ನಮ್ಮ ಕಾಲವೇ ಚೆಂದಿತ್ತು ಎಂಬ ಹಳೇ ರಾಗದ ಹಿರಿಯರೆಲ್ಲ ಗಮನಿಸಬೇಕಾದ ವಾಸ್ತವ

(ಸಾಂದರ್ಭಿಕ ಚಿತ್ರ)

author-geetha‘ಈಗಿನ ಕಾಲದವರಿಗೆ ಉಡಾಫೆ ಜಾಸ್ತಿ. ಯಾವುದಕ್ಕೂ ಬೆಲೆ ಗೊತ್ತಿಲ್ಲ..’

‘ಅಲ್ಲಾ ಹೀಗೆ ಹೇಗೆ ಹೇಳ್ತೀರಿ? ಈಗಿನ ಕಾಲದ ಎಷ್ಟು ಮಂದಿಯನ್ನು ನೀವು ನೋಡಿದ್ದೀರಿ?’

‘ನಮ್ಮ ಕಾಲವೇ ಚೆನ್ನಾಗಿತ್ತು. ಹಿರಿಯರು ಎಂದು ಗೌರವವಿತ್ತು. ಶ್ರದ್ಧೆ, ಭಯ ಇತ್ತು. ದುಡ್ಡಿಗೆ ಬೆಲೆ ಇತ್ತು..’

‘ಈಗಲೂ ಇದೆ. ನೀವು ನಿಮ್ಮ ಸೀಮಿತ ವಲಯದಿಂದ ಆಚೆ ಬಂದು ನೋಡಿ. ನಿಮ್ಮ ಮನೆ, ನಿಮ್ಮ ಮಕ್ಕಳು, ನಿಮ್ಮ ರಸ್ತೆ… ಅಷ್ಟೇ ಅಲ್ಲ ಸಮಾಜ, ಪ್ರಪಂಚ ದೊಡ್ಡದಿದೆ…’

‘ನಾನು ನನಗೆ ಗೊತ್ತಿರುವ ಬಗೆಯಷ್ಟೇ ಮಾತನಾಡಲು ಸಾಧ್ಯ.’

‘ಹಾಗಾದರೆ ಜೆನರಲೈಸ್ ಮಾಡಬೇಡಿ…’

‘ಒಂದಗಳು ಸಾಕು ತಪ್ಪಲೆಯಲ್ಲಿ ಅನ್ನ ಆಗಿದೆಯೇ ಎಂದು ನೋಡಲು..’

‘ಈಗ ಕುಕ್ಕರ್ ಕೂಗಿಸಿ ಅನ್ನ ಮಾಡೋದು… ಅಗಳು ಹಿಸುಕಿ ನೋಡಬೇಕಾಗಿಲ್ಲ. ಜೊತೆಗೆ ಅನ್ನಕ್ಕೂ ಜನಕ್ಕೂ ತುಂಬಾ ವ್ಯತ್ಯಾಸವಿದೆ.’

‘ನನ್ನ ವಾಲ್ನಲ್ಲಿ ನಾನು ಏನು ಬೇಕಾದರೂ ಬರೆದುಕೊಳ್ತೀನಿ. ನೀವು ಕೆದಕಿ ಜಗಳ ಆಡಲು ಬರಬೇಡಿ..’

‘ಅರೆ.. ವಾಲ್ನಲ್ಲಿ ಬರೆದುಕೊಳ್ಳುವುದು ನಾಲ್ಕು ಜನರಿಗೆ ನಮ್ಮ ಅಭಿಪ್ರಾಯ ತಿಳಿಸಲು. ಒಪ್ಪದವರು ತಮ್ಮ ಅನಿಸಿಕೆ ಹೇಳಿಕೊಳ್ಳಬಹುದು ಅಲ್ಲವೇ? ಜಗಳ ಎಲ್ಲಿ ಆಡ್ತಿದೀನಿ?’

ಇನ್ನೊಂದು ಸ್ವಲ್ಪ ಹೊತ್ತು ಬಿಟ್ಟು FB ನೋಡಿದರೆ ನನ್ನ ಕಾಮೆಂಟ್ ಗಳನ್ನು ಡಿಲೀಟ್ ಮಾಡಿದ್ದರು ನನ್ನ ಆ ಹಿರಿಯ ಸ್ನೇಹಿತರು.

ಈ ಅಸಹನೆ, ಅಸಹಿಷ್ಣುತೆಗೆ ಏನು ಮಾಡೋಣ?

