ಕುಡಿಯುವ ಉದ್ದೇಶಕ್ಕೆ ಮಾತ್ರ ಕಾವೇರಿ: ವಿಧಾನ ಮಂಡಲದ ಜಾಣ್ಮೆ ನಿರ್ಣಯ

Assembly session on Cauvery issue at Vidhan Soudha in Bengaluru on Friday.

ಡಿಜಿಟಲ್ ಕನ್ನಡ ಟೀಮ್:

ಕಾವೇರಿ ಕಣಿವೆಯ ಆಣೆಕಟ್ಟುಗಳ ನೀರನ್ನು ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಸಿಕೊಳ್ಳಬೇಕೆಂಬ ನಿರ್ಣಯವನ್ನು ವಿಧಾನ ಮಂಡಲದ ಉಭಯ ಸದನಗಳು ಅಂಗೀಕರಿಸಿವೆ. ಆ ಮೂಲಕ ಪರೋಕ್ಷವಾಗಿ ತಮಿಳುನಾಡಿಗೆ ನೀರು ಬಿಡದಿರುವ ತೀರ್ಮಾನ ಕೈಗೊಳ್ಳಲಾಗಿದೆ.

ಸುಪ್ರೀಂ ಕೋರ್ಟ್ ಕಾವೇರಿ ನೀರಿನ ವಿಷಯವಾಗಿ ಸೆ.21 ರಿಂದ ಸೆ.27ರವರೆಗೆ ನಿತ್ಯ6 ಸಾವಿರ ಕ್ಯುಸೆಕ್ಸ್ ನೀರು ಬಿಡಬೇಕು ಎಂಬ ತೀರ್ಪು ನೀಡಿತ್ತು. ರಾಜ್ಯದ ಸಂಕಷ್ಟ ಪರಿಸ್ಥಿತಿ ಆಧರಿಸಿ ತಮಿಳುನಾಡಿಗೆ ನೀರು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಚರ್ಚೆ ಮಾಡಲು ಮೊನ್ನೆ ನಡೆದ ಸರ್ವಪಕ್ಷ ಸಭೆಯಲ್ಲಿ ವಿಶೇಷ ಅಧಿವೇಶನ ಕರೆಯಲಾಗಿತ್ತು. ಅದರಂತೆ ಇಂದು ನಡೆದ ವಿಶೇಷ ಅಧಿವೇಶನದಲ್ಲಿ ರಾಜ್ಯದಲ್ಲಿಯೇ ಕುಡಿಯುವ ನೀರಿಗೆ ಸಂಕಷ್ಟ ಇರುವಾಗ ನೀರನ್ನು ಬೇರೆ ಉದ್ದೇಶಕ್ಕೆ ಬಳಸಿಕೊಳ್ಳಲು ಸಾಧ್ಯವಿಲ್ಲ. ಇನ್ನು ರಾಜ್ಯದ ಜನರಿಗೆ ಬೆಳೆ ಬೆಳೆಯಲು ನೀರು ಒದಗಿಸಲು ಸಾಧ್ಯವಿಲ್ಲದಿರುವಾಗ ತಮಿಳುನಾಡಿಗೆ ನೀರು ಬಿಡುವುದು ಅಸಂಗತ ಎಂಬ ತೀರ್ಮಾನ ಕೈಗೊಳ್ಳಲಾಯಿತು.

ಈ ವಿಶೇಷ ಅಧಿವೇಶನದಲ್ಲಿ ಅಂಗೀಕರಿಸುವ ಕರಡು ಪ್ರತಿಯಲ್ಲಿನ ಕೆಲವು ಪದ ಬಳಕೆ ಬಗ್ಗೆ ಗೊಂದಲ ಮೂಡಿದ್ದ ಹಿನ್ನೆಲೆಯಲ್ಲಿ ಸಿ.ಎಂ ಸಿದ್ದರಾಮಯ್ಯನವರು ರಾಜ್ಯದ ಅಡ್ವೋಕೇಟ್ ಜನರಲ್ ಮಧುಸೂದನ್ ನಾಯ್ಕ್ ಅವರ ಬಗ್ಗೆ ಚರ್ಚೆ ನಡೆಸಿದರು. ನಂತರ ಈ ವಿಶೇಷ ಅಧಿವೇಶನ ಆರಂಭವಾಯ್ತು.

