ಅಣ್ವಸ್ತ್ರ ಯೋಜನೆಗೆ ನಿಯಂತ್ರಣ… ಉಗ್ರ ರಾಷ್ಟ್ರ ಎಂಬ ಹಣೆಪಟ್ಟಿಗೆ ತಯಾರಿ… ಪಾಕಿಸ್ತಾನದ ಮೇಲೆ ಅಮೆರಿಕದ ಒತ್ತಡದ ಪರಿ ಇದು!

ಅಮೆರಿಕ ಕಾರ್ಯದರ್ಶಿ ಜಾನ್ ಕೆರ್ರಿ ಮತ್ತು ಪಾಕಿಸ್ತಾನ ಪ್ರಧಾನಿ ನವಾಜ್ ಶರೀಫ್…

ಡಿಜಿಟಲ್ ಕನ್ನಡ ಟೀಮ್:

ಪದೇ ಪದೇ ಭಾರತದ ವಿರುದ್ಧ ಉಗ್ರರ ಮೂಲಕ ಸಮರ ಸಾರುತ್ತಿರುವ ಪಾಕಿಸ್ತಾನಕ್ಕೆ ಈಗ ಮೊದಲ ಬಾರಿಗೆ ದೊಡ್ಡ ಏಟು ಬಿದ್ದಿದೆ. ಅದು ವಿಶ್ವದ ದೊಡ್ಡಣ್ಣ ಎಂದು ಕರೆಸಿಕೊಳ್ಳುವ ಅಮೆರಿಕದಿಂದ. ಅದೇನಂದ್ರೆ, ಅಮೆರಿಕ ಸಂಸತ್ತಿನಲ್ಲಿ ಪಾಕಿಸ್ತಾನವನ್ನು ‘ಉಗ್ರರ ರಾಷ್ಟ್ರ’ ಎಂದು ತೀರ್ಮಾನಿಸಿದ್ದು, ಅಲ್ಲಿನ ಸಂಸತ್ತಿನಲ್ಲಿ ಸಂಸದರು ಈ ಬಗ್ಗೆ ಮಸೂದೆ ಮಂಡಿಸಲು ಸಜ್ಜಾಗಿದ್ದಾರೆ.

ಹಲವು ವರ್ಷಗಳಿಂದ ಉಗ್ರರನ್ನು ಹತ್ತಿಕ್ಕುವ ನೆಪ ಹೇಳಿ ಅಮೆರಿಕದಿಂದ ಸಾವಿರಾರು ಕೋಟಿ ಆರ್ಥಿಕ ನೆರವು ಪಡೆಯುತ್ತಿದ್ದ ಪಾಕಿಸ್ತಾನ, ಉಗ್ರರ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಮಾಡಿರುವ ಸಾಧನೆ ಶೂನ್ಯ. ಉಗ್ರರನ್ನು ಸದೆಬಡಿಯುವ ಬದಲಿಗೆ ತಮ್ಮ ನೆಲದಲ್ಲಿ ಆಶ್ರಯ ನೀಡುವ ಮೂಲಕ ಭಾರತ ಸೇರಿದಂತೆ ವಿವಿಧ ನೆರೆ ರಾಷ್ಟ್ರಗಳಲ್ಲಿ ಉಗ್ರ ಕೃತ್ಯ ನಡೆಸಲು ವೇದಿಕೆಯಾಗಿದೆ. ಪಾಕಿಸ್ತಾನದ ಈ ದ್ವಿಮುಖ ನೀತಿ ಕಂಡು ಬೇಸತ್ತಿರುವ ಅಮೆರಿಕ ಈಗ ಪಾಕಿಸ್ತಾನವನ್ನು ಉಗ್ರರ ದೇಶ ಎಂದು ತೀರ್ಮಾನಿಸಲು ಮುಂದಾಗಿದೆ. ಈ ಮಸೂದೆ ಕುರಿತು ಮಾತನಾಡಿದ ಅಮೆರಿಕ ಸಂಸದ ಟೆಡ್ ಪೊ ಹೇಳಿದಿಷ್ಟು…

