ಅಮೆರಿಕಕ್ಕೆ ಬೆಣ್ಣೆ ಸವರುತ್ತಿರುವ ಪಾಕಿಸ್ತಾನ, ವಿಶ್ವಸಂಸ್ಥೆ ವೇದಿಕೆಯಲ್ಲಿ ಸಿದ್ಧವಾಗಿರುವ ಭಾರತ-ಪಾಕ್ ವಿಚಾರ ರಣಾಂಗಣ

ಡಿಜಿಟಲ್ ಕನ್ನಡ ಟೀಮ್:

ವಿಶ್ವಸಂಸ್ಥೆಯ 71ನೇ ಸಾಮಾನ್ಯ ಸಭೆ ಪ್ರಾರಂಭವಾಗಿದೆ. ಉರಿ ದಾಳಿಯ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನಗಳ ವಿಚಾರ ಸಮರದ ವೇದಿಕೆಯಾಗಿ ಇದನ್ನು ನೋಡಲಾಗುತ್ತಿದೆ.

ನಿರಾಶ್ರಿತರ ಸಮಸ್ಯೆಯೂ ಸೇರಿದಂತೆ ಹಲವು ಜಾಗತಿಕ ವಿಚಾರಗಳು ಇಲ್ಲಿ ಚರ್ಚೆಯಾಗುತ್ತಿವೆಯಾದರೂ ಭಾರತದ ಮಟ್ಟಿಗೆ ಇದು ವಿಶ್ವ ಸಮುದಾಯವನ್ನು ಪಾಕಿಸ್ತಾನದ ವಿರುದ್ಧ ನಿಲ್ಲಿಸುವ ವೇದಿಕೆ. ಅತ್ತ ಪಾಕಿಸ್ತಾನಕ್ಕೆ ಇದರ ವಿರುದ್ಧ ತನ್ನನ್ನು ಗಟ್ಟಿಗೊಳಿಸಿಕೊಳ್ಳುವ ಕಾರ್ಯತಂತ್ರದ ತುರ್ತು. ಹಾಗೆಂದೇ ಈ ಸಭೆಗೆಂದು ನ್ಯೂಯಾರ್ಕಿನಲ್ಲಿ ಇಳಿಯುತ್ತಲೇ ಪ್ರಧಾನಿ ನವಾಜ್ ಷರೀಫ್, ಅಮೆರಿಕಕ್ಕೆ ಬೆಣ್ಣೆ ಹಚ್ಚುತ್ತಿದ್ದಾರೆ.

ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಸಂಘರ್ಷ ಶಮನಗೊಳಿಸುವಲ್ಲಿ ಅಮೆರಿಕವು ತನ್ನ ಪಾತ್ರ ವಹಿಸಬೇಕು ಎಂದು ಸೋಮವಾರವೇ ಹೇಳಿಕೆ ನೀಡಿದ್ದಾರೆ ಷರೀಫ್. ಇದಕ್ಕಾಗಿ ಅವರು ಹಳೆಯ ದೋಸ್ತಿ ದಿನಗಳನ್ನು ನೆನಪಿಸಿಕೊಳ್ಳುತ್ತ, ‘ಅಧ್ಯಕ್ಷ ಬಿಲ್ ಕ್ಲಿಂಟನ್ ಅವರು ತಮ್ಮ ಸಮಯದಲ್ಲಿ, ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಸಂಘರ್ಷ ಮತ್ತು ವಿವಾದಗಳನ್ನು ಬಗೆಹರಿಸುವುದಕ್ಕೆ ಅಮೆರಿಕ ತನ್ನ ಪಾತ್ರ ನಿರ್ವಹಿಸಲಿದೆ’ ಎಂದು ಭರವಸೆ ನೀಡಿದ್ದನ್ನು ನೆನಪಿಸಿಕೊಳ್ಳುವುದಾಗಿ ಹೇಳಿದ್ದಾರೆ. ‘ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ಪಾಕಿಸ್ತಾನ ಎಂದಿಗೂ ನೈತಿಕತೆ ಮೆರೆಯುತ್ತ ಬಂದಿದೆ. ಶಾಂತಿ, ಸ್ಥಿರತೆ ಹಾಗೂ ಸಮೃದ್ಧಿಗಾಗಿ ನೆರೆಹೊರೆಯ ಜತೆಗಿದೆ’ ಎಂಬ ಮಾತುಗಳೂ ಷರೀಫರಿಂದ ಬಂದಿವೆ.

