ಉಗ್ರ ವಾನಿಯನ್ನು ಕಾಶ್ಮೀರಿ ಯುವ ನಾಯಕನೆಂದ ನವಾಜು, ಭಾರತದ ಮರು ಅವಾಜು

ಡಿಜಿಟಲ್ ಕನ್ನಡ ಟೀಮ್:

ನಿರೀಕ್ಷೆಯಂತೆ ಬುಧವಾರ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಭಾಷಣವು ಕಾಶ್ಮೀರದ ಸುತ್ತಲೇ ಗಿರ್ಕಿ ಹೊಡೆಯಿತು. ಜಮ್ಮು-ಕಾಶ್ಮೀರದ ಸ್ವಯಮಾಡಳಿತವನ್ನು ಪಾಕಿಸ್ತಾನ ಬೆಂಬಲಿಸುತ್ತದೆ, ಆದರೆ ಭಾರತೀಯ ಪಡೆಗಳು ಅಲ್ಲಿ ಮಾನವ ಹಕ್ಕು ಉಲ್ಲಂಘನೆಯಲ್ಲಿ ನಿರತವಾಗಿವೆ ಎಂದರವರು.

ತಮ್ಮ ಈ ಪ್ರತಿಪಾದನೆಯಲ್ಲಿ ಭಾರತದ ವಿರುದ್ಧ ಶಸ್ತ್ರ ಸಂಘರ್ಷದಲ್ಲಿ ತೊಡಗಿದ ಬುರ್ಹಾನ್ ವಾನಿಯನ್ನು ಕಾಶ್ಮೀರದ ‘ಯುವ ನಾಯಕ’ ಎಂದು ಬಣ್ಣಿಸಿ, ಈತನನ್ನು ಭಾರತೀಯ ಪಡೆ ಹತ್ಯೆ ಮಾಡಿದೆ ಎಂದರು. ಕಾಶ್ಮೀರದಲ್ಲಿ ಭಾರತೀಯ ಪಡೆಗಳಿಂದ ಆಗಿರುವ ಹತ್ಯೆ-ಅನಾಚಾರಗಳ ತನಿಖೆಗೆ ವಿಶ್ವಸಂಸ್ಥೆಯು ಸತ್ಯಶೋಧಕ ತಂಡವನ್ನು ಕಳುಹಿಸಬೇಕೆಂಬುದು ನವಾಜ್ ಒತ್ತಾಯ.

ಇದಕ್ಕೆ ಭಾರತದ ವಿದೇಶ ಸಚಿವಾಲಯ ಅಧಿಕಾರಿ ವಿಕಾಸ್ ಸ್ವರೂಪ್, ಟ್ವಿಟ್ಟರ್ ನಲ್ಲಿ ಆ ಕ್ಷಣದಲ್ಲೇ ಉತ್ತರ ಕೊಡುತ್ತ ಹೋದರು. ವಿಶ್ವಸಂಸ್ಥೆ ವೇದಿಕೆಯಲ್ಲಿ ಭಾರತದ ಪರವಾಗಿ ಸುಷ್ಮಾ ಸ್ವರಾಜ್ ಅವರ ಭಾಷಣವು ಸೋಮವಾರ ನಿಗದಿಯಾಗಿರುವುದರಿಂದ, ಸದ್ಯಕ್ಕೆ ವೇದಿಕೆ ಹೊರಗಿನ ಪ್ರತಿಕ್ರಿಯೆ ಮಾತ್ರ ಸಾಧ್ಯ. ಹಾಗೆಂದೇ ವಿಕಾಸ್ ಸ್ವರೂಪ್ ಪ್ರತಿಕ್ರಿಯೆ ಗಮನಾರ್ಹ. ‘ವಿಶ್ವಸಂಸ್ಥೆಯ ಘನತರ ವೇದಿಕೆಯಲ್ಲೇ ಪಾಕ್ ಪ್ರಧಾನಿ ಹಿಜ್ಬುಲ್ ಉಗ್ರನನ್ನು ವೈಭವೀಕರಿಸಿರುವುದು ಉಗ್ರವಾದಕ್ಕೆ ಪಾಕಿಸ್ತಾನದ ನಿರಂತರ ಬೆಂಬಲವಿದೆ ಎಂಬುದನ್ನು ಸಾಬೀತುಪಡಿಸಿದೆ.’