‘ಪಾಕಿಸ್ತಾನ ನಿರಂತರವಾಗಿ ನಮಗೆ ದ್ರೋಹ ಮಾಡುತ್ತಲೇ ಬಂದಿದೆ. ಹೀಗಾಗಿ ಇನ್ನುಮುಂದೆ ಪಾಕಿಸ್ತಾನಕ್ಕೆ ಆರ್ಥಿಕ ನೆರವು ನೀಡುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಉಗ್ರರಿಗೆ ಆಶ್ರಯ ನೀಡಿ ಪ್ರೋತ್ಸಾಹಿಸುತ್ತಿರುವಾಗ ಪಾಕಿಸ್ತಾನಕ್ಕೆ ಉಗ್ರರ ದೇಶ ಎಂದು ಹಣೆಪಟ್ಟಿ ಕಟ್ಟಬೇಕಿದೆ. ಹೀಗಾಗಿ ಪಾಕಿಸ್ತಾನ್ ಸ್ಟೇಟ್ ಸ್ಪಾನ್ಸರ್ಸ್ ಆಫ್ ಟೆರರಿಸಂ ಡೆಸಿಗ್ನೇಷನ್ ಆ್ಯಕ್ಟ್ (ಪಾಕಿಸ್ತಾನವು ಉಗ್ರ ಕೃತ್ಯಕ್ಕೆ ಭಯೋತ್ಪಾತಕರಿಗೆ ಪ್ರಾಯೋಜಕತ್ವ ನೀಡುತ್ತಿರು ರಾಷ್ಟ್ರದ ಮಸೂದೆ) ಮಂಡಿಸಲು ಮುಂದಾಗಿದ್ದೇವೆ.’

‘ಪಾಕಿಸ್ತಾನ ಕೇವಲ ಭಾರತದ ಮೇಲೆ ಮಾತ್ರ ಉಗ್ರರ ಮೂಲಕ ದಾಳಿ ಮಾಡುತ್ತಿಲ್ಲ. ಅನೇಕ ವರ್ಷಗಳಿಂದ ಅಮೆರಿಕದ ಶತ್ರುಗಳಿಗೂ ತನ್ನಲ್ಲಿ ನೆಲೆ ಕಲ್ಪಿಸಿಕೊಟ್ಟಿದೆ. ಹಕಾನಿ ಭಯೋತ್ಪಾದಕ ಸಂಪರ್ಕ ಜಾಲದ ಜತೆಗಿನ ಸಂಬಂಧ ಹೊಂದಿದ್ದ ಕಾರಣಕ್ಕಾಗಿಯೇ ಪಾಕಿಸ್ತಾನ ಒಸಾಮ ಬಿನ್ ಲಾಡೆನ್ ಗೆ ಆಶ್ರಯ ನೀಡಿತ್ತು. ಪಾಕಿಸ್ತಾನ ಉಗ್ರರಿಗೆ ಪ್ರೋತ್ಸಾಹ ನೀಡುತ್ತಿರುವ ಬಗ್ಗೆ ನಮ್ಮ ಬಳಿ ಸಾಕಷ್ಟು ಸಾಕ್ಷ್ಯಾಧಾರಗಳಿವೆ…’ ಹೀಗೆ ಅಮೆರಿಕದ ಸಂಸದರು ಪಾಕಿಸ್ತಾನದ ವಿರುದ್ಧ ಎಲ್ಲ ರೀತಿಯಲ್ಲೂ ಹರಿಹಾಯ್ದರು.

ಈ ಮಸೂದೆ ಮಂಡನೆ ವೇಳೆ, ಭಾರತದ ಉರಿಯಲ್ಲಿ ಭಾರತೀಯ ಸೇನಾ ನೆಲೆ ಮೇಲೆ ಉಗ್ರರ ದಾಳಿಯನ್ನು ಖಂಡಿಸಲಾಗಿದ್ದು, ‘ಉಗ್ರರ ವಿಷಯದಲ್ಲಿ ಪಾಕಿಸ್ತಾನ ತೋರಿದ ಬೇಜವಾಬ್ದಾರಿತನ ಹಾಗೂ ತನ್ನ ನೆಲದಲ್ಲಿ ಉಗ್ರರ ಕಾರ್ಯಾಚರಣೆಗೆ ಅವಕಾಶ ಕಲ್ಪಿಸಿದ್ದರಿಂದ ಆಗಿರುವ ಹೊಸ ಪರಿಣಾಮ ಇದು’ ಎಂದು ಕಟುವಾಗಿ ಖಂಡಿಸಿದರು..