ಅತ್ತ, ಮಾನವ ಹಕ್ಕುಗಳ ಸಂಬಂಧದ ವಿಶ್ವಸಂಸ್ಥೆ ಸಭೆಯಲ್ಲಿ ಬಲೊಚಿಸ್ತಾನ ರಿಪಬ್ಲಿಕ್ ಪಕ್ಷವನ್ನು ಪ್ರತಿನಿಧಿಸಿ ಮಾತನಾಡಿರುವ ಅಬ್ದುಲ್ ನವಾಜ್ ಬುಗ್ತಿ, ‘ಬಲೊಚಿಸ್ತಾನದಲ್ಲಿ ಪಾಕಿಸ್ತಾನವು ತನ್ನ ವಶಕ್ಕೆ ತೆಗೆದುಕೊಂಡಿರುವ ನಾಗರಿಕರನ್ನು ಕೊಲ್ಲುತ್ತಿರುವ ವಿದ್ಯಮಾನದ ಬಗ್ಗೆ ವಿಶ್ವಸಂಸ್ಥೆ ಗಮನ ಹರಿಸಲೇಬೇಕು’ ಎಂದು ಒತ್ತಾಯಿಸಿದ್ದಾರೆ.

ಬುಧವಾರ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಲಿದ್ದಾರೆ. ಕಾಶ್ಮೀರದ ವಿಷಯದಲ್ಲಿ ಭಾರತ ದೂಷಣೆ ನಿರೀಕ್ಷಿತ. ಆದರೆ ಬಲೊಚಿಸ್ತಾನದ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಉರಿ ದಾಳಿ ವಿಷಯದಲ್ಲಿ ಪಾಕಿಸ್ತಾನದ ಹೊಣೆಗಾರಿಕೆ ವಿಷಯಗಳನ್ನು ಹೇಗೆ ನಿಭಾಯಿಸಲಿದ್ದಾರೆ ಎಂಬುದು ಒಂದು ಪ್ರಶ್ನೆಯಾದರೆ, ಷರೀಫರ ಭಾಷಣಕ್ಕೆ ಭಾರತದ ಪ್ರತಿಕ್ರಿಯೆ ಮತ್ತು ಪಾಕಿಸ್ತಾನದ ಭಯೋತ್ಪಾದಕ ದಾಳಿಗಳಿಗೆ ಪ್ರತಿಯಾಗಿ ಆಕ್ರಮಣಕಾರಿ ವಾದವು ಹೇಗೆ ಮೂಡಲಿದೆ ಎಂಬ ಬಗ್ಗೆ ಭಾರತ ಕಾತರವಾಗಿದೆ.

