ಶೇಂದಿಗೆ ಪರ್ಯಾಯವಾಗಲಿದೆ ನೀರಾ, ರಾಜ್ಯ ಸಂಪುಟದ ಇತರೆ ನಿರ್ಣಯಗಳೇನು? ಮುಂದಿನ ವರ್ಷದಿಂದ ರೈಲ್ವೇ ಬಜೆಟ್ ಇಲ್ಲ, ಒತ್ತಡದಲ್ಲಿರುವ ಪಾಕಿಸ್ತಾನದ ಕುತೂಹಲಕಾರಿ ನಡೆ

Members of Karnataka Rakshane Vedhike are arrested while they stage protest against Cauvery issue Verdict, at Gandhinagar in Bengaluru on Wednesday.

ಕಾವೇರಿ ವಿಚಾರವಾಗಿ ಸುಪ್ರೀಂ ಕೋರ್ಟಿನಿಂದ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಖಂಡಿಸಿ ಬೆಂಗಳೂರಿನ ಗಾಂಧಿನಗರದಲ್ಲಿ ಪ್ರತಿಭಟನೆ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು… 

ಡಿಜಿಟಲ್ ಕನ್ನಡ ಟೀಮ್:

ಸಚಿವ ಸಂಪುಟದಲ್ಲಿನ ನಿರ್ಣಯಗಳು…

ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕಾವೇರಿ ವಿಷಯದ ಜತೆಗೆ ಇತರೆ ವಿಷಯಗಳನ್ನು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗಿದೆ. ಆ ಪೈಕಿ ಶೇಂದಿಗೆ ಪರ್ಯಾಯವಾಗಿ ನೀರಾ ಪಾನೀಯಕ್ಕೆ ಅವಕಾಶ, ಭೂ ಬ್ಯಾಂಕಿನಿಂದ ಕೆಲವು ರೈತರಿಗೆ ಜಮೀನು ವಾಪಸ್ ನೀಡುವ ನಿರ್ಣಯಗಳನ್ನು ಕೈಗೊಳ್ಳಲಾಯ್ತು. ಈ ಸಭೆಯಲ್ಲಿ ತೆಗೆದುಕೊಂಡ ಪ್ರಮುಖ ನಿರ್ಧಾರಗಳ ಬಗ್ಗೆ ಕಾನೂನು ಮತ್ತು ಸಂಸದೀಯ ಸಚಿವ ಟಿ.ಬಿ.ಜಯಚಂದ್ರ ನೀಡಿದ ಮಾಹಿತಿಗಳು ಹೀಗಿವೆ…

