕ್ಷೆ ಅಲ್ಲ. ಈ ಸಮೀಕ್ಷೆಯಲ್ಲಿ ಕಾಂಗ್ರೆಸ್ ನ ಅಗ್ರಗಣ್ಯ ನಾಯಕರಾದ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರಂತಹ ಇತರೆ ನಾಯಕರ ಖ್ಯಾತಿಯ ಬಗ್ಗೆಯೂ ಸಮೀಕ್ಷೆಯಲ್ಲಿ ಮಾಹಿತಿ ಪಡೆಯಲಾಗಿದೆ.

ಇಲ್ಲಿ ಪ್ರಮುಖವಾಗಿ ಗಮನಿಸಬೇಕಿರುವ ಅಂಶ ಅಂದ್ರೆ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು 2013ರಲ್ಲಿ ಹೊಂದಿದ್ದ ಬೆಂಬಲಕ್ಕಿಂತ ಈಗ ಹೆಚ್ಚಿನ ಪ್ರಮಾಣದ ಬೆಂಬಲ ಹೊಂದಿದ್ದಾರೆ. 2013ರಲ್ಲಿ ರಾಹುಲ್ ಗಾಂಧಿಗೆ ಶೇ.50 ರಷ್ಟು ಮಂದಿ ಬೆಂಬಲ ಸೂಚಿಸಿದ್ರೆ, ಈಗ ಶೇ.63 ರಷ್ಟು ಮಂದಿ ಬೆಂಬಲ ಸೂಚಿಸಿದ್ದಾರೆ. ಇನ್ನು ಸೋನಿಯಾ ಗಾಂಧಿ ಅವರಿಗೂ ಬೆಂಬಲದ ಪ್ರಮಾಣ ಹೆಚ್ಚಾಗಿದೆ. 2013 ರಲ್ಲಿ ಶೇ.49 ರಷ್ಟು ಬೆಂಬಲ ಪಡೆದಿದ್ದ ಸೋನಿಯಾ, 2015 ರಲ್ಲಿ ಶೇ.58 ಹಾಗೂ 2016 ರಲ್ಲಿ ಶೇ.65 ರಷ್ಟು ಬೆಂಬಲ ಪಡೆದಿದ್ದಾರೆ. ಇನ್ನು ಕಾಂಗ್ರೆಸ್ ಪಕ್ಷಕ್ಕೆ 2015 ರಲ್ಲಿ ಶೇ.61 ರಷ್ಟು ಮಂದಿ ಬೆಂಬಲ ಸೂಚಿಸಿದ್ರೆ, ಈ ಬಾರಿ ಶೇ.67 ರಷ್ಟು ಬೆಂಬಲ ವ್ಯಕ್ತವಾಗಿದೆ.

ಇನ್ನು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಕೇಜ್ರಿವಾಲ್ ಬೆಂಬಲ ಮಾತ್ರ ಕುಸಿತ ಕಂಡಿದೆ. ಕಳೆದ ವರ್ಷ ಶೇ. 60 ರಷ್ಟು ಮಂದಿಯ ಬೆಂಬಲ ಪಡೆದಿದ್ದ ಕೇಜ್ರಿವಾಲ್, ಈ ಬಾರಿ ಶೇ.50 ರಷ್ಟು ಮಾತ್ರ ಬೆಂಬಲ ಪಡೆದಿದ್ದಾರೆ. ಈ ಸಮೀಕ್ಷೆ ಮುಂಬರುವ ಚುನಾವಣೆಗಳ ಮೇಲೆ ಅತಿಯಾದ ಪರಿಣಾಮ ಬೀರದಿದ್ದರೂ ಕಾಂಗ್ರೆಸ್ ಹಾಗೂ ಅದರ ನಾಯಕರ ಬೆಂಬಲದ ಪ್ರಮಾಣ ಹೆಚ್ಚಿರುವುದು ಪಕ್ಷದಲ್ಲಿ ಹೊಸ ಉತ್ಸಾಹ ತಂದರುತರಬಹುದು.

1 COMMENT

  1. 100 ಪ್ರತಿಶತದಲ್ಲಿ ಯಾವುದೇ ಲೆಕ್ಕಚಾರಗಳನ್ನು ಅಳೆಯುವುದು. ಇಲ್ಲಿ ನಿಮ್ಮದು ಅದನ್ನು ಮೀರಿಸಿ 250 ಪ್ರತಿಶತದತ್ತ ಲೆಕ್ಕಚಾರ ಹೋಗಿದೆ ಹೇಗೆ. ನಿಮ್ಮ ಮಾಹಿತಿ ನಂಬುವುದಾದರೂ ಹೇಗೆ.

Leave a Reply