ವಿಧಾನ ಸಭೆಯಲ್ಲಿ ಕಾವೇರಿ ವಿಚಾರವಾಗಿ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು ನಿರ್ಣಯ ಮಂಡಿಸಿದರು. ನಂತರ ಜೆಡಿಎಸ್ ನಾಯಕ ವೈ ಎಸ್ ವಿ ದತ್ತಾ ಅವರು ಈ ನಿರ್ಣಯವನ್ನು ಅನುಮೋದಿಸಿದರು. ಈ ನಿರ್ಣಯ ಮಂಡನೆ ಮೇಲೆ ನಡೆದ ಚರ್ಚೆಯಲ್ಲಿ ವಿವಿಧ ಪಕ್ಷಗಳ ನಾಯಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಮೊದಲು ಮಾತನಾಡಿದ ನೀರಾವರಿ ಸಚಿವರಾದ ಎಂ.ಬಿ ಪಾಟೀಲ್, ‘ರಾಜ್ಯದ ನಾಲ್ಕು ಜಲಾಶಯಗಳಾದ ಕೆ.ಆರ್.ಎಸ್, ಹಾರಂಗಿ, ಕಬಿನಿ, ಹೇಮಾವತಿಯಲ್ಲಿ ಕೇವಲ ಕುಡಿಯುವ ಉದ್ದೇಶಕ್ಕಾಗಿ ನೀರನ್ನು ಸಂಗ್ರಹಿಸಲಾಗುತ್ತಿದೆ. ಹೀಗಾಗಿ ಈ ನೀರನ್ನು ಕುಡಿಯಲು ಬಿಟ್ಟು ಬೇರೆ ಯಾವುದೇ ಉದ್ದೇಶಕ್ಕೆ ಬಳಸಿಕೊಳ್ಳುವುದಿಲ್ಲ. ರಾಜ್ಯದಲ್ಲಿನ ನೀರಿನ ಕೊರತೆ ಇರುವುದರಿಂದ ಬೆಂಗಳೂರು ಸೇರಿದಂತೆ ಕಾವೇರಿ ಕೊಳ್ಳದ ಜಿಲ್ಲೆಗಳಿಗೆ ಕುಡಿಯಲು ನೀರು ಒದಗಿಸಬೇಕಿದೆ. ಹೀಗಾಗಿ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ. ರಾಜ್ಯದ ನೆಲ, ಜಲ ವಿಷಯದಲ್ಲಿ ಎಲ್ಲರು ಒಗ್ಗಟ್ಟು ಪ್ರದರ್ಶಿಸಿದ್ದು, ಮುಂದಿನ ದಿನಗಳಲ್ಲೂ ಇದೇ ಒಗ್ಗಟ್ಟು ಪ್ರದರ್ಶಿಸಬೇಕಿದೆ’ ಎಂದರು.

