ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡದಿರಲು ರಾಜ್ಯದ ದಿಟ್ಟ ನಿರ್ಧಾರ

ಕಾವೇರಿ ನೀರು ವಿಚಾರವಾಗಿ ವಿಧಾನಸೌಧದಲ್ಲಿ ಬುಧವಾರ ನಡೆದ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಿದ್ದ ಜೆಡಿಎಸ್ ನಾಯಕ ಹಾಗೂ ಮಾಜಿ ಪ್ರಧಾನಿ ದೇವೇಗೌಡ, ಬಸವರಾಜ ಹೊರಟ್ಟಿ, ಕುಮಾರಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ನೀರಾವರಿ ಸಚಿವ ಎಂ.ಬಿ ಪಾಟೀಲ್ ಹಾಗೂ ಸರ್ಕಾರ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾಧವ್…

ಡಿಜಿಟಲ್ ಕನ್ನಡ ಟೀಮ್:

ತಮಿಳುನಾಡಿಗೆ ಯಾವುದೇ ಕಾರಣಕ್ಕೂ ಇನ್ನು ಮುಂದೆ ನೀರು ಬಿಡದಿರಲು ಇಂದು ನಡೆದ ಸರ್ವ ಪಕ್ಷ ಸಭೆ ಹಾಗೂ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡಿದೆ.

ಬಿಜೆಪಿ ಬಹಿಷ್ಕಾರದ ನಡುವೆ ನಡೆದ ಸರ್ವಪಕ್ಷ ಸಭೆಯಲ್ಲಿ ಹಾಗೂ ನಂತರ ನಡೆದ ಸಂಪುಟ ಸಭೆಯಲ್ಲಿ ಸುಪ್ರೀಂ ಕೋರ್ಟ್ ನಿರ್ಧಾರದಿಂದ ಎದುರಾಗಿರುವ ಸೂಕ್ಷ್ಮ ಸಂದರ್ಭದವನ್ನು ಕಾನೂನಾತ್ಮಕವಾಗಿ ಎದುರಿಸುವ ಬಗ್ಗೆ ಚರ್ಚಿಸಲು ಶನಿವಾರ ಒಂದು ದಿನದ ವಿಧಾನ ಮಂಡಲದ ವಿಶೇಷ ಅಧಿವೇಶನ ನಡೆಸಲು ತೀರ್ಮಾನ ತೆಗೆದುಕೊಳ್ಳಲಾಯಿತು.

ಸುಪ್ರೀಂ ಕೋರ್ಟ್ ಮಂಗಳವಾರ ನೀಡಿರುವ ಆದೇಶ, ಸೆ.21ರಿಂದ 27ರ ವರೆಗೆ ನಿತ್ಯ 6 ಸಾವಿರ ಕ್ಯುಸೆಕ್ಸ್ ನೀರು ಬಿಡಬೇಕೆಂಬ ತೀರ್ಮಾನ ಜಾರಿ ಮಾಡಲಾಗದ ಅಸಂಗತ ಆದೇಶವಾಗಿದೆ. ನ್ಯಾಯವ್ಯವಸ್ಥೆಯ ಬಗ್ಗೆ ಗೌರವವಿರಿಸಿದ್ದ ಕಾರಣ ನ್ಯಾಯಾಲಯ ನೀಡಿದ್ದ ಆರಂಭಿಕ ಎರಡು ತೀರ್ಪನ್ನು ರಾಜ್ಯ ಪಾಲಿಸಿತ್ತು. ರಾಜ್ಯದಲ್ಲೇ ಕುಡಿಯುವ ನೀರಿಗೆ ಸಮಸ್ಯೆ ಇರುವ ಸಂದರ್ಭದಲ್ಲಿ ಇಲ್ಲದ ನೀರನ್ನು ತಮಿಳುನಾಡಿಗೆ ಹರಿಸಬೇಕೆಂದು ಸುಪ್ರೀಂ ಕೋರ್ಟ್ ನೀಡಿದ ಮೂರನೇ ಆದೇಶ ರಾಜ್ಯಾಧ್ಯಂತ ಆಕ್ರೋಶ ಮೂಡುವಂತೆ ಮಾಡಿತ್ತು. ಹೀಗಾಗಿ ಈ ವಿಚಾರದ ಬಗ್ಗೆ ರಾಜ್ಯ ಸರ್ಕಾರ ಯಾವ ರೀತಿಯ ನಿರ್ಣಯ ಕೈಗೊಳ್ಳಬೇಕು ಎಂಬ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯನವ್ರು ಬುಧವಾರ ಸಂಜೆ ಸರ್ವಪಕ್ಷ ಸಭೆ ಕರೆದಿದ್ದರು.