ತಮ್ಮ 20 ನಿಮಿಷಗಳ ಭಾಷಣದಲ್ಲಿ ಕಾಶ್ಮೀರದ ಬಗ್ಗೆ ಎಂದಿನ ಸುಳ್ಳುಗಳನ್ನೇ ಪಾಕ್ ಪ್ರಧಾನಿ ನವಾಜ್ ಷರೀಫ್ ಪುನರುಚ್ಚರಿಸಿದರು. ವಿಶ್ವಸಂಸ್ಥೆ ಈ ಹಿಂದೆ ಸೂಚಿಸಿದ್ದ ಜನಮತಗಣನೆಗೆ ಪೂರ್ವಭಾವಿಯಾಗಿ ಪಾಕ್ ಆಕ್ರಮಿತ ಕಾಶ್ಮೀರದಿಂದ ಪಾಕಿಸ್ತಾನವು ಹಿಂತೆಗೆಯುವುದು ಪ್ರಾಥಮಿಕ ಅಗತ್ಯವಾಗಿತ್ತು. ಈ ಬಗ್ಗೆ ಕುರುಡಾಗಿರುವ ಷರೀಫ್, 70 ವರ್ಷಗಳಿಂದ ಕಾಶ್ಮೀರಿಗರು ಜನಮತಗಣನೆಗೆ ಕಾದಿದ್ದಾರೆ ಎಂದರಲ್ಲದೇ, ಪ್ರಸ್ತುತ ಸಂಘರ್ಷದಲ್ಲಿ ನೂರಕ್ಕೂ ಹೆಚ್ಚು ನಾಗರಿಕರು ಸತ್ತು, 6 ಸಾವಿರ ಮಂದಿ ಗಾಯಾಳುಗಳಾಗಿದ್ದಾರೆ ಅಂತ ಅಂಕಿಅಂಶ ಒಗಾಯಿಸಿದ್ದಾರೆ. ಕಲ್ಲುತೂರಾಟದ ಹಿಂಸಾಚಾರದಲ್ಲಿ ತೊಡಗಿದವರನ್ನು ನಿಯಂತ್ರಿಸುವಲ್ಲಿ ಈವರೆಗೆ ಆಗಿರುವ ಸಾವುಗಳು 86. ಆದರೆ ನೂರಾರು-ಸಾವಿರಾರು ಎಂಬ ಪದಪುಂಜಗಳ ವೈಭವೀಕರಣ ಪಾಕಿಸ್ತಾನದ ಹಿತಾಸಕ್ತಿಗೆ ಪೂರಕವಾದ್ದರಿಂದ ನವಾಜ್ ಅದರಲ್ಲಿ ತೊಡಗಿಕೊಂಡರು.

ಉಳಿದಂತೆ, ಪಾಕಿಸ್ತಾನವು ಭಾರತದ ಜತೆ ಎಲ್ಲ ಬಗೆಯ ದ್ವಿಪಕ್ಷೀಯ ಮಾತುಕತೆಗೆ ಸಿದ್ಧ ಹಾಗೂ ಶಾಂತಿ ಸ್ಥಾಪನೆಗೆ ಬದ್ಧ ಎಂಬ ಎಂದಿನ ರಾಗವನ್ನು ಮತ್ತೆ ಹಾಡಿದರು. ‘ಮಾತುಕತೆ ಎಂಬುದು ಪಾಕಿಸ್ತಾನಕ್ಕೆ ಉಪಕಾರ ಮಾಡಿದಂತೆ ಎಂದು ಭಾವಿಸಬಾರದು. ದಕ್ಷಿಣ ಏಷ್ಯದ ಒಳಿತಿಗೆ ಭಾರತ ಮತ್ತು ಪಾಕಿಸ್ತಾನಗಳು ಯಾವುದೇ ಪೂರ್ವಶರತ್ತಿಲ್ಲದೇ ಮಾತುಕತೆಗೆ ಕೂರುವುದು ಅವಶ್ಯ. ನಾವಂತೂ ಭಾರತದೊಂದಿಗೆ ಶಸ್ತ್ರಾಸ್ತ್ರ ಪೈಪೋಟಿಗೆ ಬಿದ್ದಿಲ್ಲ.’ ಎಂದಿರುವ ನವಾಜ್, ಉಭಯ ದೇಶಗಳೂ ಅಣ್ವಸ್ತ್ರಯುಕ್ತ ದೇಶಗಳೆಂಬುದನ್ನು ನೆನಪಿಸಿ ಹೆದರಿಸುವುದಕ್ಕೆ ಮರೆಯಲಿಲ್ಲ.

ಇದಕ್ಕೆ ಭಾರತದ ವಿದೇಶ ಸಚಿವಾಲಯದ ಕಡೆಯಿಂದ ತಕ್ಷಣದ ಟ್ವೀಟ್ ಪ್ರತಿಕ್ರಿಯೆಯೂ ವ್ಯಕ್ತವಾಯಿತು. ‘ಮಾತುಕತೆಗೆ ಭಾರತ ವಿಧಿಸುತ್ತಿರುವ ಒಂದೇ ಶರತ್ತು ಎಂದರೆ ಪಾಕಿಸ್ತಾನವು ಉಗ್ರವಾದವನ್ನು ಕೊನೆಗೊಳಿಸಬೇಕೆಂಬುದು. ಇದೂ ಪಾಕಿಸ್ತಾನಕ್ಕೆ ಒಪ್ಪಿಗೆ ಇಲ್ಲವೇ’ ಅಂತ ಭಾರತದ ವಿದೇಶ ಸಚಿವಾಲಯ ಕೆಣಕಿದೆ. ಅಲ್ಲದೇ, ‘ವಿಶ್ವಸಂಸ್ಥೆಯಲ್ಲಿ ಪಾಕ್ ಪ್ರಧಾನಿ ಉರಿ ದಾಳಿ ಬಗ್ಗೆ ನಿರಾಕರಣ ಧೋರಣೆ ಮೆರೆದಿದ್ದಾರೆ. ಗಡಿ ನಿಯಂತ್ರಣ ರೇಖೆ ಬಳಿ ಈ ವರ್ಷ 19 ಒಳನುಸುಳುವಿಕೆ ಯತ್ನಗಳನ್ನು ತಡೆಯಲಾಗಿದೆ. ಇದೂ ದೇಸಿ ಎಂದು ವಾದಿಸುತ್ತಾರಾಯೇ?’ ಎಂದು ಪ್ರಶ್ನಿಸುವ ಮೂಲಕ, ಕಾಶ್ಮೀರದಲ್ಲಿ ಎಲ್ಲವೂ ಸ್ವಯಂಸ್ಫೂರ್ತಿಯಿಂದಾಗುತ್ತಿದೆ ಎನ್ನುವ ಪಾಕಿಸ್ತಾನದ ವಾದವನ್ನು ಭಾರತ ತಳ್ಳಿಹಾಕಿದೆ.

Leave a Reply