ಭಾರತವನ್ನು ಪ್ರತಿನಿಧಿಸಿ ಮಾತನಾಡಲಿರುವ ವಿದೇಶ ಸಚಿವೆ ಸುಷ್ಮ ಸ್ವರಾಜ್ ಅವರ ವಾದಸರಣಿ ಹೇಗಿರುತ್ತದೆ ಎಂಬುದರ ಬಗ್ಗೆ ಎಲ್ಲರ ಕುತೂಹಲ. ಇದಕ್ಕೆ ಪೂರ್ವಭಾವಿಯಾಗಿ ಉರಿಯ ಸೇನಾನೆಲೆ ಮೇಲಿನ ದಾಳಿ ವಿಷಯದಲ್ಲಿ ಜಗತ್ತಿನಾದ್ಯಂತ ಖಂಡನೆ ವ್ಯಕ್ತವಾಗುವಂತೆ ಭಾರತ ನೋಡಿಕೊಂಡಿದೆ. ಉರಿ ದಾಳಿಗೆ ಸಂಬಂಧಿಸಿದಂತೆ ಜಾಗತಿಕ ಮಟ್ಟದಲ್ಲಿ ಎಲ್ಲ ರಾಷ್ಟ್ರಗಳು ಭಾರತಕ್ಕೆ ಬೆಂಬಲಿಸುವಂತೆ ಮಾಡುವಲ್ಲಿ ರಾಜತಾಂತ್ರಿಕ ಯತ್ನಗಳು ಫಲ ನೀಡಿವೆಯಾದರೂ, ಪಾಕಿಸ್ತಾನವನ್ನು ಇದಕ್ಕೆ ಹೊಣೆಯಾಗಿಸಿ ಖಂಡನೆ ವ್ಯಕ್ತವಾಗುವಷ್ಟರಮಟ್ಟಿಗಿನ ತೀವ್ರತೆ ತರುವುದಕ್ಕೇನೂ ಸಾಧ್ಯವಾಗಿಲ್ಲ.

ಚೀನಾ ಸಹ ಉರಿ ಸೇನಾನೆಲೆಯ ಮೇಲಿನ ದಾಳಿಯನ್ನು ಖಂಡಿಸಿದೆ. ಮುಖ್ಯವಾಗಿ ರಷ್ಯವು ಈ ದಾಳಿಯನ್ನು ಖಂಡಿಸಿದ್ದೇ ಅಲ್ಲದೇ, ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಪಾಕಿಸ್ತಾನ ನೋಡಿಕೊಳ್ಳಬೇಕು ಎಂದೂ ಹೇಳಿದೆ. ಇಂಗ್ಲೆಂಡ್, ಅಮೆರಿಕ, ಫ್ರಾನ್ಸ್ ಗಳೆಲ್ಲ ಘಟನೆಯನ್ನು ಖಂಡಿಸಿ, ಉಗ್ರವಾದದ ವಿರುದ್ಧ ಹೋರಾಟದಲ್ಲಿ ಭಾರತದ ಪರ ಇರುವುದಾಗಿ ಹೇಳಿವೆ. ಇದರ ಜತೆಯಲ್ಲೇ, ಈ ಮೊದಲೇ ತಯಾರಿ ಮಾಡಿಕೊಂಡಂತೆ, ಪಾಕಿಸ್ತಾನದಲ್ಲಾಗುತ್ತಿರುವ ನಿರಂತರ ಮಾನವ ಹಕ್ಕು ಉಲ್ಲಂಘನೆಗಳನ್ನು ಪ್ರಶ್ನಿಸುವುದಕ್ಕೂ ಭಾರತ ಸನ್ನದ್ಧವಾಗಿದೆ.