ಮಧ್ಯಾಹ್ನ ಮಾಜಿ ಪ್ರಧಾನಿ ದೇವೇಗೌಡರ ಮನೆಗೆ ತೆರಳಿ ಕಾವೇರಿ ವಿಷಯವಾಗಿ ಪ್ರಸ್ತಾಪಿಸಿದರಲ್ಲದೇ ದೇವೇಗೌಡರು ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಬೇಕು ಎಂಬ ಆಹ್ವಾನ ನೀಡಿದ್ದರು. ಅಲ್ಲದೆ ಈ ಭೇಟಿಯ ವೇಳೆ ತಮಿಳುನಾಡಿಗೆ ಯಾವುದೇ ಕಾರಣಕ್ಕೂ ನೀರು ಬಿಡೋದು ಬೇಡ, ಮುಂದೆ ಏನೇ ಆದರೂ ನಾವು ನಿಮ್ಮೊಂದಿಗೆ ನಿಲ್ಲುತ್ತೇವೆ ಎಂದು ದೇವೇಗೌಡರು ಸಿದ್ದರಾಮಯ್ಯನವರಿಗೆ ಅಭಯ ನೀಡಿದರು ಎಂದು ಮಾಧ್ಯಮಗಳು ವರದಿ ಮಾಡಿದ್ದವು.

ಬಿಜೆಪಿಯ ಬಹಿಷ್ಕಾರದ ನಡುವೆಯೇ ನಡೆದ ಸರ್ವಪಕ್ಷ ಸಭೆಯಲ್ಲಿ ಜೆಡಿಎಸ್ ಹಿರಿಯ ನಾಯಕ ದೇವೇಗೌಡರು, ಕುಮಾರಸ್ವಾಮಿ, ಬಸವರಾಜ ಹೊರಟ್ಟಿ ಸೇರಿದಂತೆ ಕಾಂಗ್ರೆಸ್ಸಿನ ಶಾಸಕರ ಜತೆಗೆ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ ಸಭೆಯಲ್ಲಿ ಭಾಗವಹಿಸಿ ಚರ್ಚೆ ನಡೆಸಿದರು. ಈ ಸಭಎಯಲ್ಲಿ ‘ತಮಿಳುನಾಡಿಗೆ ಒಂದೇ ಒಂದು ತೊಟ್ಟು ನೀರು ಬಿಡಬಾರದು. ಈ ವಿಚಾರವನ್ನು ಚರ್ಚಿಸಲು ವಿಶೇಷ ಅಧಿವೇಶನ ಕರೆಯಬೇಕು. ಸೆ.27ರಂದು ನಡೆಯಲಿರುವ ಸುಪ್ರೀಂ ಕೋರ್ಟ್ ವಿಚಾರಣೆ ಸಂದರ್ಭದಲ್ಲಿ ರಾಜ್ಯದ ಪರ ಯಾರೊಬ್ಬರೂ ಹಾಜರಾಗಬಾರದು. ಈ ಮೂಲಕ ತಮಗಾಗಿರುವ ಅನ್ಯಾಯವನ್ನು ವಿರೋಧಿಸಬೇಕು ಎಂಬ ಸಲಹೆಗಳನ್ನು ಸರ್ಕಾರಕ್ಕೆ ನೀಡಲಾಗಿತ್ತು.

ಈ ಸರ್ವಪಕ್ಷ ಸಭೆಯಲ್ಲಿ ಚರ್ಚೆಯಮೂಲಕ ಬಂದ ಸಲಹೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತುರ್ತು ಸಚಿವ ಸಂಪುಟ ಸಭೆ ಕರೆದು ಚರ್ಚೆ ನಡೆಸಿದರು. ಈ ಸಭೆಯಲ್ಲಿ ಸರ್ವಪಕ್ಷ ಸಭೆಯಲ್ಲಿ ಬಂದ ಸಲಹೆಗಳನ್ನು ಒಪ್ಪಿಕೊಂಡು ಅದಕ್ಕೆ ಬದ್ಧವಾಗಿ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂಬ ಕಠಿಣ ನಿರ್ಧಾರದ ಜತೆಗೆ, ಈ ಬಗ್ಗೆ ಚರ್ಚೆ ನಡೆಸಲು ಶನಿವಾರ ಒಂದು ದಿನಗಳ ವಿಶೇಷ ಅಧಿವೇಶನವನ್ನು ಕರೆಯಲು ತೀರ್ಮಾನಿಸಿದರು.

ಇತ್ತ ಸರ್ವಪಕ್ಷ ಸಭೆಗೆ ಗೈರಾದ ಬಿಜೆಪಿ ನಾಯಕರು, ‘ಈ ಹಿಂದಿನ ಸರ್ವ ಪಕ್ಷ ಸಭೆಗಳಲ್ಲಿ ಸರ್ಕಾರವು ವಿರೋಧ ಪಕ್ಷಗಳ ಸಲಹೆಯನ್ನು ಪರಿಗಣಿಸದೇ ತಮಿಳುನಾಡಿಗೆ ನೀರು ಬಿಟ್ಟಿದೆ. ನಮ್ಮ ಮಾತಿಗೆ ಗೌರವ ಇಲ್ಲ ಅಂದಮೇಲೆ ನಾವ್ಯಾಕೆ ಸರ್ವಪಕ್ಷ ಸಭೆಗೆ ಹೋಗಬೇಕು? ಹೀಗಾಗಿ ನಾವು ಸಭೆಯಲ್ಲಿ ಭಾಗವಹಿಸಲ್ಲ’ ಎಂಬ ಸಮಜಾಯಷಿ ನೀಡಿದರು.