ನಂತರ ಮಾತನಾಡಿದ ರೈತ ಮುಖಂಡ ಹಾಗೂ ಶಾಸಕ ಪುಟ್ಟಣ್ಣಯ್ಯ, ‘ರಾಜ್ಯದ ಜನರ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ಇಂದು ನಾವೆಲ್ಲರೂ ಸೇರಿದ್ದೇವೆ. ನಾವಿಬ್ಬರು ಬದುಕಲು 462 ಟಿಎಂಸಿ ನೀರು ಬೇಕು. ಈ ವರ್ಷ ಜಲಾಶಯಗಳಲ್ಲಿ 270 ಟಿಎಂಸಿ ಕೊರತೆ ಇದೆ. ಈ ನೀರನ್ನು ನಮಗೆ ಕೊಡುವವರಾರು? ನಮಗೆ ಯಾರಾದರು ಈ ನೀರು ಕೊಟ್ಟರೆ, ಅವರು ನಮ್ಮಿಂದ ನೀರು ಕೇಳಬಹುದು. ನಮಗೆ ಈಗಾಗಲೇ 120 ಟಿಎಂಸಿ ನೀರಿನ ಕೊರತೆ ಇದೆ ಇದನ್ನು ಕೊಡುವವರು ಯಾರು? ಇನ್ನು ನ್ಯಾಯಾಧಿಕರಣ ತೀರ್ಪಿನಲ್ಲಿ ನೀರಿನ ಅಭಾವದ ಸಂದರ್ಭದಲ್ಲಿನ ಪರಿಸ್ಥಿತಿ ಏನು ಮಾಡಬೇಕು ಎಂಬುದರ ಬಗ್ಗೆ ಪ್ರಸ್ತಾಪಿಸಿಲ್ಲ. ಪ್ರಾಕೃತಿಕ ಸಮಸ್ಯೆಯನ್ನು ನಾವು ಕಾನೂನಿನ ಚೌಕಟ್ಟಿನಲ್ಲಿ ಬಡಿದಾಡಿಕೊಳ್ಳುತ್ತಿದ್ದೇವೆ. ಪ್ರಾಕೃತಿಕ ವಿಕೋಪದ ಮೇಲೆ ತೀರ್ಪು ಬರೆಯುವಾಗ ಸಾಮಾನ್ಯ ಪ್ರಜ್ಞೆಯ ಜತೆಗೆ, ಪ್ರಕೃತಿ, ಮಾನವೀಯತೆ, ಮಣ್ಣು ಹಾಗೂ ಕೃಷಿಯ ಬಗ್ಗೆ ಕನಿಷ್ಠ ಜ್ಞಾನವನ್ನು ಹೊಂದಿರಬೇಕು. ಇನ್ನು 25 ವರ್ಷಗಳಿಂದ ಈ ಎರಡು ರಾಜ್ಯಗಳ ಮುಖ್ಯಮಂತ್ರಿಗಳು ಈ ವಿವಾದ ಬಗೆಹರಿಸುವ ಬಗ್ಗೆ ಮಾತುಕತೆ ನಡೆಸಿಲ್ಲ. ಈ ಬಗ್ಗೆ ಮಾತನಾಡಲು ನಾಚಿಕೆಯೋ ಅಥವಾ ಬೇಜವಾಬ್ದಾರಿತನವೊ ಗೊತ್ತಿಲ್ಲ.’ ಎಂದು ಅಭಿಪ್ರಾಯಪಟ್ಟರು.