ಕಾಶ್ಮೀರದ ವಿಷಯದಲ್ಲಿ ಭಾರತವನ್ನು ದೂಷಿಸುವ ಕಾರ್ಯಕ್ಕೆ ಇದು ಪ್ರತಿಘಾತವಾಗಲಿದ್ದು, ಕೇವಲ ಬಲೊಚಿಸ್ತಾನವಷ್ಟೇ ಅಲ್ಲದೇ ಬೇರೆ ಬೇರೆ ಆಯಾಮಗಳೂ ಪ್ರಸ್ತಾಪವಾಗುವ ನಿರೀಕ್ಷೆಯು ವಿಶ್ವಸಂಸ್ಥೆಗೆ ಭಾರತದ ರಾಜಕೀಯ ಪ್ರತಿನಿಧಿ ಅಲೋಕ್ ರಂಜನ್ ಜಾ ಮಾತುಗಳಲ್ಲಿ ವ್ಯಕ್ತವಾಗುತ್ತದೆ. ವಿಶ್ವಸಂಸ್ಥೆಯ ಮಾನವ ಹಕ್ಕು ಸಮಿತಿಗೆ ಭಾರತದ ಪರವಾಗಿ ದಾಖಲಿಸಿರುವ ಹೇಳಿಕೆಯಲ್ಲಿ ಅವರು ಹೇಳಿರುವುದು ‘ಮಾನವ ಹಕ್ಕು ಉಲ್ಲಂಘನೆಗಳು ವಿಶ್ವದ ಗಮನಕ್ಕಾಗಿ ಕಾದಿವೆ. ಬೇರೆಲ್ಲ ಪ್ರಾಂತ್ಯಗಳೂ ಸೇರಿದಂತೆ ಬಲೊಚಿಸ್ತಾನದ ಜನ ದಶಕಗಳಿಂದ ತಮ್ಮ ವಿರುದ್ಧದ ಹಿಂಸೆ ಮತ್ತು ದಮನಗಳ ವಿರುದ್ಧ ಹೋರಾಡುತ್ತಿದ್ದಾರೆ. ಪಾಕಿಸ್ತಾನದ ನಾನಾ ಪ್ರಾಂತ್ಯಗಳಲ್ಲಿ ನಾಪತ್ತೆ ಪ್ರಕರಣಗಳು ನಿರಂತರವಾಗಿವೆ.

ಬಲೋಚಿಸ್ತಾನ, ಕೈಬರ್ ಫಕ್ತುಂಕ್ವಾ, ಸಿಂಧ್ ಪ್ರಾಂತ್ಯಗಳು ಪ್ರಮುಖವಾದವು. ಸಿಂಧ್ ನಲ್ಲಿ ಮುತ್ತಹಿದಾ ಕ್ವಾಮಿ ಆಂದೋಲನದ ಸದಸ್ಯರ ಅಪಹರಣ ಮತ್ತು ಹತ್ಯೆಗಳು ಅವ್ಯಾಹತವಾಗಿವೆ. ಪಾಕಿಸ್ತಾನ ಆಡಳಿತವು ಬಲಪ್ರಯೋಗದಿಂದ ನಾಗರಿಕ ಜೀವನವನ್ನು ಗುರಿಯಾಗಿಸಿಕೊಂಡು ದೊಡ್ಡಮಟ್ಟದ ವಿಧ್ವಂಸ ಎಸಗುತ್ತಿದೆ. ಪ್ರಸ್ತುತ ಮತ್ತು ಗತದ ಶಸ್ತ್ರ ಸಂಘರ್ಷದಿಂದ ಪಾಕಿಸ್ತಾನದ ವಾಯವ್ಯ ಭಾಗದಲ್ಲೇ 10 ಲಕ್ಷ ಮಂದಿ ಆಂತರಿಕವಾಗಿ ನಿರಾಶ್ರಿತರಾಗಿದ್ದಾರೆ.’

‘ಭಾರತದ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ಬಿಟ್ಟು ಪಾಕಿಸ್ತಾನವು ತನ್ನ ಮನೆಯನ್ನು ಸರಿಮಾಡಿಕೊಳ್ಳಲಿ. ಭಯೋತ್ಪಾದನೆಯ ರಫ್ತನ್ನು ನಿಲ್ಲಿಸಲಿ ಹಾಗೂ ವಿಶ್ವಸಂಸ್ಥೆ ಸಮಿತಿಯು ಪಾಕಿಸ್ತಾನಕ್ಕೆ ಪಾಕ್ ಆಕ್ರಮಿತ ಕಾಶ್ಮೀರ ತೆರವುಗೊಳಿಸುವ ಹೊಣೆಗಾರಿಕೆ ನೆನಪಿಸಲಿ’ ಎಂದಿದ್ದಾರೆ.

Leave a Reply