ಕುರಿಗೆ ಎರಡು ಕಾಲು… ಕಾಗೆ ಬಿಳಿ… ಕತ್ತೆಯೇ ರೇಸಿನಲ್ಲಿ ಓಡುವುದು ಎಂದರೆ ಸುಲಭ ಅಲ್ಲಗೆಳೆಯುವುದು. ಆದರೆ ಸಮಾಜದ ವಿಷಯದಲ್ಲಿ ಕೂಪಮಂಡೂಕದ ವಾದವನ್ನು ಒಪ್ಪಿಕೊಳ್ಳುವುದು ಕಷ್ಟ. ಅದರಲ್ಲೂ ಹಿರಿಯರು ಎನ್ನಿಸಿಕೊಳ್ಳುವವರು ವಯಸ್ಸಿನಲ್ಲಿ ಮಾತ್ರ ಹಿರಿಯರಾದರೆ ಕಷ್ಟ. ಎಲ್ಲಾದಕ್ಕೂ ಗೊಣಗುತ್ತಾ, ತಮ್ಮ ಕಾಲವೇ ಚೆಂದವಿತ್ತು ಎಂದು ಪರಿತಪಿಸುತ್ತಾ… ಹೊಸದನ್ನು ಒಪ್ಪಿಕೊಳ್ಳದೆ, ಬದಲಾವಣೆಗೆ ಒಡ್ಡಿಕೊಳ್ಳದೆ, ಕಿರಿಕಿರಿ ಮಾಡಿದರೆ ಕಿರಿಯರು ಖಂಡಿತವಾಗಿ ಅವರನ್ನು ದೂರವಿಡುತ್ತಾರೆ.
youth cannot know how aged thinks and feels. But old people are guilty if they target what it was tobe young: J.K.Rowling.

ವಯಸ್ಸಾದವರು ಹೇಗೆ ಯೋಚಿಸುತ್ತಾರೆ, ಹೇಗೆ ಭಾವಿಸುತ್ತಾರೆ ಎಂದು ಕಿರಿಯರಿಗೆ ಗೊತ್ತಿರುವುದಿಲ್ಲ. ಆದರೆ ಕಿರಿಯರಾಗಿರುವುದು ಎಂದರೆ ಹೇಗೆ, ಏನು ಎಂದು ಹಿರಿಯರು ಮರೆತರೆ ಅದು ತಪ್ಪಾಗುತ್ತದೆ. ಆ ಹಾದಿ ಹಾದು ದಾಟಿ ಬಂದಿರುತ್ತಾರೆ ಹಿರಿಯರು.

ಕೂಡು ಕುಟುಂಬವೇ ಚೆಂದ. ಅಣ್ಣ, ತಮ್ಮಂದಿರು ತಮ್ಮ ತಮ್ಮ ಕುಟುಂಬದೊಡನೆ ಅವರ ಅಪ್ಪ ಅಮ್ಮನೊಡನೆ ಇರಬೇಕು. ಮಕ್ಕಳಿಗೆ ಅಜ್ಜಿ, ತಾತಾ, ದೊಡ್ಡಪ್ಪ, ಚಿಕ್ಕಪ್ಪ ಎಂಬ ಅನುಬಂಧ ಇರಬೇಕು. ಹಂಚಿ ತಿನ್ನುವುದು, ಕೂಡಿ ಆಡುವುದು ಕಲಿಯುತ್ತಾರೆ. ಹೌದು, ಚೆಂದ.

ಕೆಲವು ವರ್ಷಗಳ ಹಿಂದೆ ಎಂಬತ್ತೋ, ನೂರೋ ಮಂದಿ ಒಟ್ಟಿಗಿದ್ದ ಕೂಡು ಕುಟುಂಬದ ನೈಜ್ಯ ಕಥೆ ಯಾವುದೋ ಪತ್ರಿಕೆಯಲ್ಲಿ ಓದಿದ ನೆನಪು. ಆ ಮನೆಯಲ್ಲಿ ಮೂವತ್ತು ಹೆಂಗಸರೇನೋ… ಸರದಿ ಪ್ರಕಾರ ಹಾಲು ಕರೆಯುವುದು, ರೊಟ್ಟಿ ತಟ್ಟುವುದು (ಮುನ್ನೂರು-ನಾನೂರು ರೊಟ್ಟಿಗಳು ದಿನಕ್ಕೆ!), ಕಸ ಬಳಿಯುವುದು, ಪಾತ್ರೆ ತೊಳೆಯುವುದು. ಗಂಡಸರದು ಏನಿದ್ದರೂ ಹೊರಗಿನ ಕೆಲಸ. ಓದಿ, ಕೆಲಸ (ಹೊರಗೆ) ಮಾಡುವ ಹೆಣ್ಣು ಮಕ್ಕಳು ಆ ಮನೆಗೆ ಸೊಸೆಯಾಗಿ ಬಂದರೆ ಹೊರಗೆ ನೌಕರಿ ಮಾಡುವುದು ಬಿಡಬೇಕು. ಕೂಡು ಕುಟುಂಬ, ಪುರುಷ ಪ್ರಧಾನ ವ್ಯವಸ್ಥೆಯ ಮುಖ. ಸೊಸೆ ಮನೆಗೆ ಬರುತ್ತಾಳೆ. ಮಗ ಹೋಗುವುದಿಲ್ಲ. ಮಗಳು ಮಡಿಲಕ್ಕಿ ತುಂಬಿಸಿಕೊಂಡು ಹೊರಡುತ್ತಾಳೆ. ಅಳಿಯ ಬರುವುದಿಲ್ಲ. ಅಣ್ಣ ತಮ್ಮಂದಿರು ಒಟ್ಟಿಗಿರುತ್ತಾರೆ.. ಅಕ್ಕ ತಂಗಿಯರಲ್ಲ.

