ಪ್ರತ್ಯೇಕತಾವಾದಿಗಳ ಬೆದರಿಕೆಗೆ ಹೆದರದೇ ಸೇನೆ ಸೇರಲು ಸಾವಿರದ ಸಂಖ್ಯೆಯಲ್ಲಿ ಬಂದ ಕಾಶ್ಮೀರದ ಯುವಕರು

ಡಿಜಿಟಲ್ ಕನ್ನಡ ಟೀಮ್:

ಸದಾ ಕಲ್ಲು ತೂರಾಟ, ಭಾರತ ವಿರೋಧಿ ಘೋಷಣೆ, ಪಾಕಿಸ್ತಾನದ ಉಗ್ರವಾದ ಇಂಥ ಕಾರಣಗಳಿಗಾಗಿಯೇ ಸುದ್ದಿಯಲ್ಲಿರುತ್ತಿದ್ದ ಕಾಶ್ಮೀರ ಕಣಿವೆ, ಇದೀಗ ಸಕಾರಾತ್ಮಕ ಕಾರಣವೊಂದಕ್ಕೆ ಸುದ್ದಿಯಾಗುತ್ತಿದೆ. ಬುಧವಾರದಿಂದ ದಕ್ಷಿಣ ಕಾಶ್ಮೀರದಲ್ಲಿ ಶುರುವಾಗಿರುವ ಸೇನಾ ನೇಮಕ ಪ್ರಕ್ರಿಯೆಗೆ ಅಲ್ಲಿನ ಯುವಕರಿಂದ ಭಾರಿ ಬೆಂಬಲ ವ್ಯಕ್ತವಾಗಿದೆ. ಈ ನೇಮಕವನ್ನು ಬಹಿಷ್ಕರಿಸಬೇಕು ಎಂದು ಪ್ರತ್ಯೇಕತಾವಾದಿಗಳು ಕರೆ ನೀಡಿದ್ದರೂ ಲೆಕ್ಕಿಸದೇ ಸುಮಾರು 2200 ಅಭ್ಯರ್ಥಿಗಳು ಸರದಿಯಲ್ಲಿ ನಿಂತು ತಮ್ಮ ದಾಖಲೆಗಳನ್ನು ಸಲ್ಲಿಸಿದರು ಎಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಸೆ. 24ರವರೆಗೆ ದಕ್ಷಿಣ ಕಾಶ್ಮೀರದಲ್ಲಿ ನಡೆಯುವ ನೇಮಕ ಪ್ರಕ್ರಿಯೆಯು ನಂತರ ಸೆ. 29ರಿಂದ ಅಕ್ಟೋಬರ್ 2ರವರೆಗೆ ಉತ್ತರ ಕಾಶ್ಮೀರದಲ್ಲಿ ನಡೆಯಲಿದೆ. ಕಾಶ್ಮೀರದ ಯುವಕರಿಗೆ ಅವಕಾಶವನ್ನು ತೆರೆದಿಡುವುದು ನಮ್ಮ ಉದ್ದೇಶ ಎಂದು ನೇಮಕ ಅಧಿಕಾರಿ ಬ್ರಿಗೇಡಿಯರ್ ಜೆ ಎಸ್ ಸನ್ಯಾಲ್ ಹೇಳಿದ್ದಾರೆ. ನೇಮಕಕ್ಕೆ ದಾಖಲೆ ಸಲ್ಲಿಸಲು ಹಾಜರಾಗಿರುವ ಯುವಕರ ಪೈಕಿ ಹಲವರು ತಮ್ಮ ಪ್ರತಿಕ್ರಿಯೆಯಲ್ಲಿ ಹರ್ಷ ವ್ಯಕ್ತಪಡಿಸಿದ್ದಾರಲ್ಲದೇ, ಉತ್ತಮ ಜೀವನದ ಕನಸು ನನಸಾಗಿಸಿಕೊಳ್ಳುವುದಿದ್ದರೆ ಸರ್ಕಾರ ನೀಡುವ ಅವಕಾಶಗಳನ್ನು ಉಪಯೋಗಿಸಿಕೊಳ್ಳಬೇಕೇ ಹೊರತು, ಬಂದೂಕು ಮತ್ತು ಕಲ್ಲೆತ್ತಿಕೊಳ್ಳುವುದರಿಂದ ಯಾವ ಭವಿಷ್ಯವೂ ಇಲ್ಲ ಎಂಬ ಅಭಿಪ್ರಾಯ ಹೊಂದಿದ್ದಾರೆ.

ಪ್ರತ್ಯೇಕತಾವಾದಿಗಳ ಬಹಿಷ್ಕಾರ ಬೆದರಿಕೆ ಹೊರತಾಗಿಯೂ ಕಾಶ್ಮೀರದ ಯುವಕರಲ್ಲಿ ವ್ಯಕ್ತವಾಗಿರುವ ಆಸಕ್ತಿ, ಆ ಪ್ರಕ್ಷುಬ್ಧ ನೆಲದಲ್ಲಿ ಭರವಸೆ ಕತೆಯನ್ನು ಹೇಳುವಂತಿದೆ. ಕಣಿವೆಯಲ್ಲಿ ಇಡಿ ಇಡಿಯಾಗಿ ಯುವಕರೆಲ್ಲ ಕಲ್ಲು ತೂರಾಟಕ್ಕಿಳಿದಿದ್ದಾರೆಂಬ ಚಿತ್ರವನ್ನು ಇದು ಅಲ್ಲಗಳೆಯುತ್ತಿದೆ. ಪಾಕ್ ಪ್ರೇರಿತ ರಾಜಕಾರಣ ನಿರತರನ್ನು ಪಕ್ಕಕ್ಕೆ ಸರಿಸಿದ್ದೇ ಆದರೆ ಅಲ್ಲಿನ ಜನರನ್ನು ಅಭಿವೃದ್ಧಿ ರಾಜಕಾರಣದಲ್ಲಿ ಬೆಸೆಯಬಹುದಾಗಿದೆ ಎಂಬ ಸತ್ಯವನ್ನೂ ಇದು ಗಟ್ಟಿ ಮಾಡುತ್ತಿದೆ.

Leave a Reply