ಈ ಸಂದರ್ಭದಲ್ಲಿ ಅಮೆರಿಕ ಸಂಸತ್ ಸದಸ್ಯರಾದ ಮಾರ್ಕ್ ವಾರ್ನರ್, ಪೇಟ್ ಸೆಷನ್ಸ್ ಮತ್ತು ಟಾಮ್ ಕಾಟನ್ ಭಾರತದ ಪರ ನಿಂತಿದ್ದು, ಕಾಶ್ಮೀರದ ವಿಷಯಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನವು ಭಾರತ ವಿರುದ್ಧ ನಡೆಸುತ್ತಿರುವ ಪಿತೂರಿಯನ್ನು ಖಂಡಿಸಿದರು. ಇದರೊಂದಿಗೆ ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನವನ್ನು ಉಗ್ರರ ರಾಷ್ಟ್ರ ಎಂದು ಪರಿಗಣಿಸುವ ಬಗ್ಗೆ ಅಮೆರಿಕ ಸಂಸತ್ತಿನಲ್ಲಿ ಮೊದಲ ಬಾರಿಗೆ ಗಂಭೀರವಾಗಿ ಚರ್ಚೆ ನಡೆಸಿದಂತಾಗಿದ್ದು, ಇದರಿಂದ ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಮುಖಭಂಗವಾಗಿದೆ.

ಅಣ್ವಸ್ತ್ರ ಯೋಜನೆ ಮೇಲೂ ಒತ್ತಡ…

ಇದೇ ಸಂದರ್ಭದಲ್ಲಿ ನಡೆದ ಮತ್ತೊಂದು ಬೆಳವಣಿಗೆ ಅಂದರೆ, ಪಾಕಿಸ್ತಾನ ತನ್ನ ಅಣ್ವಸ್ತ್ರ ಯೋಜನೆಗಳಿಗೆ ಮಿತಿ ಹೊಂದಬೇಕು ಎಂದು ಅಮೆರಿಕ ತಿಳಿಸಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನ, ಅದು  ಸಾಧ್ಯವಿಲ್ಲ ಎಂದು ಹೇಳಿದೆ.

ಅಮೆರಿಕದ ಮುಖ್ಯ ಕಾರ್ಯದರ್ಶಿ ಜಾನ್ ಕೆರ್ರಿ ಹಾಗೂ ಪಾಕಿಸ್ತಾನ ಅಧ್ಯಕ್ಷ ನವಾಜ್ ಶರೀಫ್ ಭೇಟಿಯ ಸಂದರ್ಭದಲ್ಲಿ ಕೆರ್ರಿ ಅವರು ಪಾಕಿಸ್ತಾನಕ್ಕೆ ‘ಅಣ್ವಸ್ತ್ರ ಯೋಜನೆ ಸೀಮಿತಗೊಳಿಸುವ’ ವಿಷಯ ಪ್ರಸ್ತಾಪಿಸಿದ್ದು, ‘ಇದು ಸಾಧ್ಯವಿಲ್ಲ’ ಎಂದು ಶರೀಫ್ ಹೇಳಿರುವುದಾಗಿ ಪಾಕಿಸ್ತಾನದ ವಿಶ್ವಸಂಸ್ಥೆ ಪ್ರತಿನಿಧಿ ಮಲೀಹ ಲೋಧಿ ತಿಳಿಸಿದ್ದಾರೆ. ಈ ಭೇಟಿಯ ಸಂದರ್ಭದಲ್ಲಿ ‘ಭಾರತದ ಅಣ್ವಸ್ತ್ರ ಚಟುವಟಿಕೆಗಳನ್ನು ವಿಶ್ವದ ಇತರೆ ರಾಷ್ಟ್ರಗಳು ಮೊದಲು ತಡೆಯಬೇಕು ಎಂದು ಶರೀಫ್ ಆಗ್ರಹಿಸಿದ್ದಾರೆ. ಅಲ್ಲದೆ ಪಾಕಿಸ್ತಾನವನ್ನು ಅಣ್ವಸ್ತ್ರ ಪೂರೈಕೆ ಸಮೂಹಕ್ಕೆ ಸೇರಿಸಿಕೊಳ್ಳುವ ಬಗ್ಗೆಯೂ ಕೆರ್ರಿ ಜತೆ ಮಾತುಕತೆ ನಡೆಸಿದ್ದಾರೆ’ ಎಂದು ಲೋಧಿ ಮಾಹಿತಿ ನೀಡಿದ್ದಾರೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.

Leave a Reply