ವಿಧಾನ ಸೌಧದಲ್ಲಿ ಸರ್ವಪಕ್ಷ ಸಭೆ ನಡೆಯುತ್ತಿದ್ದರೆ, ಅತ್ತ ದೆಹಲಿಯಲ್ಲಿ ಕೇಂದ್ರ ಸಚಿವರಾದ ಅನಂತ ಕುಮಾರ್, ಸದಾನಂದ ಗೌಡ, ಬಿಜೆಪಿ ನಾಯಕರಾದ ಜಗದೀಶ್ ಶೆಟ್ಟರ್, ಪ್ರಹಲ್ಲಾದ ಜೋಷಿ, ರಾಜ್ಯ ಸಭೆ ಸದಸ್ಯೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಇತರೆ ನಾಯಕರು ಕೇಂದ್ರ ನೀರಾವರಿ ಸಚಿವೆ ಉಮಾ ಭಾರತಿ ಅವರನ್ನು ಭೇಟಿ ಮಾಡಿದರು. ಈ ವೇಳೆ ರಾಜ್ಯದಲ್ಲಿ ಕಾವೇರಿ ನೀರಿನ ಸಮಸ್ಯೆ, ಕುಡಿಯಲು ಎದುರಾಗಿರುವ ಸಮಸ್ಯೆಯ ಸಂಪೂರ್ಣ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟರು.

ಈ ವೇಳೆ ಮಾತನಾಡಿದ ಕೇಂದ್ರ ರಸಗೊಬ್ಬರ ಸಚಿವ ಅನಂತಕುಮಾರ್, ‘ಕರ್ನಾಟಕರದಲ್ಲಿ ತೀವ್ರವಾಗಿರುವ ಕಾವೇರಿ ಸಂಕಟ ನಿರ್ಮಾಣವಾಗಿದೆ. ಪದೇ ಪದೇ ಬಂದಿರುವ ಆದೇಶಗಳಿಂದ ನೀರನ್ನು ಬಿಡಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಇದರಿಂದ ಬೆಂಗಳೂರು, ಮಂಡ್ಯ, ಮೈಸೂರು, ರಾಮನಗರ, ಚಾಮರಾಜನಗರ ಜಿಲ್ಲೆಗಳಲ್ಲಿ ಕುಡಿಯುವ ನೀರಿಗೆ ಅಭಾವ ಉಂಟಾಗಿದೆ. ನಮ್ಮ ರೈತರ ಬೆಳೆಗೂ ನೀರಿಲ್ಲದಂತಹ ಪರಿಸ್ಥಿತಿ ಎದುರಾಗಿದೆ. ಈ ಎಲ್ಲ ಪರಿಸ್ಥಿತಿಯನ್ನು ಕೇಂದ್ರ ಸಚಿವೆ ಕುಮಾರಿ ಉಮಾ ಭಾರತಿ ಅವರ ಗಮನಕ್ಕೆ ತಂದಿದ್ದೇವೆ. ಅವರು ಸಹ ಎಲ್ಲ ಅಂಶಗಳನ್ನು ಆಲಿಸಿದರು. ಕಳೆದ ವರ್ಷವೂ ಕಾವೇರಿ ನೀರಿನ ಸಂಕಟ ನಿರ್ಮಾಣವಾಗಿತ್ತು. ಎರಡು ವರ್ಷಗಳು ಸಂಕಷ್ಟದ ವರ್ಷಗಳಾಗಿದೆ ಎಂಬುದನ್ನು ಅವರಿಗೆ ತಿಳಿಸಿ ಅವರ ಗಮನ ಸೆಳೆದಿದ್ದೇವೆ. ಈ ಬಗ್ಗೆ ರಾಜ್ಯ ಸರ್ಕಾರ ವಿಶೇಷ ಅಧಿವೇಶನ ನಡೆಸಲಿ ಅಲ್ಲಿ ನ್ಯಾಯಾಲಯದ ತೀರ್ಪು, ರಾಜ್ಯದ ಜಲಕ್ಷಾಮ, ಕುಡಿಯುವ ನೀರಿನ ಅಗತ್ಯತೆ, ಮುಂದಿನ ದಿನಗಳಲ್ಲಿ ತೆಗೆದುಕೊಳ್ಳಬೇಕಾದ ನಡೆ ಬಗ್ಗೆ ಚರ್ಚಿಸಲು ನಮ್ಮ ನಾಯಕರಾದ ಯಡಿಯೂರಪ್ಪನವರು ಹಾಗೂ ಜಗದೀಶ್ ಶೆಟ್ಟರ್ ಅವರು ಸಿದ್ಧರಿದ್ದಾರೆ’ ಎಂದರು.

Leave a Reply