  • ಶೇಂದಿಗೆ ಪರ್ಯಾಯವಾಗಿ ನೀರಾ ಪಾನೀಯ ಮಾರಾಟಕ್ಕೆ ಮುಕ್ತ ಅವಕಾಶ ನೀಡುವ ಮೂಲಕ ಕಂಗಾಲಾಗಿರುವ ತೆಂಗು ಬೆಳೆಗಾರರಿಗೆ ಆರ್ಥಿಕವಾಗಿ ಶಕ್ತಿ ತುಂಬಲು ನಿರ್ಧರಿಸಿದೆ. ನೀರಾ ಕೇವಲ ಕುಡಿಯಲು ಮಾತ್ರವಲ್ಲ ಅದರಿಂದ ಇತರೆ 10 ರಿಂದ 12 ಪೌಷ್ಠಿಕ ಆಹಾರ ಖಾದ್ಯಗಳನ್ನು ಉತ್ಪಾದಿಸಲು ಸಂಸ್ಥೆಗಳು ಮುಂದಾಗಿವೆ.
  • ಬಿಜೆಪಿ ಅಧಿಕಾರದಲ್ಲಿದ್ದ ಕಾಲದಲ್ಲಿ ಭೂ ಬ್ಯಾಂಕ್ ಅನ್ನು ಸ್ಥಾಪಿಸುವ ಉದ್ದೇಶದಿಂದ ರಾಜ್ಯಾದ್ಯಂತ 21 ಲಕ್ಷ ಎಕರೆಗೂ ಹೆಚ್ಚು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಲಾಗಿತ್ತು.ಈ ಪೈಕಿ 80,182.35 ಎಕರೆ ಭೂಮಿಯನ್ನು ಮತ್ತೆ ರೈತರಿಗೆ ಹಿಂತಿರುಗಿಸುವ ಮಹತ್ವದ ತೀರ್ಮಾನ.
  • ಕರ್ನಾಟಕ ಕೈ ಮಗ್ಗ ಅಭಿವೃದ್ಧಿ ನಿಗಮ ದುಡಿಮೆಯ ಬಂಡವಾಳಕ್ಕಾಗಿ ಬ್ಯಾಂಕುಗಳಿಂದ ಪಡೆದ ಸಾಲದ ಮೇಲೆ ನೀಡಲಾಗಿದ್ದ ಸರ್ಕಾರಿ ಖಾತ್ರಿಯನ್ನು ಒಂದು ವರ್ಷಗಳ ಕಾಲ ಮುಂದುವರಿಸಲು ನಿರ್ಧಾರ. ರಾಜ್ಯದಲ್ಲಿ ಹೊಸತಾಗಿ ಕೌಶಲ್ಯಾಭಿವೃದ್ಧಿ,ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯನ್ನು ಸೃಷ್ಟಿಸಲು ನಿರ್ಧರಿಸಲಾಗಿದೆ.
  • ಯಲಹಂಕ-ಪುಟ್ಟೇನಹಳ್ಳಿ ಕೆರೆಯನ್ನು ಅಭಿವೃದ್ಧಿಪಡಿಸಲು ₹ 56 ಕೋಟಿ ಒದಗಿಸಲು ಸಂಪುಟ ಸಭೆ ನಿರ್ಧರಿಸಿದ್ದು, ಕೇಂದ್ರದ ಸಹಯೋಗದೊಂದಿಗೆ ವಿಶ್ವಬ್ಯಾಂಕ್ ನೆರವಿನಡಿ ದಾವಣಗೆರೆಯಲ್ಲಿ ತರಬೇತಿ ಕಟ್ಟಡ ಕಟ್ಟಲು ₹ 11.10 ಕೋಟಿ ನೀಡಲು ತೀರ್ಮಾನ.
  • ಬಿಡದಿ ಸಮೀಪದ ಈಗಲ್ ಟನ್ ಪ್ರಾಜೆಕ್ಟ್ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ 77 ಎಕರೆ ಸರ್ಕಾರಿ ಭೂಮಿಗೆ ಪ್ರತಿಯಾಗಿ ₹ 982 ಕೋಟಿ ರೂ ಶುಲ್ಕ ವಸೂಲು ಮಾಡಲು ಒಪ್ಪಿಗೆ.
  • ಸ್ವಯಂ ಉದ್ಯೋಗ ಸೃಷ್ಟಿಸುವುದೂ ಸೇರಿದಂತೆ ಹಲವು ಮಹತ್ವದ ಕಾರ್ಯಕ್ರಮಗಳನ್ನು ಕೆಲವೇ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಅನುಷ್ಟಾನಗೊಳಿಸುತ್ತಿದ್ದ ದೀನ್ ದಯಾಳ್ ಅಂತ್ಯೋದಯ ಯೋಜನೆಯನ್ನು ರಾಜ್ಯದ ಎಲ್ಲ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಜಾರಿಗೆ ತೀರ್ಮಾನ.
  • ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಉದ್ದೂರು ಆಸ್ಪತ್ರೆ ಕಾವಲ್ ಬೇಸಾಯ ಸಹಕಾರ ಸಂಘದ 738 ಸದಸ್ಯರಿಗೆ 1,28 ಎಕರೆ ಜಮೀನನ್ನು ಮಂಜೂರು ಮಾಡಲು ಇದ್ದ ಕಾನೂನು ಅಡೆತಡೆ ನಿವಾರಿಸಿ, ಅವರಿಗೆ ಹಕ್ಕುಪತ್ರ ನೀಡಲು ಸಮ್ಮತಿ.
  • ಮೈಸೂರು ಜಿಲ್ಲೆ ಟಿ.ನರಸೀಪುರ ತಾಲ್ಲೂಕಿನ ಭೈರಾಪುರ ಗ್ರಾಮದಲ್ಲಿ ಸರ್ಕಾರಿ ಮಹಿಳಾ ಕಾಲೇಜನ್ನು ಸ್ಥಾಪಿಸಲು ₹ 50 ಕೋಟಿ ರೂಗಳನ್ನು ಒದಗಿಸಲು ನಿರ್ಧಾರ.
  • ಕೊಡಗು ಜಿಲ್ಲೆಯ ಭಾಗಮಂಡಲ-ತಲಕಾವೇರಿ-ನಾಪೋಕ್ಲು ಮೇಲ್ಸೇತುವೆ ನಿರ್ಮಾಣ ಕಾರ್ಯಕ್ಕೆ ₹ 62 ಕೋಟಿ ನೀಡಲು ಒಪ್ಪಿಗೆ.

