ನವಿ ಮುಂಬೈನಲ್ಲಿ ಶಸ್ತ್ರಾಸ್ತ್ರ ಹಿಡಿದು ಓಡಾಡಿದ ಅಪರಿಚಿತರು? ಭಾರತೀಯ ನೌಕಾ ನೆಲೆಯಲ್ಲಿ ಕಟ್ಟೆಚ್ಚರ

ನವಿ ಮುಂಬೈನ ಉರಾನ್ ಪ್ರದೇಶದಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಚಟುವಟಿಕೆ ಬಗ್ಗೆ ಮಾಹಿತಿ ನೀಡಿದ ಶಾಲೆಯ ಬಳಿ ಪೊಲೀಸರು ಪರಿಶೀಲನೆ ನಡೆಸುತ್ತಿರುವುದು…

ಡಿಜಿಟಲ್ ಕನ್ನಡ ಟೀಮ್:

‘ನವಿ ಮುಂಬೈನ ಉರಾನ್ ಪ್ರದೇಶದಲ್ಲಿ ಐವರು ಅಪರಿಚಿತ ವ್ಯಕ್ತಿಗಳು ಶಸ್ತ್ರಾಸ್ತ್ರ ಹಿಡಿದು ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾರೆ…’ ಹೀಗೊಂದು ಮಾಹಿತಿಯನ್ನು ಶಾಲಾ ಮಕ್ಕಳು ತಿಳಿಸುತ್ತಿದ್ದಂತೆ ಮುಂಬೈ ಸೇರಿದಂತೆ ಮಹಾರಾಷ್ಟ್ರದಲ್ಲಿ  ಕಟ್ಟೆಚ್ಚರ ವಹಿಸಲಾಗಿದೆ.

ಅನುಮಾನಾಸ್ಪದ ವ್ಯಕ್ತಿಗಳ ಚಲನವಲನ ಕಂಡು ಬಂದಿರುವ ಹಿನ್ನೆಲೆಯಲ್ಲಿ ಸಮೀಪದಲ್ಲೇ ಇರುವ ಭಾರತೀಯ ನೌಕಾ ನೆಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಯುಇಎಸ್ ಶಾಲೆಯ ಮಕ್ಕಳು ನೀಡಿರುವ ಮಾಹಿತಿ ಪ್ರಕಾರ, ಸುಮಾರು ಐವರು ಅಪರಿಚಿತ ವ್ಯಕ್ತಿಗಳು ಸಂಪೂರ್ಣವಾಗಿ ಕಪ್ಪು ಬಟ್ಟೆ ಧರಿಸಿದ್ದು, ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳು ಹಾಗೂ ಬ್ಯಾಗ್ ಹಿಡಿದಿದ್ದರು ಎನ್ನಲಾಗಿದೆ. ಈ ಮಕ್ಕಳು ಮೊದಲು ಶಾಲೆಯ ಪ್ರಾಂಶುಪಾಲರಿಗೆ ಮಾಹಿತಿ ನೀಡಿದ್ದು, ನಂತರ ಪ್ರಾಂಶುಪಾಲರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬೆಳಗ್ಗೆ 11 ಗಂಟೆ ಸುಮಾರಿಗೆ ಈ ಅನುಮಾನಾಸ್ಪದ ವ್ಯಕ್ತಿಗಳನ್ನು ನೋಡಿದ್ದು, ಅವರು ಅಪರಿಚಿತ ಭಾಷೆಯನ್ನು ಮಾತನಾಡುತ್ತಿದ್ದರು ಎಂದು ಶಾಲಾ ಮಕ್ಕಳು ಮಾಹಿತಿ ನೀಡಿದ್ದಾರೆ.

‘ಇಂದು ಬೆಳಗ್ಗೆ ಉರಾನ್ ಪ್ರದೇಶದಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಶಸ್ತ್ರಾಸ್ತ್ರ ಹಿಡಿದು ಓಡಾಡಿದ ಬಗ್ಗೆ ಇಬ್ಬರು ಶಾಲಾ ಮಕ್ಕಳು ಮಾಹಿತಿ ನೀಡಿದ್ದಾರೆ. ಆ ಪೈಕಿ ಓರ್ವ ವಿದ್ಯಾರ್ಥಿ ಒಬ್ಬ ಅಪರಿಚಿತ ವ್ಯಕ್ತಿಯನ್ನು ನೋಡಿರುವುದಾಗಿ ತಿಳಿಸಿದರೆ, ಮತ್ತೊರ್ವ ವಿದ್ಯಾರ್ಥಿ 5-6 ವ್ಯಕ್ತಿಗಳನ್ನು ನೋಡಿರುವುದಾಗಿ ಮಾಹಿತಿ ನೀಡಿದ್ದಾರೆ’ ಎಂದು ಡಿಜಿಪಿ ಸತೀಶ್ ಮಾತೂರ್ ಮಾಹಿತಿ ನೀಡಿದ್ದಾರೆ.

ಈ ಅನುಮಾನಾಸ್ಪದ ಚಟುವಟಿಕೆ ನಡೆದ ಉರಾನ್ ಪ್ರದೇಶದ ಸಮೀಪದಲ್ಲೇ ‘ಐಎನ್ಎಸ್ ಅಭಿಮನ್ಯು’ ಶಸ್ತ್ರಾಸ್ತ್ರ ಸಂಗ್ರಹಗಾರ ಇರುವುದರಿಂದ ಈ ಪ್ರದೇಶದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಈ ಪ್ರದೇಶದ ಸಮೀಪದಲ್ಲಿರುವ ನೌಕಾ ನೆಲೆಯ ಭದ್ರತೆಗೆ ಸಾಗರ ಭದ್ರತಾ ಪಡೆಯ ಮಾರ್ಕೋಸ್ ಕಮಾಂಡೊಗಳನ್ನು ನಿಯೋಜಿಸಲಾಗಿದೆ. ಆದರೆ ಗುಪ್ತಚರ ದಳ ಈ ರೀತಿಯಾದ ಅನುಮಾನಾಸ್ಪದ ಚಟುವಟಿಕೆ ನಡೆದಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದಿರುವ ಬಗ್ಗೆ ವರದಿಗಳು ಬಂದಿವೆ.

(ಚಿತ್ರಕೃಪೆ: ಎಎನ್ಐ)

Leave a Reply