ತಪ್ಪೇನು?.. ತಪ್ಪಿಲ್ಲ. ಅಲ್ಲಿ ಹೆಣ್ಣಿಗೆ ಅವಕಾಶಗಳು ಕಡಿಮೆ ವೃತ್ತಿಪರ ಜೀವನ ಸಾಧ್ಯವಿಲ್ಲ.

ಅಷ್ಟು ದೊಡ್ಡ ಕುಟುಂಬ ಇರಲಿ… ಈಗ ಇಬ್ಬರು ಅಣ್ಣ ತಮ್ಮಂದಿರಿದ್ದರೇ ಒಟ್ಟಿಗಿರುವುದಿಲ್ಲ.. ಇರುವವರು ಇದ್ದಾರೆ ಇಲ್ಲವೆಂದಲ್ಲ. ಮನೆವಾಳ್ತೆಗೆ ಆಳುಕಾಳು ಇಟ್ಟುಕೊಂಡರೆ, ಅಥವಾ ತುಂಬಾ ಚೆಂದದ ಒಡಂಬಡಿಕೆ ಇದ್ದರೆ ಇಂದಿಗೂ ಇರಬಹುದು.

ಹಿಂದೆ ಕೂಡು ಕುಟುಂಬಗಳಲ್ಲಿ ಎಲ್ಲರೂ ಸಂತಸದಿಂದ ಇದ್ದರು ಎಂದು ಹೇಳಿದರೆ ತಪ್ಪಾಗುತ್ತದೆ. ಮಾಡುತ್ತಿದ್ದ ಅಡಿಗೆಯ ಕೆಲಸ… ಅನ್ನುತ್ತಿದ್ದ ಆಡಿಕೊಳ್ಳುತ್ತಿದ್ದ ಸಂಬಂಧಿಗಳ ಮಾತು ಇನ್ನೂ ನೆನಪಿನಲ್ಲಿ ಇದೆ ಇಂದಿನ ಹಿರಿಯರಿಗೆ.. ಆದರೆ ಅದು ಮುಗಿದು ಹೋಗಿದೆ. ಹಾಗಾಗಿ ಸುಂದರ, ಮಧುರ! ಬಾಲ್ಯ ಯಾವಾಗಲೂ ಚೆಂದವೇ! ನೆನಪಿನಲ್ಲಿ!

ಅತ್ತೆ ಮಾವ, ಮಗ, ಸೊಸೆ, ಒಂದೋ ಎರಡೋ ಮೊಮ್ಮಕ್ಕಳು ಅದೇ ಕೂಡು ಕುಟುಂಬ ಈಗ. ಅದನ್ನು ನಿಭಾಯಿಸುವುದು ಕಷ್ಟವೆಂದರೆ, ಅದರ ಹೊಣೆ ಹೊರುವವರು ಯಾರು? ಕಿರಿಯರನ್ನೇ ಯಾಕೆ ಅನ್ನಬೇಕು? ಆ ಕಿರಿಯರನ್ನು ಬೆಳೆಸಿದ್ದು ಇಂದಿನ ಹಿರಿಯರೇ ಅಲ್ಲವೇ?  ಹೇಳಿದ್ದು, ಓದಿದ್ದು, ಕೇಳಿದ್ದರಿಂದ ಕಲಿಯುವುದಕ್ಕಿಂಥ ನೋಡಿ ಕಲಿಯುವುದೇ ವಾಡಿಕೆ.

ನಿಮ್ಮ ತಂದೆ ತಾಯಿಯನ್ನು ಪ್ರೀತಿಯೆಂದಲ್ಲ, ಕರ್ತವ್ಯ ಎಂಬಂತೆ ನೀವು ಪಾಲಿಸಿದ್ದರೆ, ಗೊಣಗುತ್ತಾ ನಿಮ್ಮ ಕಾರ್ಯ ನಿರ್ವಹಿಸಿದರೆ… ಅದರಿಂದ ಕಿರಿಯರು ಕಲಿಯುತ್ತಾರೆ. ಕರ್ತವ್ಯ ಎಂದೇ ಇನ್ನೂ ಅನುಕೂಲವಾದ ವೃದ್ಧಾಶ್ರಮಕ್ಕೆ ಸೇರಿಸುತ್ತಾರೆ. ಗೊಣಗುತ್ತಾ ಮಾಡುವುದರ ಬದಲು ದೂರ ಉಳಿಯುತ್ತಾರೆ.