ವಾರ್ಷಿಕ ಬಜೆಟ್ ಜತೆಗೆ ರೈಲ್ವೇ ಬಜೆಟ್ ವಿಲೀನ

ಮುಂದಿನ ವರ್ಷದಿಂದ ವಾರ್ಷಿಕ ಬಜೆಟ್ ಮತ್ತು ರೈಲ್ವೇ ಬಜೆಟ್ ಅನ್ನು ಒಟ್ಟಿಗೆ ಸಮ್ಮಿಲನ ಮಾಡಿ ಏಕರೂಪ ಬಜೆಟ್ ತರುವ ಬಗ್ಗೆ ಬುಧವಾರ ಕೇಂದ್ರ ಸಚಿವ ಸಂಪುಟದಲ್ಲಿ ನಿರ್ಧರಿಸಲಾಗಿದೆ. ಅಲ್ಲದೆ ಮುಂದಿನ ವರ್ಷ ಬಜೆಟ್ ಮಂಡನೆಯನ್ನು ಚುನಾವಣೆ ದಿನಾಂಕಗಳ ಅನುಗುಣವಾಗಿ ನಡೆಸಲು ನಿರ್ಧರಿಸಲಾಗಿದೆ.

ರೈಲ್ವೇ ಬಜೆಟ್ ಅನ್ನು ವಾರ್ಷಿಕ ಬಜೆಟ್ ನಲ್ಲಿ ಸೇರ್ಪಡೆ ಮಾಡುತ್ತಿರುವುದರಿಂದ ಇನ್ನು ಮುಂದೆ ಪ್ರತಿ ವರ್ಷ ಲಾಭಾಂಶ ಪಾಲು ಎಂದು ನೀಡಲಾಗುತ್ತಿದ್ದ ಸುಮಾರು ₹ 10 ಸಾವಿರ ಕೋಟಿಯನ್ನು ಹಾಗೂ ಸರ್ಕಾರ ಬಜೆಟ್ ನೆರವಿಗೆಂದು ನೀಡಬೇಕಿದ್ದ ₹ 40 ಸಾವಿರ ಕೋಟಿಯನ್ನು ನೀಡುವುದು ತಪ್ಪುತ್ತದೆ. ಈ ನಿರ್ಧಾರದೊಂದಿಗೆ ಕಳೆದ 92 ವರ್ಷಗಳಿಂದ ನಡೆದುಕೊಂಡು ಬಂದಿದ್ದ ಪ್ರತ್ಯೇಕ ರೈಲ್ವೇ ಬಜೆಟ್ ಸಂಪ್ರದಾಯಕ್ಕೆ ಅಂತ್ಯವಾಡಿದಂತಾಗಿದೆ.

ಸೇನಾ ಮುಖ್ಯಸ್ಥರೊಂದಿಗೆ ನವಾಜ್ ಶರೀಫ್ ಮಾತುಕತೆ

ವಿಶ್ವ ಸಂಸ್ಥೆಯಲ್ಲಿ ಕಾಶ್ಮೀರ ವಿಷಯ ಪ್ರಸ್ತಾಪಕ್ಕೆ ಸಿದ್ಧತೆ ನಡೆಸುತ್ತಿರುವ ಪಾಕಿಸ್ತಾನ ಪ್ರಧಾನಿ ನವಾಜ್ ಶರೀಫ್, ಮಂಗಳವಾರ ರಾತ್ರಿ ಪಾಕಿಸ್ತಾನ ಸೇನಾ ಮುಖ್ಯಸ್ಥರ ಜತೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಭಾರತದ ಉರಿಯಲ್ಲಿ ಉಗ್ರರ ದಾಳಿಯ ನಂತರ ಕಾಶ್ಮೀರದಲ್ಲಿನ ಪರಿಸ್ಥಿತಿ ಸೇರಿದಂತೆ ಇತರೆ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ ಭಾರತ ಜತೆಗಿನ ಬಿಕ್ಕಟ್ಟು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನವು ಗಿಲ್ಗಿಟ್ ಮತ್ತು ಬಾಲ್ಟಿಸ್ತಾನ್ ಗೆ ವಿಮಾನ ಪ್ರಯಾಣವನ್ನು ರದ್ದುಗೊಳಿಸಿದೆ.

Leave a Reply