ನಂತರ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ, ‘ನಾವಿಂದು ಐತಿಹಾಸಿಕ ನಿರ್ಣಯ ಕೈಗೊಳ್ಳಲು ಇಲ್ಲಿ ಸೇರಿಲ್ಲ. ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಸಂವಿಧಾನ, ನ್ಯಾಯಾಲಯಗಳಿಗೆ ಎಲ್ಲರು ಗೌರವ ಸಲ್ಲಿಸಬೇಕು. ಈ ಪರಿಸ್ಥಿತಿಯಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಜಾರಿಗೆ ತರಲಾಗದ ಆದೇಶದ ಬಗ್ಗೆ ನಿರ್ಣಯ ಕೈಗೊಳ್ಳಲು ಸೇರಿದ್ದೇವೆ. ಇದೊಂದು ದುರಾದೃಷ್ಟಕರ ನಿರ್ಣಯ ಎಂದು ಭಾವಿಸುತ್ತೇನೆ. ಈ ಭಾರತ ಒಕ್ಕೂಟ ವ್ಯವಸ್ಥೆಯನ್ನು ಇತರೆ ರಾಜ್ಯಗಳಿಗಿಂತ ಕರ್ನಾಟಕ ಹೆಚ್ಚು ಗೌರವ ನೀಡುತ್ತದೆ. ಹೀಗಿರುವಾಗ ನಮ್ಮನ್ನು ಇಂತಹ ಪರಿಸ್ಥಿತಿಗೆ ಬಲವಂತವಾಗಿ ದೂಡಲಾಗಿದೆ. ಈ ಹಿಂದೆ ಟ್ರಿಬ್ಯುನಲ್ ನೀಡಿದ ನಿರ್ಧಾರವನ್ನು ಧಿಕ್ಕರಿಸಿ ಸುಗ್ರೀವಾಜ್ಞೆ ಹೊರಡಿಸಬೇಕಾಯಿತು. ಕಾರಣ, ಇಡೀ ಪ್ರಪಂಚದಲ್ಲಿ ನೀರಿನ ವ್ಯಾಜ್ಯ ಬಗೆಹರಿಸಲು ರಚಿಸಲಾದ ಟ್ರಿಬ್ಯುನಲ್ ಮಧ್ಯಂತರ ಆದೇಶ ನೀಡಿದ ಉದಾಹರಣೆಯೇ ಇಲ್ಲ. ಕೇವಲ ಕಾವೇರಿ ವಿಚಾರದಲ್ಲಿ ತಮಿಳುನಾಡಿನ ಪರವಾಗಿ ನಿಲ್ಲಲು ಮಧ್ಯಂತರ ಆದೇಶ ನೀಡಲಾಯ್ತು. ಈಗ ಮಹದಾಯಿ ವಿಷಯದಲ್ಲಿ ಅದೇ ರೀತಿ ಮಧ್ಯಂತರ ಆದೇಶ ನೀಡಿ ಅಂದರೆ ಅದು ಸಾಧ್ಯವಾಗಿಲ್ಲ ಎಂದಿದ್ದಾರೆ. ಇನ್ನು 2007 ರಲ್ಲಿ ಟ್ರಿಬ್ಯುನಲ್ ನೀಡಿದ ತೀರ್ಪಿನ ಬಗ್ಗೆ ಅವರಿಗೆ ಒಮ್ಮತ ಇರಲಿಲ್ಲ. ಈ ಬಗ್ಗೆ ಸಲ್ಲಿಸಲಾದ ಎಸ್ಎಲ್ ಪಿ ಮುಂದಿನ ಅಕ್ಟೋಬರ್ 18ಕ್ಕೆ ವಿಚಾರಣೆ ತೆಗೆದುಕೊಳ್ಳುತ್ತಾರಂತೆ. ಇನ್ನು ನಿನ್ನೆಯವರೆಗೆ ನಾವು 52.179 ಟಿಎಂಸಿ ನೀರನ್ನು ಹರಿಸಿದ್ದೇವೆ. ಈ ಟ್ರಿಬ್ಯುನಲ್ ತೀರ್ಪನ್ನು ಮಾನದಂಡವಾಗಿ ಪರಿಗಣಿಸಿದರೆ ನಮ್ಮ ಬಳಿ ಇರುವ ನೀರಿನ ಪ್ರಮಾಣದಲ್ಲಿ ಅವರಿಗೆ ಸೂಕ್ತ ಪ್ರಮಾಣದಲ್ಲಿ ನೀರು ಬಿಟ್ಟಿದ್ದೇವೆ’ ಎಂದರು. ಈ ವೇಳೆ ಸದನವನ್ನು ಮಧ್ಯಾಹ್ನ 3.30ರ ವರೆಗೂ ಮುಂದೂಡಲಾಯ್ತು.

ಮಧ್ಯಾಹ್ನ 12.55ಕ್ಕೆ ಆರಂಭವಾದ ಈ ವಿಶೇಷ ಅಧಿವೇಶನ ಆರಂಭದಲ್ಲಿ ಮಾಜಿ ಸಚಿವ ಬಸವರಾಜ್ ಪಾಟೀಲ್ ಹುಮ್ನಾಬಾದ್, ನೀರಾವರಿ ತಜ್ಞ ಕೆ.ಸಿ.ರೆಡ್ಡಿ, ಹಾಗೂ ಉರಿ ಭಾರತೀಯ ಸೇನಾ ನೆಲೆಯಲ್ಲಿ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಸಂತಾಪ ಸೂಚಿಸಲಾಯ್ತು. ಇನ್ನು ಈ ವಿಶೇಷ ಅಧಿವೇಶನಕ್ಕೆ ಮಾಜಿ ಸಚಿವರಾದ ಅಂಬರೀಷ್ ಮತ್ತು ವಿ.ಶ್ರೀನಿವಾಸ ಪ್ರಸಾದ್ ಅವರು ಗೈರಾಗಿದ್ದರು.

Leave a Reply