ಕೂಡು ಕುಟುಂಬ ವ್ಯವಸ್ಥೆ ಕಾಣೆಯಾಗುತ್ತಿರುವುದು ಹೆಣ್ಣು ಬಿಟ್ಟು ಕೊಡುವುದನ್ನು ಬಿಟ್ಟಿದ್ದರಿಂದ. ಗಂಡಿನ ಹಿಂದೆ ಹೆಣ್ಣು ಇರಲಿ, ಅವನಿಗೆ ಬೆಂಬಲವಾಗಿ ಅವಳು ಇರಬೇಕು ಎಂಬ ಪರದೆ ಕಿತ್ತು ಅವಳು ಸರಿಸಮಾನಳಾಗಿ ನಿಲ್ಲಲು ಆರಂಭಿಸಿದಾಗ ಕೂಡು ಕುಟುಂಬ ವ್ಯವಸ್ಥೆ ಒಡೆಯಲಾರಂಭಿಸಿತು. ಏಕೆಂದರೆ ಹೆಣ್ಣಿನ ಹಿಂದೆ ಯಾರೂ ನಿಲ್ಲು ತಯಾರಿಲ್ಲ. ಅವಳ ಕುಟುಂಬ ಕೂಡ. ಈಗಿನ ಕುಟುಂಬ ವ್ಯವಸ್ಥೆಯಲ್ಲಿ ಗಂಡು, ಹೆಣ್ಣು ಇಬ್ಬರೂ ಸರಿಸಮಾನರಾಗಿ ಹೊರಗೆ, ಒಳಗೆ ದುಡಿಯುವುದರಿಂದ ಲಿಂಗತಾರತಮ್ಯ ಕಡಿಮೆಯಾಗುತ್ತಿದೆ. (on the way atleast)

ದುಡಿಯುವ, ಸ್ವಾತಂತ್ರ್ಯ ಮನೋಭಾವದ ಹೆಣ್ಣು, ತಾಯಿಯಾಗಿ ಮಕ್ಕಳ ಬೆಳವಣಿಗೆಯಲ್ಲಿ ಸಕ್ರಿಯ ಪಾತ್ರ ವಹಿಸುತ್ತಾಳೆ. ಹೊರಗೆ ದುಡಿದು, ಆರ್ಥಿಕವಾಗಿ ಮಾತ್ರ ಬೆಂಬಲವಾಗಿ ನಿಂತು ಅಪರಿಚಿತವಾಗುತ್ತಿದ್ದ ತಂದೆ, ಈಗ ಮನೆಯಲ್ಲಿ ಕೂಡ ಸಕ್ರಿಯವಾಗಿ ಪಾಲ್ಗೊಳ್ಳುವುದರಿಂದ, ಮಕ್ಕಳ ಲಾಲನೆಪಾಲನೆಯಲ್ಲಿ hands on ಭಾಗವಹಿಸುವುದರಿಂದ ಮಕ್ಕಳೊಂದಿಗೆ ಉತ್ತಮ ಬಾಂಧವ್ಯ ಬೆಸೆಯಲು ಸಾಧ್ಯವಾಗಿದೆ. ಬದಲಾಗುತ್ತಿರುವ ಆರ್ಥಿಕ, ಸಾಮಾಜಿಕ, ಕೌಟುಂಬಿಕ ವ್ಯವಸ್ಥೆಯನ್ನು ತೆರೆದ ಮನಸ್ಸು, ಹೃದಯದಿಂದ ಒಪ್ಪಿಕೊಂಡಿರುವ ಹಿರಿಯರು ಸಂತಸದಿಂದಲೇ ಇದ್ದಾರೆ. ಕುಟುಂಬಕ್ಕೆ, ಸಮಾಜಕ್ಕೆ ತಮ್ಮ ಅರ್ಥಪೂರ್ಣ ಕೊಡುಗೆ ನೀಡುತ್ತಲೇ ಇದ್ದಾರೆ.

ಗೌರವಕ್ಕಿಂತ ಆದರ ಪ್ರೀತಿಗೆ ಹೆಚ್ಚು ಒತ್ತಾಸೆ ನೀಡಿದರೆ ಎಲ್ಲರೂ ನೆಮ್ಮದಿಯಿಂದ ಇರಬಹುದು.

Leave a Reply